ಜೂನ್ 14, 2018
ಅಮೆರಿಕ
ಧೈರ್ಯದ ನಿಲುವಿಗೆ ಸಿಕ್ಕ ಗೆಲುವು
ಗ್ಯಾತಿ ಬಾರ್ನೆಟ್ಗೆ 9 ವರ್ಷ, ಅವಳ ತಂಗಿ ಮರೀಗೆ 8 ವರ್ಷ. ಅವರು ಓದ್ತಿದ್ದ ಶಾಲೆಯಲ್ಲಿ ಅಮೆರಿಕದ ಧ್ವಜಕ್ಕೆ ಎಲ್ಲಾ ಮಕ್ಕಳು ವಂದಿಸುತ್ತಿರಬೇಕಾದ್ರೆ ಇವರು ಸೆಲ್ಯೂಟ್ ಮಾಡದೆ ಗೌರವದಿಂದ ನಿಂತಿದ್ರು. ಅವರು ಈ ರೀತಿ ಮಾಡದೆ ಇದ್ದಿದ್ರಿಂದ 1943ರಲ್ಲಿ ಸುಪ್ರೀಂ ಕೋರ್ಟ್ ಒಂದು ಪ್ರಾಮುಖ್ಯವಾದ ತೀರ್ಪನ್ನ ಕೊಡ್ತು. ಅವರು ಸೆಲ್ಯೂಟ್ ಮಾಡದೆ ನಿಂತಾಗ ಇದು ಇಷ್ಟರ ಮಟ್ಟಿಗೆ ಹೋಗುತ್ತೆ ಅಂತ ಅವರು ಅಂದ್ಕೊಂಡೇ ಇರಲಿಲ್ಲ. ಏನೇ ಆದ್ರೂ, ದೇವರಿಗೆ ವಿಧೇಯತೆ ತೋರಿಸಬೇಕು ಅನ್ನೋ ವಿಷಯ ಮಾತ್ರ ಆ ಪುಟ್ಟ ಮಕ್ಕಳ ಮನಸ್ಸಲ್ಲಿತ್ತು. ಈ ರೀತಿ ಯೆಹೋವನಿಗೆ ನಂಬಿಗಸ್ತರಾಗಿರೋದು ಇವರಷ್ಟೇ ಅಲ್ಲ. ಯೆಹೋವನ ಸಾಕ್ಷಿಗಳ ಸಾವಿರಾರು ಮಕ್ಕಳು ಇದೇ ರೀತಿ ನಡ್ಕೋತಿದ್ದಾರೆ.—ಅಪೊಸ್ತಲರ ಕಾರ್ಯ 5:29.
ಈ ಇಬ್ರು ಮಕ್ಕಳು ವೆಸ್ಟ್ ವರ್ಜೀನಿಯದ ಸ್ಲಿಪ್ ಹಿಲ್ ಗ್ರೇಡ್ ಸ್ಕೂಲ್ನಲ್ಲಿ ಓದ್ತಿದ್ರು. ಅವರು ಧ್ವಜಕ್ಕೆ ಸೆಲ್ಯೂಟ್ ಮಾಡದೇ ಇದ್ದಿದ್ರಿಂದ, ಅವರನ್ನ ಶಾಲೆಯಿಂದ ಹೊರಗೆ ಹಾಕಿದ್ರು. ಆದ್ರೆ ಈ ಮಕ್ಕಳ ತಂದೆ ಅಮೆರಿಕದ ಸುಪ್ರೀಂ ಕೋರ್ಟ್ ಮೆಟ್ಟಿಲು ಏರೋವರೆಗೂ ಈ ಕೇಸ್ನ ವಿರುದ್ಧ ಹೋರಾಡಿದ್ರು. ಜೂನ್ 14, 1943ರಲ್ಲಿ, ಧ್ವಜಕ್ಕೆ ಸೆಲ್ಯೂಟ್ ಮಾಡೋಕೆ ಶಾಲೆಯಲ್ಲಿ ಮಕ್ಕಳನ್ನ ಒತ್ತಾಯ ಮಾಡಬಾರದು ಅಂತ ಕೋರ್ಟ್ ತೀರ್ಪು ಕೊಡ್ತು. ಅದರ ಜೊತೆಗೆ ಯೆಹೋವನ ಸಾಕ್ಷಿಗಳು “ಯಾವುದೇ ಧ್ವಜಕ್ಕಾಗಲಿ ಅಥವಾ ದೇಶಕ್ಕಾಗಲಿ ಅಗೌರವ ತೋರಿಸಲ್ಲ” ಅಂತ ಸ್ಪಷ್ಟವಾಗಿ ಹೇಳಿತು. ಇದಕ್ಕೂ 3-4 ವರ್ಷಗಳ ಮುಂಚೆ ಮೈನರ್ಸ್ವಿಲ್ ಸ್ಕೂಲ್ ಡಿಸ್ಟ್ರಿಕ್ಟ್ ಮತ್ತು ಗೊಬೈಟಸ್ ಕೇಸ್ನಲ್ಲಿ ಮಕ್ಕಳು ಧ್ವಜಕ್ಕೆ ವಂದನೆ ಮಾಡಲೇಬೇಕು ಅಂತ ಕೇಳೋ ಹಕ್ಕು ಶಾಲೆಗಳಿಗೆ ಇದೆ ಅಂತ ಹೇಳಲಾಗಿತ್ತು. ಆದ್ರೆ ಈ ವೆಸ್ಟ್ ವರ್ಜೀನಿಯ ಸ್ಟೇಟ್ ಬೋರ್ಡ್ ಆಫ್ ಎಜುಕೇಶನ್ ಮತ್ತು ಬಾರ್ನೆಟ್ ಕೇಸಲ್ಲಿ ಮೂರು ವರ್ಷಗಳ ಹಿಂದೆ ಕೊಟ್ಟ ಆ ತೀರ್ಪನ್ನ ರದ್ದು ಮಾಡಲಾಯಿತು. a
ಸುಪ್ರೀಂ ಕೋರ್ಟ್ಗೆ 6-3 ಬಹುಮತದ ಅಭಿಪ್ರಾಯವನ್ನು ಬರೆಯುವಾಗ, ಜಸ್ಟಿಸ್ ರಾಬರ್ಟ್ ಜ್ಯಾಕ್ಸನ್ ಹೀಗೆ ಬರೆದರು: “ಅಮೆರಿಕಾದ ಸಂವಿಧಾನದಲ್ಲಿರೋ ಒಂದು ಪ್ರಾಮುಖ್ಯ ಮತ್ತು ಬದಲಾಯಿಸಲು ಸಾಧ್ಯವಿಲ್ಲದ ನಿಯಮ ಏನಂದ್ರೆ, ಯಾವುದೇ ಸರ್ಕಾರಿ ಅಧಿಕಾರಿ ಅವ್ರು ಎಷ್ಟೇ ಉನ್ನತ ಅಧಿಕಾರಿಯಾಗಿದ್ದರೂ, ರಾಜಕೀಯ, ರಾಷ್ಟ್ರೀಯ, ಧಾರ್ಮಿಕ ಮತ್ತು ಇತರ ಯಾವುದೇ ವಿಚಾರದ ಬಗ್ಗೆ ಜನ ಹೀಗೇ ಯೋಚನೆ ಮಾಡಬೇಕು ಅಂತ ಒತ್ತಾಯ ಮಾಡುವ ಹಾಗಿಲ್ಲ. ಸರ್ಕಾರ ನಂಬಬೇಕು ಅಂತ ಆಸೆ ಪಡೋ ವಿಷಯನಾ ಜನರು ನಂಬದೇ ಇದ್ದಾಗಲೂ ಅದನ್ನ ನಂಬೋ ತರ ಮಾತಾಡಬೇಕು, ನಡ್ಕೊಬೇಕು ಅಂತ ಯಾರೂ ಜನರಿಗೆ ಒತ್ತಾಯ ಮಾಡಬಾರದು.”
