ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸದಾ ಎಚ್ಚರವಾಗಿರಿ!

ನಿರಾಶ್ರಿತರ ಬಿಕ್ಕಟ್ಟು—ಲಕ್ಷಾಂತರ ಜನರು ಉಕ್ರೇನ್‌ನಿಂದ ಪಲಾಯನ

ನಿರಾಶ್ರಿತರ ಬಿಕ್ಕಟ್ಟು—ಲಕ್ಷಾಂತರ ಜನರು ಉಕ್ರೇನ್‌ನಿಂದ ಪಲಾಯನ

 ಫೆಬ್ರವರಿ 24, 2022ರಂದು ರಷ್ಯಾ ಉಕ್ರೇನ್‌ ಮೇಲೆ ಆಕ್ರಮಣ ಮಾಡ್ತು. ಇದರಿಂದಾಗಿ ಲಕ್ಷಾಂತರ ಜನರ ಜೀವ ಅಪಾಯದಲ್ಲಿದೆ. ಅವರಲ್ಲಿ ಹೆಚ್ಚಿನ ಜನರು ಆದಷ್ಟು ಬೇಗ ದೇಶವನ್ನ ಬಿಟ್ಟು ಓಡಿಹೋಗಲು ಪ್ರಯತ್ನಿಸ್ತಿದ್ದಾರೆ. a

 “ಎಲ್ಲಿ ನೋಡಿದ್ರೂ ಬಾಂಬ್‌ಗಳ, ಸ್ಫೋಟಗಳ ಶಬ್ದನೇ ಕೇಳಿಸ್ತಿತ್ತು. ನನಗೆ ಎಷ್ಟು ಭಯ ಆಯ್ತು ಅಂದ್ರೆ ಅದನ್ನ ಮಾತಲ್ಲೇ ಹೇಳೋಕಾಗಲ್ಲ. ನಾವು ಇದ್ದ ಊರನ್ನ ಬಿಟ್ಟು ಹೋಗೋಕೆ ಟ್ರೇನ್‌ಗಳಿವೆ ಅಂತ ಗೊತ್ತಾದಾಗ ನಾವು ಹೋಗಬೇಕು ಅಂತ ತೀರ್ಮಾನ ಮಾಡಿದ್ವಿ. ಈಗ ನಮ್ಮ ಇಡೀ ಜೀವನವನ್ನೇ ಒಂದು ಚಿಕ್ಕ ಬ್ಯಾಗಲ್ಲಿ ತುಂಬಿಸಬೇಕಿತ್ತು. ನಮಗೆ ಬರೀ ಕೆಲವು ಡಾಕ್ಯುಮೆಂಟ್ಸ್‌ನ್ನ, ಔಷಧಿಯನ್ನ, ನೀರನ್ನ ಮತ್ತು ಸ್ವಲ್ಪ ತಿಂಡಿಯನ್ನ ಮಾತ್ರ ತಗೊಳ್ಳೋಕೆ ಆಯ್ತು. ನಮ್ಮ ಸುತ್ತಮುತ್ತ ಬಾಂಬ್‌ಗಳು ಸಿಡಿತಾ ಇದ್ರೂ ನಾವು ಎಲ್ಲಾ ಬಿಟ್ಟು ಟ್ರೇನ್‌ ಸ್ಟೇಷನ್‌ಗೆ ಓಡಿಹೋದ್ವಿ.”—ನಟಾಲಿಯಾ, ಉಕ್ರೇನ್‌ನ ಖಾರ್ಕಿವ್‌ನಿಂದ.

