ನವೆಂಬರ್ 1, 2023
ಭಾರತ
ಅಧಿವೇಶನದಲ್ಲಿ ಸ್ಫೋಟ ಆಗಿದ್ರೂ ಭಾರತದಲ್ಲಿರೋ ಸಾಕ್ಷಿಗಳು ಒಬ್ಬರಿಗೊಬ್ಬರು ಸಾಂತ್ವನ ಮತ್ತು ಬೆಂಬಲ ಕೊಡ್ತಿದ್ದಾರೆ
ಭಾನುವಾರ, ಅಕ್ಟೋಬರ್ 29, 2023ರಂದು ಕೇರಳದಲ್ಲಿ ನಡೆದ ಪ್ರಾದೇಶಿಕ ಅಧಿವೇಶನದಲ್ಲಿ ಸರಣಿ ಬಾಂಬ್‌ಗಳ ಸ್ಫೋಟವಾಯ್ತು. ಇದನ್ನ ಈಗಾಗಲೇ jw.org ವೆಬ್‌ಸೈಟ್‌ನ ಬ್ರೇಕಿಂಗ್ ನ್ಯೂಸ್‌ನಲ್ಲಿ ತಿಳಿಸಲಾಗಿತ್ತು. ಈ ಸ್ಫೋಟದಿಂದ ಮೊದಲು ಇಬ್ಬರು ಸಹೋದರಿಯರು ತೀರಿಹೋದ್ರು. ಆಮೇಲೆ 12 ವರ್ಷದ ಒಂದು ಚಿಕ್ಕ ಹುಡುಗಿ ಸಹ ತೀರಿಹೋದಳು. ಅಷ್ಟೇ ಅಲ್ಲ ಸುಮಾರು 55 ಸಹೋದರ ಸಹೋದರಿಯರಿಗೆ ಗಾಯವಾಗಿದೆ, ಅದ್ರಲ್ಲಿ ಕೆಲವರಿಗೆ ತುಂಬ ಸುಟ್ಟ ಗಾಯಗಳಾಗಿದೆ.
ಸದ್ಯಕ್ಕೆ ಮೂರು ಸಹೋದರಿಯರ ಮತ್ತು ಇಬ್ಬರು ಸಹೋದರರ ಪರಿಸ್ಥಿತಿ ಗಂಭೀರವಾಗಿದೆ. ಅವತ್ತು ಬೆಳಗ್ಗೆ 9:40ಕ್ಕೆ ಪ್ರಾರ್ಥನೆ ನಡೆಯುವಾಗ ಹತ್ತತ್ರ ಮೂರು ಬಾಂಬ್‌ಗಳು ಸ್ಫೋಟವಾಯ್ತು ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಈ ಘೋರ ಕೃತ್ಯ ಮಾಡಿರೋ ಶಂಕಿತ ಆರೋಪಿಯನ್ನ ಪೋಲಿಸರು ಬಂಧಿಸಿ ವಿಚಾರಣೆ ನಡೆಸ್ತಿದ್ದಾರೆ.
ಈ ದುರ್ಘಟನೆ ನಡೆದಾಗ ಸಹಾಯ ಮಾಡೋಕೆ ಧಾವಿಸಿ ಬಂದ ಪ್ರತಿಯೊಬ್ಬರಿಗೂ ಮತ್ತು ಗಾಯ ಆದವರಿಗೆ ಈಗ ಆರೈಕೆ ಮಾಡ್ತಿರೋ ಆಸ್ಪತ್ರೆ ಸಿಬ್ಬಂದಿಗಳಿಗೂ ನಾವು ಮನಸಾರೆ ಥ್ಯಾಂಕ್ಸ್ ಹೇಳ್ತೀವಿ.
