ಮಾಹಿತಿ ಇರುವಲ್ಲಿ ಹೋಗಲು

ವಿಜ್ಞಾನನ ಬೈಬಲ್‌ ಒಪ್ಪುತ್ತಾ?

ವಿಜ್ಞಾನನ ಬೈಬಲ್‌ ಒಪ್ಪುತ್ತಾ?

ಬೈಬಲ್‌ ಕೊಡೋ ಉತ್ತರ

 ಹೌದು ಒಪ್ಪುತ್ತೆ. ಬೈಬಲ್‌ ವಿಜ್ಞಾನದ ಪುಸ್ತಕ ಅಲ್ಲದೇ ಇದ್ದರೂ ವಿಜ್ಞಾನಕ್ಕೆ ಸಂಬಂಧಪಟ್ಟ ವಿಷಯಗಳನ್ನ ನಿಖರವಾಗಿ ಹೇಳುತ್ತೆ. ಇದಕ್ಕೆ ಕೆಲವು ಉದಾಹರಣೆಗಳನ್ನ ಗಮನಿಸಿ. ಬೈಬಲ್‌ ಸಾವಿರಾರು ವರ್ಷಗಳ ಹಿಂದೆ ಬರೆಯಲ್ಪಟ್ಟಿತು. ಆಗ ಅದರಲ್ಲಿ ಹೇಳಿದ್ದ ವಿಜ್ಞಾನಕ್ಕೆ ಸಂಬಂಧಪಟ್ಟ ವಿಷಯಗಳನ್ನ, ಆ ಕಾಲದಲ್ಲಿ ಜೀವಿಸ್ತಿದ್ದ ಜನ ನಂಬಲಿಲ್ಲ ಅನ್ನೋದಕ್ಕೆ ಕೆಲವು ಉದಾಹರಣೆಗಳನ್ನ ಕೂಡ ಕೆಳಗೆ ಕೊಡಲಾಗಿದೆ.

  •   ವಿಶ್ವಕ್ಕೆ ಆರಂಭ ಇದೆ. (ಆದಿಕಾಂಡ 1:1) ಆದ್ರೆ ಪುರಾಣ ಕತೆಗಳು ಹೇಳೋ ಪ್ರಕಾರ ವಿಶ್ವವು ಸೃಷ್ಟಿಯಾಗಿಲ್ಲ, ಬದಲಿಗೆ ಅಸ್ತವ್ಯಸ್ತವಾಗಿದ್ದ ವಸ್ತುಗಳನ್ನ ವ್ಯವಸ್ಥಿತವಾಗಿ ಮಾಡಲಾಯ್ತು. ಬಾಬೆಲಿನವರು ಎರಡು ಸಮುದ್ರದಿಂದ ಬಂದ ಎರಡು ದೇವರುಗಳು ವಿಶ್ವಕ್ಕೆ ಜನ್ಮ ಕೊಟ್ಟರು ಅಂತ ನಂಬುತ್ತಾರೆ. ಬೇರೆ ಪುರಾಣಗಳು, ಒಂದು ದೊಡ್ಡ ಮೊಟ್ಟೆಯಿಂದ ವಿಶ್ವ ಬಂತು ಅಂತ ಹೇಳುತ್ತವೆ.

  •   ಪ್ರತಿ ದಿನ, ಇಡೀ ವಿಶ್ವ ನೈಸರ್ಗಿಕ ನಿಯಮಗಳ ಪ್ರಕಾರ ಕೆಲಸ ಮಾಡುತ್ತೆ ಹೊರತು, ದೇವತೆಗಳ ಇಷ್ಟದ ಪ್ರಕಾರ ಅಲ್ಲ. (ಯೋಬ 38:33; ಯೆರೆಮೀಯ 33:25) ಆದ್ರೆ ಲೋಕದಲ್ಲಿರುವ ಕಟ್ಟುಕತೆಗಳು, ಧಿಢೀರ್‌ ಅಂತ ಕರುಣೆ ಇಲ್ಲದೇ ದೇವರುಗಳು ಮಾಡೋ ನಿರ್ಧಾರದ ವಿರುದ್ಧ ಮನುಷ್ಯರು ಏನೂ ಮಾಡೋಕೆ ಆಗಲ್ಲ ಅಂತ ಹೇಳುತ್ತವೆ.

  •   ಭೂಮಿ ಅಂತರಿಕ್ಷದಲ್ಲಿ ತೇಲಾಡುತ್ತಿದೆ. (ಯೋಬ 26:7) ಆದ್ರೆ ಹಿಂದಿನ ಕಾಲದ ಜನರು ಭೂಮಿ ಚಪ್ಪಟೆಯಾಗಿದ್ದು ಒಬ್ಬ ದೈತ್ಯ ವ್ಯಕ್ತಿ ಅಥವಾ ಒಂದು ದೊಡ್ಡ ಪ್ರಾಣಿ ಅಂದ್ರೆ ಎಮ್ಮೆ ಅಥವಾ ಆಮೆ ಹೊತ್ತುಕೊಂಡಿದೆ ಅಂತ ನೆನಸ್ತಾ ಇದ್ದರು.

