ಮಾಹಿತಿ ಇರುವಲ್ಲಿ ಹೋಗಲು

ಬೈಬಲ್‌ ಅಂದ್ರೆ ಏನು?

ಬೈಬಲ್‌ ಅಂದ್ರೆ ಏನು?

 ಬೈಬಲ್‌ ಬಗ್ಗೆ ಮಾಹಿತಿ

  •   ಬೈಬಲನ್ನ ಯಾರು ಬರೆದರು? ಬೈಬಲನ್ನ ಬರೆಸಿದ್ದು ದೇವರೇ. ಆತನು 40 ಪುರುಷರನ್ನ ಬಳಸುತ್ತಾ ಬೈಬಲನ್ನ ಬರೆಸಿದನು. ಈ ಪುರುಷರಲ್ಲಿ ಕೆಲವರು ಯಾರೆಂದರೆ ಮೋಶೆ, ರಾಜ ದಾವೀದ, ಮತ್ತಾಯ, ಮಾರ್ಕ, ಲೂಕ ಹಾಗೂ ಯೋಹಾನ. aದೇವರು ತನ್ನ ಆಲೋಚನೆಯನ್ನ ಈ 40 ಜನರ ಮನಸ್ಸಲ್ಲಿ ಹಾಕಿ ಬೈಬಲನ್ನ ಬರೆಸಿದನು.—2 ತಿಮೊತಿ 3:16.

     ಉದಾಹರಣೆಗೆ: ಒಬ್ಬ ಮ್ಯಾನೆಜರ್‌ ಒಂದು ಪ್ರಾಮುಖ್ಯ ಪತ್ರವನ್ನ ಬರೆಯಲು ತನ್ನ ಸೆಕ್ರೆಟರಿಯನ್ನ ಬಳಸುತ್ತಾನೆ. ಯಾವ ವಿಷಯವನ್ನ ಬರೆಯಬೇಕಂತ ಮ್ಯಾನೆಜರ್‌ ತನ್ನ ಸೆಕ್ರೆಟರಿಗೆ ಹೇಳುತ್ತಾನೆ ಹಾಗೂ ಅದನ್ನೆ ಸೆಕ್ರೆಟರಿ ಬರೆಯುತ್ತಾನೆ. ಅದನ್ನು ಬರೆದದ್ದು ಸೆಕ್ರೆಟರಿ ಆದರೂ ಅದರಲ್ಲಿದ್ದ ಯೋಚನೆ ಅವನದ್ದಲ್ಲ. ಅದೇ ತರ ದೇವರು ಹೇಳಿದ್ದನ್ನೇ ಮನುಷ್ಯರು ಬರೆದರು. ಹಾಗಾಗಿ ಬೈಬಲ್‌ ದೇವರೇ ಬರೆಸಿದ ಪುಸ್ತಕ.

  •   “ಬೈಬಲ್‌” ಅನ್ನೋ ಪದದ ಅರ್ಥ ಏನು? “ಬೈಬಲ್‌” ಅನ್ನೋ ಪದ ಬಿಬ್ಲಿಯಾ ಅನ್ನೋ ಗ್ರೀಕ್‌ ಪದದಿಂದ ಬಂದಿದೆ, ಇದರ ಅರ್ಥ “ಚಿಕ್ಕ ಚಿಕ್ಕ ಪುಸ್ತಕಗಳು”. ಸಮಯ ಕಳೆದ ಹಾಗೆ, ಬೈಬಲ್‌ನಲ್ಲಿರುವ ಎಲ್ಲಾ ಚಿಕ್ಕ ಪುಸ್ತಕಗಳನ್ನು ಒಟ್ಟಾಗಿ ಸೇರಿಸಿ ಬಿಬ್ಲಿಯಾ ಅಂತ ಕರೆಯೋಕೆ ಪ್ರಾರಂಭಿಸಿದರು.

  •   ಬೈಬಲನ್ನ ಯಾವಾಗ ಬರೆಯಲಾಯ್ತು? ಬೈಬಲನ್ನ ಕ್ರಿ.ಪೂ. 1513 ರಲ್ಲಿ ಬರೆಯೋಕೆ ಶುರುಮಾಡಿ, 1600 ವರ್ಷಗಳಾದ ಮೇಲೆ ಅಂದ್ರೆ ಕ್ರಿ.ಶ. 98 ರಲ್ಲಿ ಬರೆದು ಮುಗಿಸಲಾಯ್ತು.

