ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 24

ಗೀತೆ 107 ಬನ್ನಿ ಯೆಹೋವನ ಪರ್ವತಕ್ಕೆ

ಯಾವಾಗ್ಲೂ ಯೆಹೋವನ ಅತಿಥಿಗಳಾಗಿರಿ!

ಯಾವಾಗ್ಲೂ ಯೆಹೋವನ ಅತಿಥಿಗಳಾಗಿರಿ!

“ಯೆಹೋವನೇ, ನಿನ್ನ ಡೇರೆಯಲ್ಲಿ ಯಾರು ಅತಿಥಿಯಾಗಿ ಇರಬಹುದು?”ಕೀರ್ತ. 15:1.

ಈ ಲೇಖನದಲ್ಲಿ ಏನಿದೆ?

ಯಾವಾಗ್ಲೂ ನಾವು ಯೆಹೋವನ ಸ್ನೇಹಿತರಾಗಿ ಇರೋಕೆ ಏನು ಮಾಡಬೇಕು ಮತ್ತು ಯೆಹೋವನ ಬೇರೆ ಸ್ನೇಹಿತರ ಜೊತೆ ನಾವು ಹೇಗೆ ನಡ್ಕೋಬೇಕು ಅಂತ ಯೆಹೋವ ಇಷ್ಟಪಡ್ತಾನೆ ಅಂತ ನೋಡೋಣ.

1. ಕೀರ್ತನೆ 15 ನಮಗೆ ಹೇಗೆ ಸಹಾಯ ಮಾಡುತ್ತೆ?

 ಯಾರು ಯೆಹೋವನಿಗೆ ಸಮರ್ಪಿಸ್ಕೊಳ್ತಾರೋ, ಯಾರು ಆತನ ಸ್ನೇಹಿತರಾಗಿ ಇರ್ತಾರೋ ಅವರು ಆತನ ಸಾಂಕೇತಿಕ ಡೇರೆಯಲ್ಲಿ ಅತಿಥಿಗಳಾಗಿ ಇರಬಹುದು ಅಂತ ಹಿಂದಿನ ಲೇಖನದಲ್ಲಿ ಕಲಿತ್ವಿ. ಹಾಗಿದ್ರೆ ಆತನ ಅತಿಥಿಗಳಾಗೋಕೆ ನಾವೇನು ಮಾಡಬೇಕು? ಅದಕ್ಕೆ 15ನೇ ಕೀರ್ತನೆ ನಮಗೆ ಸಹಾಯ ಮಾಡುತ್ತೆ. (ಕೀರ್ತನೆ 15:1-5 ಓದಿ.) ಆತನ ಜೊತೆ ಒಳ್ಳೆ ಸ್ನೇಹ ಬೆಳೆಸ್ಕೊಳ್ಳೋಕೆ ಏನು ಮಾಡಬೇಕು ಅಂತ ಈ ಕೀರ್ತನೆಯಲ್ಲಿ ನೋಡೋಣ.

2. ಯೆಹೋವನ ಡೇರೆ ಬಗ್ಗೆ ಹೇಳುವಾಗ ಕೀರ್ತನೆಗಾರನಾದ ದಾವೀದನ ಮನಸ್ಸಲ್ಲಿ ಏನಿದ್ದಿರ ಬಹುದು?

2 15ನೇ ಕೀರ್ತನೆಯ ಮೊದಲನೇ ವಚನ “ಯೆಹೋವನೇ, ನಿನ್ನ ಡೇರೆಯಲ್ಲಿ ಯಾರು ಅತಿಥಿಯಾಗಿ ಇರಬಹುದು? ನಿನ್ನ ಪವಿತ್ರ ಬೆಟ್ಟಕ್ಕೆ ಯಾರು ಬರಬಹುದು?” ಅಂತ ಹೇಳುತ್ತೆ. (ಕೀರ್ತ. 15:1) ಇಲ್ಲಿ ಕೀರ್ತನೆಗಾರನಾದ ದಾವೀದ ಯೆಹೋವನ “ಡೇರೆ” ಬಗ್ಗೆ ಮಾತಾಡುವಾಗ ಅವನ ಮನಸ್ಸಲ್ಲಿ ಪವಿತ್ರ ಡೇರೆ ಬಂದಿರಬಹುದು. ಈ ಪವಿತ್ರ ಡೇರೆ ಸ್ವಲ್ಪ ಸಮಯಕ್ಕೆ ಗಿಬ್ಯೋನಿನಲ್ಲಿ ಇತ್ತು. ಅಷ್ಟೇ ಅಲ್ಲ “ಪವಿತ್ರ ಬೆಟ್ಟ” ಅಂತ ಹೇಳುವಾಗ ಯೆರೂಸಲೇಮಿನಲ್ಲಿದ್ದ ಚೀಯೋನ್‌ ಬೆಟ್ಟ ಅವನ ಮನಸ್ಸಿಗೆ ಬಂದಿರಬಹುದು. ಅಲ್ಲಿ ದಾವೀದ ಒಪ್ಪಂದದ ಮಂಜೂಷನ ಇಡೋಕೆ ಒಂದು ಡೇರೆಯನ್ನ ಮಾಡಿಸಿದ್ದ. ಈ ಡೇರೆ ಗಿಬ್ಯೋನಿನಿಂದ ದಕ್ಷಿಣಕ್ಕೆ ಸುಮಾರು 10 ಕಿ.ಮೀ. ದೂರದಲ್ಲಿ ಇತ್ತು. ಈ ಒಪ್ಪಂದದ ಮಂಜೂಷ ಆಲಯ ಕಟ್ಟೋವರೆಗೂ ಅಲ್ಲೇ ಇತ್ತು.—2 ಸಮು. 6:17.

3. ಕೀರ್ತನೆ 15ನ್ನ ಅರ್ಥ ಮಾಡ್ಕೊಳ್ಳೋದು ಯಾಕಷ್ಟು ಮುಖ್ಯ? (ಚಿತ್ರ ನೋಡಿ.)

