‘ಕೊನೇ ದಿನಗಳ’ ಅಥವಾ ‘ಅಂತ್ಯಕಾಲದ’ ಸೂಚನೆಗಳೇನು?
ಬೈಬಲ್ ಕೊಡೋ ಉತ್ತರ
ಈ ಲೋಕದಲ್ಲಿ ಇರೋ ಕೆಟ್ಟ ವಿಷ್ಯಗಳ ಅಂತ್ಯದ ಸಮಯದಲ್ಲಿ ಭೂಮಿ ಮೇಲೆ ಏನೆಲ್ಲಾ ನಡಿಯುತ್ತೆ ಅಂತ ಬೈಬಲ್ ವಿವರಿಸುತ್ತೆ. (ಮತ್ತಾಯ 24:3) ಆ ಕಾಲವನ್ನು ಬೈಬಲ್ ‘ಕೊನೇ ದಿನಗಳು’ ಅಥವಾ ‘ಅಂತ್ಯಕಾಲ’ ಅಂತ ಕರಿಯುತ್ತೆ.—2 ತಿಮೊತಿ 3:1; ದಾನಿಯೇಲ 8:19
“ಕೊನೇ ದಿನಗಳ” ಬಗ್ಗೆ ಬೈಬಲ್ನಲ್ಲಿರೋ ಕೆಲವು ಭವಿಷ್ಯವಾಣಿಗಳು ಯಾವುವು?
ಕೊನೇ ದಿನಗಳನ್ನ ಗುರುತಿಸೋಕೆ ಇರೋ ಸೂಚನೆಗಳ ಬಗ್ಗೆ ಬೈಬಲ್ ಮುಂಚಿತವಾಗಿ ಹೇಳಿದೆ. (ಲೂಕ 21:7) ಉದಾಹರಣೆಗೆ:
ದೊಡ್ಡ-ದೊಡ್ಡ ಯುದ್ಧಗಳಾಗುತ್ತೆ. “ಜನ್ರ ಮೇಲೆ ಜನ್ರು ಆಕ್ರಮಣ ಮಾಡ್ತಾರೆ. ಒಂದು ದೇಶ ಇನ್ನೊಂದು ದೇಶದ ಮೇಲೆ ಯುದ್ಧಮಾಡುತ್ತೆ” ಅಂತ ಯೇಸು ಹೇಳಿದನು. (ಮತ್ತಾಯ 24:7) ‘ಭೂಮಿಯಿಂದ ಶಾಂತಿ ತೆಗೆದುಹಾಕೋ’ ಒಬ್ಬ ಸಾಂಕೇತಿಕ ಕುದುರೆ ಸವಾರನ ಬಗ್ಗೆ ಪ್ರಕಟನೆ 6:4 ಹೇಳುತ್ತೆ.
ಆಹಾರದ ಕೊರತೆ. “ಆಹಾರದ ಕೊರತೆ ಇರುತ್ತೆ” ಅಂತ ಯೇಸು ಹೇಳಿದನು. (ಮತ್ತಾಯ 24:7) ಪ್ರಕಟನೆ ಪುಸ್ತಕದಲ್ಲಿ ಇನ್ನೊಬ್ಬ ಸಾಂಕೇತಿಕ ಕುದುರೆ ಸವಾರನ ಬಗ್ಗೆ ಇದೆ. ಅವನು ಸವಾರಿ ಮಾಡೋದ್ರಿಂದ ಹೆಚ್ಚಿನ ಕಡೆಗಳಲ್ಲಿ ಆಹಾರದ ಕೊರತೆ ಇರುತ್ತೆ ಅಂತ ಆ ಪುಸ್ತಕದಲ್ಲಿದೆ.—ಪ್ರಕಟನೆ 6:5, 6.
ಮಹಾ ಭೂಕಂಪಗಳಾಗುತ್ತೆ. ‘ಒಂದರ ನಂತ್ರ ಇನ್ನೊಂದು ಸ್ಥಳದಲ್ಲಿ ಭೂಕಂಪಗಳು ಆಗುತ್ತೆ’ ಅಂತ ಯೇಸು ಹೇಳಿದನು. (ಮತ್ತಾಯ 24:7; ಲೂಕ 21:11) ಲೋಕದಲ್ಲಿ ಬೇರೆಬೇರೆ ಕಡೆ ಮಹಾ ಭೂಕಂಪಗಳಿಂದ ಕಷ್ಟ, ನೋವು ಮತ್ತು ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತೆ.