 “ಕೊನೆ ಕ್ಷಣದ ತನಕ ಯುದ್ಧ ನಡಿಯಲ್ಲ ಅಂತ ನಾವು ಅಂದುಕೊಂಡಿದ್ವಿ. ಆದ್ರೆ ನಗರದ ಕೆಲವು ಪ್ರದೇಶಗಳಿಂದ ನಮಗೆ ಸ್ಫೋಟದ ಶಬ್ದ ಕೇಳಿಸ್ತಿತ್ತು. ನಮ್ಮ ಕಿಟಕಿಗಳು ನಡುಗ್ತಿದ್ವು. ಆಗ ಕೂಡಲೇ ನಾನು ಅಲ್ಲಿಂದ ಹೋಗಬೇಕು ಅಂತ ನಿರ್ಧಾರ ಮಾಡಿ, ಬೇಕಾಗಿರೋ ವಸ್ತುಗಳನ್ನ ಮಾತ್ರ ತಗೊಂಡೆ. ನಾನು ಬೆಳಿಗ್ಗೆ 8 ಗಂಟೆಗೆ ಮನೆ ಬಿಟ್ಟೆ, ಆಮೇಲೆ ಲಿವೀವ್‌ವರೆಗೂ ಟ್ರೇನಲ್ಲಿ ಹೋಗಿ, ಅಲ್ಲಿಂದ ಪೋಲೆಂಡ್‌ ಬಸ್‌ ಹತ್ತಿದೆ.”—ನ್ಯಾಡಿಯಾ, ಉಕ್ರೇನ್‌ನ ಖಾರ್ಕಿವ್‌ನಿಂದ.

ಈ ಲೇಖನದಲ್ಲಿ . . .

 ನಿರಾಶ್ರಿತರ ಈ ಬಿಕ್ಕಟ್ಟಿಗೆ ನಿಜವಾದ ಕಾರಣಗಳೇನು?

 ರಷ್ಯಾ ಮಿಲಿಟರಿ ಸೈನ್ಯ ಉಕ್ರೇನ್‌ ಮೇಲೆ ಆಕ್ರಮಣ ಮಾಡಿದ್ರಿಂದ ಈ ನಿರಾಶ್ರಿತರ ಬಿಕ್ಕಟ್ಟು ಶುರು ಆಯ್ತು. ಹಾಗಿದ್ರೂ ಈ ನಿರಾಶ್ರಿತರ ಬಿಕ್ಕಟ್ಟಿಗೆ ಇನ್ನೂ ಪ್ರಾಮುಖ್ಯವಾದ ಕಾರಣಗಳನ್ನ ಬೈಬಲ್‌ ವಿವರಿಸುತ್ತೆ:

  •   ಮಾನವ ಸರ್ಕಾರಗಳು ಲೋಕವ್ಯಾಪಕವಾಗಿ ಜನರಿಗೆ ಏನು ಬೇಕೋ ಅದನ್ನ ಕೊಡೋದ್ರಲ್ಲಿ ತಪ್ಪಿಹೋಗಿವೆ. ಈ ಸರ್ಕಾರಗಳು ತಮ್ಮ ಅಧಿಕಾರವನ್ನ ಬಳಸಿ ಜನರನ್ನ ನಿಯಂತ್ರಿಸ್ತಿವೆ ಮತ್ತು ಅವರ ಮೇಲೆ ದಬ್ಬಾಳಿಕೆ ಮಾಡ್ತಿವೆ.—ಪ್ರಸಂಗಿ 4:1; 8:9.

  •   ದುಷ್ಟ ಸೈತಾನ, “ಈ ಲೋಕದ ನಾಯಕ” ಜನರ ಮೇಲೆ ಎಷ್ಟು ಪ್ರಭಾವ ಬೀರುತ್ತಿದ್ದಾನೆ ಅಂದ್ರೆ ಈ “ಇಡೀ ಲೋಕ ಸೈತಾನನ ಕೈಯಲ್ಲಿದೆ” ಅಂತ ಬೈಬಲ್‌ ಹೇಳುತ್ತೆ.—ಯೋಹಾನ 14:30; 1 ಯೋಹಾನ 5:19.