3 ಎಲ್ಲ ಇಸ್ರಾಯೇಲ್ಯರಿಗೆ ಪವಿತ್ರ ಡೇರೆಯಲ್ಲಿ ಸೇವೆ ಮಾಡೋಕಾಗ್ಲಿ ಅಥವಾ ಒಪ್ಪಂದದ ಮಂಜೂಷ ಇಟ್ಟ ಜಾಗದಲ್ಲಿ ಹೋಗೋಕಾಗ್ಲಿ ಅವಕಾಶ ಇರಲಿಲ್ಲ. ಬದಲಿಗೆ ಕೆಲವರಿಗಷ್ಟೇ ಇತ್ತು. ಆದ್ರೆ ಆತನ ಸಾಂಕೇತಿಕ ಡೇರೆಯಲ್ಲಿ ಯೆಹೋವನ ಎಲ್ಲ ನಂಬಿಗಸ್ತ ಸೇವಕರಿಗೂ ಆತನ ಅತಿಥಿಗಳಾಗಿರಬಹುದು ಮತ್ತು ಯಾವಾಗ್ಲೂ ಆತನ ಸ್ನೇಹಿತರಾಗಿರಬಹುದು. ಈ ತರ ಇರಬೇಕು ಅಂತ ನಾವೆಲ್ರೂ ಇಷ್ಟಪಡ್ತೀವಲ್ವಾ? ಆದರೆ ನಾವು ಯಾವಾಗ್ಲೂ ಆತನ ಸ್ನೇಹಿತರಾಗಿರೋಕೆ ಯಾವೆಲ್ಲ ಗುಣಗಳನ್ನ ಬೆಳೆಸ್ಕೊಬೇಕು ಮತ್ತು ಆ ಗುಣಗಳನ್ನ ಹೇಗೆ ತೋರಿಸಬೇಕು ಅಂತ ಕೀರ್ತನೆ 15 ಹೇಳುತ್ತೆ.

ಯೆಹೋವನ ಡೇರೆಯಲ್ಲಿ ಅತಿಥಿಗಳಾಗಿರೋದು ಅಂದ್ರೆ ಏನು ಅಂತ ದಾವೀದನ ಸಮಯದಲ್ಲಿ ಇದ್ದ ಇಸ್ರಾಯೇಲ್ಯರಿಗೆ ತುಂಬ ಚೆನ್ನಾಗಿ ಅರ್ಥ ಆಗ್ತಿತ್ತು. (ಪ್ಯಾರ 3 ನೋಡಿ)


ಯಾವ ಆರೋಪನೂ ಇಲ್ಲದೆ ಜೀವನ ಮಾಡಿ, ಸರಿಯಾಗಿ ಇರೋದನ್ನೇ ಮಾಡಿ

4. ಯೆಹೋವನ ಫ್ರೆಂಡ್‌ ಆಗೋಕೆ ಬರೀ ದೀಕ್ಷಾಸ್ನಾನ ತಗೊಂಡ್ರೆ ಮಾತ್ರ ಸಾಕಾಗಲ್ಲ ಅಂತ ನಾವು ಯಾಕೆ ಹೇಳಬಹುದು? (ಯೆಶಾಯ 48:1)

4 ಕೀರ್ತನೆ 15:2ರಲ್ಲಿ “ಯಾವ ಆರೋಪನೂ ಇಲ್ಲದೆ ಜೀವನ ಮಾಡ್ತಿರೋರು, ಸರಿಯಾಗಿ ಇರೋದನ್ನೇ ಮಾಡ್ತಿರೋರು” ದೇವರ ಸ್ನೇಹಿತರು ಆಗಿರುತ್ತಾರೆ ಅಂತ ಬೈಬಲ್‌ ಹೇಳುತ್ತೆ. ಈ ವಚನದಲ್ಲಿ “ಮಾಡ್ತಿರೋರು” ಅನ್ನೋ ಪದ ಇರೋದ್ರಿಂದ ಇದನ್ನ ನಾವು ಯಾವಾಗ್ಲೂ ಮಾಡ್ತಾ ಇರಬೇಕು ಅಂತ ಗೊತ್ತಾಗುತ್ತೆ. ಆದರೆ “ಯಾವ ಆರೋಪನೂ ಇಲ್ಲದೆ” ನಾವು ಜೀವನ ಮಾಡೋಕೆ ಆಗುತ್ತಾ? ಆಗುತ್ತೆ. ನಾವು ಯಾರೂ ಪರಿಪೂರ್ಣರಲ್ಲ ನಿಜ. ಆದ್ರೂ ಯೆಹೋವನ ಮಾತನ್ನ ಕೇಳೋಕೆ ನಮ್ಮಿಂದಾದ ಎಲ್ಲ ಪ್ರಯತ್ನ ಮಾಡುವಾಗ ನಾವು “ಯಾವ ಆರೋಪನೂ ಇಲ್ಲದೆ ಜೀವನ” ಮಾಡ್ತಿದ್ದೀವಿ ಅಂತ ಯೆಹೋವ ನೆನಸ್ತಾನೆ. ನಾವು ನಮ್ಮನ್ನೇ ಸಮರ್ಪಿಸ್ಕೊಂಡು ದೀಕ್ಷಾಸ್ನಾನ ತಗೊಂಡಾಗ ಯೆಹೋವನ ಜೊತೆ ನಮ್ಮ ಪ್ರಯಾಣನ ಶುರುಮಾಡ್ತಿವಿ. ಹಿಂದಿನ ಕಾಲದಲ್ಲಿದ ಇಸ್ರಾಯೇಲ್‌ ಜನ್ರು ಆ ಜನಾಂಗದಲ್ಲಿ ಇದ್ದಾರೆ ಅಂದ ಮಾತ್ರಕ್ಕೆ ಯೆಹೋವನ ಅತಿಥಿಗಳಾಗಿ ಇರ್ತಿರಲಿಲ್ಲ. ಕೆಲವರು ಆತನನ್ನ ಆರಾಧಿಸ್ತಿದ್ರು. ಆದರೆ ಅದನ್ನ “ಸತ್ಯದಿಂದಲೂ ನೀತಿಯಿಂದಲೂ” ಮಾಡ್ತಿರಲಿಲ್ಲ. (ಯೆಶಾಯ 48:1 ಓದಿ.) ಯಾರು ಯೆಹೋವನ ಅತಿಥಿಗಳಾಗೋಕೆ ಇಷ್ಟಪಟ್ರೋ ಅವರು ಯೆಹೋವನಿಗೆ ಏನಿಷ್ಟ, ಏನಿಷ್ಟ ಇಲ್ಲ ಅಂತ ತಿಳ್ಕೊಬೇಕಿತ್ತು ಮತ್ತು ಅದನ್ನ ಪಾಲಿಸಬೇಕಿತ್ತು. ಅದೇ ತರ ಇವತ್ತೂ ಯೆಹೋವನ ಫ್ರೆಂಡ್‌ ಆಗೋಕೆ ಇಷ್ಟಪಡೋ ವ್ಯಕ್ತಿ ದೀಕ್ಷಾಸ್ನಾನ ತಗೊಂಡು ಬರೀ ಯೆಹೋವನ ಸಾಕ್ಷಿ ಅಂತ ಮಾತ್ರ ಕರೆಸ್ಕೊಂಡ್ರೆ ಸಾಕಾಗಲ್ಲ. ಬದಲಿಗೆ ಯಾವಾಗ್ಲೂ “ಸರಿಯಾಗಿ ಇರೋದನ್ನೇ” ಮಾಡಬೇಕು. ಅದನ್ನ ಹೇಗೆ ಮಾಡೋದು?

