ಮಾಹಿತಿ ಇರುವಲ್ಲಿ ಹೋಗಲು

ವಾರ್ವಿಕ್‌ನಲ್ಲಿ ಪ್ರಾಣಿಸಂಕುಲ ಮತ್ತು ಪರಿಸರದ ಸಂರಕ್ಷಣೆ

ವಾರ್ವಿಕ್‌ನಲ್ಲಿ ಪ್ರಾಣಿಸಂಕುಲ ಮತ್ತು ಪರಿಸರದ ಸಂರಕ್ಷಣೆ

ಯೆಹೋವನ ಸಾಕ್ಷಿಗಳು ಸ್ಟರ್ಲಿಂಗ್‌ ಫಾರೆಸ್ಟ್‌ ಲೇಕ್‌ (ಬ್ಲೂ ಲೇಕ್‌) ಎಂಬಲ್ಲಿ ತಮ್ಮ ಮುಖ್ಯ ಕಾರ್ಯಾಲಯಕ್ಕಾಗಿ ಹೊಸ ಕಟ್ಟಡ ನಿರ್ಮಾಣ ಕೆಲಸವನ್ನು ಆರಂಭಿಸಿದ್ದಾರೆ. ಇದು ನ್ಯೂಯಾರ್ಕ್‌ನಲ್ಲಿರುವ ಒಂದು ಗ್ರಾಮೀಣ ಪ್ರದೇಶವಾಗಿರುವುದರಿಂದ ಅಲ್ಲಿನ ಪ್ರಾಣಿಸಂಕುಲವನ್ನು ಮತ್ತು ಅವುಗಳ ನೆಲೆಯನ್ನು ಸಂರಕ್ಷಿಸಲು ಯಾವ ಪ್ರಯತ್ನಗಳನ್ನು ಮಾಡಲಾಗಿದೆ?

ಕಟ್ಟಡ ಕೆಲಸ ನಡೆಯುವ ಸುತ್ತಮುತ್ತ ರ್ಯಾಟಲ್‌ ಸ್ನೇಕ್‌ (ಗಿಲಿಕೆ ಹಾವು), ಈಸ್ಟರ್ನ್‌ ಬಾಕ್ಸ್‌ ಟರ್ಟಲ್‌ ಮತ್ತು ವುಡ್‌ ಟರ್ಟಲ್‌ನಂತಹ (ಒಂದು ಜಾತಿಯ ಆಮೆಗಳು) ಜೀವಿಗಳಿವೆ. ಹಾಗಾಗಿ ಅವುಗಳು ಕಟ್ಟಡ ಕಟ್ಟುವ ಸ್ಥಳದಲ್ಲಿ ಸುಳಿದಾಡಿ ತಮ್ಮ ಜೀವವನ್ನು ಅಪಾಯಕೊಡ್ಡದಿರುವಂತೆ ಕೆಲಸದ ಸ್ಥಳದ ಸುತ್ತಲು ತಾತ್ಕಾಲಿಕವಾಗಿ ಬೇಲಿಯನ್ನು ಹಾಕಿದ್ದಾರೆ. ಅಷ್ಟೇ ಅಲ್ಲದೇ, ಯಾವುದೇ ಪ್ರಾಣಿಗಳು ಈ ಬೇಲಿಯಿಂದ ನುಸುಳಿ ಕೆಲಸ ನಡೆಯುವ ಸ್ಥಳದಲ್ಲಿ ಸಿಕ್ಕಿಹಾಕಿಕೊಳ್ಳಬಾರದೆಂದು ಬೇಲಿಯನ್ನು ಆಗಾಗ ಪರೀಕ್ಷಿಸಲಾಗುತ್ತದೆ. ನಿರ್ಮಾಣ ಕೆಲಸ ಮುಗಿದ ನಂತರ ಬೇಲಿಯನ್ನು ತೆಗೆದು ಹಾಕಲಾಗುವುದು. ತದನಂತರ ಆ ಕಟ್ಟಡದ ಹತ್ತಿರ ಯಾವುದಾದರೂ ಹಾವುಗಳು ಕಂಡು ಬಂದಲ್ಲಿ ವಿಶೇಷ ತರಬೇತಿಯುಳ್ಳವರ ಸಹಾಯದಿಂದ ಅವುಗಳನ್ನು ಸುರಕ್ಷಿತವಾಗಿ ಅವುಗಳ ವಾಸಸ್ಥಾನಗಳಿಗೆ ಸೇರಿಸಲಾಗುವುದು.