  •   ಕಳೆದ ನೂರಾರು ವರ್ಷಗಳಿಂದ ಮಾನವಕುಲ ಅನೇಕ ಕಷ್ಟ ಸಮಸ್ಯೆಗಳನ್ನ ಎದುರಿಸ್ತಾ ಬಂದಿದೆ. ಆದ್ರೆ ನಾವೀಗ ಜೀವಿಸ್ತಾ ಇರೋ ಸಮಯದ ಬಗ್ಗೆ ಬೈಬಲ್‌ ಮುಂಚೆನೇ ಹೀಗೆ ಹೇಳಿತ್ತು: “ಕೊನೇ ದಿನಗಳಲ್ಲಿ ಪರಿಸ್ಥಿತಿ ತುಂಬ ಹದಗೆಡುತ್ತೆ, ತುಂಬ ಕಷ್ಟ ಪಡಬೇಕಾಗುತ್ತೆ.” (2 ತಿಮೊತಿ 3:1) ಅಷ್ಟೇ ಅಲ್ಲ, ಕೊನೇ ದಿನಗಳಲ್ಲಿ ಯುದ್ಧಗಳು, ನೈಸರ್ಗಿಕ ವಿಪತ್ತುಗಳು, ಆಹಾರದ ಕೊರತೆ ಮತ್ತು ಅಂಟುರೋಗಗಳು ಹೆಚ್ಚಾಗುತ್ತೆ ಅಂತ ಕೂಡ ಬೈಬಲ್‌ ಹೇಳಿತ್ತು. ಈ ಎಲ್ಲಾ ಘಟನೆಗಳು ಜನರು ತಮ್ಮ ಮನೆಗಳನ್ನ ಬಿಟ್ಟು ಹೋಗುವಂತೆ ಮಾಡ್ತಿವೆ.—ಲೂಕ 21:10, 11.

 ನಿರಾಶ್ರಿತರಿಗೆ ನಿಜವಾದ ನಿರೀಕ್ಷೆ ಎಲ್ಲಿಂದ ಸಿಗುತ್ತೆ?

 ತಮ್ಮ ಮನೆಗಳನ್ನ ಬಿಟ್ಟು ಬಂದಿರೋ ನಿರಾಶ್ರಿತರ ಮೇಲೆ ನಮ್ಮ ಸೃಷ್ಟಿಕರ್ತ ದೇವರಾಗಿರುವ ಯೆಹೋವನಿಗೆ b ಪ್ರೀತಿ ಮತ್ತು ಅನುಕಂಪ ಇದೆ ಅಂತ ಬೈಬಲ್‌ ಹೇಳುತ್ತೆ. (ಧರ್ಮೋಪದೇಶಕಾಂಡ 10:18) ನಿರಾಶ್ರಿತರಿಗೆ ಇರುವಂಥ ಎಲ್ಲ ಸಮಸ್ಯೆಗಳನ್ನ ತನ್ನ ಸರ್ಕಾರದ ಮೂಲಕ ತೆಗೆದುಹಾಕ್ತೀನಿ ಅಂತ ದೇವರು ಮಾತು ಕೊಟ್ಟಿದ್ದಾನೆ. ಆ ಸರ್ಕಾರದ ಹೆಸರೇ ದೇವರ ರಾಜ್ಯ. ಅದು ಎಲ್ಲ ಮಾನವ ಸರ್ಕಾರಗಳನ್ನ ತೆಗೆದುಹಾಕುತ್ತೆ. (ದಾನಿಯೇಲ 2:44; ಮತ್ತಾಯ 6:10) ಯೆಹೋವ ದೇವರು ತನ್ನ ಸರ್ಕಾರದ ಮೂಲಕ ಆ ದುಷ್ಟ ಸೈತಾನನನ್ನ ನಾಶಮಾಡ್ತಾನೆ. (ರೋಮನ್ನರಿಗೆ 16:20) ಈ ಸರ್ಕಾರ ಒಂದು ದೇಶವನ್ನ ಮಾತ್ರವಲ್ಲ, ಇಡೀ ಲೋಕವನ್ನ ಆಳುತ್ತೆ. ಎಲ್ಲ ತರದ ದೇಶದ ಗಡಿಗಳನ್ನ, ಮೇರೆಗಳನ್ನ ಕಿತ್ತು ಬಿಸಾಡುತ್ತೆ. ಎಲ್ಲ ಜನರು ಸೇರಿ ಲೋಕವ್ಯಾಪಕವಾಗಿ ಒಂದೇ ಕುಟುಂಬವಾಗ್ತಾರೆ. ಇನ್ಮುಂದೆ ಯಾರೂ ಕೂಡ ತಮ್ಮ ಮನೆಗಳನ್ನ ಬಿಟ್ಟು ಓಡಿಹೋಗೋ ಅವಶ್ಯಕತೆ ಇರಲ್ಲ. ಇದರ ಬಗ್ಗೆ ದೇವರು ಬೈಬಲಲ್ಲಿ ಹೀಗೆ ಮಾತುಕೊಟ್ಟಿದ್ದಾನೆ: “ಅವ್ರಲ್ಲಿ ಪ್ರತಿಯೊಬ್ಬನು ತನ್ನ ದ್ರಾಕ್ಷಿಬಳ್ಳಿ ಕೆಳಗೆ, ಅಂಜೂರ ಮರದ ಕೆಳಗೆ ಕೂತ್ಕೊಳ್ತಾನೆ, ಅವ್ರನ್ನ ಯಾರೂ ಹೆದರಿಸಲ್ಲ, ಸೈನ್ಯಗಳ ದೇವರಾದ ಯೆಹೋವನೇ ಇದನ್ನ ಹೇಳಿದ್ದಾನೆ.”—ಮೀಕ 4:4.