5. ಎಲ್ಲ ವಿಷ್ಯದಲ್ಲೂ ಯೆಹೋವನ ಮಾತು ಕೇಳೋದಂದ್ರೆ ಏನು?

5 ಯೆಹೋವ ನಮ್ಮನ್ನ “ಯಾವ ಆರೋಪನೂ ಇಲ್ಲದೆ ಜೀವನ” ಮಾಡೋರು ಮತ್ತು “ಸರಿಯಾಗಿ ಇರೋದನ್ನೇ” ಮಾಡೋರು ಅಂತ ನೆನಸಬೇಕಂದ್ರೆ ತಪ್ಪದೇ ಕೂಟಗಳಿಗೆ ಹೋದ್ರೆ ಮಾತ್ರ ಸಾಕಾಗುತ್ತಾ? ಇಲ್ಲ. (1 ಸಮು. 15:22) ನಾವು ಒಬ್ಬರೇ ಇರುವಾಗ ಅಥವಾ ಯಾವುದೇ ಸನ್ನಿವೇಶದಲ್ಲಿ ಇದ್ರೂ ಯೆಹೋವನ ಮಾತು ಕೇಳೋಕೆ ನಮ್ಮಿಂದಾದ ಎಲ್ಲ ಪ್ರಯತ್ನ ಮಾಡಬೇಕು. (ಜ್ಞಾನೋ. 3:6; ಪ್ರಸಂ. 12:13, 14) ಚಿಕ್ಕಪುಟ್ಟ ವಿಷ್ಯಗಳಲ್ಲೂ ನಾವು ಯೆಹೋವನ ಮಾತು ಕೇಳೋದು ತುಂಬ ಪ್ರಾಮುಖ್ಯ. ನಾವು ಹೀಗೆ ಮಾಡಿದ್ರೆ ಯೆಹೋವನನ್ನ ಎಷ್ಟು ಪ್ರೀತಿಸ್ತೀವಿ ಅಂತ ತೋರಿಸ್ತೀವಿ ಮತ್ತು ಆತನು ನಮಗೆ ಹತ್ರ ಆಗ್ತಾನೆ.—ಯೋಹಾ. 14:23; 1 ಯೋಹಾ. 5:3.

6. ಇಬ್ರಿಯ 6:10-12 ಹೇಳಿರೋ ತರ ಯೆಹೋವನ ಡೇರೆಯಲ್ಲಿ ಅತಿಥಿಗಳಾಗಿ ಇರೋಕೆ ಹಿಂದೆ ಮಾಡಿದ ಸೇವೆಯಷ್ಟೇ ಸಾಕಾಗುತ್ತಾ?

6 ನಾವು ಹಿಂದೆ ಮಾಡಿದ ಸೇವೆಯನ್ನ ಯೆಹೋವ ದೇವರು ಮರಿಯಲ್ಲ. ಅದನ್ನ ಆತನು ನೆನಪಿನಲ್ಲಿ ಇಡ್ತಾನೆ. ಆದ್ರೆ ಆತನ ಡೇರೆಯಲ್ಲಿ ಅತಿಥಿಗಳಾಗಿ ಇರಬೇಕು ಅಂದ್ರೆ ನಾವು ಹಿಂದೆ ಮಾಡಿದ ಸೇವೆ ಅಷ್ಟೇ ಸಾಕಾಗುತ್ತಾ? ಇಲ್ಲ. ಇಬ್ರಿಯ 6:10-12ರಲ್ಲಿ (ಓದಿ.) ಅದು ನಮಗೆ ಸ್ಪಷ್ಟವಾಗಿ ಗೊತ್ತಾಗುತ್ತೆ. ಹಾಗಂತ ಹಿಂದೆ ಮಾಡಿದ್ದನ್ನೆಲ್ಲ ಯೆಹೋವ ಮರೆತು ಬಿಡ್ತಾನೆ ಅಂತಲ್ಲ. “ಕೊನೆ ತನಕ” ನಾವು ಪೂರ್ಣ ಮನಸ್ಸಿಂದ ಆತನ ಸೇವೆಯನ್ನ ಮಾಡ್ತಾ ಇರಬೇಕು ಅಂತ ಆತನು ಇಷ್ಟಪಡ್ತಾನೆ. ಇದನ್ನ ಮಾಡ್ತಾ “ನಾವು ಸುಸ್ತಾಗದೆ ಇದ್ರೆ” ಆತನು ಯಾವಾಗ್ಲೂ ನಮ್ಮ ಫ್ರೆಂಡಾಗಿ ಇರ್ತಾನೆ.—ಗಲಾ. 6:9.

ಹೃದಯದಲ್ಲೂ ಸತ್ಯವನ್ನೇ ಹೇಳಿ

7. ಹೃದಯದಲ್ಲಿ ಸತ್ಯವನ್ನೇ ಹೇಳೋದು ಅಂದ್ರೆ ಏನು?

7 ಯೆಹೋವನ ಡೇರೆಯಲ್ಲಿ ಅತಿಥಿಯಾಗಿರೋಕೆ ಇಷ್ಟಪಡೋ ವ್ಯಕ್ತಿ “ಹೃದಯದಲ್ಲೂ ಸತ್ಯವನ್ನೇ” ಹೇಳಬೇಕು. (ಕೀರ್ತ. 15:2) ಅಂದ್ರೆ ಅದರರ್ಥ ಬರೀ ಸುಳ್ಳು ಹೇಳದಿದ್ರೆ ಸಾಕು ಅಂತನಾ? ಅಲ್ಲ. ಮಾತಾಡುವಾಗ, ನಡ್ಕೊಳ್ಳೋವಾಗ ಪ್ರಾಮಾಣಿಕವಾಗಿರಬೇಕು. (ಇಬ್ರಿ. 13:18) “ಯಾಕಂದ್ರೆ ಯೆಹೋವ ಮೋಸಗಾರನನ್ನ ಇಷ್ಟಪಡಲ್ಲ, ಆದ್ರೆ ಆತನು ಪ್ರಾಮಾಣಿಕನ ಆಪ್ತ ಸ್ನೇಹಿತ” ಅಂತ ಬೈಬಲ್‌ ಹೇಳುತ್ತೆ.—ಜ್ಞಾನೋ. 3:32.

