ನವೆಂಬರ್ 17, 2023
ಭಾರತ
ಭಾರತದಲ್ಲಾದ ದುರಂತದಿಂದ ಸಾವಿನ ಸಂಖ್ಯೆ 6ಕ್ಕೆ ಏರಿದೆ
ಭಾನುವಾರ ಅಕ್ಟೋಬರ್ 29, 2023ರಂದು ಕೇರಳದಲ್ಲಿ ನಡೆದ ಪ್ರಾದೇಶಿಕ ಅಧಿವೇಶನದಲ್ಲಿ ಸರಣಿ ಬಾಂಬ್‌ಗಳ ಸ್ಫೋಟವಾಯ್ತು. ಈಗಾಗಲೇ ತಿಳಿಸಿರೋ ತರ ಇದ್ರಿಂದ ಮೂವರು ಸಾವನ್ನಪ್ಪಿದ್ರು. ಆದ್ರೆ ಈಗ ಇನ್ನೊಬ್ಬ ಸಹೋದರ ಮತ್ತು ಇಬ್ಬರು ಸಹೋದರಿಯರು ತೀರಿಹೋಗಿದ್ದಾರೆ. ಈಗ ಸಾವಿನ ಸಂಖ್ಯೆ 6ಕ್ಕೆ ಏರಿದೆ. ಇದ್ರಲ್ಲಿ ಈಗಾಗಲೇ ತೀರಿಹೋಗಿದ್ದ 12 ವರ್ಷದ ಹುಡುಗಿಯ ಅಣ್ಣ ಮತ್ತು ತಾಯಿನೂ ಸೇರಿದ್ದಾರೆ. ಅಷ್ಟೇ ಅಲ್ಲ 11 ಸಹೋದರ ಸಹೋದರಿಯರು ಇನ್ನೂ ಆಸ್ಪತ್ರೆಯಲ್ಲೇ ಇದ್ದಾರೆ.
ಈ ದುರಂತದಿಂದ ಭಾದಿತರಾದವ್ರಿಗೆ ಸಾಂತ್ವನ ಕೊಡೋಕೆ ಭಾರತದ ಶಾಖಾ ಕಛೇರಿ ಒಂದು ವಿಶೇಷ ಕೂಟದ ಏರ್ಪಾಡು ಮಾಡಿತು. ಅದು ನವಂಬರ್ 4, 2023ರಂದು ನಡೆಯಿತು. ಅಧಿವೇಶನಕ್ಕೆ ಬಂದಿದ್ದ 21 ಸಭೆಯ ಸಹೋದರ ಸಹೋದರಿಯರನ್ನ ಈ ವಿಶೇಷ ಕೂಟಕ್ಕೆ ಕರೆಯಲಾಯ್ತು. ಈ ವಿಶೇಷ ಕೂಟ ಒಂದು ರಾಜ್ಯ ಸಭಾಗೃಹದಲ್ಲಿ ನಡೆಯಿತು. ಅಲ್ಲಿಗೆ ಸುಮಾರು 200 ಜನ ಬಂದಿದ್ದರು. ಅಷ್ಟೇ ಅಲ್ಲ ಇನ್ನೂ 1300 ಜನ ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಕಾರ್ಯಕ್ರಮಕ್ಕೆ ಹಾಜರಾದ್ರು. ಆಸ್ಪತ್ರೆಯಲ್ಲಿ ಇರುವವ್ರಿಗೆ ಇದನ್ನ ರೆಕಾರ್ಡ್ ಮಾಡಿ ಕೊಡಲಾಯ್ತು. ಶಾಖಾ ಕಛೇರಿಯಿಂದ ಬಂದ ಒಬ್ಬ ಹಿರಿಯ ಕೀರ್ತನೆ 23:1ನ್ನ ವಿವರಿಸ್ತಾ ಪ್ರತಿಯೊಬ್ರ ಮೇಲೂ ಯೆಹೋವನಿಗೆ ಎಷ್ಟು ಕಾಳಜಿ ಇದೆ ಅಂತ ಹೇಳಿದ್ರು. “ಈ ವಚನದಲ್ಲಿ ಕೀರ್ತನೆಗಾರ ಯೆಹೋವ ಒಬ್ಬ ಕುರುಬ ಅಂತಾಗಲಿ ಅಥವಾ ಒಳ್ಳೆ ಕುರುಬ ಅಂತಾಗಲಿ ಹೇಳಲಿಲ್ಲ. ಬದಲಿಗೆ ಯೆಹೋವ ‘ನನ್ನ ಕುರುಬ’ ಅಂತ ಹೇಳ್ತಿದ್ದಾನೆ. ಇದ್ರಿಂದ ಪ್ರತಿಯೊಬ್ರ ಮೇಲೂ ಯೆಹೋವನಿಗೆ ತುಂಬ ಕಾಳಜಿ ಇದೆ ಅಂತ ಗೊತ್ತಾಗುತ್ತೆ. ಈ ಮಾತುಗಳು ನಮಗೆ ಸಾಂತ್ವನ ಕೊಡುತ್ತಲ್ವಾ!”