  •   ಬೈಬಲಿನ ಮೂಲಪ್ರತಿ ಎಲ್ಲಿದೆ? ನಮಗೆ ತಿಳಿದಿರುವಂತೆ ಕೈಯಿಂದ ಬರೆದ ಮೂಲ ಪ್ರತಿಗಳು ಇಂದು ಅಸ್ತಿತ್ವದಲ್ಲಿಲ್ಲ. ಯಾಕೆಂದರೆ ಆರಂಭದಲ್ಲಿ ಬೈಬಲನ್ನ ಆಗಿನ ಸಮಯದಲ್ಲಿ ಸಿಗುತ್ತಿದ್ದ ಪಪೈರಸ್‌ ಮತ್ತು ಪ್ರಾಣಿಗಳ ಚರ್ಮದ ಮೇಲೆ ಬರೆದರು, ಅದು ಬೇಗ ಹಾಳಾಗುತ್ತಿತ್ತು. ಅದಕ್ಕೆ ವಿದ್ವಾಂಸರು (ನಕಲುಗಾರರು) ಮುಂದಿನ ಪೀಳಿಗೆಯವರು ಬೈಬಲನ್ನ ಓದಲು, ಅದರ ಮಾಹಿತಿಯನ್ನ ಇದ್ದ ಹಾಗೆ ನಕಲು ಮಾಡ್ತಾ ಇದ್ದರು.

  •   “ಹಳೆಯ ಒಡಂಬಡಿಕೆ” ಹಾಗೂ “ಹೊಸ ಒಡಂಬಡಿಕೆ” ಅಂದ್ರೇನು? ಹೀಬ್ರು b ಭಾಷೆಯಲ್ಲಿ ಬರೆಯಲಾದ ಬೈಬಲ್‌ ಭಾಗವನ್ನ ಹಳೆಯ ಒಡಂಬಡಿಕೆ ಅಂತ ಕರೆಯುತ್ತಾರೆ. ಅದನ್ನ ಹೀಬ್ರು ಪುಸ್ತಕಗಳು ಅಂತಾನೂ ಕರೆಯುತ್ತಾರೆ. ಗ್ರೀಕ್‌ ಭಾಷೆಯಲ್ಲಿ ಬರೆಯಲಾದ ಬೈಬಲ್‌ ಭಾಗವನ್ನ ಹೊಸ ಒಡಂಬಡಿಕೆ ಅಂತ ಕರೆಯುತ್ತಾರೆ, ಇದನ್ನು ಕ್ರೈಸ್ತ ಗ್ರೀಕ್‌ ಪುಸ್ತಕಗಳು ಅಂತಾನೂ ಕರೆಯುತ್ತಾರೆ. ಎರಡು ಭಾಗಗಳನ್ನ ಒಟ್ಟು ಸೇರಿಸಿ ಅದನ್ನ ಪವಿತ್ರ ಬೈಬಲ್‌ c ಅಂತ ಕರೆಯುತ್ತಾರೆ.

  •   ಬೈಬಲಿನಲ್ಲಿ ಏನಿದೆ? ಬೈಬಲಿನಲ್ಲಿ ಇತಿಹಾಸ, ನಿಯಮಗಳು, ಭವಿಷ್ಯವಾಣಿಗಳು, ಕವಿತೆಗಳು, ಗಾದೆಗಳು, ಹಾಡುಗಳು ಮತ್ತು ಪತ್ರಗಳು ಇವೆ.—“ ಬೈಬಲ್‌ ಪುಸ್ತಕಗಳ ಪಟ್ಟಿ” ನೋಡಿ.

 ಬೈಬಲಿನಲ್ಲಿ ಯಾವೆಲ್ಲಾ ವಿಷಯ ಇದೆ?

