ಮಾಹಿತಿ ಇರುವಲ್ಲಿ ಹೋಗಲು

ನನಗೆ ಸಾಯಬೇಕು ಅಂತ ಅನಿಸ್ತಿದೆ—ಇದ್ರಿಂದ ಹೊರಗೆ ಬರೋಕೆ ಬೈಬಲ್‌ ಸಹಾಯ ಮಾಡುತ್ತಾ?

ನನಗೆ ಸಾಯಬೇಕು ಅಂತ ಅನಿಸ್ತಿದೆ—ಇದ್ರಿಂದ ಹೊರಗೆ ಬರೋಕೆ ಬೈಬಲ್‌ ಸಹಾಯ ಮಾಡುತ್ತಾ?

ಬೈಬಲ್‌ ಕೊಡೋ ಉತ್ತರ

 ಹೌದು. “ಕುಗ್ಗಿಸಲ್ಪಟ್ಟಿರುವವರನ್ನು ಸಾಂತ್ವನಗೊಳಿಸುವ ದೇವರು” ನಮಗೆ ಬೈಬಲ್‌ ಕೊಟ್ಟಿದ್ದಾನೆ. (2 ಕೊರಿಂಥ 7:6) ಬೈಬಲ್‌ ಮಾನಸಿಕ ಆರೋಗ್ಯದ ಬಗ್ಗೆ ಇರೋ ಪುಸ್ತಕ ಅಲ್ಲದಿದ್ರೂ ಆತ್ಮಹತ್ಯೆ ಮಾಡ್ಕೊಳ್ಳಬೇಕು ಅಂತಿದ್ದ ಎಷ್ಟೋ ಜನ್ರಿಗೆ ಅದ್ರಿಂದ ಹೊರಗೆ ಬರೋಕೆ ಸಹಾಯ ಮಾಡಿದೆ. ನಿಮಗೂ ಸಹಾಯ ಮಾಡುತ್ತೆ.

 ಬೈಬಲ್‌ ಹೇಗೆ ಸಹಾಯ ಮಾಡುತ್ತೆ?

  • ನಿಮ್ಮ ಮನಸ್ಸಲ್ಲಿ ಇರೋದನ್ನೆಲ್ಲ ಬೇರೆಯವ್ರ ಹತ್ರ ಹೇಳ್ಕೊಳ್ಳಿ.

     ಬೈಬಲ್‌ ಏನು ಹೇಳುತ್ತೆ: “ಮಿತ್ರನ ಪ್ರೀತಿಯು ನಿರಂತರ; ಸಹೋದರನ ಜನ್ಮವು ಆಪತ್ತಿನಲ್ಲಿ ಸಾರ್ಥಕ.”—ಜ್ಞಾನೋಕ್ತಿ 17:17.

     ಅದ್ರರ್ಥ: ನಮಗೆ ಮನಸ್ಸಲ್ಲಿ ಕೆಟ್ಟ ಯೋಚನೆಗಳು ಬಂದಾಗ ಬೇರೆಯವ್ರ ಸಹಾಯ ಬೇಕು.

     ನಿಮ್ಮ ಮನಸ್ಸಿನ ಕಷ್ಟಗಳನ್ನ ಯಾರಿಗೂ ಹೇಳಿಲ್ಲಾಂದ್ರೆ ದೊಡ್ಡ ಬಂಡೆ ಕಲ್ಲನ್ನ ಹೊತ್ಕೊಂಡ ಹಾಗೆ. ಕಷ್ಟಗಳನ್ನ ಬೇರೆಯವ್ರ ಹತ್ರ ಹೇಳ್ಕೊಂಡ್ರೆ ಮನಸ್ಸು ಹಗುರ ಆಗುತ್ತೆ, ಸಮಸ್ಯೆ ಬಗೆಹರಿಸೋಕೆ ದಾರಿ ಕಾಣುತ್ತೆ.

     ಹೀಗೆ ಮಾಡಿ: ಇವತ್ತೇ ನಿಮ್ಮ ಕುಟುಂಬದಲ್ಲಿ ಯಾರ ಹತ್ರಾದ್ರೂ ಅಥವಾ ಒಬ್ಬ ಒಳ್ಳೇ ಫ್ರೆಂಡ್‌ ಹತ್ರ ಮಾತಾಡಿ. a ನಿಮ್ಮ ಅನಿಸಿಕೆ, ಭಾವನೆಗಳನ್ನ ಒಂದು ಪುಸ್ತಕದಲ್ಲಿ ಬರಿರಿ.