 ಇವತ್ತು ನಾವು ಅನುಭವಿಸ್ತಿರೋ ನಿರಾಶ್ರಿತರ ಬಿಕ್ಕಟ್ಟಿಗೆ ದೇವರ ರಾಜ್ಯ ಮಾತ್ರ ಶಾಶ್ವತ ಪರಿಹಾರ ಕೊಡೋಕೆ ಸಾಧ್ಯ. ಜನರು ನಿರಾಶ್ರಿತರಾಗೋ ತರ ಮಾಡಿರೋ ಎಲ್ಲ ಸಮಸ್ಯೆಗಳನ್ನ ಯೆಹೋವ ದೇವರು ತನ್ನ ಸರ್ಕಾರದ ಮೂಲಕ ತೆಗೆದುಹಾಕ್ತಾನೆ. ಅದು ಹೇಗೆ ಅಂತ ಕೆಲವು ಉದಾಹರಣೆಗಳನ್ನ ನೋಡಿ:

  •   ಯುದ್ಧ. ಯೆಹೋವ ದೇವರು “ಭೂಮಿಯಲ್ಲಿ ಎಲ್ಲ ಕಡೆ ಯುದ್ಧಗಳನ್ನ ನಿಲ್ಲಿಸಿಬಿಡ್ತಾನೆ.” (ಕೀರ್ತನೆ 46:9) ದೇವರು ಯುದ್ಧಗಳನ್ನ ಹೇಗೆ ನಿಲ್ಲಿಸ್ತಾನೆ ಅಂತ ತಿಳಿದುಕೊಳ್ಳೋಕೆ “ಭೂಮಿ ಮೇಲೆ ಶಾಂತಿ—ಅದು ಹೇಗೆ ಬರುತ್ತೆ?” ಅನ್ನೋ ಲೇಖನ ಓದಿ.

  •   ದಬ್ಬಾಳಿಕೆ ಮತ್ತು ಹಿಂಸೆ. ಯೆಹೋವ ದೇವರು “ಅವ್ರನ್ನ ದಬ್ಬಾಳಿಕೆಯಿಂದ, ಹಿಂಸೆಯಿಂದ ತಪ್ಪಿಸ್ತಾನೆ.” (ಕೀರ್ತನೆ 72:14) ತುಂಬ ವರ್ಷಗಳಿಂದ ತಮ್ಮಲ್ಲಿ ಬೇರೂರಿರುವ ಕೆಟ್ಟ ಗುಣಗಳನ್ನೂ ಜನರು ಬದಲಾಯಿಸಿಕೊಳ್ಳೋಕೆ ಸಾಧ್ಯ ಅಂತ ತಿಳಿಯೋಕೆ “ದ್ವೇಷದ ಸರಪಳಿ ಮುರಿಯಿರಿ” ಅನ್ನೋ ಲೇಖನ ಸರಣಿಯನ್ನ ಓದಿ.