8. ನಾವು ಯಾವ ರೀತಿ ನಡ್ಕೊಬಾರದು?

8 ‘ಹೃದಯದಲ್ಲೂ ಸತ್ಯವನ್ನೇ ಹೇಳದೆ’ ಇರೋ ವ್ಯಕ್ತಿ ಎಲ್ರೂ ಮುಂದೇನೂ ನಿಯಮವನ್ನ ಪಾಲಿಸ್ತಿದ್ದೀನಿ ಅಂತ ನಾಟಕ ಆಡ್ತಾನೆ. ಆದ್ರೆ ಒಬ್ಬನೇ ಇದ್ದಾಗ ನಿಯಮನ ಮುರಿತಾನೆ. (ಯೆಶಾ. 29:13) ಹೀಗೆ ಅವನು ಒಬ್ಬ ಮೋಸಗಾರನ ತರ ನಡ್ಕೊಳ್ತಾನೆ. ಮೋಸಗಾರನ ತರ ನಡ್ಕೊಳ್ಳೋ ಒಬ್ಬ ವ್ಯಕ್ತಿ ಎಲ್ಲ ವಿಷ್ಯದಲ್ಲೂ ಯೆಹೋವನ ಮಾತನ್ನ ಕೇಳಬೇಕಾಗಿಲ್ಲ ಅಂತ ಯೋಚನೆ ಮಾಡೋಕೆ ಶುರು ಮಾಡ್ತಾನೆ. (ಯಾಕೋ. 1:5-8) ಆಮೇಲೆ ಅವನು ಇದೆಲ್ಲ ದೊಡ್ಡ ವಿಷ್ಯ ಅಲ್ಲ ಬಿಡು ಅಂತ ನೆನಸಿ ನಿಯಮವನ್ನ ಮುರಿಬಹುದು. ಈ ತರ ಮಾಡುವಾಗ ಅದ್ರಿಂದ ಅವನಿಗೆ ಯಾವುದೇ ತೊಂದ್ರೆ ಆಗಿಲ್ಲ ಅಂದ್ರೆ ಅವನು ಅದನ್ನ ಇನ್ನೂ ಜಾಸ್ತಿ ಮಾಡ್ತಾನೆ. ಹೀಗೆ ಅವನು ಕಪಟಿ ಆಗ್ತಾನೆ. ಅವನು ಯೆಹೋವನನ್ನ ಆರಾಧಿಸ್ತಿದ್ದೀನಿ ಅಂತ ಅಂದ್ಕೊಳ್ತಾನೆ. ಆದ್ರೆ ಯೆಹೋವ ಇಂಥ ಆರಾಧನೆ ಸ್ವೀಕರಿಸಲ್ಲ. (ಪ್ರಸಂ. 8:11) ಹಾಗಾಗಿ ನಾವು ಎಲ್ಲ ವಿಷಯದಲ್ಲೂ ಪ್ರಾಮಾಣಿಕವಾಗಿ ನಡ್ಕೋಬೇಕು.

9. ಯೇಸು ನತಾನಯೇಲನ ಬಗ್ಗೆ ಹೇಳಿದ ಮಾತಿನಿಂದ ನಮಗೇನು ಗೊತ್ತಾಗುತ್ತೆ? (ಚಿತ್ರ ನೋಡಿ.)

9 ಹೃದಯದಲ್ಲೂ ಸತ್ಯ ಹೇಳೋದು ಎಷ್ಟು ಪ್ರಾಮುಖ್ಯ ಅಂತ ಅರ್ಥ ಮಾಡ್ಕೊಳ್ಳೋಕೆ ಯೇಸು ನತಾನಯೇಲನ ಬಗ್ಗೆ ಏನು ಹೇಳಿದ ಅಂತ ನೋಡಿ. ಒಂದು ಸಲ ಫಿಲಿಪ್ಪ ತನ್ನ ಸ್ನೇಹಿತನಾದ ನತಾನಯೇಲನನ್ನ ಯೇಸು ಹತ್ರ ಕರ್ಕೊಂಡು ಬರ್ತಾನೆ. ಯೇಸು ಅವನನ್ನ ಭೇಟಿ ಮಾಡಿದ್ದು ಇದೇ ಮೊದಲನೇ ಸಲ ಆಗಿತ್ತು. “ಇವನೇ ನಿಜವಾದ ಇಸ್ರಾಯೇಲ್ಯ. ಅವನಲ್ಲಿ ಸ್ವಲ್ಪನೂ ಮೋಸ ಇಲ್ಲ” ಅಂತ ಹೇಳಿದನು. (ಯೋಹಾ. 1:47) ಆದ್ರೆ ಯೇಸುವಿನ ಬೇರೆ ಶಿಷ್ಯರು ಪ್ರಾಮಾಣಿಕವಾಗಿ ಇರ್ಲಿಲ್ಲ ಅಂತ ಇದರ ಅರ್ಥ ಅಲ್ಲ. ಆದ್ರೆ ನತಾನಯೇಲನಲ್ಲಿ ಪ್ರಾಮಾಣಿಕತೆ ಎದ್ದು ಕಾಣುತ್ತಿತ್ತು. ನಮ್ಮ ತರಾನೇ ನತಾನಯೇಲ ಅಪರಿಪೂರ್ಣನಾಗಿದ್ದ ನಿಜ. ಆದ್ರೆ ಅವನಲ್ಲಿ ಕಪಟ ಇರ್ಲಿಲ್ಲ. ಅವನು ಎಲ್ಲ ವಿಷ್ಯದಲ್ಲೂ ಪ್ರಾಮಾಣಿಕನಾಗಿದ್ದ. ಇದನ್ನ ನೋಡಿ ಯೇಸು ಅವನನ್ನ ಮನಸಾರೆ ಹೊಗಳಿದ. ನಮ್ಮ ಬಗ್ಗೆನೂ ಯೇಸು ಈ ತರ ಹೊಗಳಿದಾಗ ನಮಗೆ ಎಷ್ಟು ಖುಷಿಯಾಗುತ್ತೆ ಅಲ್ವಾ?