ಅಂಟುರೋಗಗಳು. ‘ಭಯಾನಕ ಅಂಟುರೋಗಗಳು’ ಇರುತ್ತೆ ಅಂತ ಯೇಸು ಹೇಳಿದನು.—ಲೂಕ 21:11.
ಅಪರಾಧ. ನೂರಾರು ವರ್ಷಗಳಿಂದ ಅಪರಾಧಗಳು ನಡಿಯುತ್ತಾ ಇದ್ರೂ ಈ ಕೊನೇ ದಿನಗಳಲ್ಲಿ ‘ಕೆಟ್ಟತನ ಹೆಚ್ಚಾಗುತ್ತೆ’ ಅಂತ ಯೇಸು ಹೇಳಿದನು.—ಮತ್ತಾಯ 24:12.
ಮನುಷ್ಯರು ಭೂಮಿಯನ್ನ ನಾಶ ಮಾಡ್ತಾರೆ. ಪ್ರಕಟನೆ 11:18ರಲ್ಲಿ ಜನರು ‘ಭೂಮಿಯನ್ನ ನಾಶಮಾಡ್ತಾರೆ’ ಅಂತ ಹೇಳುತ್ತೆ. ಅವರು ಭ್ರಷ್ಟಾಚಾರ, ಅಪರಾಧ ಮಾಡೋದ್ರ ಜೊತೆಗೆ ಪರಿಸರವನ್ನೂ ಹಾಳು ಮಾಡ್ತಿದ್ದಾರೆ.
ಜನರು ತುಂಬ ಕೆಟ್ಟವರಾಗಿ ಇರುತ್ತಾರೆ. ಜನರು, ‘ಮಾಡಿದ ಉಪಕಾರ ಮರೆತುಬಿಡುವವರು, ನಂಬಿಕೆದ್ರೋಹ ಮಾಡುವವರು, . . . ಯಾವುದಕ್ಕೂ ಒಪ್ಪದವರು, ಬೇರೆಯವ್ರ ಹೆಸ್ರು ಹಾಳು ಮಾಡುವವರು, ತಮ್ಮನ್ನ ಹತೋಟಿಯಲ್ಲಿ ಇಟ್ಕೊಳ್ಳದವರು, ಉಗ್ರರು, ಒಳ್ಳೇದನ್ನ ದ್ವೇಷಿಸುವವರು, ಮಿತ್ರದ್ರೋಹಿಗಳು, ಹಠಮಾರಿಗಳು, ಜಂಬದಿಂದ ಉಬ್ಬಿದವರು’ ಆಗಿರುತ್ತಾರೆ ಅಂತ 2 ತಿಮೊತಿ 3:1-4 ಹೇಳುತ್ತೆ. ಈ ಕೆಟ್ಟ ಗುಣಗಳು ಜನರಲ್ಲಿ ಜಾಸ್ತಿ ಆಗುವಾಗ “ಕೊನೇ ದಿನಗಳಲ್ಲಿ ಪರಿಸ್ಥಿತಿ ತುಂಬ ಹದಗೆಡುತ್ತೆ” ಅಂತ ಗೊತ್ತಾಗುತ್ತೆ.
ಕುಟುಂಬಗಳು ಒಡೆದು ಹೋಗುತ್ತೆ. 2 ತಿಮೊತಿ 3:2, 3ರಲ್ಲಿ, ಜನರು ‘ಕುಟುಂಬದವರನ್ನ ಪ್ರೀತಿಸಲ್ಲ’ ಮತ್ತು ಮಕ್ಕಳು ‘ಅಪ್ಪಅಮ್ಮನ ಮಾತು ಕೇಳಲ್ಲ’ ಅಂತ ಇದೆ.
ತುಂಬ ಜನರಿಗೆ ದೇವರ ಮೇಲೆ ಪ್ರೀತಿ ಇರಲ್ಲ. “ತುಂಬ ಜನ್ರ ಪ್ರೀತಿ ತಣ್ಣಗಾಗುತ್ತೆ” ಅಂತ ಯೇಸು ಹೇಳಿದನು. (ಮತ್ತಾಯ 24:12) ಇದರರ್ಥ ತುಂಬ ಜನರಿಗೆ ದೇವರ ಮೇಲಿರೋ ಪ್ರೀತಿ ತಣ್ಣಗಾಗುತ್ತೆ. ಅದೇ ರೀತಿ, ‘ದೇವರನ್ನ ಪ್ರೀತಿಸದೆ ತಮ್ಮ ಆಸೆಗಳನ್ನ ತೀರಿಸ್ಕೊಳ್ಳೋರು’ ಈ ಕೊನೇ ದಿನಗಳಲ್ಲಿ ಇರ್ತಾರೆ ಅಂತ 2 ತಿಮೊತಿ 3:4 ಹೇಳುತ್ತೆ.