  •   ಬಡತನ. “ಸಹಾಯಕ್ಕಾಗಿ ಮೊರೆ ಇಡೋ ಬಡವ್ರನ್ನ [ಯೆಹೋವ ದೇವರು] ಕಾಪಾಡ್ತಾನೆ.” (ಕೀರ್ತನೆ 72:12) ಬಡತನಕ್ಕೆ ಮುಖ್ಯ ಕಾರಣ ಆಗಿರೋ ಸಮಸ್ಯೆಗಳನ್ನ ದೇವರು ಹೇಗೆ ತೆಗೆದುಹಾಕ್ತಾನೆ ಅಂತ ತಿಳಿದುಕೊಳ್ಳೋಕೆ, “ಒಳ್ಳೇ ಆರ್ಥಿಕ ವ್ಯವಸ್ಥೆ ಬರೋಕೆ ಸಾಧ್ಯನಾ?” ಅನ್ನೋ ಲೇಖನ ಓದಿ.

  •   ಆಹಾರದ ಕೊರತೆ. “ಭೂಮಿ ಮೇಲೆ ಬೆಳೆ ಸಮೃದ್ಧವಾಗಿ ಇರುತ್ತೆ.” (ಕೀರ್ತನೆ 72:16) ಯಾರಿಗೂ ಕೂಡ ಆಹಾರದ ಕೊರತೆ ಆಗದೇ ಇರೋ ತರ ದೇವರು ಹೇಗೆ ನೋಡಿಕೊಳ್ತಾನೆ ಅನ್ನೋದನ್ನ ತಿಳಿದುಕೊಳ್ಳೋಕೆ “ಹಸಿವಿನಿಂದ ಬಳಲದ ಲೋಕ ಬರೋಕೆ ಸಾಧ್ಯನಾ?” ಅನ್ನೋ ಲೇಖನ ಓದಿ.

 ನಿರಾಶ್ರಿತರಿಗೆ ಬೈಬಲ್‌ ಸಹಾಯ ಮಾಡುತ್ತಾ?

 ಖಂಡಿತ. ಬೈಬಲ್‌ ನಿರಾಶ್ರಿತರಿಗೆ ನಿರೀಕ್ಷೆಯನ್ನ ಕೊಡೋದಷ್ಟೇ ಅಲ್ಲ, ಅವರಿಗೆ ಈಗಿರುವ ಸವಾಲುಗಳನ್ನ ಹೇಗೆ ಜಯಿಸೋದು ಅನ್ನೋದನ್ನೂ ಕಲಿಸುತ್ತೆ.

 ಬೈಬಲ್‌ ಕೊಡೋ ಸಲಹೆ: “ಅನುಭವ ಇಲ್ಲದವನು ಹೇಳಿದ್ದನ್ನೆಲ್ಲ ಕಣ್ಮುಚ್ಚಿ ನಂಬ್ತಾನೆ, ಆದ್ರೆ ಜಾಣ ಪ್ರತಿ ಹೆಜ್ಜೆಯನ್ನ ಚೆನ್ನಾಗಿ ಯೋಚ್ನೆ ಮಾಡಿ ಇಡ್ತಾನೆ.”—ಜ್ಞಾನೋಕ್ತಿ 14:15.

 ಅರ್ಥ: ನಿಮಗೆ ಯಾವುದಾದ್ರೂ ಅಪಾಯದ ಸನ್ನಿವೇಶ ಬರಬಹುದಾ? ಬಂದ್ರೆ ಆಗ ನೀವೇನು ಮಾಡ್ತೀರಾ? ಅಂತ ಯೋಚನೆ ಮಾಡಿ. ನೀವು ನಿರಾಶ್ರಿತರಾಗಿ ಬೇರೆ ಜಾಗದಲ್ಲಿ ಇರುವಾಗ ನಿಮಗೆ ಅನುಭವ ಇಲ್ಲದೆ ಇರೋದ್ರಿಂದ ಅಥವಾ ನೀವು ಭಯಭಯದಲ್ಲಿ ಇರೋದ್ರಿಂದ ಕೆಲವು ಅಪರಾಧಿಗಳು ಆ ಸನ್ನಿವೇಶ ಬಳಸ್ಕೊಂಡು ನಿಮಗೆ ಮೋಸ ಮಾಡೋಕೆ ಅಥವಾ ಲೂಟಿ ಮಾಡೋಕೆ ಪ್ರಯತ್ನಿಸ್ತಾರೆ. ಅಂಥವರಿಂದ ಹುಷಾರಾಗಿರಿ.