  • ಡಾಕ್ಟರ್‌ ಹತ್ರ ಹೋಗಿ.

     ಬೈಬಲ್‌ ಏನು ಹೇಳುತ್ತೆ: “ಆರೋಗ್ಯವಂತರಿಗೆ ವೈದ್ಯನ ಆವಶ್ಯಕತೆ ಇಲ್ಲ, ಆದರೆ ರೋಗಿಗಳಿಗೆ ಇದೆ.”—ಮತ್ತಾಯ 9:12.

     ಅದ್ರರ್ಥ: ನಮಗೆ ಹುಷಾರಿಲ್ಲದೆ ಇದ್ದಾಗ ಡಾಕ್ಟರ್‌ ಹತ್ರ ಹೋಗಬೇಕು.

     ಆತ್ಮಹತ್ಯೆ ಮಾಡ್ಕೋಬೇಕು ಅನ್ನೋ ಭಾವನೆ ಯಾವುದೋ ಮಾನಸಿಕ ಕಾಯಿಲೆಯ ಒಂದು ಸೂಚನೆ ಇರಬಹುದು. ಮಾನಸಿಕ ಕಾಯಿಲೆ ಅನ್ನೋದು ನಮ್ಮ ದೇಹಕ್ಕೆ ಬರೋ ಕಾಯಿಲೆಗಳು ತರಾನೇ. ಅದನ್ನ ಅವಮಾನ ಅಂತ ಅಂದ್ಕೋಬೇಡಿ. ಅದಕ್ಕೂ ಔಷಧಿ ಇದೆ.

     ಹೀಗೆ ಮಾಡಿ: ಆದಷ್ಟು ಬೇಗ ಒಬ್ಬ ಒಳ್ಳೇ ಡಾಕ್ಟರ್‌ ಹತ್ರ ಹೋಗಿ.

  • ದೇವರು ನಿಮ್ಮ ಬಗ್ಗೆ ಯೋಚ್ನೆ ಮಾಡ್ತಾನೆ.

     ಬೈಬಲ್‌ ಏನು ಹೇಳುತ್ತೆ: “ಚಿಕ್ಕ ಬೆಲೆಯ ಎರಡು ಕಾಸಿಗೆ ಐದು ಗುಬ್ಬಿಗಳು ಮಾರಲ್ಪಡುತ್ತವೆ, ಅಲ್ಲವೆ? ಹಾಗಿದ್ದರೂ ಅವುಗಳಲ್ಲಿ ಒಂದನ್ನೂ ದೇವರು ಮರೆಯುವುದಿಲ್ಲ. . . . ಭಯಪಡಬೇಡಿರಿ; ನೀವು ಅನೇಕ ಗುಬ್ಬಿಗಳಿಗಿಂತ ಹೆಚ್ಚು ಬೆಲೆಯುಳ್ಳವರು.”—ಲೂಕ 12:6, 7.

     ಅದ್ರರ್ಥ: ದೇವರ ದೃಷ್ಟಿಯಲ್ಲಿ ನಿಮಗೆ ತುಂಬ ಬೆಲೆ ಇದೆ.

    ನಿಮಗೆ ಯಾರೂ ಇಲ್ಲ ಅಂತ ಅನಿಸಬಹುದು. ಆದ್ರೆ ನೀವು ಪಡೋ ಪಾಡನ್ನ ದೇವರು ನೋಡ್ತಾ ಇದ್ದಾನೆ. ನಿಮಗೆ ಬದುಕೋಕೆ ಆಸೆ ಇಲ್ಲಾಂದ್ರೂ ನೀವು ಬದುಕಬೇಕು ಅಂತ ದೇವರು ಆಸೆಪಡ್ತಾನೆ. “ಜಜ್ಜಿಹೋದ ಮನಸ್ಸನ್ನು [ದೇವರು] ತಿರಸ್ಕರಿಸುವದಿಲ್ಲ” ಅಂತ ಕೀರ್ತನೆ 51:17 ಹೇಳುತ್ತೆ. ದೇವರಿಗೆ ನಿಮ್ಮ ಮೇಲೆ ತುಂಬ ಪ್ರೀತಿ ಇರೋದ್ರಿಂದ ನೀವು ಬದುಕಬೇಕು ಅನ್ನೋದು ಆತನ ಇಷ್ಟ.

