ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ರಾಜ ದಾವೀದ ನಿಜವಾಗಲೂ ಇದ್ದನು ಅನ್ನಲು ಪ್ರಾಕ್ತನಶಾಸ್ತ್ರಜ್ಞರು ಕೊಟ್ಟ ಪುರಾವೆ

ರಾಜ ದಾವೀದ ನಿಜವಾಗಲೂ ಇದ್ದನು ಅನ್ನಲು ಪ್ರಾಕ್ತನಶಾಸ್ತ್ರಜ್ಞರು ಕೊಟ್ಟ ಪುರಾವೆ

 ದಾವೀದ ಕ್ರಿ.ಪೂ. 11ನೇ ಶತಮಾನದಲ್ಲಿ ಜೀವಿಸಿದ್ದ ಮತ್ತು ಅವನ ವಂಶದವರು ನೂರಾರು ವರ್ಷ ರಾಜರಾಗಿ ಆಳಿದ್ದರು ಅಂತ ಬೈಬಲ್‌ ಹೇಳುತ್ತೆ. ಆದರೆ ಕೆಲವ್ರು, ದಾವೀದ ಅನ್ನೋ ವ್ಯಕ್ತಿ ಇರಲೇ ಇಲ್ಲ. ಇವೆಲ್ಲಾ ಕಟ್ಟು ಕಥೆಗಳಷ್ಟೇ ಅಂತ ಹೇಳ್ತಾರೆ. ನಿಮಗೇನು ಅನಿಸುತ್ತೆ? ದಾವೀದ ನಿಜವಾಗಲೂ ಇದ್ದನಾ?

 ಪ್ರಾಕ್ತನಶಾಸ್ತ್ರಜ್ಞನಾದ ಅವ್ರಹಾಮ್‌ ಬಿರೇನ್‌ ಮತ್ತು ತಂಡ 1993ರಲ್ಲಿ ಉತ್ತರ ಇಸ್ರೇಲ್‌ನಲ್ಲಿರುವ ಟೆಲ್‌ ಡ್ಯಾನ್‌ ಎಂಬ ಊರಿನಲ್ಲಿ ಕಲ್ಲಿನ ಒಂದು ತುಂಡನ್ನು ಕಂಡುಕೊಂಡರು. ಅದರಲ್ಲಿ “ದಾವೀದನ ಮನೆತನ” ಅಂತ ಬರೆದಿತ್ತು. ಹಳೇ ಕಾಲದಲ್ಲಿ ಉಪಯೋಗಿಸುತ್ತಿದ್ದ ಅಕ್ಷರಗಳಲ್ಲಿ ಇದನ್ನು ಬರೆಯಲಾಗಿತ್ತು. ಇದು ಸುಮಾರು 9ನೇ ಶತಮಾನದಲ್ಲಿ ಬಳಸುತ್ತಿದ್ದ ಅರೆಮಾಯಿಕ್‌ ಅಕ್ಷರಗಳಾಗಿತ್ತು. ಇದು ಅರೆಮಾಯದವರು ಇಸ್ರಾಯೇಲ್ಯರ ವಿರುದ್ಧ ತಮಗೆ ಸಿಕ್ಕಿದ ಜಯಗಳ ಬಗ್ಗೆ ಕೊಚ್ಚಿಕೊಂಡು ಬರೆದ ಸ್ಮಾರಕದ ಒಂದು ತುಂಡಿರಬಹುದು.

 ಬೈಬಲ್‌ ಹಿಸ್ಟರಿ ಡೈಲಿಯಲ್ಲಿ ಬಂದ ಒಂದು ಲೇಖನ ಹೀಗೆ ಹೇಳುತ್ತೆ: “‘ದಾವೀದನ ಮನೆತನ’ ಅನ್ನೋ ಬರಹದ ಬಗ್ಗೆ ಕೆಲವರು ಸಂಶಯಪಡುತ್ತಿದ್ದರು . . . ಆದರೆ, ಹೆಚ್ಚಿನ ಬೈಬಲ್‌ ವಿದ್ವಾಂಸರು ಮತ್ತು ಪ್ರಾಕ್ತನಶಾಸ್ತ್ರಜ್ಞರು, ಟೆಲ್‌ ಡ್ಯಾನ್‌ನಲ್ಲಿ ಕಂಡು ಹಿಡಿದ ಈ ಕಲ್ಲಿನ ಬರಹ ಬೈಬಲಿನಲ್ಲಿ ತಿಳಿಸಲಾದ ರಾಜ ದಾವೀದ ನಿಜವಾಗಿಯೂ ಇದ್ದನು ಅನ್ನುವುದಕ್ಕೆ ಬಲವಾದ ಪುರಾವೆಯಾಗಿದೆ ಎಂದು ಒಪ್ಪಿಕೊಂಡರು. ಬಿಬ್ಲಿಕಲ್‌ ಆರ್ಕಿಯೋಲೋಜಿಕಲ್‌ ರಿವ್ಯೂನಲ್ಲಿ ವರದಿಸಲಾಗಿರುವ ಬೈಬಲ್‌ಗೆ ಸಂಬಂಧಿಸಿದ ಪ್ರಾಕ್ತನಶಾಸ್ತ್ರದ ಪುರಾವೆಗಳಲ್ಲಿ ಇದು ಒಂದು ಮುಖ್ಯ ಪುರಾವೆಯಾಗಿದೆ.”