ಸ್ವಲ್ಪನೂ ಮೋಸ ಇಲ್ಲದ ತನ್ನ ಸ್ನೇಹಿತನಾದ ನತಾನಯೇಲನನ್ನ ಯೇಸು ಹತ್ರ ಫಿಲಿಪ್ಪ ಕರ್ಕೊಂಡು ಬರ್ತಾನೆ. ನಮ್ಮ ಬಗ್ಗೆನೂ ಯೇಸು ಈ ತರ ಹೊಗಳ್ತಾನಾ? (ಪ್ಯಾರ 9 ನೋಡಿ)


10. ನಾವು ಮಾತಾಡುವಾಗ ಯಾಕೆ ಹುಷಾರಾಗಿ ಇರಬೇಕು? (ಯಾಕೋಬ 1:26)

10 ನಾವು ಬೇರೆಯವರ ಜೊತೆ ಹೇಗೆ ನಡ್ಕೊಬೇಕು ಅಂತ 15ನೇ ಕೀರ್ತನೆಯಲ್ಲಿ ಇದೆ. ಯೆಹೋವನ ಅತಿಥಿಗಳಾಗಿ ಇರೋರು “ಯಾರ ಮೇಲೂ ಸುಳ್ಳು ಅಪವಾದ ಹಾಕಲ್ಲ, ಬೇರೆಯವರಿಗೆ ಯಾವ ತೊಂದ್ರೆನೂ ಕೊಡಲ್ಲ, ಸ್ನೇಹಿತರ ಹೆಸ್ರನ್ನ ಹಾಳುಮಾಡಲ್ಲ” ಅಂತ ಕೀರ್ತನೆ 15:3 ಹೇಳ್ತಿದೆ. ಹಾಗಾಗಿ ನಾವು ಬೇರೆಯವರ ಹೆಸ್ರನ್ನ ಹಾಳು ಮಾಡಿದ್ರೆ ಅದ್ರಿಂದ ಅವ್ರಿಗೆ ತುಂಬ ಹಾನಿ ಆಗುತ್ತೆ. ಅಷ್ಟೇ ಅಲ್ಲ ಯೆಹೋವನ ಡೇರೆಯಲ್ಲಿ ಅತಿಥಿಗಳಾಗಿ ಇರೋ ಅವಕಾಶನೂ ಕಳ್ಕೊಂಬಿಡ್ತೀವಿ.—ಯಾಕೋಬ 1:26 ಓದಿ.

11. (ಎ) ಸುಳ್ಳು ಅಪವಾದ ಹಾಕೋದು ಅಂದ್ರೆ ಏನು? (ಬಿ) ಅವರು ತಿದ್ಕೊಂಡಿಲ್ಲ ಅಂದ್ರೆ ಅವ್ರಿಗೆ ಏನಾಗುತ್ತೆ?

11 ಕೀರ್ತನೆಗಾರ ಇಲ್ಲಿ ಸುಳ್ಳು ಅಪವಾದ ಹಾಕೋರ ಬಗ್ಗೆ ಹೇಳ್ತಿದ್ದಾನೆ. ಸುಳ್ಳು ಅಪವಾದ ಹಾಕೋದು ಅಂದ್ರೆ ಏನು? ಒಬ್ಬ ವ್ಯಕ್ತಿಯ ಒಳ್ಳೇ ಹೆಸ್ರನ್ನ ಹಾಳು ಮಾಡೋಕೆ ಸುಳ್ಳು ಹೇಳಿ ಅವರ ಮೇಲೆ ಅಪವಾದ ಹಾಕೋದು. ಈ ತರ ಸುಳ್ಳು ಅಪವಾದ ಹಾಕೋರು ತಮ್ಮ ತಪ್ಪನ್ನ ತಿದ್ಕೊಂಡಿಲ್ಲ ಅಂದ್ರೆ ಅವರನ್ನ ಸಭೆಯಿಂದ ಹೊರಗೆ ಹಾಕಲಾಗುತ್ತೆ.—ಯೆರೆ. 17:10.

12-13. ಯಾವೆಲ್ಲ ಸಂದರ್ಭದಲ್ಲಿ ನಮಗೆ ಗೊತ್ತಿಲ್ದೆ ಸ್ನೇಹಿತರ ಹೆಸ್ರನ್ನ ಹಾಳು ಮಾಡಿಬಿಡಬಹುದು? (ಚಿತ್ರ ನೋಡಿ.)

12 ಕೀರ್ತನೆ 15:3ರಲ್ಲಿ ಯೆಹೋವನ ಅತಿಥಿಗಳು ಬೇರೆಯವರಿಗೆ ಯಾವ ತೊಂದರೆನೂ ಕೊಡಲ್ಲ, ಸ್ನೇಹಿತರ ಹೆಸ್ರನ್ನ ಹಾಳುಮಾಡಲ್ಲ ಅಂತಾನೂ ಹೇಳುತ್ತೆ. ಇದರ ಅರ್ಥ ಏನು?

13 ನಮಗೆ ಗೊತ್ತಿಲ್ದೆನೂ ಬೇರೆಯವ್ರ ಬಗ್ಗೆ ತಪ್ಪಾದ ಸುದ್ದಿಯನ್ನ ಹಬ್ಬಿಸಬಹುದು. ಉದಾಹರಣೆಗೆ: (1) ಒಬ್ಬ ಸಹೋದರಿ ಪೂರ್ಣ ಸಮಯದ ಸೇವೆ ನಿಲ್ಲಿಸಿದಾಗ, (2) ಒಂದು ದಂಪತಿ ಬೆತೆಲ್‌ ಸೇವೆ ನಿಲ್ಲಿಸಿದಾಗ, (3) ಒಬ್ಬ ಸಹೋದರ ಹಿರಿಯನಾಗಿ ಅಥವಾ ಸಹಾಯಕ ಸೇವಕನಾಗಿ ಸೇವೆ ಮಾಡೋದನ್ನ ನಿಲ್ಲಿಸಿದಾಗ. ಈ ಸನ್ನಿವೇಶ ಬಂದಾಗ ನಾವೇನು ಮಾಡ್ತೀವಿ? ಆ ಸಹೋದರ ಅಥವಾ ಸಹೋದರಿ ಏನೋ ತಪ್ಪು ಮಾಡಿದ್ದಾರೆ ಅದಕ್ಕೆ ಅವರಿಗೆ ಈ ಬದಲಾವಣೆ ಆಗಿದೆ ಅಂತ ಹೇಳಿದ್ರೆ ಸರಿಯಾಗಿರುತ್ತಾ? ಆ ಬದಲಾವಣೆ ಆಗೋಕೆ ತುಂಬ ಕಾರಣಗಳು ಇರಬಹುದು. ಆದ್ರೆ ಅದರ ಬಗ್ಗೆ ನಮಗೆ ಗೊತ್ತಿಲ್ಲದೆ ಇರಬಹುದು. ಹಾಗಾಗಿ ಯೆಹೋವನ ಅತಿಥಿಗಳಾಗಿರೋ ನಾವು ‘ಬೇರೆಯವ್ರಿಗೆ ಯಾವ ತೊಂದರೆನೂ ಕೊಡಬಾರದು. ಸ್ನೇಹಿತರ ಹೆಸ್ರನ್ನ ಹಾಳು ಮಾಡಬಾರದು.’

