ಮದುವೆಯ ಬಗ್ಗೆ ಬೈಬಲ್ ಏನು ಹೇಳುತ್ತೆ?
ಬೈಬಲ್ ಕೊಡೋ ಉತ್ತರ
ಮೊದಲ ಗಂಡು ಹಾಗೂ ಹೆಣ್ಣನ್ನ ಸೃಷ್ಟಿಮಾಡಿದ ಮೇಲೆ, ದೇವರು ಅವರನ್ನ ಮದುವೆಯ ಬಾಂಧವ್ಯದಲ್ಲಿ ಒಂದು ಮಾಡಿದನು. ದೇವರು ಮಾಡಿದ ಈ ಮದುವೆಯ ಏರ್ಪಾಡು ಗಂಡು ಹಾಗೂ ಹೆಣ್ಣಿನ ಮಧ್ಯ ಇರೋ ಒಂದು ವಿಶೇಷ ಬಂಧವಾಗಿದೆ ಹಾಗೂ ಕುಟುಂಬ ಜೀವನಕ್ಕೆ ಅಡಿಪಾಯವಾಗಿದೆ.—ಆದಿಕಾಂಡ 1:27, 28; 2:18.
ಮದುವೆಯಾಗಿರೋ ದಂಪತಿಗಳು ಖುಷಿಖುಷಿಯಾಗಿ ಇರಬೇಕಂತ ದೇವರು ಇಷ್ಟಪಡ್ತಾನೆ. (ಜ್ಞಾನೋಕ್ತಿ 5:18) ಅದಕ್ಕೆ ಮದುವೆ ಜೀವನ ಚೆನ್ನಾಗಿರೋಕೆ ಬೇಕಾದ ಸಲಹೆ ಹಾಗೂ ಮಾರ್ಗದರ್ಶನೆಗಳನ್ನ ದೇವರು ಬೈಬಲಿನಲ್ಲಿ ಕೊಟ್ಟಿದ್ದಾನೆ.
ಈ ಲೇಖನದಲ್ಲಿ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಸಿಗುತ್ತೆ
ಮದುವೆಯ ಬಗ್ಗೆ ದೇವರು ಕೊಟ್ಟಿರೋ ನೀತಿ ನಿಯಮಗಳೇನು?
ಮದುವೆಯ ಬಂಧದಲ್ಲಿ ಒಂದು ಗಂಡು ಹಾಗೂ ಒಂದು ಹೆಣ್ಣು ಐಕ್ಯರಾಗಿರೋ ಏರ್ಪಾಡನ್ನ ದೇವರು ಆರಂಭದಲ್ಲೇ ಮಾಡಿದನು. (ಆದಿಕಾಂಡ 2:24) ಬಹುಪತ್ನಿತ್ವ, ಸಲಿಂಗಕಾಮ, ಮದುವೆ ಮಾಡಿಕೊಳ್ಳದೆ ಒಟ್ಟಿಗೆ ಜೀವಿಸೋದನ್ನ ದೇವರು ಒಪ್ಪುವುದಿಲ್ಲ. (1 ಕೊರಿಂಥ 6:9; 1 ಥೆಸಲೋನಿಕ 4:3) ಮದುವೆ ಬಗ್ಗೆ ದೇವರು ಇಟ್ಟಿರೋ ನೀತಿ ನಿಯಮಗಳನ್ನ ಪಾಲಿಸಬೇಕು ಅಂತ ಯೇಸು ತನ್ನ ಹಿಂಬಾಲಕರಿಗೆ ಕಲಿಸಿದನು.—ಮಾರ್ಕ 10:6-8.
ದೇವರ ದೃಷ್ಟಿಯಲ್ಲಿ ಮದುವೆ ಅನ್ನೋದು ಒಂದು ಶಾಶ್ವತ ಬಂಧ. ಒಂದು ಗಂಡು ಹಾಗೂ ಹೆಣ್ಣು ಮದುವೆಯಾದಾಗ, ಅವರಿಬ್ಬರೂ ಉಸಿರಿರೋವರೆಗೂ ಒಬ್ಬರಿಗೊಬ್ಬರು ನಿಯತ್ತಾಗಿ ಜೊತೆಜೊತೆಯಾಗಿ ಇರ್ತೀವಿ ಅಂತ ಮಾತುಕೊಡ್ತಾರೆ. ಅವರಿಬ್ಬರೂ ಈ ಮಾತನ್ನ ಉಳಿಸಿಕೊಳ್ಳಬೇಕು ಅಂತ ದೇವರು ಇಷ್ಟಪಡ್ತಾನೆ.—ಮಾರ್ಕ 10:9.