ಅಮೆರಿಕದ ನೀಲಿ ಹಕ್ಕಿ

ಮೊಟ್ಟೆಯಿಟ್ಟು ಮರಿಮಾಡುವ ಕಾಲದಲ್ಲಿ ನೀಲಿಹಕ್ಕಿಗಳಿಗೆ ತೊಂದರೆಯಾಗಬಾರದೆಂದು ಚಳಿಗಾಲದಲ್ಲೇ ಅಲ್ಲಿನ ಮರಗಳನ್ನು ಕತ್ತರಿಸಲಾಯಿತು. ನಿರ್ಮಾಣ ಕೆಲಸ ಮುಗಿದ ನಂತರ ಗೂಡುಪೆಟ್ಟಿಗೆಗಳನ್ನು ಇಟ್ಟು ಪಕ್ಷಿಗಳು ಮರಳಿ ವಲಸೆ ಬರುವಂತೆ ವ್ಯವಸ್ಥೆ ಮಾಡಲಾಗುವುದು.

ಅಕ್ಟೋಬರ್‌ನಿಂದ ಮಾರ್ಚ್‌ ತಿಂಗಳುಗಳಲ್ಲಿ ಕೆಲವು ಜಾಗಗಳನ್ನು ಸಮಮಾಡಿ ಶುಚಿಮಾಡಲಾಯಿತು. ಆಗ, ವಿನಾಶದ ಅಂಚಿನಲ್ಲಿರುವ ಹಿಸ್ಸೋಪ್‌ ಗಿಡದ ಬೀಜಗಳು ಹರಡಿ ಬೇರೆ ಕಡೆ ಮೊಳಕೆಯೊಡೆಯುವಂತೆ ಹೆಚ್ಚಿನ ಗಮನ ಕೊಡಲಾಯಿತು. ಇಸವಿ 2007ರಿಂದ ಈ ರೀತಿಯ ಗಿಡಗಳು ವಾರ್ವಿಕ್‌ ಸೈಟಿನಲ್ಲಿ ಕಂಡು ಬಂದಿರದಿದ್ದರೂ ಆ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.

ವಾರ್ವಿಕ್‌ ಸೈಟಿನ ಅಂಚಿನಲ್ಲಿ ಸ್ಟರ್ಲಿಂಗ್‌ ಫಾರೆಸ್ಟ್‌ ಲೇಕ್‌ ಎಂಬ ಸರೋವರವಿದೆ. ಅದರಲ್ಲಿ ಅನೇಕ ಜಲಪಕ್ಷಿಗಳು ಮತ್ತು ಟ್ರೌಟ್‌, ಬಾಸ್‌, ಸಣ್ಣ ಪೈಕ್‌, ಪರ್ಚ್‌ನಂತಹ ಮೀನುಗಳಿವೆ. ವಿನ್ಯಾಸಗಾರರು ಆ ಕೆರೆಯನ್ನು ಸಂರಕ್ಷಿಸಲು ವಿಶೇಷವಾದ ಪರಿಸರ ಸ್ನೇಹಿ ಕಟ್ಟಡ ನಿರ್ಮಾಣ ವಿಧಾನಗಳನ್ನು ಬಳಸಿದರು. ಕಟ್ಟಡದ ಮೇಲ್ಛಾವಣಿಯಲ್ಲಿ ಸಸ್ಯಗಳನ್ನು ಬೆಳೆಸುವ ಏರ್ಪಾಡನ್ನು ಸಹ ಮಾಡಲಾಯಿತು. ಮಳೆ ನೀರಿನ ಮಲಿನಕಾರಕ ಪದಾರ್ಥಗಳನ್ನು ಶೋಧಿಸಲು ಮತ್ತು ನೀರು ಕೊಚ್ಚಿಕೊಂಡು ಹೋಗುವುದನ್ನು ಕಡಿಮೆ ಮಾಡಲು ಈ ಏರ್ಪಾಡನ್ನು ಮಾಡಲಾಯಿತು. ಜೊತೆಗೆ ಕೆರೆಯ ಸುತ್ತಲಿರುವ ಸ್ವಾಭಾವಿಕ ಸಸ್ಯವರ್ಗವನ್ನು ಸಹ ಪೋಷಿಸಿ, ಸಂರಕ್ಷಿಸಲಾಗುತ್ತಿದೆ.

ಈ ಕೆಲಸದಲ್ಲಿ ಭಾಗಿಯಾಗಿದ್ದ ಒಬ್ಬ ಯೆಹೋವನ ಸಾಕ್ಷಿ ಹೇಳಿದ್ದು: “ಈ ಎಲ್ಲಾ ವಿಷಯಗಳನ್ನು ಮಾಡಲಿಕ್ಕೆ ಹೆಚ್ಚಿನ ಸಮಯದ ಅಗತ್ಯವಿದೆ ಮತ್ತು ಉತ್ತಮ ಯೋಜನೆ ಮಾಡಬೇಕಾಗುತ್ತದೆ. ಆದರೂ ಸಹ ವಾರ್ವಿಕ್‌ನ ಪರಿಸರವನ್ನು ಸಂರಕ್ಷಿಸಲು ಏನೆಲ್ಲಾ ಮಾಡಬೇಕೋ ಅದನ್ನೆಲ್ಲಾ ಮಾಡಲು ನಾವು ಸಿದ್ಧರು.”