ಸುಖೀ ಸಂಸಾರಕ್ಕೆ ಸಲಹೆಗಳು | ಮಕ್ಕಳ ಪಾಲನೆ
ಮಕ್ಕಳ ಸಾಮರ್ಥ್ಯಗಳನ್ನ ಬೆಳೆಸೋ ಆಟಗಳು
ಮಕ್ಕಳ ಸಾಮರ್ಥ್ಯಗಳನ್ನ ಬೆಳೆಸೋ ಆಟಗಳನ್ನ “ಸೃಜನಶೀಲ ಆಟಗಳು” ಅಂತ ಕರೆಯುತ್ತಾರೆ. ಇಂಥ ಆಟಗಳು ಮಕ್ಕಳ ಕುತೂಹಲ ಮತ್ತು ಕಲ್ಪನೆಯನ್ನ ಕೆರಳಿಸುತ್ತೆ. ಇದರಿಂದ ಮಕ್ಕಳ ಬೆಳವಣಿಗೆ ತುಂಬ ಚೆನ್ನಾಗಿ ಆಗುತ್ತೆ. ಅವರಲ್ಲಿರೋ ಪ್ರತಿಭೆ, ಕೌಶಲ್ಯಗಳು ಜಾಸ್ತಿಯಾಗುತ್ತೆ.
ಉದಾಹರಣೆಗೆ:
ಚಿತ್ರ ಬಿಡಿಸುವುದು
ಅಡುಗೆ ಮಾಡುವುದು
ಬೇರೆಯವರನ್ನ ಅನುಕರಿಸುವುದು
ಹಾಡುವುದು
ಬಿಲ್ಡಿಂಗ್ ಬ್ಲಾಕ್ಸ್ ಆಡುವುದು
ಕೈಗೆ ಸಿಗೋ ವಸ್ತುಗಳಿಂದ ಆಡುವುದು (ಕಾರ್ಡ್ಬೋರ್ಡ್ಗಳು ಅಥವಾ ಇನ್ನಿತರ ವಸ್ತುಗಳಿಂದ ಆಡುವುದು)
ಹೆಚ್ಚಿನ ದೇಶಗಳಲ್ಲಿ ಮಕ್ಕಳ ಸಾಮರ್ಥ್ಯಗಳನ್ನ ಬೆಳೆಸೋ ಆಟಗಳು (ಸೃಜನಶೀಲ ಆಟಗಳು) ಈಗ ಕಣ್ಮರೆಯಾಗಿದೆ. ಮಕ್ಕಳು ತಮ್ಮ ಬುದ್ಧಿ ಉಪಯೋಗಿಸಿ ಆಡೋ ಬದಲು ಯಾರೋ ಪ್ರೋಗ್ರಾಂ ಮಾಡಿರೋ ಆಟಗಳನ್ನ ಆಡುತ್ತಿದ್ದಾರೆ, ಇಲ್ಲಾ ಸುಮ್ನೆ ಕೂತು ಟಿ.ವಿ ನೋಡ್ತಿರುತ್ತಾರೆ.
ಇದರಲ್ಲಿ ಏನಾದ್ರೂ ಸಮಸ್ಯೆ ಇದೆಯಾ?
ನಿಮಗಿದು ತಿಳಿದಿರಲಿ
ಇಂಥ ಆಟಗಳು ಮಕ್ಕಳ ಬೆಳವಣಿಗೆಗೆ ಸಹಾಯ ಮಾಡುತ್ತೆ. ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಾಯವಾಗುತ್ತೆ ಮತ್ತು ಬೇರೆಯವರ ಜೊತೆ ಚೆನ್ನಾಗಿ ಬೆರೆಯೋ ಸಾಮರ್ಥ್ಯನೂ ಸಿಗುತ್ತೆ. ತಾಳ್ಮೆಯಿಂದ ಇರೋಕೆ, ಒಳ್ಳೇ ತೀರ್ಮಾನಗಳನ್ನ ಮಾಡೋಕೆ, ಅವರ ಭಾವನೆಗಳನ್ನ ಹಿಡಿತದಲ್ಲಿಡೋಕೆ, ಒಂದು ಗುಂಪಿನ ಜೊತೆ ಆಡುವಾಗಲೂ ಎಲ್ಲರ ಜೊತೆ ಬೆರೆಯೋಕೆ ಸಹಾಯಮಾಡುತ್ತೆ. ಅಷ್ಟೇ ಅಲ್ಲ ಇಂಥ ಆಟಗಳು ಮಕ್ಕಳು ಪ್ರೌಢರಾಗೋಕೆ ಸಹಾಯಮಾಡುತ್ತೆ.