     ಹೀಗೆ ಮಾಡಿ: ದೇವರು ನಿಮ್ಮನ್ನ ಪ್ರೀತಿಸ್ತಾನೆ ಅನ್ನೋದಕ್ಕೆ ಬೈಬಲಲ್ಲಿ ಆಧಾರ ಇದೆ. ಅದನ್ನ ತಿಳ್ಕೊಳ್ಳೋಕೆ ಯೆಹೋವನ ಸಮೀಪಕ್ಕೆ ಬನ್ನಿರಿ ಅನ್ನೋ ಪುಸ್ತಕದ ಅಧ್ಯಾಯ 24 ನೋಡಿ.

  • ದೇವರಿಗೆ ಪ್ರಾರ್ಥನೆ ಮಾಡಿ.

     ಬೈಬಲ್‌ ಏನು ಹೇಳುತ್ತೆ: “ನಿಮ್ಮ ಚಿಂತೆಯನ್ನೆಲ್ಲಾ [ದೇವರ] ಮೇಲೆ ಹಾಕಿರಿ, ಏಕೆಂದರೆ ಆತನು ನಿಮಗೋಸ್ಕರ ಚಿಂತಿಸುತ್ತಾನೆ.”—1 ಪೇತ್ರ 5:7.

     ಅದ್ರರ್ಥ: ನಿಮಗೆ ಏನು ಅನಿಸ್ತಿದೆ, ಯಾವ ಚಿಂತೆ ಕಾಡ್ತಿದೆ ಅಂತ ಮನಸ್ಸು ಬಿಚ್ಚಿ ತನ್ನ ಹತ್ರ ಹೇಳಿ ಅಂತ ದೇವರು ಕೇಳ್ತಿದ್ದಾನೆ.

     ದೇವರು ನಿಮಗೆ ಮನಸ್ಸಿಗೆ ನೆಮ್ಮದಿ ಕೊಡ್ತಾನೆ, ಜೊತೆಗೆ ನೋವು ಸಹಿಸ್ಕೊಳ್ಳೋಕೆ ಶಕ್ತಿ ಕೊಡ್ತಾನೆ. (ಫಿಲಿಪ್ಪಿ 4:6, 7, 13) ಸಹಾಯ ಮಾಡು ಅಂತ ಬೇಡ್ಕೊಳ್ಳೋ ಜನ್ರನ್ನ ದೇವರು ಕೈಬಿಡಲ್ಲ.—ಕೀರ್ತನೆ 55:22.

     ಹೀಗೆ ಮಾಡಿ: ಇವತ್ತೇ ದೇವರಿಗೆ ಪ್ರಾರ್ಥನೆ ಮಾಡಿ. ಯೆಹೋವ ಅನ್ನೋ ಆತನ ಹೆಸ್ರು ಕರೆದು ನಿಮ್ಮ ಮನಸ್ಸಲ್ಲಿ ಇರೋದನ್ನೆಲ್ಲ ಆತನಿಗೆ ಹೇಳಿ. (ಕೀರ್ತನೆ 83:18) ನೋವು ಸಹಿಸ್ಕೊಳ್ಳೋಕೆ ಶಕ್ತಿ ಕೊಡು ಅಂತ ಬೇಡ್ಕೊಳ್ಳಿ.

  • ಭವಿಷ್ಯದ ಬಗ್ಗೆ ಬೈಬಲ್‌ ಹೇಳೋ ಒಳ್ಳೆ ವಿಷ್ಯಗಳ ಬಗ್ಗೆ ಯೋಚಿಸಿ.

     ಬೈಬಲ್‌ ಏನು ಹೇಳುತ್ತೆ: “ಈ ನಿರೀಕ್ಷೆಯು ನಮ್ಮ ಪ್ರಾಣಕ್ಕೆ ಲಂಗರದಂತಿದ್ದು ನಿಶ್ಚಯವಾದದ್ದೂ ದೃಢವಾದದ್ದೂ ಆಗಿದೆ.”—ಇಬ್ರಿಯ 6:19.