ಬೇರೆಯವರ ಬಗ್ಗೆ ತಪ್ಪುತಪ್ಪಾಗಿ ಮಾತಾಡ್ತಾ ಇದ್ರೆ, ಒಂದಲ್ಲ ಒಂದಿನ ನಾವು ಅವರ ಬಗ್ಗೆ ಸುಳ್ಳು ಅಪವಾದ ಹಾಕಿಬಿಡ್ತೀವಿ (ಪ್ಯಾರ 12-13 ನೋಡಿ)


ಯೆಹೋವನ ಮೇಲೆ ಭಯಭಕ್ತಿ ಇರೋರಿಗೆ ಗೌರವ ಕೊಡಿ

14. ಯೆಹೋವನ ಅತಿಥಿಗಳು “ನೀಚರ ಜೊತೆ” ಯಾಕೆ ಸೇರಬಾರದು?

14 ಕೀರ್ತನೆ 15:4ರಲ್ಲಿ ಯೆಹೋವನ ಸ್ನೇಹಿತ “ನೀಚರ ಜೊತೆ ಸೇರಲ್ಲ” ಅಂತ ಹೇಳ್ತಿದೆ. ಆದರೆ ಒಬ್ಬ ವ್ಯಕ್ತಿ ನೀಚನಾಗಿದ್ದಾನೆ ಅಂತ ನಮಗೆ ಹೇಗೆ ಗೊತ್ತಾಗುತ್ತೆ? ನಾವು ಅಪರಿಪೂರ್ಣರಾಗಿರೋದ್ರಿಂದ ನೀಚನಾಗಿರೋ ವ್ಯಕ್ತಿಯನ್ನ ಗುರುತಿಸೋಕೆ ಕಷ್ಟ ಆಗುತ್ತೆ. ಯಾಕೆ? ಯಾಕಂದ್ರೆ ನಮಗೆ ಯಾರು ಇಷ್ಟ ಆಗ್ತಾರೋ ಅವರನ್ನ ಫ್ರೆಂಡ್ಸ್‌ ಮಾಡ್ಕೊಳ್ತೀವಿ. ಇಷ್ಟ ಆಗದೇ ಇದ್ದವರನ್ನ ಅಥವಾ ನಮಗೆ ಕಿರಿಕಿರಿ ಮಾಡೋರನ್ನ ನಾವು ದೂರ ಇಡ್ತೀವಿ. ಹಾಗಾಗಿ ಯೆಹೋವ ಯಾರನ್ನ ‘ನೀಚರಾಗಿ’ ನೋಡ್ತಾನೋ ಅವರ ಜೊತೆ ಮಾತ್ರ ನಾವು ಸೇರಬಾರದು. (1 ಕೊರಿಂ. 5:11) ಅಂದ್ರೆ ತಪ್ಪು ಮಾಡಿನೂ ಪಶ್ಚಾತಾಪ ಪಡದೆ ಇದ್ದವರು, ನಮ್ಮ ನಂಬಿಕೆಯನ್ನ, ಯೆಹೋವ ಜೊತೆ ನಮಗಿರೋ ಸ್ನೇಹನ ಹಾಳುಮಾಡೋರ ಜೊತೆ ನಾವು ಸೇರಬಾರದು.—ಜ್ಞಾನೋ. 13:20.

15. “ಯೆಹೋವನ ಭಯಭಕ್ತಿ ಇರೋರಿಗೆ” ಗೌರವ ತೋರಿಸೋಕೆ ನಾವು ಏನು ಮಾಡಬೇಕು?

15 “ನೀಚರ ಜೊತೆ” ಸೇರಬೇಡ ಅಂತ ಹೇಳಿದ ಮೇಲೆ ಕೀರ್ತನೆ 15:4ರಲ್ಲಿ “ಯೆಹೋವನ ಭಯಭಕ್ತಿ ಇರೋರಿಗೆ” ಗೌರವ ತೋರಿಸಿ ಅಂತ ಹೇಳುತ್ತೆ. ಹಾಗಾಗಿ ಯೆಹೋವನ ಸ್ನೇಹಿತರಿಗೆ ನಾವು ಗೌರವ ಕೊಡೋಕೆ ಮತ್ತು ದಯೆ ತೋರಿಸೋಕೆ ಅವಕಾಶಗಳನ್ನ ಹುಡುಕಬೇಕು. (ರೋಮ. 12:10) ಅದನ್ನ ಹೇಗೆ ಮಾಡೋದು? ಅದಕ್ಕೆ ಉತ್ತರ ಇದೇ ಕೀರ್ತನೆಯಲ್ಲಿದೆ. ಯೆಹೋವನ ಅತಿಥಿಗಳು “ನಷ್ಟ ಆದ್ರೂ ಕೊಟ್ಟ ಮಾತನ್ನ ತಪ್ಪಲ್ಲ” ಅಂತ ಹೇಳ್ತಿದೆ. ಒಂದುವೇಳೆ ನಾವು ಮಾತನ್ನ ತಪ್ಪಿದ್ರೆ ಅದ್ರಿಂದ ಬೇರೆಯವ್ರಿಗೆ ತುಂಬ ನೋವಾಗುತ್ತೆ. (ಮತ್ತಾ. 5:37) ಉದಾಹರಣೆಗೆ ಗಂಡ ಹೆಂಡತಿ ತಮ್ಮ ಮದುವೆಯಲ್ಲಿ ಕೊಟ್ಟ ಮಾತನ್ನ ಉಳಿಸ್ಕೊಬೇಕು ಅಂತ ಯೆಹೋವ ಇಷ್ಟಪಡ್ತಾನೆ. ಅಷ್ಟೇ ಅಲ್ಲ ಅಪ್ಪ-ಅಮ್ಮ ತಮ್ಮ ಮಕ್ಕಳಿಗೆ ಕೊಟ್ಟ ಮಾತಿನ ತರ ನಡ್ಕೊಂಡಾಗ್ಲೂ ಆತನಿಗೆ ಖುಷಿ ಆಗುತ್ತೆ. ಈ ತರ ನಾವು ಕೊಟ್ಟ ಮಾತನ್ನ ಉಳಿಸ್ಕೊಂಡ್ರೆ ಯೆಹೋವ ದೇವ್ರನ್ನ ಮತ್ತು ಬೇರೆಯವ್ರನ್ನ ಪ್ರೀತಿಸ್ತೀವಿ ಅಂತ ತೋರಿಸ್ಕೊಡ್ತೀವಿ.