  •   ಸಮುದ್ರ ಮತ್ತು ಇತರ ಮೂಲಗಳಿಂದ ಆವಿಯಾದ ನೀರು ಮೋಡ ಆಗಿ ಮಳೆ, ಮಂಜು ಮತ್ತು ಆಲಿಕಲ್ಲಿನ ರೂಪದಲ್ಲಿ ಮತ್ತೆ ಭೂಮಿಗೆ ಬಂದು ನದಿ, ಕೆರೆಗಳಲ್ಲಿ ತುಂಬುತ್ತೆ. (ಯೋಬ 36:27, 28; ಪ್ರಸಂಗಿ 1:7; ಯೆಶಾಯ 55:10; ಆಮೋಸ 9:6) ಆದ್ರೆ ಗ್ರೀಕರು, ನದಿಗಳಿಗೆ ನೀರು ಭೂಮಿ ಕೆಳಗಿರೋ ಸಮುದ್ರದಿಂದ ಸಿಗುತ್ತೆ ಅಂತ ಅಂದುಕೊಂಡಿದ್ದರು. 18 ನೇ ಶತಮಾನದವರೆಗೂ ಜನ ಇದನ್ನೇ ನಂಬಿದ್ದರು.

  •   ಪರ್ವತಗಳ ಎತ್ತರ ಜಾಸ್ತಿ ಆಗುತ್ತೆ, ಕಮ್ಮಿ ಆಗುತ್ತೆ. ಇವತ್ತು ನಮಗೆ ಕಾಣೋ ಬೆಟ್ಟಗಳು ಒಂದು ಕಾಲದಲ್ಲಿ ಸಮುದ್ರದ ಕೆಳಗೆ ಇತ್ತು. (ಕೀರ್ತನೆ 104:6, 8) ಆದ್ರೆ ಕೆಲವು ಕಟ್ಟುಕತೆಗಳು, ಪರ್ವತಗಳು ಈಗ ಹೇಗೆ ಇವೆಯೋ ಅದೇ ತರ ದೇವರುಗಳು ಅವುಗಳನ್ನ ಸೃಷ್ಟಿ ಮಾಡಿದ್ರು ಅಂತ ಹೇಳುತ್ತವೆ.

  •   ಶುದ್ಧತೆಯ ನಿಯಮಗಳು ಆರೋಗ್ಯಕ್ಕೆ ಒಳ್ಳೇದು. ಇಸ್ರಾಯೇಲ್ಯರಿಗೆ ಕೊಟ್ಟ ನಿಯಮದಲ್ಲಿ ಶವವನ್ನ ಮುಟ್ಟಿದ ಮೇಲೆ ಸ್ನಾನ ಮಾಡಬೇಕು, ಸಾಂಕ್ರಾಮಿಕ ರೋಗ ಇರೋರನ್ನ ದೂರ ಇಡಬೇಕು, ಮನುಷ್ಯನ ತ್ಯಾಜ್ಯ ವಸ್ತುಗಳನ್ನ ಸರಿಯಾದ ರೀತಿಯಲ್ಲಿ ವಿಸರ್ಜಿಸಬೇಕು ಅಂತ ತಿಳಿಸಲಾಗಿತ್ತು. (ಯಾಜಕಕಾಂಡ 11:28; 13:1-5; ಧರ್ಮೋಪದೇಶಕಾಂಡ 23:13) ಆದ್ರೆ ಇದಕ್ಕೆ ವಿರುದ್ಧವಾಗಿ ಆಗಿನ ಕಾಲದ ಈಜಿಪ್ಟಿನವರು ದೇಹದ ಗಾಯಗಳಿಗೆ ಮನುಷ್ಯನ ಮಲವಿರುವ ಒಂದು ಮಿಶ್ರಣವನ್ನ ಹಚ್ಚುತ್ತಿದ್ದರು.

ಬೈಬಲಿನಲ್ಲಿರೋ ವಿಜ್ಞಾನಕ್ಕೆ ಸಂಬಂಧಪಟ್ಟ ಮಾಹಿತಿಯಲ್ಲಿ ಏನಾದ್ರೂ ತಪ್ಪು ಇದೆಯಾ?