ತುಂಬ ಹೊತ್ತು ಟಿವಿ ನೋಡೋದು ಮತ್ತು ಮೊಬೈಲ್ನಲ್ಲಿ ಆಡುವುದು ಒಳ್ಳೇದಲ್ಲ. ತುಂಬ ಹೊತ್ತು ಟಿವಿ ನೋಡ್ತಾ, ವಿಡಿಯೋ ಗೇಮ್ ಆಡ್ತಾ, ಮೊಬೈಲ್ನಲ್ಲಿ ಆಡ್ತಾ ಇದ್ರೆ ಅದಿಲ್ಲದೆ ಬದುಕೋಕೆ ಆಗಲ್ಲ ಅಂತ ಅನಿಸಿಬಿಡುತ್ತೆ. ಅಷ್ಟೇ ಅಲ್ಲ ಚಿಕ್ಕ ವಯಸ್ಸಲ್ಲೇ ಅಧಿಕ ತೂಕದ ಸಮಸ್ಯೆ ಮತ್ತು ಸಣ್ಣ ಪುಟ್ಟ ವಿಷಯಗಳಿಗೆ ಕೋಪಿಸಿಕೊಳ್ತಾರೆ. ಚಿಕ್ಕ ಮಕ್ಕಳು ಗಲಾಟೆ ಮಾಡಬಾರದು ಅಂತ ಎಲೆಕ್ಟ್ರಾನಿಕ್ ಸಾಧನಗಳನ್ನ ಕೊಡ್ತಿರೋ ಹೆತ್ತವರೇ ಹುಷಾರಾಗಿರಿ!
ಈಗಿನ ಆಟಗಳು ಸೃಜನಶೀಲತೆಯನ್ನ ಪ್ರೋತ್ಸಾಹಿಸಲ್ಲ. ಹೆತ್ತವರು ತಮಗೆ ಇಷ್ಟವಾದ ಆಟಗಳನ್ನ ಅಥವಾ ಚಟುವಟಿಕೆಗಳನ್ನೇ ಮಕ್ಕಳು ಮಾಡಬೇಕು ಅಂತ ಇಷ್ಟಪಡ್ತಾರೆ. ಇದರಿಂದ ಮಕ್ಕಳಿಗೆ ಸೃಜನಶೀಲತೆ ಮತ್ತು ಕುತೂಹಲ ಕೆರಳಿಸೋ ಆಟ ಆಡೋಕೆ ಸಮಯನೇ ಇರಲ್ಲ. ಆದ್ರೆ ನೆನಪಿಡಿ ಈ ಸೃಜನಶೀಲತೆಯಿಂದ ಮಕ್ಕಳಿಗೆ ತುಂಬ ಪ್ರಯೋಜನ ಇದೆ.
ನೀವೇನು ಮಾಡಬಹುದು?
ಇಂಥ ಆಟಗಳಿಗೆ ಅವಕಾಶ ಮಾಡಿಕೊಡಿ. ಸನ್ನಿವೇಶ ಅನುಮತಿಸುವಾಗೆಲ್ಲಾ ಮಕ್ಕಳಿಗೆ ಹೊರಗೆ ಹೋಗಿ ಆಟ ಆಡೋಕೆ ಬಿಡಿ. ಹೀಗೆ ಅವರು ಪ್ರಕೃತಿ ಜೊತೆ ಸಮಯ ಕಳೆಯಲಿ. ಸೃಜನಶೀಲತೆಯನ್ನ ಹೆಚ್ಚಿಸೋ ಆಟಗಳನ್ನ ಆಡೋಕೆ ಅನುಮತಿಸಿ. ಅದನ್ನ ಹವ್ಯಾಸ ಮಾಡ್ಕೊಳ್ಳೋಕೆ ಪ್ರೋತ್ಸಾಹಿಸಿ. a
ಸ್ವಲ್ಪ ಯೋಚಿಸಿ: ನನ್ನ ಮಗು ಯಾವ ಗುಣಗಳನ್ನ ಮತ್ತು ಕೌಶಲಗಳನ್ನ ಬೆಳೆಸ್ಕೊಳ್ಳೋಕೆ ಇಂಥ ಆಟಗಳು ಸಹಾಯಮಾಡುತ್ತೆ? ಇದರಿಂದ ನನ್ನ ಮಗುಗೆ ಮುಂದೆ ಏನಾದರೂ ಪ್ರಯೋಜನ ಆಗುತ್ತಾ?
ಬೈಬಲ್ ಸಲಹೆ: “ವ್ಯಾಯಾಮದಿಂದ . . . ಪ್ರಯೋಜನ ಇದೆ.”—1 ತಿಮೊತಿ 4:8.
ಎಲೆಕ್ಟ್ರಾನಿಕ್ ಆಟ ಕಮ್ಮಿ ಮಾಡಿ. ಮಗುವಿಗೆ ಫೋನ್, ಟ್ಯಾಬ್ಲೆಟ್ ಮತ್ತು ಟಿವಿ ತೋರಿಸೋ ಮುಂಚೆ ಯೋಚಿಸಿ. ಎರಡು ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಮಗುವಿಗೆ ಇವುಗಳನ್ನ ತೋರಿಸಲೇ ಬಾರದು. ಎರಡರಿಂದ ಐದು ವಯಸ್ಸಿನ ಮಗುವಿಗೆ ಒಂದು ದಿನದಲ್ಲಿ ಒಂದು ತಾಸಿಗಿಂತ ಜಾಸ್ತಿ ನೋಡೋಕೆ ಬಿಡಬಾರದು ಅಂತ ಮಕ್ಕಳ ತಜ್ಞರು ಹೇಳ್ತಾರೆ. b
ಸ್ವಲ್ಪ ಯೋಚಿಸಿ: ನನ್ನ ಮಗುವಿಗೆ ಫೋನ್, ಟ್ಯಾಬ್ಲೆಟ್ ಮತ್ತು ಟಿವಿ ನೋಡೋ ವಿಷಯದಲ್ಲಿ ಹೇಗೆ ಮಿತಿ ಇಡಬಹುದು? ಮಗು ಜೊತೆ ಕೂತು ನಾನೂ ನೋಡಬೇಕಾ? ಎಲೆಕ್ಟ್ರಾನಿಕ್ ಆಟಗಳ ಬದಲು ಬೇರೆ ಯಾವ ಆಟಗಳಿವೆ?
