ಮಾಹಿತಿ ಇರುವಲ್ಲಿ ಹೋಗಲು

ಒಂದು ಸಂಘಟಿತ ಧರ್ಮದಲ್ಲಿ ಇರಲೇಬೇಕಾ?

ಒಂದು ಸಂಘಟಿತ ಧರ್ಮದಲ್ಲಿ ಇರಲೇಬೇಕಾ?

ಬೈಬಲ್‌ ಕೊಡುವ ಉತ್ತರ

 ಹೌದು. ಯಾಕೆಂದರೆ ದೇವರನ್ನು ಆರಾಧಿಸಲಿಕ್ಕೆ ನಾವು ಸೇರಿಬರಬೇಕು ಅಂತ ಆತನು ಇಷ್ಟಪಡುತ್ತಾನೆ. ಬೈಬಲ್‌ ಹೀಗನ್ನುತ್ತದೆ: “ನಾವು ಒಬ್ರು ಇನ್ನೊಬ್ರ ಬಗ್ಗೆ ತುಂಬ ಆಸಕ್ತಿ ತೋರಿಸೋಣ. ಆಗ ಪ್ರೀತಿ ತೋರಿಸೋಕೆ, ಒಳ್ಳೇ ಕೆಲಸಗಳನ್ನ ಮಾಡೋಕೆ ಬೇರೆಯವ್ರಿಗೆ ಪ್ರೋತ್ಸಾಹ ಕೊಡಬಹುದು. ಒಟ್ಟಾಗಿ ಸಭೆ ಸೇರೋದನ್ನ ಬಿಡೋದು ಬೇಡ.”—ಇಬ್ರಿಯ 10:24, 25.

 “ನಿಮ್ಮ ಮಧ್ಯ ಪ್ರೀತಿ ಇದ್ರೆ ಮಾತ್ರ ನೀವು ನನ್ನ ಶಿಷ್ಯರು ಅಂತ ಎಲ್ರಿಗೂ ಗೊತ್ತಾಗುತ್ತೆ” ಎಂದು ಯೇಸು ತನ್ನ ಶಿಷ್ಯರಿಗೆ ಹೇಳಿದನು. ಈ ಮಾತಿನ ಮೂಲಕ ತನ್ನ ಶಿಷ್ಯರು ಒಂದು ಗುಂಪಾಗಿ ಸಂಘಟಿತ ರೀತಿಯಲ್ಲಿ ಇರುತ್ತಾರೆ ಎಂದು ಸೂಚಿಸಿದನು. (ಯೋಹಾನ 13:35) ಯೇಸು ಹೇಳಿದ ಹಾಗೆ ನಾವು ಪ್ರೀತಿಯನ್ನು ತೋರಿಸಬೇಕಾದರೆ ಮುಖ್ಯವಾಗಿ ಜೊತೆ ವಿಶ್ವಾಸಿಗಳೊಂದಿಗೆ ಸಹವಾಸ ಮಾಡಬೇಕು. ಇದನ್ನು ಮಾಡಲಿಕ್ಕೆ ಅವರು ಸಭೆಯಾಗಿ ಸೇರಿಬಂದು ದೇವರನ್ನು ಆರಾಧಿಸಬೇಕು. (1 ಕೊರಿಂಥ 16:19) ಈ ರೀತಿ ಬೇರೆಬೇರೆ ಸಭೆಗಳು ಸೇರಿ ಒಂದು ಲೋಕವ್ಯಾಪಕ ಕುಟುಂಬ ಆಗಬೇಕು.—1 ಪೇತ್ರ 2:17.

ಒಂದು ಧರ್ಮಕ್ಕೆ ಸೇರಿದರಷ್ಟೇ ಸಾಕಾಗಲ್ಲ

 ದೇವರನ್ನು ಆರಾಧಿಸಲಿಕ್ಕೆ ಜನರು ಸೇರಿಬರಬೇಕು ಅಂತ ಬೈಬಲ್‌ ಹೇಳುತ್ತದೆ ನಿಜ. ಆದರೆ ಒಂದು ಧರ್ಮಕ್ಕೆ ಸೇರಿದ ತಕ್ಷಣ ದೇವರನ್ನು ಮೆಚ್ಚಿಸಬಹುದು ಎಂದು ಬೈಬಲ್‌ ಹೇಳಲ್ಲ. ದೇವರು ನಮ್ಮನ್ನು ಮೆಚ್ಚಬೇಕಾದರೆ ಪ್ರತಿದಿನದ ಜೀವನದಲ್ಲೂ ಆ ಧರ್ಮದ ನಂಬಿಕೆ ಪ್ರಕಾರ ಜೀವಿಸಬೇಕು. ಉದಾಹರಣೆಗೆ ಬೈಬಲ್‌ ಹೀಗನ್ನುತ್ತದೆ: “ನಮ್ಮ ತಂದೆ ಆಗಿರೋ ದೇವರ ದೃಷ್ಟಿಯಲ್ಲಿ ಶುದ್ಧವಾಗಿರೋ ಕಳಂಕ ಇಲ್ಲದ ಆರಾಧನಾ ಪದ್ಧತಿ ಯಾವುದಂದ್ರೆ ಕಷ್ಟದಲ್ಲಿರೋ ಅನಾಥ ಮಕ್ಕಳನ್ನ, ವಿಧವೆಯರನ್ನ ನೋಡ್ಕೊಳ್ಳೋದು ಮತ್ತು ಈ ಲೋಕದ ಕೆಟ್ಟತನದಿಂದ ದೂರ ಇರೋದೇ ಆಗಿದೆ.”—ಯಾಕೋಬ 1:27.