 ಬೈಬಲನ್ನ ಚೆನ್ನಾಗಿ ಅಧ್ಯಯನ ಮಾಡಿದ ಮೇಲೆ ಬೈಬಲಿನಲ್ಲಿರೋ ವಿಜ್ಞಾನಕ್ಕೆ ಸಂಬಂಧಪಟ್ಟ ಮಾಹಿತಿ ಸರಿಯಾಗಿಯೇ ಇದೆ ಅಂತ ಗೊತ್ತಾಗಿದೆ. ಸಾಮಾನ್ಯವಾಗಿ ಜನರು ಬೈಬಲಿನಲ್ಲಿ ತಿಳಿಸಿರೋ ವಿಜ್ಞಾನದ ಮಾಹಿತಿಯನ್ನ ತಪ್ಪಾಗಿ ತಿಳಿದುಕೊಂಡಿದ್ದಾರೆ. ಅದಕ್ಕೆ ಕೆಲವು ಉದಾಹರಣೆಗಳನ್ನ ನೋಡಿ.

 ತಪ್ಪಾಭಿಪ್ರಾಯ: ವಿಶ್ವ 24 ಗಂಟೆಗಳಿರೋ ಆರು ದಿನಗಳಲ್ಲಿ ಸೃಷ್ಟಿ ಆಯ್ತು ಅಂತ ಬೈಬಲ್‌ ಹೇಳುತ್ತೆ.

 ನಿಜ: ದೇವರು ಇಡೀ ವಿಶ್ವವನ್ನ ಎಷ್ಟು ಕಾಲದ ಹಿಂದೆ ಸೃಷ್ಟಿ ಮಾಡಿದನು ಅಂತ ಬೈಬಲ್‌ ಹೇಳಲ್ಲ. (ಆದಿಕಾಂಡ 1:1) ಆದಿಕಾಂಡ 1 ನೇ ಅಧ್ಯಾಯದಲ್ಲಿ ಹೇಳಿರೋ ದಿನಗಳು ಎಷ್ಟು ದೀರ್ಘಾವಧಿಯ ದಿನಗಳು ಅಂತ ಗೊತ್ತಿಲ್ಲ. ಭೂಮಿ ಮತ್ತು ಸ್ವರ್ಗವನ್ನ ಸೃಷ್ಟಿ ಮಾಡಿದ್ದು ಕೂಡ ಒಂದು “ದಿನ” ಅಂತ ಹೇಳುತ್ತೆ. ಆದ್ರೆ ಈ ಒಂದು ದಿನ ತುಂಬಾ ದೀರ್ಘಕಾಲದ ಸಮಯವಾಗಿತ್ತು.—ಆದಿಕಾಂಡ 2:4.

 ತಪ್ಪಾಭಿಪ್ರಾಯ: ದ್ಯುತಿಸಂಶ್ಲೇಷಣೆ (ಫೋಟೋಸಿಂತಸಿಸ್‌) ಕ್ರಿಯೆ ನಡೆಯೋದಕ್ಕೆ ಮುಖ್ಯವಾಗಿ ಬೇಕಾಗಿರೋ ಸೂರ್ಯನನ್ನ ಸೃಷ್ಟಿ ಮಾಡೋದಕ್ಕಿಂತ ಮುಂಚೆನೇ ಗಿಡಮರಗಳು ಸೃಷ್ಟಿ ಆಗಿತ್ತು.

 ನಿಜ: ಆಕಾಶದಲ್ಲಿರೋ ಅನೇಕ ನಕ್ಷತ್ರಗಳಲ್ಲಿ ಸೂರ್ಯ ಕೂಡ ಒಂದು ಆಗಿರೋದ್ರಿಂದ ಗಿಡಮರಗಳು ಸೃಷ್ಟಿ ಆಗೋದಕ್ಕಿಂತ ಮುಂಚೆನೇ ಸೂರ್ಯ ಸೃಷ್ಟಿ ಆಗಿತ್ತು ಅಂತ ಬೈಬಲ್‌ ತಿಳಿಸುತ್ತೆ. (ಆದಿಕಾಂಡ 1:1) ಸೃಷ್ಟಿಯ ಮೊದಲನೇ “ದಿನ” ಅಥವಾ ದೀರ್ಘಕಾಲದ ಸಮಯದಲ್ಲಿ ಚೆದರಿ ಹರಡಿಕೊಂಡಿರೋ ಸೂರ್ಯನ ಕಿರಣಗಳು ಭೂಮಿಗೆ ಬಿತ್ತು. ಆದ್ರೆ ವಾತಾವರಣ ತಿಳಿಯಾದಂತೆ ಮೂರನೇ “ದಿನ” ಸೂರ್ಯನ ಬೆಳಕು ಭೂಮಿಗೆ ಬಿತ್ತು. ಇದ್ರಿಂದ ದ್ಯುತಿಸಂಶ್ಲೇಷಣಾ ಕ್ರಿಯೆ ಆಗಲು ಸಾಧ್ಯವಾಯಿತು. (ಆದಿಕಾಂಡ 1:3-5, 12, 13) ಆಮೇಲೆ ಭೂಮಿಯಿಂದ ಸೂರ್ಯ ಸ್ಪಷ್ಟವಾಗಿ ಕಾಣಿಸಿದನು.—ಆದಿಕಾಂಡ 1:16.

