ಸುಖೀ ಸಂಸಾರಕ್ಕೆ ಸಲಹೆಗಳು
ನನ್ನ ಮಗುವಿಗೆ ಯಾರಾದರೂ ತುಂಬ ತೊಂದರೆ ಕೊಡುತ್ತಿದ್ದರೆ ನಾನೇನು ಮಾಡಲಿ?
ಶಾಲೆಯಲ್ಲಿ ಒಬ್ಬ ನನಗೆ ತುಂಬ ತೊಂದರೆ ಕೊಡ್ತಾನೆ ಅಂತ ನಿಮ್ಮ ಮಗ ಬಂದು ನಿಮ್ಮತ್ರ ಹೇಳಿದ ಅಂತ ನೆನಸಿ. ಆಗ ನೀವೇನು ಮಾಡಬಹುದು? ಹಾಗೆ ಮಾಡಿದವನಿಗೆ ಶಿಕ್ಷೆ ಕೊಡುವಂತೆ ಶಾಲೆಯ ಶಿಕ್ಷಕರಿಗೆ ಹೇಳುತ್ತೀರಾ? ಒಂದೇಟು ಹೊಡೆದವನಿಗೆ ತಿರುಗಿ ಎರಡೇಟು ಕೊಡುವುದು ಹೇಗಂತ ನಿಮ್ಮ ಮಗನಿಗೆ ಕಲಿಸುತ್ತೀರಾ? ನೀವೇನು ಮಾಡಬೇಕಂತ ನಿರ್ಧರಿಸೋ ಮುಂಚೆ ಈ ರೀತಿ ತೊಂದರೆ ಕೊಡುವುದರ ಅಥವಾ ರಾಗಿಂಗ್ ಮಾಡುವುದರ ಬಗ್ಗೆ ಕೆಲವು ವಿಷಯಗಳು ನಿಮಗೆ ತಿಳಿದಿರಬೇಕು. a
ರಾಗಿಂಗ್ ಬಗ್ಗೆ ನನಗೇನು ತಿಳಿದಿರಬೇಕು?
ರಾಗಿಂಗ್ ಅಂದರೇನು? ರಾಗಿಂಗ್ ಅಂದರೆ ಪದೇ ಪದೇ, ಬೇಕು ಬೇಕೆಂದೇ ಒಬ್ಬರಿಗೆ ಶಾರೀರಿಕವಾಗಿ ಅಥವಾ ಮಾನಸಿಕವಾಗಿ ಕಿರುಕುಳ ಕೊಡುವುದು. ಹಾಗಾಗಿ, ಅವಮಾನ ಮಾಡುವಂಥ, ಹಗೆ ಸಾಧಿಸುವಂಥ ಎಲ್ಲಾ ವರ್ತನೆಯನ್ನು ರಾಗಿಂಗ್ ಎನ್ನಲು ಸಾಧ್ಯವಿಲ್ಲ.
ರಾಗಿಂಗ್ನ ಅರ್ಥ ತಿಳಿದುಕೊಳ್ಳೋದು ಯಾಕೆ ಪ್ರಾಮುಖ್ಯ? ಯಾಕೆಂದರೆ ಕೆಲವರು ತಮಗೆ ಬೇಜಾರಾದ ಯಾವುದೇ ಚಿಕ್ಕಪುಟ್ಟ ಘಟನೆಯನ್ನೂ ರಾಗಿಂಗ್ ಎನ್ನುತ್ತಾರೆ. ಚಿಕ್ಕಪುಟ್ಟ ವಿಷಯಗಳನ್ನೆಲ್ಲಾ ನೀವು ದೊಡ್ಡದು ಮಾಡಬಾರದು. ನೀವು ಹಾಗೆ ಮಾಡಿದರೆ, ನಿಮ್ಮ ಮಗನಿಗೆ ಯಾವುದೇ ಸಮಸ್ಯೆಯನ್ನು ತಾನಾಗಿಯೇ ಸರಿಪಡಿಸಿಕೊಳ್ಳೋಕೆ ಆಗಲ್ಲ ಅನ್ನೋ ಭಾವನೆ ಮೂಡಿಸುತ್ತೀರಿ. ಆದರೆ ನಿಮ್ಮ ಮಗ ಚಿಕ್ಕಪುಟ್ಟ ಸಮಸ್ಯೆಗಳನ್ನು ಅವನಾಗಿಯೇ ಸರಿಪಡಿಸಿಕೊಳ್ಳಲು ಕಲಿತರೆ ಈಗಲೂ ಮುಂದೆಯೂ ಅವನಿಗೆ ತುಂಬ ಸಹಾಯವಾಗುತ್ತದೆ.