ಬಾಂಬ್ ಸ್ಪೋಟ ಆಗಿದ್ದನ್ನ ಕಣ್ಣಾರೆ ಕಂಡ ಒಬ್ಬ ಸಹೋದರನಿಗೆ ಆಘಾತದಿಂದ ಸರಿಯಾಗಿ ನಿದ್ದೆ ಮಾಡಕ್ಕೆ ಆಗ್ತಿಲ್ಲ. ಇಷ್ಟು ಕಷ್ಟಪಡ್ತಿದ್ರೂ ಆಸ್ಪತ್ರೆಯಲ್ಲಿರೋ ಸಹೋದರ ಸಹೋದರಿಯರಿಗೆ ಸಹಾಯ ಮಾಡೋಕೆ ಇವ್ರು ಮುಂದೆ ಬಂದಿದ್ದಾರೆ. ಅವರು ಹೀಗೆ ಹೇಳ್ತಾರೆ, “ಇಲ್ಲಿರುವವ್ರಿಗೆ ತುಂಬಾ ಗಾಯಗಳಾಗಿದ್ರೂ, ನೋವಲ್ಲಿದ್ರು ಇವ್ರಲ್ಲಿ ತುಂಬ ಜನ ಖುಷಿ ಖುಷಿಯಾಗಿ ರಾಜ್ಯ ಗೀತೆಗಳನ್ನ ಹಾಡ್ತಿದ್ರು. ಇವ್ರ ನಂಬಿಕೆಯನ್ನ ನೋಡುವಾಗ ನನ್ನ ನೋವು, ಚಿಂತೆಯನ್ನೆಲ್ಲಾ ಮರೆಯೋಕೆ ಆಗ್ತಿದೆ.” ಇದ್ರ ಬಗ್ಗೆ ಇನ್ನೊಬ್ಬ ಸಹೋದರ ಹೀಗೆ ಹೇಳ್ತಾನೆ, “ಈ ಆಘಾತದಿಂದ ಹೊರಗೆ ಬಂದು ಮುಂಚಿನ ತರ ಜೀವನ ಮಾಡೋಕೆ ಕೆಲವು ಸಹೋದರ ಸಹೋದರಿಯರಿಗೆ ಇನ್ನೂ ತುಂಬ ಸಮಯ ಬೇಕಾಗುತ್ತೆ. ಆದ್ರೆ ನಮ್ಮ ಸಹೋದರ ಬಳಗ ಇವ್ರಿಗೆ ನಿಜವಾಗ್ಲೂ ಬೆನ್ನೆಲುಬಾಗಿ ನಿಂತು ಪ್ರೀತಿ ತೋರಿಸ್ತಾರೆ ಅನ್ನೋ ಗ್ಯಾರಂಟಿ ನನಗಿದೆ. ಎಷ್ಟೇ ಕಷ್ಟ ಬಂದ್ರೂ ಯೆಹೋವ ದೇವರು ನಮ್ಮ ಕೈ ಬಿಡಲ್ಲ, ನಮ್ಮ ಜೊತೆನೇ ಇದ್ದು ಕಾದು ಕಾಪಾಡ್ತಾರೆ ಅನ್ನೋ ನಂಬಿಕೆ ನಮಗಿದೆ. ಇದು ನಮಗೆ ತುಂಬ ಪ್ರೋತ್ಸಾಹ ಕೊಡುತ್ತೆ!”
ಭಾರತದಲ್ಲಿರೋ ನಮ್ಮ ಪ್ರೀತಿಯ ಸಹೋದರ ಸಹೋದರಿಯರ ಹೃದಯ ಒಡೆದು ಹೋಗಿರೋದ್ರಿಂದ ‘ಯೆಹೋವ ಅದನ್ನ ವಾಸಿ ಮಾಡ್ತಾನೆ, ಅವ್ರ ಗಾಯಗಳಿಗೆ ಪಟ್ಟಿ ಕಟ್ಟೋದನ್ನ ಮುಂದುವರಿಸ್ತಾನೆ.’ ಇದನ್ನ ನೋಡುವಾಗ ಲೋಕದ ಎಲ್ಲಾ ಕಡೆ ಇರೋ ಯೆಹೋವನ ಸಾಕ್ಷಿಗಳಾದ ನಮಗೆ ತುಂಬ ಸಾಂತ್ವನ ಸಿಗುತ್ತೆ. ಯೆಹೋವ ಯಾವತ್ತೂ ನಮ್ಮ ಕೈ ಬಿಡಲ್ಲ ಅನ್ನೋ ಭರವಸೆ ಜಾಸ್ತಿ ಆಗುತ್ತೆ.—ಕೀರ್ತನೆ 147:3.