 ಸರ್ವಶಕ್ತ ದೇವರು ಆಕಾಶ ಹಾಗೂ ಭೂಮಿಯನ್ನ ಹೇಗೆ ಸೃಷ್ಟಿಸಿದನು ಅಂತ ವಿವರಿಸುತ್ತಾ ಬೈಬಲ್‌ ಆರಂಭವಾಗುತ್ತೆ. ಎಲ್ಲರೂ ತನ್ನ ಬಗ್ಗೆ ತಿಳಿದುಕೊಳ್ಳಬೇಕಂತ ದೇವರು ಇಷ್ಟಪಡ್ತಾನೆ. ಅದಕ್ಕೆ ತನ್ನ ಹೆಸರು ಯೆಹೋವ ಅಂತ ಬೈಬಲಿನಲ್ಲಿ ಬರೆಸಿ ತನ್ನನ್ನೇ ಪರಿಚಯಿಸಿಕೊಂಡಿದ್ದಾನೆ.—ಕೀರ್ತನೆ 83:18.

 ದೇವರು ತನ್ನ ಹೆಸರಿನ ಮೇಲೆ ಬಂದಿರೋ ನಿಂದೆಯನ್ನು ಹೇಗೆ ತೆಗೆದುಹಾಕುತ್ತಾನೆ ಅಂತ ಬೈಬಲಿನಲ್ಲಿದೆ.

 ಮನುಷ್ಯರಿಗಾಗಿ ಹಾಗೂ ಭೂಮಿಗಾಗಿ ದೇವರ ಉದ್ದೇಶವೇನು ಅಂತ ಬೈಬಲ್‌ ಸ್ಪಷ್ಟವಾಗಿ ತಿಳಿಸುತ್ತೆ. ಮನುಷ್ಯರ ದುಃಖಕ್ಕೆ ಕಾರಣವಾಗಿರೋ ಎಲ್ಲಾ ವಿಷಯಗಳನ್ನ ದೇವರು ಹೇಗೆ ತೆಗೆದುಹಾಕುತ್ತಾನೆ ಅಂತನೂ ಬೈಬಲ್‌ ಹೇಳುತ್ತೆ.

 ನಮ್ಮ ದಿನನಿತ್ಯ ಜೀವನಕ್ಕೆ ಬೇಕಾಗಿರೋ ಸಲಹೆಗಳೂ ಬೈಬಲಿನಲ್ಲಿದೆ. ಉದಾಹರಣೆಗೆ:

  •   ಎಲ್ಲರ ಜೊತೆ ಒಳ್ಳೆ ಸಂಬಂಧ ಹೇಗೆ ಕಾಪಾಡಿಕೊಳ್ಳೋದು. “ಹಾಗಾಗಿ ಜನ ನಿಮಗೆ ಏನು ಮಾಡಬೇಕಂತ ಇಷ್ಟಪಡ್ತೀರೋ ಅದನ್ನೇ ಅವ್ರಿಗೆ ಮಾಡಿ.”—ಮತ್ತಾಯ 7:12.

     ಅರ್ಥ: ಬೇರೆಯವರು ನಮ್ಮ ಜೊತೆ ಹೇಗೆ ನಡ್ಕೋಬೇಕಂತ ನಾವು ಇಷ್ಟಪಡ್ತೀವೋ ನಾವೂ ಅವರ ಜೊತೆ ಹಾಗೇ ನಡ್ಕೋಬೇಕು.

  •   ಒತ್ತಡವನ್ನ ಹೇಗೆ ನಿಭಾಯಿಸೋದು. “ಹಾಗಾಗಿ ನಾಳೆ ಬಗ್ಗೆ ಚಿಂತೆ ಮಾಡಬೇಡಿ. ನಾಳೆಗೆ ನಾಳೆದೇ ಚಿಂತೆ ಇರುತ್ತೆ.”—ಮತ್ತಾಯ 6:34.

     ಅರ್ಥ: ನಾಳೆ ಏನಾಗುತ್ತೋ ಅಂತ ಮಿತಿಮೀರಿ ಯೋಚಿಸುವ ಬದಲು ಇವತ್ತಿನ ಬಗ್ಗೆ ಯೋಚಿಸಿದ್ರೆ ಸಾಕು.

  •   ಗಂಡ ಹೆಂಡತಿ ಖುಷಿಯಾಗಿರೋಕೆ ಏನು ಮಾಡಬೇಕು. “ಏನೇ ಆದ್ರೂ ನಿಮ್ಮಲ್ಲಿ ಪ್ರತಿಯೊಬ್ಬನು ತನ್ನನ್ನ ಪ್ರೀತಿಸೋ ತರಾನೇ ತನ್ನ ಹೆಂಡತಿಯನ್ನ ಪ್ರೀತಿಸಬೇಕು. ಹೆಂಡತಿ ತನ್ನ ಗಂಡನಿಗೆ ಆಳವಾದ ಗೌರವ ಕೊಡಬೇಕು.”—ಎಫೆಸ 5:33.