     ಅದ್ರರ್ಥ: ತೂಫಾನಿಂದ ಏರುಪೇರು ಆಗೋ ಅಲೆಗಳ ತರ ನಿಮ್ಮ ಮನಸ್ಸಲ್ಲಿ ಒಮ್ಮೆ ಖುಷಿಯ ಅಲೆ ಬಂದ್ರೆ ಇನ್ನೊಂದು ಸಾರಿ ದುಃಖದ ಅಲೆ ಏಳುತ್ತೆ. ಆದ್ರೆ ಬೈಬಲ್‌ ಕೊಡೋ ನಿರೀಕ್ಷೆ ಮನಸ್ಸನ್ನ ಶಾಂತ ಮಾಡುತ್ತೆ.

     ಆ ನಿರೀಕ್ಷೆ ಕನಸಲ್ಲ. ಯಾಕಂದ್ರೆ ನಮಗೆ ನೋವು ಮಾಡೋ ವಿಷ್ಯಗಳನ್ನ ತೆಗೆದುಹಾಕ್ತೀನಿ ಅಂತ ದೇವರು ಮಾತು ಕೊಟ್ಟಿದ್ದಾನೆ.—ಪ್ರಕಟನೆ 21:4.

     ಹೀಗೆ ಮಾಡಿ: ದೇವರಿಂದ ನಿಮಗೊಂದು ಸಿಹಿಸುದ್ದಿ! ಅನ್ನೋ ಕಿರುಹೊತ್ತಗೆಯ ಪಾಠ 5 ರಲ್ಲಿ ಬೈಬಲ್‌ ಕೊಡೋ ನಿರೀಕ್ಷೆ ಹೆಚ್ಚಿನ ಮಾಹಿತಿ ಇದೆ.

  • ನಿಮಗೆ ಇಷ್ಟ ಆಗೋ ವಿಷ್ಯಗಳನ್ನ ಮಾಡಿ.

     ಬೈಬಲ್‌ ಏನು ಹೇಳುತ್ತೆ: “ಹರ್ಷಹೃದಯವು ಒಳ್ಳೇ ಔಷಧ.‏”—ಜ್ಞಾನೋಕ್ತಿ 17:22.

     ಅದ್ರರ್ಥ: ನಮಗೆ ಖುಷಿ ಕೊಡೋ ವಿಷ್ಯಗಳನ್ನ ಮಾಡಿದ್ರೆ ಮಾನಸಿಕ ಆರೋಗ್ಯ ಚೆನ್ನಾಗಿರುತ್ತೆ.

     ಹೀಗೆ ಮಾಡಿ: ನಿಮಗೆ ಹೆಚ್ಚು ಖುಷಿ ಕೊಡೋ ಅಂದ್ರೆ ಒಳ್ಳೇ ಮ್ಯೂಸಿಕ್‌ ಕೇಳೋದು, ಒಳ್ಳೇ ಪುಸ್ತಕಗಳನ್ನ ಓದೋದು ಅಥವಾ ನಿಮಗೆ ಇಷ್ಟ ಆಗೋ ಬೇರೆ ಯಾವುದಾದ್ರೂ ಕೆಲ್ಸ ಮಾಡಿ. ಬೇರೆಯವ್ರಿಗೆ ಸಹಾಯ ಮಾಡಿ, ಚಿಕ್ಕಪುಟ್ಟದಾದ್ರೂ ಪರ್ವಾಗಿಲ್ಲ. ಅದ್ರಿಂದ ನಿಮಗೆ ಖುಷಿ ಆಗುತ್ತೆ.—ಅಪೊಸ್ತಲರ ಕಾರ್ಯ 20:35.

  • ಆರೋಗ್ಯ ಕಾಪಾಡ್ಕೊಳ್ಳಿ.

     ಬೈಬಲ್‌ ಏನು ಹೇಳುತ್ತೆ: “ದೈಹಿಕ ತರಬೇತಿಯು ಸ್ವಲ್ಪಮಟ್ಟಿಗೆ ಪ್ರಯೋಜನಕರ.”—1 ತಿಮೊತಿ 4:8.

     ಅದ್ರರ್ಥ: ವ್ಯಾಯಾಮ, ಸಾಕಷ್ಟು ನಿದ್ದೆ, ಪೌಷ್ಠಿಕ ಊಟ ಮಾಡೋದು ತುಂಬಾ ಒಳ್ಳೇದು.