ಈ ತೀರ್ಪಿನಿಂದ ಯೆಹೋವನ ಸಾಕ್ಷಿಗಳ ಮಕ್ಕಳು ಮಾತ್ರ ಪ್ರಯೋಜನ ಪಡೆದಿಲ್ಲ, ಬೇರೆಯವರೂ ಪ್ರಯೋಜನ ಪಡೆದಿದ್ದಾರೆ. ಅದರ ಬಗ್ಗೆ ನಾರ್ದನ್ ವೆಸ್ಟರ್ನ್ ಯೂನಿವರ್ಸಿಟಿಯ ಕಾನೂನಿನ ಪ್ರೊಫೆಸರ್ ಆ್ಯಂಡ್ರೂ ಕಾಪಲ್ ಮ್ಯಾನ್ ಹೇಳೋದು, “ನಾಗರಿಕ ಹಕ್ಕುಗಳಿಗಾಗಿ ಹೋರಾಡುತ್ತಿರುವ ಅಮೆರಿಕದ ಪ್ರಜೆಗಳು, ಯೆಹೋವನ ಸಾಕ್ಷಿಗಳಿಗೆ ತುಂಬಾ ಥ್ಯಾಂಕ್ಸ್ ಹೇಳಬೇಕು. ಯಾಕೆಂದರೆ ಈ ಹಿಂದೆ ನಾಗರಿಕ ಹಕ್ಕುಗಳಿಗಾಗಿ ಸಾಕ್ಷಿಗಳು ತುಂಬಾ ವಿರೋಧ, ಹಿಂಸೆ ಅನುಭವಿಸಿದ್ರು. ಅವರಿಗೆ ಸಿಕ್ಕ ತೀರ್ಪಿನಿಂದ ಈಗ ನಾವೆಲ್ಲರೂ ಕೂಡ ಪ್ರಯೋಜನ ಪಡ್ಕೋತಿದ್ದೀವಿ.”
ಈ ತೀರ್ಪಿನಿಂದ ಅಮೆರಿಕ ಮಾತ್ರ ಅಲ್ಲ ಬೇರೆ ದೇಶಗಳೂ ಪ್ರಯೋಜನ ಪಡ್ಕೊಂಡ್ವು. ಅದರ ಬಗ್ಗೆ ಯೆಹೋವನ ಸಾಕ್ಷಿಗಳ ಮುಖ್ಯ ವಕೀಲರಾದ ಫಿಲಿಪ್ ಬ್ರೂಮ್ಲಿ ಹೇಳಿದ್ದು, “ಬಾರ್ನೆಟ್ ಕೇಸ್ನಲ್ಲಿ ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪಿನಿಂದ, ಅರ್ಜೆಂಟೀನ, ಕೆನಡಾ, ಕೋಸ್ಟಾರಿಕ, ಘಾನಾ, ಇಂಡಿಯಾ, ಫಿಲಿಪ್ಪೀನ್ಸ್, ರುವಾಂಡ ಈ ಎಲ್ಲಾ ದೇಶಗಳ ಸುಪ್ರೀಂ ಕೋರ್ಟುಗಳು ಮತ್ತು ಯುರೋಪಿಯನ್ ಮಾನವ ಹಕ್ಕುಗಳ ಕೋರ್ಟಿಗೂ ತುಂಬಾ ಸಹಾಯ ಆಗಿದೆ. ಅವರೆಲ್ರೂ ಬಾರ್ನೆಟ್ ಕೇಸ್ನಲ್ಲಿ ಬಂದ ತೀರ್ಪನ್ನ ಮೆಚ್ಚಿಕೊಂಡಿದ್ದಾರೆ. ಅವರು ಇಂಥದ್ದೇ ಕೇಸುಗಳನ್ನ ಬಗೆಹರಿಸುವಾಗ ಬಾರ್ನೆಟ್ ಕೇಸನ್ನ ಆಧಾರವಾಗಿ ಇಟ್ಕೊತಾರೆ.”