ಬೈಬಲ್ ಸಲಹೆ: “ನೀವು ಹೇಗೆ ನಡ್ಕೊಳ್ತಿದ್ದೀರ ಅಂತ ಚೆನ್ನಾಗಿ ಗಮನಿಸಿ. ಬುದ್ಧಿ ಇಲ್ಲದವ್ರ ತರ ಅಲ್ಲ, ಬುದ್ಧಿ ಇರುವವ್ರ ತರ ನಡ್ಕೊಳ್ಳಿ . . . ಮುಖ್ಯವಾದ ವಿಷ್ಯಕ್ಕೆ ಸಮಯ ಕೊಡಿ.”—ಎಫೆಸ 5:15, 16.
ನಿಮ್ಮ ಮಗು ಬಗ್ಗೆ ಯೋಚಿಸಿ. ಇಂಥ ಆಟಗಳಿಂದ ಮಕ್ಕಳ ಸಾಮರ್ಥ್ಯ, ಪ್ರತಿಭೆ ಒಂದಲ್ಲ ಒಂದು ರೀತಿಯಲ್ಲಿ ಬೆಳೆಯುತ್ತೆ ನಿಜ. ಆದ್ರೆ “ಅತಿಯಾದರೆ ಅಮೃತವೂ ವಿಷ” ಅನ್ನೋ ತರ ಇಂಥ ಚಟುವಟಿಕೆಗಳು ಜಾಸ್ತಿಯಾದರೆ ಪ್ರಯೋಜನಕ್ಕಿಂತ ಹಾನಿಯೇ ಜಾಸ್ತಿ. ಇದರ ಹಿಂದೆ ಓಡಾಡೋಕೆ ಮಕ್ಕಳಿಗಷ್ಟೇ ಅಲ್ಲ ನಿಮಗೂ ಕಷ್ಟ ಆಗತ್ತೆ. ಅದಕ್ಕೆ ಎಫೆಸ 5:15, 16ರಲ್ಲಿ ಹೇಳೋ ತರ “ಮುಖ್ಯವಾದ ವಿಷ್ಯಕ್ಕೆ ಸಮಯ ಕೊಡಿ.”
ಸ್ವಲ್ಪ ಯೋಚಿಸಿ: ತುಂಬ ಚಟುವಟಿಕೆಗಳಿಂದ ನನ್ನ ಮಗುಗೆ ಕಷ್ಟ ಆಗ್ತಿದ್ಯಾ? ಹಾಗಾದ್ರೆ ನಾವೇನು ಮಾಡಬೇಕು?
ಬೈಬಲ್ ಸಲಹೆ: “ತುಂಬ ಮುಖ್ಯವಾದ ವಿಷ್ಯ ಯಾವುದು ಅಂತ ನೀವು ಚೆನ್ನಾಗಿ ತಿಳ್ಕೊಬೇಕು.”—ಫಿಲಿಪ್ಪಿ 1:10.
a ಎಷ್ಟೋ ಆಟಿಕೆಗೆಳು ಮಕ್ಕಳ ಸಾಮರ್ಥ್ಯಗಳನ್ನ ಬೆಳೆಯೋಕೆ ಬಿಡಲ್ಲ. ಆದ್ರೆ ಬಿಲ್ಡಿಂಗ್ ಬ್ಲಾಕ್ಸ್ಗಳಿಂದ ಮತ್ತು ಕಾರ್ಡ್ಬೋರ್ಡ್ಗಳಿಂದ ಆಡುವಾಗ ಮಕ್ಕಳ ಕಲ್ಪನಾಶಕ್ತಿ ಬೆಳೆಯುತ್ತೆ.
b ಫೋನ್, ಟ್ಯಾಬ್ಲೆಟ್ ಮತ್ತು ಟಿವಿ ಬಳಸಿ ಫ್ರೆಂಡ್ಸ್ ಮತ್ತು ಕುಟುಂಬದವರಿಗೆ ವಿಡಿಯೋ ಕಾಲ್ ಮಾಡೋದಾಗಲಿ, ಮೀಟಿಂಗ್, ಸಮ್ಮೇಳನ ಮತ್ತು ಬ್ರಾಡ್ಕಾಸ್ಟಿಂಗ್ ನೋಡೋದಾಗಲಿ ತಪ್ಪಲ್ಲ.