     ಹೀಗೆ ಮಾಡಿ: 15 ನಿಮಿಷ ಆದ್ರೂ ಚುರುಕಾಗಿ ವಾಕ್‌ ಮಾಡಿ.

  • ಅನಿಸಿಕೆಗಳು, ಬೇರೆ ವಿಷ್ಯಗಳು ಜೀವನದಲ್ಲಿ ಬದಲಾಗ್ತಾನೇ ಇರುತ್ತೆ.

     ಬೈಬಲ್‌ ಏನು ಹೇಳುತ್ತೆ: “ನಾಳೆ ನಿಮ್ಮ ಜೀವನವು ಹೇಗಿರುವುದು ಎಂಬುದು ನಿಮಗೆ ತಿಳಿದಿಲ್ಲ.‏”—ಯಾಕೋಬ 4:14.

     ಅದ್ರರ್ಥ: ಇವತ್ತು ಇರೋ ದೊಡ್ಡ ಸಮಸ್ಯೆ, ಸರಿನೇ ಆಗಲ್ಲ ಅಂತ ಕಾಣೋ ಸಮಸ್ಯೆ ನಾಳೆ ಇಲ್ಲದೆ ಹೋಗಬಹುದು.

     ದಾರಿನೇ ಕಾಣದಿರುವಾಗ ಇದ್ದಕ್ಕಿದ್ದ ಹಾಗೆ ಪರಿಸ್ಥಿತಿ ಬದಲಾಗಬಹುದು. ಹಾಗಾಗಿ ಸಮಸ್ಯೆಯನ್ನ ನಿಭಾಯಿಸೋಕೆ ಪ್ರಯತ್ನ ಮಾಡಿ. (2 ಕೊರಿಂಥ 4:8) ಕಷ್ಟ-ನೋವು ಇವತ್ತಲ್ಲ ನಾಳೆ ಸರಿ ಹೋಗುತ್ತೆ. ಆದ್ರೆ ಜೀವ ಕಳ್ಕೊಂಡ್ರೆ ಮತ್ತೆ ವಾಪಸ್‌ ಬರಲ್ಲ.

     ಹೀಗೆ ಮಾಡಿ: ಬೈಬಲಲ್ಲಿ ಕೂಡ ಕೆಲವರಿಗೆ ಎಷ್ಟು ಬೇಜಾರಾಗಿತ್ತು ಅಂದ್ರೆ ಸಾಯಬೇಕು ಅಂತ ಅನಿಸಿತ್ತು. ಆದ್ರೆ ಹೋಗ್ತಾ ಹೋಗ್ತಾ ಅವ್ರ ಜೀವನ ಬದಲಾಯ್ತು. ಹಾಗೆ ಬದಲಾಗುತ್ತೆ ಅಂತ ಅವರು ಕನಸು-ಮನಸ್ಸಲ್ಲೂ ಯೋಚಿಸಿರಲಿಲ್ಲ. ಅವ್ರಲ್ಲಿ ಕೆಲವ್ರ ಬಗ್ಗೆ ಇಲ್ಲಿದೆ. ಓದಿ ನೋಡಿ.

 ಬೈಬಲಲ್ಲಿ ದೇವರ ಸೇವಕರಿಗೆ ಕೂಡ ಸಾಯಬೇಕು ಅಂತ ಅನಿಸ್ತಿತ್ತಾ?

 ಹೌದು. ಸಾಯಬೇಕು ಅಂತ ಕೆಲವ್ರಿಗೆ ಅನಿಸಿದ್ರ ಬಗ್ಗೆ ಬೈಬಲಲ್ಲಿ ಇದೆ. ಆಗ ದೇವರು ಅವ್ರನ್ನ ಬೈಲಿಲ್ಲ. ಬದ್ಲಿಗೆ ಅವ್ರಲ್ಲಿ ಧೈರ್ಯ ತುಂಬಿ ಸಹಾಯ ಮಾಡಿದನು. ನಿಮಗೂ ಸಹಾಯ ಮಾಡ್ತಾನೆ.