ಬೈಬಲ್ ತತ್ವ: “ನಿನ್ನ ಮನಸ್ಸು ಕೋಪಕ್ಕೆ ಆತುರಪಡದಿರಲಿ.”—ಪ್ರಸಂಗಿ 7:9.
ನೆನಪಿಡಿ: ಕೆಲವೊಮ್ಮೆ ಮಕ್ಕಳಿಗೆ ಸಮಸ್ಯೆ ಎದುರಾದಾಗ ನೀವು ಸಹಾಯ ಮಾಡಬೇಕಾಗಬಹುದು. ಆದರೆ ಚಿಕ್ಕ ಪುಟ್ಟ ವಿಷಯಗಳನ್ನು ಅವರಾಗಿಯೇ ಸರಿಪಡಿಸಿಕೊಳ್ಳಲು ಬಿಡಿ. ಆಗ ಏನಾದರೂ ನಡೆದರೆ ಕುಗ್ಗಿಹೋಗದೆ ಬೇಗನೆ ಚೇತರಿಸಿಕೊಳ್ಳಲು ಅವರು ಕಲಿಯುತ್ತಾರೆ. ಅಷ್ಟೇ ಅಲ್ಲ, ಜನರೊಂದಿಗೆ ಹೇಗೆ ವ್ಯವಹರಿಸಬೇಕೆಂದೂ ತಿಳಿದುಕೊಳ್ಳುತ್ತಾರೆ.—ಕೊಲೊಸ್ಸೆ 3:13.
ಯಾರೋ ಒಬ್ಬರು ಬೇಕುಬೇಕೆಂದೇ ಯಾವಾಗಲೂ ತೊಂದರೆ ಕೊಡುತ್ತಿದ್ದಾರೆ ಎಂದು ನಿಮ್ಮ ಮಗ ಹೇಳುವುದಾದರೆ ನೀವೇನು ಮಾಡಬಹುದು?
ನಾನು ಹೇಗೆ ಸಹಾಯ ಮಾಡಬಹುದು?
ನಿಮ್ಮ ಮಗ ಸಮಸ್ಯೆ ಹೇಳಿಕೊಳ್ಳುವಾಗ ತಾಳ್ಮೆಯಿಂದ ಕಿವಿಗೊಡಿ. (1) ಏನಾಯಿತು? (2) ಅವನಿಗೇ ಯಾಕೆ ಹೀಗೆ ಮಾಡುತ್ತಿದ್ದಾರೆ? ಎಂದು ತಿಳಿದುಕೊಳ್ಳಲು ಪ್ರಯತ್ನಿಸಿ. ಪೂರ್ತಿ ವಿಷಯ ತಿಳಿದುಕೊಳ್ಳುವ ಮುಂಚೆಯೇ ಒಂದು ತೀರ್ಮಾನಕ್ಕೆ ಬರಬೇಡಿ. ಎಲ್ಲವನ್ನು ತಿಳಿದುಕೊಳ್ಳಲಿಕ್ಕಾಗಿ ನೀವು ನಿಮ್ಮ ಮಗನ ಟೀಚರ್ ಹತ್ತಿರನೋ, ತೊಂದರೆ ಮಾಡುತ್ತಿರುವ ಮಗುವಿನ ಹೆತ್ತವರ ಹತ್ತಿರನೋ ಮಾತಾಡಬೇಕಾಗಬಹುದು.
ಬೈಬಲ್ ತತ್ವ: “ಗಮನಿಸದೆ ಉತ್ತರಕೊಡುವವನು ಮೂರ್ಖನೆಂಬ ಅವಮಾನಕ್ಕೆ ಗುರಿಯಾಗುವನು.”—ಜ್ಞಾನೋಕ್ತಿ 18:13.
ನಿಮ್ಮ ಮಗನಿಗೆ ಯಾರಾದರೂ ನಿಜವಾಗಿಯೂ ರಾಗಿಂಗ್ ಮಾಡುತ್ತಿದ್ದರೆ, ಆಗ ಅವನೇನು ಹೇಳುತ್ತಾನೆ ಅಥವಾ ಮಾಡುತ್ತಾನೆ ಅನ್ನುವುದು ಮುಖ್ಯ ಅಂತ ಅರ್ಥ ಮಾಡಿಸಿ. ಯಾಕೆಂದರೆ ಪರಿಸ್ಥಿತಿ ಇನ್ನೂ ಹಾಳಾಗುತ್ತಾ ಅಥವಾ ಸುಧಾರಿಸುತ್ತಾ ಅನ್ನುವುದು ಅವನ ಪ್ರತಿಕ್ರಿಯೆ ಮೇಲೆ ಅವಲಂಬಿಸಿದೆ. “ಮೃದುವಾದ ಪ್ರತ್ಯುತ್ತರವು ಸಿಟ್ಟನ್ನಾರಿಸುವದು; ಬಿರುನುಡಿಯು ಸಿಟ್ಟನ್ನೇರಿಸುವದು” ಎನ್ನುತ್ತದೆ ಬೈಬಲ್. (ಜ್ಞಾನೋಕ್ತಿ 15:1) ಮುಳ್ಳನ್ನು ಮುಳ್ಳಿಂದಲೇ ತೆಗೆಯಬೇಕು ಅಂತ ಹೇಳಿ ಏಟಿಗೆ ಎದಿರೇಟು ಕೊಡಲು ಹೋದರೆ ಸಮಸ್ಯೆ ಇನ್ನೂ ಬಿಗಡಾಯಿಸುತ್ತದೆ. ಯಾಕೆಂದರೆ ಇದರಿಂದ ರಾಗಿಂಗ್ ಮಾಡುವವರು ಅದನ್ನು ಹೆಚ್ಚು ಮಾಡುತ್ತಾರೇ ಹೊರತು ಕಡಿಮೆ ಮಾಡಲ್ಲ.