ಇಂಥ ಸಮಯದಲ್ಲೂ ಎಲ್ಲರೂ ಪ್ರೀತಿ ತೋರಿಸ್ತಿರೋದನ್ನ ನೋಡಿ ಅಲ್ಲಿದ್ದ ಸಹೋದರ ಸಹೋದರಿಯರಿಗೆ ಮಾತೇ ಬರಲಿಲ್ಲ. ಬಾಂಬ್‌ಗಳು ಸ್ಫೋಟವಾಗಿದ್ದನ್ನ ನೋಡಿದ ಒಬ್ಬ ಸಹೋದರಿ ಹೀಗೆ ಹೇಳ್ತಾರೆ: “ನಾನು ತಕ್ಷಣ ಯೆಹೋವನಿಗೆ ಪ್ರಾರ್ಥನೆ ಮಾಡೋಕೆ ಶರುಮಾಡಿದೆ. ಅಲ್ಲಿದ್ದ ಅಟೆಂಡೆಂಟ್‌ಗಳು ಮತ್ತು ಬೇರೆ ಸಹೋದರರು ಸಹಾಯ ಮಾಡೋಕೆ ಓಡಿ ಬಂದ್ರು. ನಮಗೆ ಏನೂ ಆಗದೆ ಇರೋ ತರ ನೋಡ್ಕೊಂಡ್ರು. ನಿಜವಾಗ್ಲೂ ಯೆಹೋವನ ಪ್ರೀತಿ ಮತ್ತು ಕಾಳಜಿನ ಕಣ್ಣಾರೆ ನೋಡೋಕಾಯ್ತು.”
ಭಾರತದ ಶಾಖಾ ಕಛೇರಿಯ ಪ್ರತಿನಿಧಿಗಳು, ಸಂಚರಣ ಮೇಲ್ವಿಚಾರಕರು ಮತ್ತು ಹಿರಿಯರು ಅಲ್ಲಿರೋ ಸಹೋದರ ಸಹೋದರಿಯರಿಗೆ ಬೈಬಲ್ ಮೂಲಕ ಸಾಂತ್ವನ ಕೊಡ್ತಾ ಸಹಾಯ ಮಾಡ್ತಿದ್ದಾರೆ. ಕೇರಳದಲ್ಲಿರೋ ಸಹೋದರರಿಗೆ ಸಂತ್ವಾನ ಕೊಡೋಕೆ ಬ್ರಾಂಚ್‌ನಿಂದ ಹೋದ ಒಬ್ಬ ಹಿರಿಯ ಹೀಗೆ ಹೇಳ್ತಾನೆ: “ಇಲ್ಲಿ ನೋವು, ಭಯ, ಆತಂಕ ಮನೆಮಾಡಿದ್ರೂ ಹಾನಿಯಾಗಿರೋ ಸಹೋದರರು ಪೂರ್ತಿ ಕುಗ್ಗಿ ಹೋಗದೆ ಸರಿಯಾಗಿ ಯೋಚ್ನೆ ಮಾಡ್ತಿದ್ದಾರೆ. ನಾನು ತುಂಬ ಜನರ ಜೊತೆ ಮಾತಾಡಿದೆ, ಇವರೆಲ್ಲ ಯೆಹೋವನ ಮೇಲೆ ಭರವಸೆ ಇಟ್ಟಿರೋದನ್ನ ನೋಡಿ ನನ್ನ ನಂಬಿಕೆ ಜಾಸ್ತಿ ಆಯ್ತು.”
ಲೋಕದ ಎಲ್ಲಾ ಕಡೆ ಇರೋ ನಮ್ಮ ಸಹೋದರರು ಭಾರತದಲ್ಲಾದ ಈ ಘಟನೆಯಿಂದ ಹಾನಿಯಾಗಿರೋ ಕುಟುಂಬಗಳಿಗೆ ಮತ್ತು ನೋವಲ್ಲಿರೋ ಎಲ್ಲರಿಗೆ ಪ್ರಾರ್ಥನೆ ಮಾಡ್ತಾ ಇದ್ದಾರೆ. ಸಾವು, ನೋವು ಮತ್ತು ಹಿಂಸೆ ಇಲ್ಲದೆ ಇರೋ ಪರಿಸ್ಥಿತಿ ಮುಂದೆ ಬರುತ್ತೆ ಅಂತ ಬೈಬಲ್ ಹೇಳುತ್ತೆ. ಈ ವಿಷಯದಿಂದ ನಮ್ಮ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗುತ್ತೆ. ಏನೇ ಆದ್ರೂ ನಾವು ಯೆಹೋವನ ಮೇಲೆ ಯಾವಾಗಲೂ ಭರವಸೆ ಇಡೋಣ.—ಕೀರ್ತನೆ 56:3.