ಎಲೀಯ

  •  ಎಲೀಯ ಯಾರು? ಅವನು ತುಂಬ ಧೈರ್ಯ ಇದ್ದ ಪ್ರವಾದಿ. ಅವನಿಗೂ ಕೆಲವೊಮ್ಮೆ ತುಂಬ ಬೇಜಾರು, ಭಯ ಆಗಿತ್ತು. “ಎಲೀಯನು ನಮ್ಮಂಥ ಭಾವನೆಗಳಿದ್ದ ಮನುಷ್ಯನಾಗಿದ್ದ” ಅಂತ ಯಾಕೋಬ 5:17 ಹೇಳುತ್ತೆ.

  •  ಅವನಿಗೆ ಯಾಕೆ ಸಾಯಬೇಕಂತ ಅನಿಸ್ತು? ಒಮ್ಮೆ ಎಲೀಯನಿಗೆ ತುಂಬ ಭಯ ಆಯ್ತು, ಅವನಿಗೆ ಯಾರೂ ಇಲ್ಲ ಅಂತನಿಸ್ತು, ಕೆಲಸಕ್ಕೆ ಬಾರದವನು ಅಂತ ಅನಿಸ್ತು. ಅದಿಕ್ಕೆ ಅವನು “ಯೆಹೋವನೇ, ನನಗೆ ಸಾಕಾಯಿತು; ನನ್ನ ಪ್ರಾಣವನ್ನು ತೆಗೆದುಬಿಡು” ಅಂತ ದೇವರ ಹತ್ರ ಬೇಡ್ಕೊಂಡ.—1 ಅರಸು 19:4.

  •  ಅವನಿಗೆ ದೇವರು ಹೇಗೆ ಸಹಾಯ ಮಾಡಿದನು? ತನ್ನ ಮನಸ್ಸಲ್ಲಿ ಇರೋದನ್ನೆಲ್ಲ ಎಲೀಯ ದೇವರ ಹತ್ರ ಹೇಳ್ಕೊಂಡ. ಆಗ ದೇವರು ಏನು ಮಾಡಿದನು? ದೇವರು ಅವನಿಗೆ ಗಮನ ಕೊಟ್ಟನು, ತನಗೆಷ್ಟು ಶಕ್ತಿ ಇದೆ ಅಂತ ತೋರಿಸಿದನು. ಎಲೀಯ ತನಗೆ ಬೇಕಾದವನು ಅಂತ ದೇವರು ಆಶ್ವಾಸನೆ ಕೊಟ್ಟನು. ಅಷ್ಟೇ ಅಲ್ಲ, ಅವನಿಗೆ ಆ ಸಮಯದಲ್ಲಿ ಬೇಕಾಗಿದ್ದನ್ನ ಕೊಟ್ಟನು.

  •  ಎಲೀಯ ಬಗ್ಗೆ ಓದಿ: 1 ಅರಸು 19:2-18.

ಯೋಬ

  •  ಯೋಬ ಯಾರು? ಯೋಬ ಶ್ರೀಮಂತ ವ್ಯಕ್ತಿ ಆಗಿದ್ದ. ದೊಡ್ಡ ಕುಟುಂಬ ಇತ್ತು. ಸತ್ಯ ದೇವರನ್ನ ನಿಯತ್ತಿನಿಂದ ಆರಾಧಿಸ್ತಿದ್ದ.

  •  ಅವನಿಗೆ ಯಾಕೆ ಸಾಯಬೇಕಂತ ಅನಿಸ್ತು? ಯೋಬನ ಜೀವನ ಇದ್ದಕ್ಕಿದ್ದ ಹಾಗೆ ಅಲ್ಲೋಲ್ಲ-ಕಲ್ಲೋಲ ಆಯ್ತು. ಆಸ್ತಿಯನ್ನೆಲ್ಲ ಕಳ್ಕೊಂಡ. ಒಂದು ವಿಪತ್ತಿನಲ್ಲಿ ಅವನ ಮಕ್ಕಳೆಲ್ಲ ತೀರಿಹೋದ್ರು. ತುಂಬ ನೋವು ಕೊಡೋ ಕಾಯಿಲೆ ಬಂತು. ಕೊನೆಗೆ, ಬೇರೆಯವರು ಸ್ವಲ್ಪನೂ ಕರುಣೆ ಇಲ್ಲದೆ ಅವನ ಕಷ್ಟಗಳಿಗೆ ಅವನೇ ಕಾರಣ ಅಂತ ಆರೋಪ ಹಾಕಿದ್ರು. ಆಗ ಯೋಬ “ನಾನು ಬೇಸರಗೊಂಡಿದ್ದೇನೆ, ನಿತ್ಯವಾಗಿ ಬದುಕುವದಕ್ಕೆ ಇಷ್ಟವಿಲ್ಲ” ಅಂದ.—ಯೋಬ 7:16.

