ಸುಖೀ ಸಂಸಾರಕ್ಕೆ ಸಲಹೆಗಳು
ಇಬ್ಬರ ಅಭಿಪ್ರಾಯ ಎರಡಾದಾಗ
ಗಂಡ ಹೆಂಡತಿಯ ಆಸೆಗಳು, ಅಭ್ಯಾಸಗಳು, ಆಲೋಚನೆಗಳೆಲ್ಲಾ ಬೇರೆ ಬೇರೆಯಾದ್ರೆ ಜೀವನ ಮಾಡೋದು ತುಂಬಾನೇ ಕಷ್ಟ. ಆದ್ರೆ ಇದಕ್ಕಿಂತ ಕಷ್ಟ ಆಗಿರೋ ಬೇರೆ ವಿಷಯಗಳೂ ಇವೆ. ಉದಾಹರಣೆಗೆ:
ಸಂಬಂಧಿಕರ ಜೊತೆ ಎಷ್ಟು ಸಮಯ ಕಳೆಯಬೇಕು?
ಹಣ ಯಾವುದಕ್ಕೆ ಖರ್ಚು ಮಾಡ್ಬೇಕು, ಯಾವುದಕ್ಕೆ ಮಾಡ್ಬಾರದು?
ಮಕ್ಕಳು ಬೇಕಾ-ಬೇಡ್ವಾ?
ಇಂಥ ವಿಷಯಗಳಲ್ಲಿ ನಿಮ್ಮಿಬ್ಬರ ಆಲೋಚನೆ ಬೇರೆ ಬೇರೆ ಆಗಿದ್ರೆ ಏನ್ ಮಾಡೋದು?
ನಿಮಗಿದು ತಿಳಿದಿರಲಿ
ಒಳ್ಳೇ ಜೋಡಿ ಕೂಡ ಒಂದೇ ಥರ ಇರಲ್ಲ. ‘ಹೇಳಿ ಮಾಡಿಸಿದ ಜೋಡಿ’ ಥರ ಇರೋರು ಕೂಡ ಯಾವಾಗಲೂ ಒಂದೇ ಥರ ಯೋಚನೆ ಮಾಡೋಕೆ ಸಾಧ್ಯನೇ ಇಲ್ಲ. ತುಂಬ ಮುಖ್ಯವಾಗಿರೋ ವಿಷ್ಯದಲ್ಲೂ ಅವ್ರ ಆಲೋಚನೆ ಬೇರೆ ಬೇರೆ ಇರುತ್ತೆ.
“ನಮ್ ಕುಟುಂಬ ಜೇನುಗೂಡಿನ ಥರ. ಯಾವಾಗಲೂ ಜೊತೇಲಿ ಇರೋಕೆ ಇಷ್ಟಪಡ್ತಿದ್ವಿ. ಅಜ್ಜಿ-ತಾತಾ, ಚಿಕ್ಕಪ್ಪ-ದೊಡ್ಡಪ್ಪ ಮತ್ತೆ ಅವರ ಮಕ್ಕಳ ಜೊತೆಯೆಲ್ಲ ನಾವು ಶನಿವಾರ-ಭಾನುವಾರ ಟೈಮ್ ಕಳೀತಿದ್ವಿ. ಆದ್ರೆ ನನ್ ಯಜಮಾನ್ರ ಕುಟುಂಬ ಹಿಂಗಲ್ಲ. ಅದಕ್ಕೇ, ಕುಟುಂಬದವರ ಜೊತೆ ಎಷ್ಟು ಸಮಯ ಕಳೀಬೇಕು, ದೂರದಲ್ಲಿರೋ ಸಂಬಂಧಿಕರ ಜೊತೆ ಎಷ್ಟೊತ್ತು ಮಾತಾಡ್ಬೇಕು ಅನ್ನೋದ್ರಲ್ಲಿ ನಮ್ಮಿಬ್ರ ಆಲೋಚನೆ ಬೇರೆ ಬೇರೆ.”—ತಾರಾ.
“ನಾನು ನನ್ ಹೆಂಡ್ತಿ ಬೆಳೆದು ಬಂದ ರೀತಿ ಒಂದೇ ಥರ ಇರ್ಲಿಲ್ಲ. ಆದ್ರಿಂದ ಹಣನ ಯಾವುದಕ್ಕೆ ಖರ್ಚುಮಾಡ್ಬೇಕು, ಹೇಗ್ ಉಳಿಸ್ಬೇಕು ಅನ್ನೋದ್ರಲ್ಲಿ ನಮ್ ಆಲೋಚನೇನೂ ಒಂದೇ ಥರ ಇಲ್ಲ. ಅದಕ್ಕೇ ಮದ್ವೆಯಾದ ಹೊಸದ್ರಲ್ಲಿ ನಮ್ಮಿಬ್ರಿಗೂ ಆಗಾಗ ಗಲಾಟೆ ಆಗ್ತಿತ್ತು. ಒಂದ್ಸಲ ಅಲ್ಲ, ಎರಡ್ಸಲ ಮಾತಾಡಿದ ಮೇಲೂ ಪ್ರಾಬ್ಲಮ್ ಹಾಗೇ ಇರ್ತಿತ್ತು.”—ಭಾಸ್ಕರ್.