 ಬೈಬಲ್‌ ಕೊಡೋ ಸಲಹೆ: “ಹಾಗಾಗಿ ನಮಗೆ ಊಟ ಬಟ್ಟೆ ಇದ್ರೆ ಸಾಕು. ಅದ್ರಲ್ಲೇ ತೃಪ್ತಿ ಪಡಬೇಕು.”—1 ತಿಮೊತಿ 6:8.

 ಅರ್ಥ: ಹಣ-ವಸ್ತುಗಳ ಮೇಲೆ ನಿಮ್ಮ ಗಮನ ಇಡೋ ಬದಲು ಸಿಕ್ಕಿರುವ ಅಗತ್ಯ ವಿಷಯಗಳಲ್ಲಿ ತೃಪ್ತಿಯಾಗಿದ್ರೆ, ನೀವು ಖುಷಿಯಾಗಿ ಇರ್ತೀರ.

 ಬೈಬಲ್‌ ಕೊಡೋ ಸಲಹೆ: “ಹಾಗಾಗಿ ಜನ ನಿಮಗೆ ಏನು ಮಾಡಬೇಕಂತ ಇಷ್ಟಪಡ್ತೀರೋ ಅದನ್ನೇ ಅವ್ರಿಗೆ ಮಾಡಿ.”—ಮತ್ತಾಯ 7:12.

 ಅರ್ಥ: ತಾಳ್ಮೆ ಮತ್ತು ದಯೆ ತೋರಿಸಿ. ಈ ಗುಣಗಳನ್ನ ತೋರಿಸೋದಾದ್ರೆ ನೀವಿರೋ ಹೊಸ ಜಾಗದಲ್ಲಿ, ಜನರು ನಿಮ್ಮನ್ನ ಗೌರವಿಸ್ತಾರೆ ಮತ್ತು ನಿಮ್ಮ ಸ್ನೇಹಿತರಾಗ್ತಾರೆ.

 ಬೈಬಲ್‌ ಕೊಡೋ ಸಲಹೆ: “ಯಾರಾದ್ರೂ ನಿಮಗೆ ಕೆಟ್ಟದು ಮಾಡಿದ್ರೆ ನೀವೂ ಅವ್ರಿಗೆ ಕೆಟ್ಟದು ಮಾಡಬೇಡಿ.”—ರೋಮನ್ನರಿಗೆ 12:17.

 ಅರ್ಥ: ನಿಮ್ಮ ಜೊತೆ ಯಾರಾದ್ರೂ ಕೆಟ್ಟದಾಗಿ ನಡಕೊಂಡ್ರೆ, ಅವರ ಮೇಲೆ ಕೋಪ ಮಾಡ್ಕೊಂಡು ಸೇಡು ತೀರಿಸಿಕೊಳ್ಳೋಕೆ ಹೋಗಬೇಡಿ. ಆ ರೀತಿ ಮಾಡಿದ್ರೆ ನಿಮ್ಮ ಸನ್ನಿವೇಶ ಇನ್ನೂ ಹದಗೆಡುತ್ತೆ.

 ಬೈಬಲ್‌ ಕೊಡೋ ಸಲಹೆ: “ದೇವರಿಂದಾನೇ ನನಗೆ ಎಲ್ಲ ಮಾಡೋಕೆ ಆಗ್ತಿದೆ. ಯಾಕಂದ್ರೆ ನನಗೆ ಬೇಕಾದ ಶಕ್ತಿ ಕೊಡೋದು ಆತನೇ.”—ಫಿಲಿಪ್ಪಿ 4:13.