ಬೈಬಲ್ ತತ್ವ: ‘ಹಾನಿಗೆ ಪ್ರತಿಯಾಗಿ ಹಾನಿಯನ್ನು ಮಾಡಬೇಡಿ.’—1 ಪೇತ್ರ 3:9.
ಬೇರೆಯವರು ಮಾಡಿದ್ದಕ್ಕೆ ಪ್ರತಿಯಾಗಿ ನಾವೂ ಏನಾದರೂ ಮಾಡದಿದ್ದರೆ ನಮಗೆ ದಮ್ಮಿಲ್ಲ ಅಂತ ಅರ್ಥ ಅಲ್ಲ ಎಂದು ಮಗನಿಗೆ ಅರ್ಥ ಮಾಡಿಸಿ. ನಾವು ಏನೂ ಮಾಡದಿದ್ದರೆ ನಾವವರ ಹಿಡಿತದಲ್ಲಿಲ್ಲ, ಸ್ಟ್ರಾಂಗ್ ಆಗಿದ್ದೇವೆ ಎಂದು ತೋರಿಸಿಕೊಡುತ್ತೇವೆ. ರಾಗಿಂಗ್ಗೆ ಪ್ರತಿಯಾಗಿ ರಾಗಿಂಗ್ ಮಾಡದೆಯೇ ಅವನದನ್ನು ಎದುರಿಸಲು ಸಾಧ್ಯವಾಗುತ್ತದೆ.
ಆನ್ಲೈನ್ನಲ್ಲಿ ರಾಗಿಂಗ್ ಮಾಡುತ್ತಿದ್ದರಂತೂ ಈ ರೀತಿ ಮುಯ್ಯಿಗೆ ಮುಯ್ಯಿ ತೀರಿಸದೇ ಇರುವುದು ತುಂಬ ಮುಖ್ಯ. ಬೇರೆಯವರು ನಮಗೇನೋ ಹೇಳಿದರು ಅಂತ ನಾವೂ ವಾಪಸ್ ಏನಾದರೂ ಹೇಳಲು ಹೋದರೆ ಅವರು ನಮಗೆ ತೊಂದರೆ ಕೊಡುವುದನ್ನು ಇನ್ನೂ ಮುಂದುವರಿಸುತ್ತಾರೆ. ಮಾತ್ರವಲ್ಲ, ನಾವು ಸಹ ರಾಗಿಂಗ್ ಮಾಡಿದಂತೆ ಆಗುತ್ತದೆ. ಹಾಗಾಗಿ, ಕೆಲವೊಮ್ಮೆ ಅವರಿಗೆ ಏನೂ ಪ್ರತಿಕ್ರಿಯೆ ಕೊಡದಿರುವುದೇ ಒಳ್ಳೇದು. ನಿಮ್ಮ ಮಗ ಏನೂ ಮಾಡದೆ ಅಥವಾ ಹೇಳದೆ ಇದ್ದರೆ ರಾಗಿಂಗ್ ಮಾಡುತ್ತಿರುವವರು ತಾವು ತೊಂದರೆ ಕೊಟ್ಟರೂ ಅದರಿಂದ ಇವನ ಮೇಲೆ ಯಾವುದೇ ಪರಿಣಾಮ ಆಗುತ್ತಿಲ್ಲ ಅಂತ ನೆನಸಿ ತೊಂದರೆ ಕೊಡುವುದನ್ನೇ ನಿಲ್ಲಿಸಬಹುದು.
ಬೈಬಲ್ ತತ್ವ: “ಕಟ್ಟಿಗೆಯಿಲ್ಲದಿದ್ದರೆ ಬೆಂಕಿ ಆರುವದು.”—ಜ್ಞಾನೋಕ್ತಿ 26:20.