ದೇವಭಕ್ತಿಯ ವೇಷ ಇರೋರು. ದೇವರ ಮೇಲೆ ತುಂಬ ಭಕ್ತಿ ಇದೆ ಅನ್ನೋ ತರ ಜನರು ನಾಟಕ ಆಡ್ತಾರೆ ಅಂತ 2 ತಿಮೊತಿ 3:5 ಹೇಳುತ್ತೆ.
ಬೈಬಲ್ ಭವಿಷ್ಯವಾಣಿಗಳ ಸರಿಯಾದ ಅರ್ಥ ಗೊತ್ತಾಗುತ್ತೆ. ಕೊನೇ ದಿನಗಳಲ್ಲಿ ಬೈಬಲ್ನಲ್ಲಿರೋ ವಿಷಯಗಳನ್ನ ಜನರು ಸರಿಯಾಗಿ ಅರ್ಥ ಮಾಡಿಕೊಳ್ತಾರೆ ಅಂತ ದಾನಿಯೇಲ ಪುಸ್ತಕ ಹೇಳುತ್ತೆ. ಅದರಲ್ಲೂ ಭವಿಷ್ಯವಾಣಿಗಳ ಬಗ್ಗೆ ಸರಿಯಾದ ಅರ್ಥವನ್ನ ತಿಳಿದುಕೊಳ್ತಾರೆ ಅಂತನೂ ಇದೆ.—ದಾನಿಯೇಲ 12:4
ಲೋಕವ್ಯಾಪಕವಾಗಿ ಸಿಹಿಸುದ್ದಿ ಸಾರೋದು. “ದೇವರ ಆಳ್ವಿಕೆಯ ಈ ಸಿಹಿಸುದ್ದಿ ಲೋಕದಲ್ಲಿ ಇರೋ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುತ್ತೆ” ಅಂತ ಯೇಸು ಹೇಳಿದನು.—ಮತ್ತಾಯ 24:14.
ಗೇಲಿ ಮಾಡೋದು ಹೆಚ್ಚಾಗುತ್ತೆ. ಅಂತ್ಯ ತುಂಬ ಹತ್ರ ಇದೆ ಅನ್ನೋದಕ್ಕೆ ಪುರಾವೆಗಳು ಜನ್ರ ಕಣ್ಮುಂದೆ ಇದ್ರೂ ಅದನ್ನ ನಂಬದೆ ಗೇಲಿ ಮಾಡ್ತಾರೆ ಅಂತ ಯೇಸು ಹೇಳಿದನು. (ಮತ್ತಾಯ 24:37-39) ಜನರ ಮುಂದೆ ಒಳ್ಳೇ ವಿಷಯಗಳು ನಡಿತಾ ಇದ್ರೂ ಅದನ್ನ ನೋಡಿ ನಗ್ತಾರೆ ಅಂತ 2 ಪೇತ್ರ 3:3, 4 ಹೇಳುತ್ತೆ.
ಎಲ್ಲಾ ಭವಿಷ್ಯವಾಣಿಗಳ ನೆರವೇರಿಕೆ. ಕೊನೇ ದಿನಗಳ ಬಗ್ಗೆ ಬೈಬಲಿನಲ್ಲಿ ತಿಳಿಸಿರೋ ಈ ಎಲ್ಲ ಭವಿಷ್ಯವಾಣಿಗಳು ಒಟ್ಟಿಗೆ ಒಂದೇ ಸಮಯದಲ್ಲಿ ನಡೆಯುತ್ತೆ ಅಂತ ಯೇಸು ಹೇಳಿದನು.—ಮತ್ತಾಯ 24:33.
ನಾವು “ಕೊನೇ ದಿನಗಳಲ್ಲಿ” ಜೀವಿಸ್ತಿದ್ದೀವಾ?