 ಅರ್ಥ: ನಿಮ್ಮ ಜೀವನದಲ್ಲಿ ದೇವರಿಗೆ ಮೊದಲ ಸ್ಥಾನ ಕೊಡಿ ಮತ್ತು ಸಹಾಯಕ್ಕಾಗಿ ಆತನಿಗೆ ಪ್ರಾರ್ಥಿಸಿ. ಆತನು ನಿಮಗೆ ತಾಳಿಕೊಳ್ಳೋಕೆ ಶಕ್ತಿ ಕೊಡ್ತಾನೆ.

 ಬೈಬಲ್‌ ಕೊಡೋ ಸಲಹೆ: “ಯಾವುದ್ರ ಬಗ್ಗೆನೂ ಚಿಂತೆ ಮಾಡಬೇಡಿ. ಅದ್ರ ಬದ್ಲು ಯಾವಾಗ್ಲೂ ದೇವರಿಗೆ ಪ್ರಾರ್ಥಿಸಿ. ಪ್ರತಿಯೊಂದು ವಿಷ್ಯದಲ್ಲೂ ಮಾರ್ಗದರ್ಶನೆಗಾಗಿ ಕೇಳ್ಕೊಳ್ಳಿ, ಅಂಗಲಾಚಿ ಬೇಡಿ, ಯಾವಾಗ್ಲೂ ಆತನಿಗೆ ಧನ್ಯವಾದ ಹೇಳಿ. ಆಗ ನಿಮ್ಮ ತಿಳುವಳಿಕೆಗೂ ಮೀರಿದ ಶಾಂತಿಯನ್ನ ದೇವರು ನಿಮಗೆ ಕೊಡ್ತಾನೆ. ಈ ರೀತಿ ಆತನು . . . ನಿಮ್ಮ ಹೃದಯನ, ಯೋಚ್ನೆನ ಕಾಯ್ತಾನೆ.”—ಫಿಲಿಪ್ಪಿ 4:6, 7.

 ಅರ್ಥ: ನಿಮ್ಮ ಸನ್ನಿವೇಶ ಏನೇ ಆಗಿರಲಿ ಶಾಂತಿ, ನೆಮ್ಮದಿ ಕೊಡುವಂತೆ ದೇವರ ಹತ್ರ ಕೇಳಿಕೊಳ್ಳಿ. “ಫಿಲಿಪ್ಪಿ 4:6, 7—‘ಯಾವ ವಿಷಯವಾಗಿಯೂ ಚಿಂತೆ ಮಾಡಬೇಡಿ’” ಅನ್ನೋ ಲೇಖನ ನೋಡಿ.

a ರಷ್ಯಾ ಆಕ್ರಮಣ ಮಾಡಿದ ಮಾರನೇ ದಿನಾನೇ, ನಿರಾಶ್ರಿತರಿಗೆ ನೆರವು ನೀಡುವ ಸಂಸ್ಥೆ ಆಗಿರುವ UNHCR ಈ ಪರಿಸ್ಥಿತಿ ಇರೋದ್ರಲ್ಲೇ ತುಂಬ ಗಂಭೀರವಾದ ತುರ್ತು ಪರಿಸ್ಥಿತಿಯಾಗಿದೆ ಅಂತ ಹೇಳ್ತು. ಕೇವಲ 12 ದಿನಗಳಲ್ಲಿ 20 ಲಕ್ಷಕ್ಕಿಂತ ಹೆಚ್ಚು ಜನರು ಉಕ್ರೇನನ್ನ ಬಿಟ್ಟು ಅಕ್ಕಪಕ್ಕದ ದೇಶಗಳಿಗೆ ಓಡಿಹೋದ್ರು. ಅದೇ ಸಮಯದಲ್ಲಿ 10 ಲಕ್ಷ ಜನರು ಉಕ್ರೇನಿನಲ್ಲೇ ಬೇರೆ ಪ್ರದೇಶಗಳಿಗೆ ಸ್ಥಳಾಂತರಿಸಿದ್ರು.

b ಯೆಹೋವ ಅನ್ನೋದು ದೇವರ ವೈಯಕ್ತಿಕ ಹೆಸರು. (ಕೀರ್ತನೆ 83:18) “ಯೆಹೋವ ಯಾರು?” ಅನ್ನೋ ಲೇಖನ ನೋಡಿ.