     ಅರ್ಥ: ಸಂಸಾರ ಚೆನ್ನಾಗಿರೋಕೆ ಪ್ರೀತಿ ಹಾಗು ಗೌರವ ತುಂಬಾ ಮುಖ್ಯ.

 ಬೈಬಲ್‌ನಲ್ಲಿರೋ ವಿಷಯ ಬದಲಾಗಿದೆಯಾ?

 ಇಲ್ಲ. ಈಗಿರೋ ಬೈಬಲನ್ನ ಹಳೆಯ ಹಸ್ತಪ್ರತಿಗಳೊಂದಿಗೆ ಹೋಲಿಸಿ ನೋಡಿದಾಗ ಅದರಲ್ಲಿರೋ ವಿಷಯ ಬದಲಾಗಿಲ್ಲ ಅಂತ ವಿದ್ವಾಂಸರು ಕಂಡುಹಿಡಿದಿದ್ದಾರೆ. ಬೈಬಲಿನಲ್ಲಿರೋ ವಿಷಯಗಳನ್ನ ಎಲ್ಲರೂ ಓದಿ ಅರ್ಥ ಮಾಡಿಕೊಳ್ಳಬೇಕು ಅನ್ನೋದು ದೇವರ ಇಷ್ಟ. ಹಾಗಾಗಿ ಬೈಬಲ್‌ನಲ್ಲಿರೋ ವಿಷಯ ಬದಲಾಗದೆ ಇರೋ ತರ ದೇವರು ನೋಡಿಕೊಳ್ಳಲ್ವಾ? dಯೆಶಾಯ 40:8.

 ಇಷ್ಟೊಂದು ಬೈಬಲ್‌ ಭಾಷಾಂತರಗಳು ಯಾಕಿದೆ?

 ಬೈಬಲ್‌ ಕಾಲದ ಹಳೆಯ ಭಾಷೆಯನ್ನ ಇವತ್ತು ಜನ ಓದಿ ಅರ್ಥ ಮಾಡಿಕೊಳ್ಳೋಕೆ ಆಗಲ್ಲ. ಆದರೆ ಬೈಬಲ್‌ನಲ್ಲಿರೋ “ಸಿಹಿ ಸುದ್ದಿಯನ್ನ” “ಎಲ್ಲಾ ದೇಶ, ಕುಲ, ಭಾಷೆ, ಜಾತಿಯ ಜನ್ರಿಗೆ” ಬರೆಯಲಾಗಿದೆ. (ಪ್ರಕಟನೆ 14:6, ಪಾದಟಿಪ್ಪಣಿ) ಅದಕ್ಕೆ, ಜನರು ಬೈಬಲಿನಲ್ಲಿರೋ ವಿಷಯನ ಚೆನ್ನಾಗಿ ಓದಿ ಅರ್ಥ ಮಾಡಿಕೊಳ್ಳೋಕೆ ಇಷ್ಟೊಂದು ಬೈಬಲ್‌ ಭಾಷಾಂತರಗಳು ಇವೆ.

 ಮೂರು ವಿಧದ ಬೈಬಲ್‌ ಭಾಷಾಂತರಗಳಿವೆ:

  •   ಪದಕ್ಕೆ ಪದ ಅನುವಾದ ಅಂದ್ರೆ ಪ್ರತಿಯೊಂದು ಪದಕ್ಕೆ ಮಾತ್ರ ಗಮನಕೊಟ್ಟು ಭಾಷಾಂತರ ಮಾಡೋದು.

  •   ಮೂಲ ಭಾಷೆಯಲ್ಲಿ ಏನು ಹೇಳಲು ಬಯಸುತ್ತಾರೋ ಅದೇ ಅರ್ಥವಿರುವ ಪದಗಳನ್ನ ಬಳಸಿ ಭಾಷಾಂತರ ಮಾಡೋದು.