ಹೌದು. ಭೂಮಿ ಮೇಲೆ ನಡಿತಿರೋ ಘಟನೆಗಳು ಮತ್ತು ಬೈಬಲಲ್ಲಿ ತಿಳಿಸಿರೋ ಭವಿಷ್ಯವಾಣಿಗಳನ್ನು ನೋಡಿದ್ರೆ ಅಂತ್ಯಕಾಲ ಇಸವಿ 1914ರಲ್ಲಿ ಶುರು ಆಯ್ತು ಅಂತ ಗೊತ್ತಾಗುತ್ತೆ. ಅದೇ ವರ್ಷ ಮೊದಲನೆಯ ಲೋಕ ಯುದ್ಧ ಕೂಡ ಶುರು ಆಯ್ತು. ನಾವು ಕೊನೇ ದಿನಗಳಲ್ಲಿ ಜೀವಿಸುತ್ತಿದ್ದೇವೆ ಅಂತ ನಮಗೆ ಲೋಕದ ಪರಿಸ್ಥಿತಿಗಳಿಂದ ಹೇಗೆ ಗೊತ್ತಾಗುತ್ತೆ ಅಂತ ತಿಳಿಯಲು ಈ ಮುಂದಿನ ವಿಡಿಯೋವನ್ನ ನೋಡಿ:
1914ರಲ್ಲಿ, ದೇವರ ಸರ್ಕಾರ ಸ್ವರ್ಗದಲ್ಲಿ ಆಳೋಕೆ ಶುರು ಮಾಡ್ತು, ಆಗ ದೇವರು ಸೈತಾನನನ್ನ ಮತ್ತು ಅವನನ್ನ ಬೆಂಬಲಿಸ್ತಿದ್ದ ಕೆಟ್ಟ ದೇವದೂತರನ್ನ ಸ್ವರ್ಗದಿಂದ ಭೂಮಿಗೆ ದೊಬ್ಬಿದನು. (ಪ್ರಕಟನೆ 12:7-12) ಆ ಸೈತಾನನೇ ಇವತ್ತು ಕೆಟ್ಟ ಕೆಲಸಗಳನ್ನು ಮಾಡೋಕೆ ಜನ್ರಿಗೆ ಬೆಂಬಲ ಕೊಡ್ತಿದ್ದಾನೆ. ಇದ್ರಿಂದ ‘ಕೊನೇ ದಿನಗಳಲ್ಲಿ ಪರಿಸ್ಥಿತಿ ತುಂಬ ಹದಗೆಡುತ್ತಿದ್ದೆ’ ಅಂತ ಗೊತ್ತಾಗುತ್ತೆ.—2 ತಿಮೊತಿ 3:1.
ಕೊನೇ ದಿನಗಳಲ್ಲಿ ಪರಿಸ್ಥಿತಿ ತುಂಬ ಹದಗೆಡ್ತಾ ಇರೋದ್ರಿಂದ ತುಂಬ ಜನರು ಬೇಜಾರಲ್ಲಿದ್ದಾರೆ. ದಿನದಿಂದ ದಿನ ಸಮಾಜ ಹದಗೆಡ್ತಾ ಇರೋದನ್ನ ನೋಡಿ ಜನರು ಚಿಂತೆಯಲ್ಲಿ ಇದ್ದಾರೆ. ಮಾನವಕುಲನೇ ಅಳಿದು ಹೋಗಿಬಿಡುತ್ತೆ ಅಂತ ಕೆಲವರು ಭಯಪಡ್ತಾರೆ.
ಆದರೆ ಇನ್ನೂ ಕೆಲವರು ಈ ಕಷ್ಟಗಳ ಮಧ್ಯನೂ ಭವಿಷ್ಯದ ಬಗ್ಗೆ ಒಳ್ಳೇ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ದೇವರ ಸರ್ಕಾರ ಬೇಗನೆ ಎಲ್ಲಾ ಸಮಸ್ಯೆಗಳನ್ನ ತೆಗೆದು ಹಾಕುತ್ತೆ ಅನ್ನೋ ನಂಬಿಕೆ ಅವರಿಗಿದೆ. (ದಾನಿಯೇಲ 2:44; ಪ್ರಕಟನೆ 21:3, 4) ದೇವರು ತಾನು ಕೊಟ್ಟ ಮಾತನ್ನ ನೆರವೇರಿಸೋಕೆ ಅವರು ತಾಳ್ಮೆಯಿಂದ ಕಾಯ್ತಾ ಇದ್ದಾರೆ. “ಕೊನೆ ತನಕ ತಾಳ್ಕೊಳ್ಳುವವನಿಗೆ ರಕ್ಷಣೆ ಸಿಗುತ್ತೆ” ಅನ್ನೋ ಯೇಸುವಿನ ಮಾತಿನಲ್ಲಿ ಅವರು ನೆಮ್ಮದಿಯನ್ನ ಕಂಡುಕೊಂಡಿದ್ದಾರೆ.—ಮತ್ತಾಯ 24:13; ಮೀಕ 7:7.