ಕೆಲವು ಪರಿಸ್ಥಿತಿಯಲ್ಲಿ, ನಿಮ್ಮ ಮಗ ರಾಗಿಂಗ್ ಮಾಡುವವರ ಹತ್ತಿರ ಹೋಗದಿದ್ದರೆ ಅಥವಾ ಅಂಥ ಸ್ಥಳಗಳಿಂದ ದೂರ ಉಳಿದರೆ ಅದರಿಂದ ತಪ್ಪಿಸಿಕೊಳ್ಳಬಹುದು. ಉದಾಹರಣೆಗೆ, ರಾಗಿಂಗ್ ಮಾಡುವವನು ಅಥವಾ ಅವರ ಗುಂಪು ಸಾಮಾನ್ಯವಾಗಿ ಎಲ್ಲಿರುತ್ತಾರೆ ಎಂದು ಗೊತ್ತಿದ್ದರೆ ಆ ಕಡೆಗೆ ಹೋಗದೆ ಬೇರೆ ದಾರಿಯಲ್ಲಿ ಹೋಗಬಹುದು. ಹೀಗೆ ಸಮಸ್ಯೆಯಿಂದ ತಪ್ಪಿಸಿಕೊಳ್ಳಬಹುದು.
ಬೈಬಲ್ ತತ್ವ: “ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು; ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು.”—ಜ್ಞಾನೋಕ್ತಿ 22:3.
ಹೀಗೆ ಮಾಡಿ: ತನ್ನ ಮುಂದೆ ಇರುವ ಆಯ್ಕೆಗಳಿಂದಾಗಬಹುದಾದ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳ ಬಗ್ಗೆ ಯೋಚಿಸಲು ನಿಮ್ಮ ಮಗನಿಗೆ ಸಹಾಯಮಾಡಿ. ಉದಾಹರಣೆಗೆ:
ರಾಗಿಂಗ್ ಮಾಡುವಾಗ ಏನೂ ಆಗೇ ಇಲ್ಲ ಎನ್ನುವಂತೆ ನಡಕೊಂಡರೆ ಏನಾಗಬಹುದು?
ಧೈರ್ಯದಿಂದ ಹಾಗೆ ಮಾಡಬೇಡ ಅಂತ ಹೇಳಿದರೆ ಏನಾಗಬಹುದು?
ಶಾಲೆಯ ಶಿಕ್ಷಕರಿಗೆ ಇದರ ಬಗ್ಗೆ ಹೇಳಿದರೆ ಏನಾಗಬಹುದು?
ಸ್ನೇಹದಿಂದ ಮಾತಾಡುವ ಅಥವಾ ಜೋಕ್ ಮಾಡಿ ನಗುವ ಮೂಲಕ ಏನಾದರೂ ಪ್ರಯೋಜನ ಆಗಬಹುದಾ?
ರಾಗಿಂಗ್ ಮುಖಾಮುಖಿಯಾಗಿಯೇ ಆಗಿರಲಿ ಆನ್ಲೈನ್ನಲ್ಲೇ ಆಗಿರಲಿ ಎಲ್ಲಾ ಸನ್ನಿವೇಶಗಳು ಒಂದೇ ರೀತಿ ಇರುವುದಿಲ್ಲ. ಹಾಗಾಗಿ, ಏನು ಮಾಡಬಹುದೆಂದು ನಿಮ್ಮ ಮಗನ ಜೊತೆ ಕೂತು ಮಾತಾಡಿ ನಿರ್ಧರಿಸಿ. ನಿಮ್ಮ ಬೆಂಬಲ ಅವನಿಗಿದೆ ಎಂದು ಆಶ್ವಾಸನೆ ನೀಡಿ. ಹೀಗೆ ಒಬ್ಬ ಆಪ್ತಸ್ನೇಹಿತನಂತೆ ನಡಕೊಳ್ಳಿ.
ಬೈಬಲ್ ತತ್ವ: “ಮಿತ್ರನ ಪ್ರೀತಿಯು ನಿರಂತರ; ಸಹೋದರನ ಜನ್ಮವು ಆಪತ್ತಿನಲ್ಲಿ ಸಾರ್ಥಕ.”—ಜ್ಞಾನೋಕ್ತಿ 17:17.
a ಈ ಲೇಖನದಲ್ಲಿ ಮಗನಿಗೆ ಸಮಸ್ಯೆ ಎದುರಾದಾಗ ಏನು ಮಾಡಬೇಕೆಂದು ತಿಳಿಸಲಾಗಿದೆಯಾದರೂ ಇಲ್ಲಿ ಕೊಡಲಾದ ಅಂಶಗಳನ್ನು ಮಗಳ ವಿಷಯದಲ್ಲೂ ಅನ್ವಯಿಸಬಹುದು.