  •   ಭಾವಾನುವಾದ ಅಂದ್ರೆ ಜನರಿಗೆ ಓದಲು ಇಷ್ಟವಾಗೋ ತರ ಬೇರೆ ಪದಗಳನ್ನ ಬಳಸಿ ಭಾಷಾಂತರ ಮಾಡೋದು. ಆದರೆ ಹೀಗೆ ಭಾಷಾಂತರ ಮಾಡುವಾಗ ಕೆಲವೊಮ್ಮೆ ವಿಷಯದ ನಿಜ ಅರ್ಥನೇ ಬದಲಾಗಬಹುದು.

 ಒಂದು ಒಳ್ಳೆ ಬೈಬಲ್‌ ಭಾಷಾಂತರ ಈಗ ಜನರಿಗೆ ಅರ್ಥವಾಗೋ ಸರಳ ಭಾಷೆಯನ್ನ ಬಳಸಿ ವಿಷಯಗಳನ್ನ ಬದಲಾಯಿಸದೆ ದೇವರ ಸಂದೇಶವನ್ನ ಇದ್ದ ಹಾಗೇ e ತಿಳಿಸುತ್ತೆ.

 ಬೈಬಲ್‌ನಲ್ಲಿ ಯಾವ ವಿಷಯಗಳು ಇರಬೇಕಂತ ಯಾರು ನಿರ್ಧಾರ ಮಾಡಿದರು?

 ಬೈಬಲನ್ನ ದೇವರೇ ಬರೆಸಿರೋದರಿಂದ ಅದರಲ್ಲಿ ಏನಿರಬೇಕು ಅಂತ ಆತನೇ ನಿರ್ಧರಿಸಿದನು. ಮೊದಲು ಇಸ್ರಾಯೇಲ್ಯರನ್ನು ಆರಿಸಿಕೊಂಡು “ದೇವರು ಪವಿತ್ರ ಬರಹಗಳನ್ನ ಅವ್ರಿಗೆ ಕೊಟ್ಟನು”. ಆದ್ದರಿಂದ ಅವರು ಹೀಬ್ರು ಪುಸ್ತಕಗಳನ್ನ ಸಂರಕ್ಷಿಸಿದರು.—ರೋಮನ್ನರಿಗೆ 3:2.

 ಬೈಬಲ್‌ನಲ್ಲಿ ಇರಬೇಕಾದ ಯಾವುದಾದರೂ ಪುಸ್ತಕಗಳು ಕಳೆದುಹೋಗಿದೆಯಾ?

 ಇಲ್ಲ. ನಮ್ಮ ಹತ್ರ ಈಗ ಪೂರ್ತಿ ಬೈಬಲ್‌ ಇದೆ. ಆದರೆ ಅನೇಕ ವರ್ಷಗಳಿಂದ ರಹಸ್ಯವಾಗಿ ಇಟ್ಟಿದ್ದ ಕೆಲವು ಪುರಾತನ ಪುಸ್ತಕಗಳು ಕೂಡ ಬೈಬಲಿನ ಭಾಗವಾಗಿದೆ ಅಂತ ಕೆಲವರು ಹೇಳುತ್ತಾರೆ. f ಆದರೆ, ಬೈಬಲಿನಲ್ಲಿ ಯಾವ ಪುಸ್ತಕಗಳು ಇರಬೇಕು ಅನ್ನೋ ಮಟ್ಟ ಬೈಬಲ್ಲೇ ಸ್ಪಷ್ಟಪಡಿಸುತ್ತೆ.(2 ತಿಮೊತಿ 1:13) ಆ ಮಟ್ಟ ಏನಂದ್ರೆ, ಬೈಬಲ್‌ನಲ್ಲಿರೋ ಎಲ್ಲಾ ಪುಸ್ತಕಗಳು ದೇವರೇ ಕೊಟ್ಟಿರೋದರಿಂದ ಅದು ಒಂದಕ್ಕೊಂದು ಹೊಂದಿಕೆಯಲ್ಲಿದೆ ಹಾಗೂ ಇಡೀ ಬೈಬಲ್‌ ಒಂದೇ ಪುಸ್ತಕದ ತರ ಇದೆ. ಆದರೆ ಕೆಲವರು ಬೈಬಲಿನ ಭಾಗವಾಗಿರಬೇಕು ಅಂತ ಹೇಳೋ ಪುರಾತನ ಪುಸ್ತಕಗಳಲ್ಲಿ ನಾವು ಈ ಹೊಂದಿಕೆಯನ್ನು ನೋಡೋಕೆ ಆಗಲ್ಲ. g

 ಬೈಬಲ್‌ ವಚನಗಳನ್ನ ಹೇಗೆ ಹುಡುಕೋದು?