ಕೆಲವು ಸಮಸ್ಯೆಗಳಿಗೆ ಬರೀ ರಾಜಿ ಮಾಡ್ಕೊಂಡ್ರೆ ಸಾಕಾಗಲ್ಲ. ಉದಾಹರಣೆಗೆ, ಖಾಯಿಲೆ ಬಿದ್ದಿರೋ ಅತ್ತೆನೋ-ಮಾವನ್ನೋ ನೋಡ್ಕೋಳ್ಳಬೇಕಾಗಿ ಬಂದ್ರೆ? ಅಥವಾ ಒಬ್ರಿಗೆ ಮಕ್ಕಳು ಬೇಕಂತ ಅನ್ಸಿ, ಇನ್ನೊಬ್ಬರಿಗೆ ಬೇಡ ಅಂತ ಅನ್ಸಿದ್ರೆ? a
“ಮಕ್ಕಳು ಬೇಕಾ-ಬೇಡ್ವಾ ಅಂತ ಎಷ್ಟೋ ಸಲ ಮಾತಾಡಿದ್ದೀವಿ. ಅವಳಂತೂ ಇದ್ರ ಬಗ್ಗೆ ಸಿಕ್ಕಾಪಟ್ಟೆ ಯೋಚನೆ ಮಾಡ್ತಾಳೆ. ನಮ್ಮಿಬ್ಬರ ಆಲೋಚನೆ ಒಂದಾಗೋ ಹಾಗೆನೇ ಕಾಣಿಸ್ತಿಲ್ಲ. ಯಾಕೋ, ರಾಜಿ ಆಗೋದೇ ಇಲ್ವೇನೋ ಅನ್ಸುತ್ತೆ.”—ಅಶೋಕ್.
ಅಭಿಪ್ರಾಯ ಬೇರೆ ಆದ ತಕ್ಷಣ ಮದ್ವೆ ಮುರಿದೋಗಲ್ಲ. ಮದ್ವೆ ಬಗ್ಗೆ ಸಲಹೆ ಕೊಡೋ ಕೆಲಸ ಮಾಡೋರು ಏನು ಹೇಳ್ತಾರಂದ್ರೆ, ‘ಗಂಡ-ಹೆಂಡ್ತಿಗೆ ಮುಖ್ಯವಾದ ವಿಷ್ಯದಲ್ಲಿ ಭಿನ್ನಾಭಿಪ್ರಾಯ ಬಂದ್ರೆ, ಅಂದ್ಕೊಂಡಿದ್ದು ಆಗೋವರೆಗೂ ಬಿಟ್ಟುಕೊಡಬಾರದು. ಮದ್ವೆ ಮುರಿದು ಹೋದ್ರೂ ಪರ್ವಾಗಿಲ್ಲ, ನೀವು ಅಂದ್ಕೊಂಡಿದ್ದನ್ನ ಸಾಧಿಸಿ.’ ಈ ‘ಸಲಹೆ’ ನಿಮ್ಮ ಅಭಿಪ್ರಾಯನೇ ದೊಡ್ಡದು ಅಂತ ಹೇಳುತ್ತೇ ಹೊರತು, ನಿಮ್ಮ ಸಂಗಾತಿಗೆ ಕೊಟ್ಟಿರೋ ಮಾತಿಗೆ ಬೆಲೆನೇ ಕೊಡ್ತಿಲ್ಲ.
ನೀವೇನು ಮಾಡಬಹುದು
ಮದ್ವೆ ದಿನ ಕೊಟ್ಟ ಮಾತನ್ನ ಏನೇ ಆಗಲಿ ಉಳಿಸಿಕೊಳ್ಳಿ. ಇದನ್ನ ಮನಸ್ಸಲ್ಲಿ ಇಟ್ಟುಕೊಂಡ್ರೆ, ಸಮಸ್ಯೆಗಳನ್ನ ಜೊತೆಯಾಗಿ ಬಗೆಹರಿಸ್ತೀವೇ ಹೊರತು ವೈರಿಗಳ ಥರ ಕಿತ್ತಾಡಲ್ಲ.