2006ರಲ್ಲಿ ಕೆಲವು ಪ್ರಸಿದ್ಧ ವಿದ್ವಾಂಸರು, ಗ್ಯಾತಿ ಮತ್ತು ಮರೀ ಹತ್ರ ಈ ಕೇಸ್ ಬಗ್ಗೆ ಮಾತಾಡೋಕೆ ಆಸೆಪಟ್ಟು ಅವರನ್ನ ಒಂದು ಚರ್ಚೆಗೆ ಕರೆದ್ರು. ಆ ಚರ್ಚೆ ನ್ಯೂಯಾರ್ಕ್ನ ರಾಬರ್ಟ್ ಹೆಚ್. ಜಾಕ್ಸನ್ ಸೆಂಟರ್ನಲ್ಲಿ ನಡೀತು. ಆಗ ಮರೀ ಹೇಳಿದ್ದು, “ಈ ತೀರ್ಪಿನಿಂದ ನಮಗೆ ಮಾತ್ರ ಅಲ್ಲ, ಬೇರೆ ಮಕ್ಕಳಿಗೂ ಸಹಾಯ ಆಯ್ತು. ಅದಕ್ಕೆ ನಂಗೆ ತುಂಬಾ ಖುಷಿಯಾಗ್ತಿದೆ.” ಆಮೇಲೆ ಗ್ಯಾತಿ ಹೇಳಿದ್ದು, “ನನ್ನ ದೊಡ್ಡ ಮಗ ಧ್ವಜಕ್ಕೆ ಸೆಲ್ಯೂಟ್ ಮಾಡ್ಲಿಲ್ಲ ಅಂತ ಅವರ ಟೀಚರ್ ಅವನನ್ನ ಪ್ರಿನ್ಸಿಪಲ್ ಆಫೀಸಿಗೆ ಕಳಿಸಿದ್ರು. ಆಗ ಪ್ರಿನ್ಸಿಪಲ್ ಅವನಿಗೆ ‘ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ನಿಮ್ಮ ಟೀಚರ್ ಮರೆತು ಹೋಗಿರಬೇಕು ಅಂತ ಅನ್ಸುತ್ತೆ’ ಅಂತ ಹೇಳಿದ್ರು.”
ಆಮೇಲೆ ಗ್ಯಾತಿ ಎಲ್ಲಾ ಯೆಹೋವನ ಸಾಕ್ಷಿಗಳ ಮನಸ್ಸಿನ ಮಾತನ್ನು ಹೇಳಿದ್ರು, “ನಾವು ಧ್ವಜವನ್ನ ವಿರೋಧಿಸಲ್ಲ, ನಾವು ಧ್ವಜಕ್ಕೆ ಗೌರವ ಕೊಡ್ತೀವಿ ಮತ್ತು ಅದು ಯಾವುದನ್ನ ಪ್ರತಿನಿಧಿಸುತ್ತೋ ಅದನ್ನೂ ಗೌರವಿಸ್ತೀವಿ. ಆದ್ರೆ ನಾವು ಅದಕ್ಕೆ ಸೆಲ್ಯೂಟ್ ಮಾಡೋದಾಗ್ಲಿ, ಆರಾಧನೆ ಮಾಡೋದಾಗ್ಲಿ ಮಾಡಲ್ಲ.”—1 ಯೋಹಾನ 5:21.
a ಕೋರ್ಟ್ ಗುಮಾಸ್ತರು ಗೋಬಿಟಾಸ್ ಮತ್ತು ಬಾರ್ನೆಟ್ ಮಕ್ಕಳಿಬ್ಬರ ಉಪನಾಮಗಳನ್ನು ತಪ್ಪಾಗಿ ಬರೆದರು.