  ಬೈಬಲ್‌ ಪುಸ್ತಕಗಳ ಪಟ್ಟಿ

a ಬೈಬಲ್‌ನಲ್ಲಿರುವ ಪುಸ್ತಕಗಳ ಹೆಸರುಗಳು, ಅವುಗಳನ್ನ ಯಾರು ಬರೆದರು ಹಾಗೂ ಅವುಗಳನ್ನ ಯಾವಾಗ ಬರೆಯಲಾಗಿದೆ ಅಂತ ತಿಳಿಯಲು, “ಬೈಬಲ್‌ನ ಪುಸ್ತಕಗಳ ವಿವರ”‏ ನೋಡಿ.

b ಬೈಬಲಿನ ಕೆಲವು ಪುಸ್ತಕಗಳನ್ನ ಅರಾಮಿಕ್‌ ಭಾಷೆಯಲ್ಲಿ ಬರೆಯಲಾಗಿತ್ತು. ಇದು ಸ್ವಲ್ಪ ಮಟ್ಟಿಗೆ ಹೀಬ್ರು ಭಾಷೆಗೆ ಹೋಲುತ್ತೆ.

c ಅನೇಕ ಬೈಬಲ್‌ ಓದುಗರು “ಹೀಬ್ರು ಪುಸ್ತಕಗಳು”‏ ಹಾಗೂ “ಕ್ರೈಸ್ತ ಗ್ರೀಕ್‌ ಪುಸ್ತಕಗಳು”‏ ಅನ್ನೋ ಪದಗಳನ್ನ ಬಳಸೋಕೆ ಇಷ್ಟಪಡ್ತಾರೆ. ಈ ಪದಗಳನ್ನ ಬಳಸುವುದರಿಂದ “ಹಳೆಯ ಒಡಂಬಡಿಕೆ”‏ ಈಗ ನಮಗೆ ಅನ್ವಯಿಸಲ್ಲ ಹಾಗೂ “ಹೊಸ ಒಡಂಬಡಿಕೆ”‏ ಅದನ್ನ ಬದಲಿಸಿದೆ ಅನ್ನೋ ಭಾವನೆ ಕೊಡಲ್ಲ.

e ತುಂಬ ಜನ ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ ಸರಳವಾಗಿ ಹಾಗೂ ನಿಖರವಾಗಿ ಇರೋದರಿಂದ ಅದನ್ನ ಓದೋಕೆ ಇಷ್ಟಪಡ್ತಾರೆ. ನೂತನ ಲೋಕ ಭಾಷಾಂತರ ನಿಖರವಾಗಿದೆಯಾ? ಅನ್ನೋ ಲೇಖನ ನೋಡಿ.

f ಈ ಎಲ್ಲಾ ಪುಸ್ತಕಗಳನ್ನ ಒಟ್ಟಾಗಿ ಅಪೋಕ್ರಿಫಾ ಅಂತ ಕರೆಯುತ್ತಾರೆ. ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ ಪ್ರಕಾರ, ಬೈಬಲ್‌ ಸಾಹಿತ್ಯದಲ್ಲಿ, [ಈ ಪದವನ್ನ ಬಳಸುವಾಗ] ಒಂದು ಧರ್ಮಗ್ರಂಥದ ಅಂಗೀಕೃತ ಪಟ್ಟಿಯ ಹೊರಗೆ ಇರುವಂಥದ್ದನ್ನ ಸೂಚಿಸುತ್ತೆ. ಅಂದ್ರೆ, ಈ ಪುಸ್ತಕಗಳು ಬೈಬಲಿನ ಅಧಿಕೃತ ಪಟ್ಟಿಯಲಿಲ್ಲ.

g ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ”‏ಅಪೋಕ್ರಿಫಾ ಪುಸ್ತಕಗಳಲ್ಲಿ ಯೇಸುವಿನ ಬಗ್ಗೆ ಯಾವುದೇ ರಹಸ್ಯಗಳಿದೆಯಾ?”‏ (ಇಂಗ್ಲಿಷ್‌) ಅನ್ನೋ ಲೇಖನ ನೋಡಿ.