ಬೈಬಲ್ ತತ್ವ: “ದೇವರು ಒಟ್ಟುಗೂಡಿಸಿದ್ದನ್ನು ಯಾವ ಮನುಷ್ಯನೂ ಅಗಲಿಸದಿರಲಿ.”—ಮತ್ತಾಯ 19:6.
ನಿಮ್ಮ ಕೈಯಲ್ಲಿ ಆಗುತ್ತಾ ಅಂತ ಯೋಚಿಸಿ. ಉದಾಹರಣೆಗೆ, ಒಬ್ರಿಗೆ ಮಕ್ಕಳು ಬೇಕು, ಇನ್ನೊಬ್ರಿಗೆ ಬೇಡ ಅಂತ ಅನ್ಸಿದ್ರೆ, ನೀವು ಕೆಲವು ವಿಷ್ಯಗಳನ್ನ ಯೋಚಿಸಬೇಕು:
ನಿಮ್ಮ ಬಂಧ ಎಷ್ಟು ಬಲವಾಗಿದೆ?
ಮಗುವನ್ನ ಸಾಕೋ ಶಕ್ತಿ ಮತ್ತು ಆ ಒತ್ತಡವನ್ನ ಸಹಿಸೋ ಸಾಮರ್ಥ್ಯ ನಿಮಗಿದ್ಯಾ?
ಹೆತ್ತವರ ಕರ್ತವ್ಯ.
ಬರೀ ಅನ್ನ, ಬಟ್ಟೆ ಮತ್ತು ಮನೆ ಕೊಟ್ಟರೆ ಸಾಕಾಗಲ್ಲ.
ನಿಮ್ಮ ಹಣಕಾಸಿನ ಸ್ಥಿತಿ.
ಕೆಲಸ, ಕುಟುಂಬ ಮತ್ತು ಬೇರೆ ಜವಾಬ್ದಾರಿಗಳನ್ನ ಸರಿಯಾಗಿ ನಿಭಾಯಿಸೋಕೆ ನಿಮ್ಮಿಂದ ಆಗುತ್ತಾ?
ಬೈಬಲ್ ತತ್ವ: “ನಿಮ್ಮಲ್ಲಿ ಯಾವನಾದರೂ ಒಂದು ಬುರುಜನ್ನು ಕಟ್ಟಲು ಬಯಸುವುದಾದರೆ, ಮೊದಲು ಕುಳಿತುಕೊಂಡು ಅದನ್ನು ಕಟ್ಟಿಮುಗಿಸಲು ಸಾಕಾಗುವಷ್ಟು ಹಣ ತನ್ನಲ್ಲಿದೆಯೋ ಎಂದು ಲೆಕ್ಕಮಾಡುವುದಿಲ್ಲವೆ?”—ಲೂಕ 14:28.
ಎಲ್ಲ ಅಂಶಗಳನ್ನ ಲೆಕ್ಕಕ್ಕೆ ತಗೊಳ್ಳಿ. ಆಗ ಸ್ವಲ್ಪಮಟ್ಟಿಗೆ ನೀವು ಸಮಸ್ಯೆಯನ್ನ ಬಗೆಹರಿಸಬಹುದು. ಉದಾಹರಣೆಗೆ, ಮಕ್ಕಳು ಬೇಕಾ-ಬೇಡವಾ ಅನ್ನೋದು ಸಮಸ್ಯೆಯಾದ್ರೆ, ಯಾರು ಬೇಡ ಅಂತ ಹೇಳ್ತಿದ್ದಾರೋ ಅವರು ಹೀಗೆ ಕೇಳಿಕೊಳ್ಳಬೇಕು:
‘ಮಕ್ಕಳು ಬೇಡ ಅಂತ ನಾನು ಹೇಳಿದ್ರ ಅರ್ಥ, ಜೀವನದಲ್ಲಿ ಮಕ್ಕಳೇ ಬೇಡ ಅಂತನಾ ಅಥವಾ ಸದ್ಯಕ್ಕೆ ಬೇಡ ಅಂತನಾ?’
‘ಮಗೂನ ಚೆನ್ನಾಗಿ ಬೆಳೆಸ್ತೀನೋ ಇಲ್ವೋ ಅನ್ನೋ ಭಯದಿಂದ ನಾನು ಮಗು ಬೇಡ ಅಂತಿದ್ದೀನಾ?’
‘ಮಗು ಆದ್ಮೇಲೆ ನನ್ನ ಸಂಗಾತಿ ನನಗೆ ಕೊಡೋ ಗಮನವನ್ನ ಕಡಿಮೆ ಮಾಡ್ತಾರೆ ಅನ್ನೋ ಭಯ ನನಗಿದ್ಯಾ?’