16. ಯೆಹೋವನ ಸ್ನೇಹಿತರನ್ನ ಗೌರವಿಸೋಕೆ ಇನ್ನೂ ಏನು ಮಾಡಬೇಕು?

16 ಯೆಹೋವನ ಸ್ನೇಹಿತರನ್ನ ಗೌರವಿಸೋಕೆ ಇನ್ನೂ ಏನು ಮಾಡಬೇಕು? ನಾವು ಅವರಿಗೆ ಅತಿಥಿಸತ್ಕಾರ ಮಾಡಬೇಕು, ಧಾರಾಳತನ ತೋರಿಸಬೇಕು. (ರೋಮ. 12:13) ಕೂಟಕ್ಕೆ ಹೋದಾಗ, ಸೇವೆಗೆ ಹೋದಾಗ ಅಷ್ಟೇ ಅಲ್ಲ ಬೇರೆ ಸಮಯದಲ್ಲಿ ಅವರ ಜೊತೆ ಮಾತಾಡೋಕೆ ಬಿಡುವು ಮಾಡ್ಕೊಳ್ಳಿ. ಆಗ ನೀವು ಅವರಿಗೂ ಹತ್ರ ಆಗ್ತೀರ, ಯೆಹೋವನಿಗೂ ಹತ್ರ ಆಗ್ತೀರ. ನಾವು ಈ ತರ ಅತಿಥಿಸತ್ಕಾರ ತೋರಿಸಿದ್ರೆ ಯೆಹೋವನನ್ನ ಅನುಕರಿಸ್ತೀವಿ.

ಹಣದಾಸೆ ಇಲ್ಲದೆ ಜೀವನ ಮಾಡಿ

17. ಕೀರ್ತನೆ 15ರಲ್ಲಿ ಹಣದ ಬಗ್ಗೆ ಯಾಕೆ ಹೇಳಲಾಗಿದೆ?

17 ಯೆಹೋವನ ಅತಿಥಿಗಳು “ಸಾಲ ಕೊಟ್ಟು ಬಡ್ಡಿಗಾಗಿ ಆಸೆಪಡಲ್ಲ, ನಿರಪರಾಧಿನ ಅಪರಾಧಿ ಮಾಡೋಕೆ ಲಂಚ ತಗೊಳಲ್ಲ.” (ಕೀರ್ತ. 15:5) ಈ ಕೀರ್ತನೆಯಲ್ಲಿ ಹಣದ ಬಗ್ಗೆ ಯಾಕೆ ಹೇಳಲಾಗಿದೆ? ಯಾಕಂದ್ರೆ ಹಣದಾಸೆ ಇದ್ರೆ ನಾವು ಬೇರೆಯವರನ್ನ ನೋಯಿಸಿಬಿಡಬಹುದು. ಅಷ್ಟೇ ಅಲ್ಲ ಯೆಹೋವನ ಜೊತೆ ಇರೋ ನಮ್ಮ ಸಂಬಂಧನೂ ಹಾಳು ಮಾಡ್ಕೊಂಡು ಬಿಡಬಹುದು. (1 ತಿಮೊ. 6:10) ಹಿಂದಿನ ಕಾಲದಲ್ಲಿ ಕೆಲವು ಜನರು ಬಡವರಿಗೆ ಸಾಲ ಕೊಟ್ಟು ಅವರಿಂದ ಬಡ್ಡಿ ತಗೊಳ್ತಿದ್ರು. ಅಷ್ಟೇ ಅಲ್ಲ ಕೆಲವು ನ್ಯಾಯಾಧೀಶರು ಲಂಚ ತಗೊಂಡು ನಿರಪರಾಧಿಗಳಿಗೆ ಅನ್ಯಾಯ ಮಾಡ್ತಾ ಇದ್ರು. ಇದೆಲ್ಲ ಯೆಹೋವನಿಗೆ ಒಂಚೂರು ಇಷ್ಟ ಆಗಲ್ಲ.—ಯೆಹೆ. 22:12.

18. ಹಣದ ಬಗ್ಗೆ ನಾವು ಹೇಗೆ ಯೋಚಿಸ್ತಾ ಇದ್ದೀವಿ ಅಂತ ಅರ್ಥ ಮಾಡ್ಕೊಳ್ಳೋಕೆ ಯಾವ ಪ್ರಶ್ನೆಗಳು ಸಹಾಯ ಮಾಡುತ್ತೆ? (ಇಬ್ರಿಯ 13:5)