 ತಪ್ಪಾಭಿಪ್ರಾಯ: ಸೂರ್ಯ ಭೂಮಿಯ ಸುತ್ತು ಸುತ್ತುತ್ತೆ ಅಂತ ಬೈಬಲ್‌ ಹೇಳುತ್ತೆ.

 ನಿಜ: ಪ್ರಸಂಗಿ 1:5 ಹೀಗೆ ಹೇಳುತ್ತೆ, “ಸೂರ್ಯ ಹುಟ್ತಾನೆ, ಮುಳುಗ್ತಾನೆ, ಹುಟ್ಟಿದ ಜಾಗಕ್ಕೆ ಓಡಿ ಹೋಗಿ ಮತ್ತೆ ಹುಟ್ತಾನೆ.” ಈ ವಾಕ್ಯದಲ್ಲಿ ಭೂಮಿಯ ಮೇಲಿಂದ ಸೂರ್ಯನ ಚಲನೆ ಹೇಗಿರುತ್ತೆ ಅಂತ ವರ್ಣಿಸಲಾಗಿದೆ. ಇವತ್ತು ಕೂಡ ಜನರಿಗೆ ಭೂಮಿ ಸೂರ್ಯನನ್ನ ಸುತ್ತುತ್ತೆ ಅಂತ ಗೊತ್ತಿದ್ರೂ “ಸೂರ್ಯೋದಯ” ಮತ್ತು “ಸೂರ್ಯಾಸ್ತಮ” ಅನ್ನೋ ಪದಗಳನ್ನ ಉಪಯೋಗಿಸ್ತಾರೆ.

 ತಪ್ಪಾಭಿಪ್ರಾಯ: ಭೂಮಿ ಚಪ್ಪಟೆಯಾಗಿದೆ ಅಂತ ಬೈಬಲ್‌ ಹೇಳುತ್ತೆ.

 ನಿಜ: ಭೂಮಿಯ ಎಲ್ಲೆಗಳನ್ನ ಗುರುತಿಸಲು ಬೈಬಲ್‌ “ಭೂಲೋಕದ ಕಟ್ಟಕಡೆಯವರೆಗೂ” ಅನ್ನೋ ಪದನ ಉಪಯೋಗಿಸಿದೆ. ಇದರ ಅರ್ಥ ಭೂಮಿ ಚಪ್ಪಟೆಯಾಗಿದೆ ಮತ್ತು ಅದಕ್ಕೆ ಒಂದು ಮೂಲೆ ಇದೆ ಅಂತಲ್ಲ. (ಅಪೊಸ್ತಲರ ಕಾರ್ಯ 1:8, ಸತ್ಯವೇದವು) ಅದೇರೀತಿಯಲ್ಲಿ “ಭೂಮಿಯ ನಾಲ್ಕೂ ಮೂಲೆಗಳು” ಅಂತ ಬೈಬಲಲ್ಲಿ ಉಪಯೋಗಿಸಿರೋ ಪದ ಸಂಪೂರ್ಣ ಭೂಮಿಯನ್ನ ಸೂಚಿಸಲು ಬಳಸಲಾಗಿದೆ.

 ತಪ್ಪಾಭಿಪ್ರಾಯ: ಒಂದು ವೃತ್ತದ ಸುತ್ತಳತೆ ಅದರ ವ್ಯಾಸದ ಮೂರುಪಟ್ಟು ಜಾಸ್ತಿ ಇರುತ್ತೆ ಅಂತ ಬೈಬಲ್‌ ಹೇಳುತ್ತೆ, ಆದ್ರೆ ಅದ್ರ ನಿಖರವಾದ ಮೌಲ್ಯ ಪೈ (π) ಅಥವಾ 3.1416 ಆಗಿದೆ.

 ನಿಜ: 1 ಅರಸು 7:23 ಮತ್ತು 2 ಪೂರ್ವಕಾಲವೃತ್ತಾಂತ 4:2 ರಲ್ಲಿ ತಿಳಿಸಿರೋ ‘ಅಚ್ಚಲ್ಲಿ ಮಾಡಿದ ತಾಮ್ರದ ಸಮುದ್ರದ’ ವ್ಯಾಸ 10 ಮೊಳ ಅಗಲ ಮತ್ತು ಅದ್ರ “ಸುತ್ತಳತೆ 30 ಮೊಳ” ಅಂತ ತಿಳಿಸಲಾಗಿದೆ. ಇಲ್ಲಿ ತಿಳಿಸಿರೋ ಅಳತೆ ಅದ್ರ ಹತ್ತಿರದ ಪೂರ್ಣ ಸಂಖ್ಯೆಯಾಗಿದೆ.