  •  ಅವನಿಗೆ ದೇವರು ಹೇಗೆ ಸಹಾಯ ಮಾಡಿದನು? ಅವನು ದೇವರಿಗೆ ಪ್ರಾರ್ಥನೆ ಮಾಡಿದ, ಬೇರೆಯವ್ರ ಹತ್ರನೂ ಮಾತಾಡಿದ. (ಯೋಬ 10:1-3) ಒಳ್ಳೇ ಫ್ರೆಂಡ್‌ ಆಗಿದ್ದ ಎಲೀಹು ಯೋಬನಿಗೆ ಧೈರ್ಯ ತುಂಬಿದ. ಅವನ ಪರಿಸ್ಥಿತಿಯ ಬಗ್ಗೆ ಸರಿಯಾದ ರೀತೀಲಿ ಯೋಚ್ನೆ ಮಾಡೋಕೆ ಸಹಾಯ ಮಾಡಿದ. ಮುಖ್ಯವಾಗಿ ದೇವರು ಕೊಟ್ಟ ಬುದ್ಧಿವಾದವನ್ನ, ಸಹಾಯವನ್ನ ಸ್ವೀಕರಿಸಿದ.

  •  ಯೋಬ ಬಗ್ಗೆ ಓದಿ: ಯೋಬ 1:1-3, 13-22; 2:7; 3:1-13; 36:1-7; 38:1-3; 42:1, 2, 10-13.

ಮೋಶೆ

  •  ಮೋಶೆ ಯಾರು? ಮೋಶೆ ಹಿಂದಿನ ಕಾಲದಲ್ಲಿ ಇಸ್ರಾಯೇಲ್ಯರ ನಾಯಕ. ದೇವರ ನಂಬಿಗಸ್ತ ಪ್ರವಾದಿ.

  •  ಅವನಿಗೆ ಯಾಕೆ ಸಾಯಬೇಕಂತ ಅನಿಸ್ತು? ಮೋಶೆ ಮೇಲೆ ತುಂಬ ಜವಾಬ್ದಾರಿ ಇತ್ತು. ಜನ್ರು ಅವನಲ್ಲಿ ತಪ್ಪು ಹುಡುಕ್ತಾ ಇದ್ರು. ಅವನಿಗೆ ಸಾಕಾಗಿ ಹೋಗಿತ್ತು. ಆಗ ಅವನು “ನನ್ನನ್ನು ಈಗಲೇ ಕೊಂದುಹಾಕಿಬಿಟ್ಟರೆ ಉಪಕಾರ” ಅಂತ ದೇವರಿಗೆ ಹೇಳಿದ.—ಅರಣ್ಯಕಾಂಡ 11:11, 15.

  •  ಅವನಿಗೆ ದೇವರು ಹೇಗೆ ಸಹಾಯ ಮಾಡಿದನು? ಮೋಶೆ ತನಗೆ ಅನಿಸಿದ್ದನ್ನೆಲ್ಲ ದೇವರ ಹತ್ರ ಹೇಳ್ಕೊಂಡ. ಆಗ ದೇವರು ಅವನ ಕೆಲಸಗಳನ್ನ ಕಮ್ಮಿ ಮಾಡಿ, ಒತ್ತಡ ಕಡಿಮೆ ಮಾಡಿದನು.

  •  ಮೋಶೆ ಬಗ್ಗೆ ಓದಿ: ಅರಣ್ಯಕಾಂಡ 11:4-6, 10-17.

a ಸಾಯಬೇಕು ಅನ್ನೋ ಯೋಚ್ನೆ ಮತ್ತೆ ಮತ್ತೆ ಬರ್ತಿದ್ರೆ, ಯಾರೂ ಮಾತಾಡೋಕೆ ಸಿಕ್ತಿಲ್ಲಾಂದ್ರೆ ಎಮರ್ಜೆಂನ್ಸಿ ನಂಬರಿಗೆ ಕರೆ ಮಾಡಿ.