18 ಹಣದ ಬಗ್ಗೆ ನಾವು ಹೇಗೆ ಯೋಚಿಸ್ತಾ ಇದ್ದೀವಿ ಅಂತ ಆಗಾಗ ನಮ್ಮನ್ನ ಪರೀಕ್ಷೆ ಮಾಡ್ಕೊಳ್ತಾ ಇರಬೇಕು. ಅದಕ್ಕೆ ಕೆಲವು ಪ್ರಶ್ನೆ ಸಹಾಯ ಮಾಡುತ್ತೆ. ‘ನಾನು ಯಾವಾಗ್ಲೂ ಹಣದ ಬಗ್ಗೆ ಯೋಚಿಸ್ತೀನಾ ಮತ್ತು ಅದ್ರಿಂದ ಏನೆಲ್ಲ ತಗೋಬಹುದು ಅನ್ನೋದ್ರ ಬಗ್ಗೆ ಯೋಚಿಸ್ತೀನಾ? ನಾನು ಯಾರ ಹತ್ರ ಆದ್ರೂ ಹಣ ತಗೊಂಡ್ರೆ ಅವರಿಗೆ ಕೊಡೋಕೆ ತಡ ಮಾಡ್ತಿದ್ದೀನಾ ಅಥವಾ ಅವರಿಗೆ ಈ ಹಣದ ಅಗತ್ಯ ಇಲ್ಲ ಅಂತ ಅಂದ್ಕೊಳ್ತೀನಾ? ನನ್ನ ಹತ್ರ ಹಣ ಇರೋದ್ರಿಂದ ನಾನು ಎಲ್ರಿಗಿಂತ ದೊಡ್ಡವನು ಅಂತ ಅಂದ್ಕೊಳ್ತೀನಾ ಅಥವಾ ಬೇರೆಯವರಿಗೆ ಧಾರಾಳತನ ತೋರಿಸೋಕೆ ಹಿಂಜರಿತಿದ್ದೀನಾ? ಶ್ರೀಮಂತರಾಗಿರೋ ಸಹೋದರ ಸಹೋದರಿಯರನ್ನ ನೋಡಿ ಅವರಿಗೆ ಹಣದಾಸೆ ಇದೆ ಅಂತ ನಾನು ಅಂದ್ಕೊಳ್ತೀನಾ? ನಾನು ಬಡವರನ್ನ ಮೂಲೆಗೆ ತಳ್ಳಿ ಬರೀ ಶ್ರೀಮಂತರನ್ನ ಫ್ರೆಂಡ್ಸ್‌ ಮಾಡ್ಕೊಳ್ತೀನಾ?’ ಆದ್ರೆ ಒಂದು ವಿಷಯ ನೆನಪಿಡಿ. ಯೆಹೋವನ ಅತಿಥಿಗಳಾಗಿರೋದು ನಮ್ಮೆಲ್ಲರಿಗೂ ಸಿಕ್ಕಿರೋ ಒಂದು ದೊಡ್ಡ ಸುಯೋಗ. ಹಾಗಾಗಿ ನಾವು ಯಾವಾಗ್ಲೂ ಆತನ ಅತಿಥಿಗಳಾಗಿ ಇರೋಕೆ ಹಣದಾಸೆಯಿಂದ ದೂರ ಇರಬೇಕು. ಹೀಗೆ ಮಾಡಿದ್ರೆ ಯೆಹೋವ ಯಾವತ್ತೂ ನಮ್ಮ ಕೈಬಿಡಲ್ಲ.—ಇಬ್ರಿಯ 13:5 ಓದಿ.

ಯೆಹೋವ ತನ್ನ ಸ್ನೇಹಿತರನ್ನ ಪ್ರೀತಿಸ್ತಾನೆ

19. ಕೀರ್ತನೆ 15ರಲ್ಲಿ ಹೇಳಿರೋ ವಿಷ್ಯಗಳನ್ನ ನಾವು ಮಾಡಬೇಕು ಅಂತ ಯೆಹೋವ ಯಾಕೆ ಇಷ್ಟಪಡ್ತಾನೆ?

19 ಕೀರ್ತನೆ 15ರ ಕೊನೆಯಲ್ಲಿ “ಇವೆಲ್ಲ ಮಾಡೋ ವ್ಯಕ್ತಿನ ಯಾವತ್ತೂ ಕದಲಿಸೋಕೆ ಆಗಲ್ಲ” ಅಂತ ಹೇಳ್ತಾ ಇದೆ. (ಕೀರ್ತ. 15:5) ಈ ಕೀರ್ತನೆಯಲ್ಲಿ ಹೇಳಿರೋ ವಿಷ್ಯಗಳನ್ನ ನಾವು ಮಾಡಬೇಕು ಅಂತ ಯೆಹೋವ ಯಾಕೆ ಕೇಳ್ತಿದ್ದಾನೆ? ಯಾಕಂದ್ರೆ ನಾವು ಖುಷಿಯಾಗಿ ಇರಬೇಕು ಅಂತ ಆತನು ಇಷ್ಟಪಡ್ತಾನೆ. ಆತನು ಹೇಳೋ ಮಾತನ್ನ ನಾವು ಕೇಳಿದ್ರೆ ನಮಗೆ ಆಶೀರ್ವಾದನೂ ಸಿಗುತ್ತೆ, ಆತನಿಂದ ಸಂರಕ್ಷಣೆನೂ ಸಿಗುತ್ತೆ.—ಯೆಶಾ. 48:17.

20. ಯೆಹೋವನ ಅತಿಥಿಗಳಿಗೆ ಭವಿಷ್ಯದಲ್ಲಿ ಏನು ಸಿಗುತ್ತೆ?

20 ಯೆಹೋವನ ಅತಿಥಿಗಳಿಗೆ ಮುಂದೆ ಒಂದು ಒಳ್ಳೆ ಭವಿಷ್ಯ ಇದೆ. ನಂಬಿಗಸ್ತ ಅಭಿಷಿಕ್ತ ಕ್ರೈಸ್ತರಿಗೆ ಸ್ವರ್ಗದಲ್ಲಿ “ಉಳ್ಕೊಳ್ಳೋಕೆ ತುಂಬ ಜಾಗ ಇದೆ.” ಯೇಸು ಈಗಾಗಲೇ ಅದನ್ನ ಸಿದ್ಧ ಮಾಡಿ ಇಟ್ಟಿದ್ದಾನೆ. (ಯೋಹಾನ 14:2) ಆದರೆ ಭೂಮಿಯಲ್ಲಿ ಇರೋರಿಗೆ ಯಾವ ಆಶೀರ್ವಾದ ಸಿಗುತ್ತೆ ಅಂತ ಪ್ರಕಟಣೆ 21:3ರಲ್ಲಿ ಹೇಳಿದೆ. ಯೆಹೋವನ ಸ್ನೇಹಿತರು ಆತನ ಡೇರೆಯಲ್ಲಿ ಶಾಶ್ವತಕ್ಕೂ ಅತಿಥಿಗಳಾಗಿ ಇರಬಹುದು. ಈ ಆಮಂತ್ರಣವನ್ನ ಯೆಹೋವ ದೇವರೇ ಕೊಟ್ಟಿರೋದ್ರಿಂದ ಇದು ನಮ್ಮ ಜೀವನದಲ್ಲೇ ಸಿಕ್ಕಿರೋ ದೊಡ್ಡ ಸುಯೋಗ!

ಗೀತೆ 4 ದೇವರೊಂದಿಗೆ ಒಳ್ಳೆಯ ಹೆಸರನ್ನು ಮಾಡಿಕೊಳ್ಳುವುದು