‘ಮಗು ಬೇಕು’ ಅಂತ ಹೇಳ್ತೀರೋರು ಹೀಗೆ ಕೇಳಿಕೊಳ್ಳಬೇಕು:
‘ಅಪ್ಪ-ಅಮ್ಮನ ಸ್ಥಾನ ತಗೊಂಡು, ಜವಾಬ್ದಾರಿ ನಿಭಾಯಿಸೋಕೆ ನಾವು ರೆಡಿ ಇದ್ದೀವಾ?’
‘ಮಗೂನ ಸಾಕೋಕೆ ನಮ್ಮತ್ರ ಹಣ ಇದ್ಯಾ?’
ಬೈಬಲ್ ತತ್ವ: ‘ಮೇಲಣಿಂದ ಬರುವ ವಿವೇಕವು ನ್ಯಾಯಸಮ್ಮತವಾದದ್ದು (ಸಮತೋಲನವಾದದ್ದು)’—ಯಾಕೋಬ 3:17.
ನಿಮ್ಮ ಸಂಗಾತಿಯ ಅಭಿಪ್ರಾಯದಿಂದ ಸಿಗೋ ಪ್ರಯೋಜನ ಏನು ಅಂತ ಯೋಚಿಸಿ. ಇಬ್ರೂ ಒಂದೇ ಮೋಡವನ್ನ ನೋಡ್ತಿದ್ರೂ ಆ ಮೋಡ ಇಬ್ರಿಗೂ ಬೇರೆ-ಬೇರೆ ಥರ ಕಾಣುತ್ತೆ. ಅದೇ ರೀತಿ, ಒಂದೇ ಸಮಸ್ಯೆ ಗಂಡ-ಹೆಂಡತಿಗೆ ಬೇರೆ-ಬೇರೆ ರೀತಿ ಕಾಣುತ್ತೆ. ಉದಾಹರಣೆಗೆ, ಹಣನ ಯಾವುದಕ್ಕೆ ಖರ್ಚು ಮಾಡ್ಬೇಕು, ಯಾವುದ್ರಲ್ಲಿ ಉಳಿಸಬೇಕು ಅನ್ನೋದ್ರಲ್ಲಿ ಭಿನ್ನಾಭಿಪ್ರಾಯ ಬರುತ್ತೆ. ಭಿನ್ನಾಭಿಪ್ರಾಯ ಇರೋ ವಿಷ್ಯಗಳನ್ನ ಮಾತಾಡೋಕೆ ಮೊದ್ಲು, ನೀವಿಬ್ರೂ ಒಪ್ಪೋ ಅಂಶಗಳ ಬಗ್ಗೆ ಮಾತಾಡಿ.
ಕುಟುಂಬದ ಬಗ್ಗೆ ನೀವಿಬ್ರೂ ಒಪ್ಪೋ ಅಭಿಪ್ರಾಯ ಏನು?
ಇಬ್ಬರ ಆಲೋಚನೆಯಲ್ಲೂ ಇರೋ ಒಳ್ಳೇ ವಿಷಯಗಳೇನು?
ನಿಮ್ಮ ಕುಟುಂಬನ ಉಳಿಸಲು ನಿಮ್ಮಲ್ಲಿ ಒಬ್ಬರು ಅಥವಾ ಇಬ್ಬರೂ ನಿಮ್ಮ-ನಿಮ್ಮ ಯೋಚನೆಯನ್ನ ಬಿಟ್ಟುಕೊಡಬೇಕು. ಇದಕ್ಕೆ ಯಾರು ರೆಡಿ ಇದ್ದೀರ?
ಬೈಬಲ್ ತತ್ವ: “ಪ್ರತಿಯೊಬ್ಬನು ತನ್ನ ಸ್ವಹಿತವನ್ನು ಚಿಂತಿಸದೆ ಪರಹಿತವನ್ನು ಚಿಂತಿಸುತ್ತಿರಲಿ”—1 ಕೊರಿಂಥ 10:24.
a ಮದ್ವೆಗೆ ಮುಂಚೆನೇ ಇಂಥ ಮುಖ್ಯ ವಿಷ್ಯಗಳ ಬಗ್ಗೆ ಮಾತಾಡಿಕೊಳ್ಳಬೇಕು. ಆದ್ರೂ ಕೆಲವೊಮ್ಮೆ ನಿಮ್ಮ ಸನ್ನಿವೇಶದಲ್ಲಿ ಅಥವಾ ಒಬ್ರ ಅನಿಸಿಕೆಯಲ್ಲಿ ಬದಲಾವಣೆ ಆಗಬಹುದು.—ಪ್ರಸಂಗಿ 9:11.