ಪ್ರತ್ಯೇಕವಾಸ ಹಾಗೂ ವಿವಾಹ ವಿಚ್ಛೇದನದ ಬಗ್ಗೆ ಏನು?
ಕೆಲವು ಸರಿ ಗಂಡ ಹೆಂಡತಿ ಒಬ್ಬರಿಂದೊಬ್ಬರು ದೂರ ಇರಬೇಕಾದ ಪರಿಸ್ಥಿತಿ ಬರಬಹುದು. ಗಂಡ ಅಥವಾ ಹೆಂಡತಿಯ ಕುಟುಂಬದಲ್ಲಿ ಯಾವುದಾದರೂ ತುರ್ತು ಪರಿಸ್ಥಿತಿ ಎದ್ದಾಗ ಅದನ್ನ ನೋಡಿಕೊಳ್ಳೋಕೆ ತನ್ನ ಸಂಗಾತಿಯನ್ನ ಬಿಟ್ಟು ಪ್ರಯಾಣ ಮಾಡಿ ಒಬ್ಬರಿಂದೊಬ್ಬರು ದೂರ ಇರಬೇಕಾಗಬಹುದು. ಆದರೆ ಕುಟುಂಬ ಸಮಸ್ಯೆ ಕಾರಣದಿಂದಾಗ ಪ್ರತ್ಯೇಕವಾಸವನ್ನ ಬೈಬಲ್ ಒಪ್ಪುವುದಿಲ್ಲ. ಅದರ ಬದಲು, ಸಮಸ್ಯೆಗಳಾದಾಗ ದಂಪತಿಗಳು ಮಾತಾಡಿಕೊಂಡು ಸಮಸ್ಯೆಯನ್ನ ಬಗೆಹರಿಸಿಕೊಳ್ಳಬೇಕಂತ ಬೈಬಲ್ ಪ್ರೋತ್ಸಾಹಿಸುತ್ತೆ.—1 ಕೊರಿಂಥ 7:10.
ವಿವಾಹ ವಿಚ್ಛೇದನಕ್ಕೆ ಇರೋ ಒಂದೇ ಒಂದು ಬೈಬಲ್ ಆಧಾರಿತ ಕಾರಣ ವ್ಯಭಿಚಾರ. (ಮತ್ತಾಯ 19:9) ಹಾಗಾಗಿ, ವ್ಯಭಿಚಾರ ಅಲ್ಲದೇ ಬೇರೆ ಯಾವುದೇ ಕಾರಣಕ್ಕೆ ಗಂಡ ಹೆಂಡತಿ ಪ್ರತ್ಯೇಕವಾಸ ಅಥವಾ ವಿಚ್ಛೇದನದ ಆಯ್ಕೆ ಮಾಡೋದಾದರೆ, ಅವರಿಬ್ಬರೂ ಬೇರೆಯವರ ಜೊತೆ ಡೇಟಿಂಗ್ ಮಾಡೋದನ್ನ ಅಥವಾ ಇನ್ನೊಂದು ಮದುವೆಯಾಗೋದನ್ನ ಬೈಬಲ್ ಒಪ್ಪುವುದಿಲ್ಲ.—ಮತ್ತಾಯ 5:32; 1 ಕೊರಿಂಥ 7:11.
ದೇವರು ಒಂದು ಮದುವೆಯನ್ನ ಒಪ್ಪಬೇಕಂದ್ರೆ, ಅದನ್ನ ಕಾನೂನುಬದ್ಧವಾಗಿ ನೋಂದಾಯಿಸುವ ಅಗತ್ಯವಿದೆಯಾ?
ಮದುವೆಯ ಬಗ್ಗೆ ಸರ್ಕಾರದ ಕಾನೂನು ಹಾಗೂ ನಿಯಮಗಳನ್ನ ಕ್ರೈಸ್ತರು ಪಾಲಿಸಬೇಕಂತ ದೇವರು ಬಯಸ್ತಾನೆ. (ತೀತ 3:1) ದಂಪತಿಗಳಿಗೆ ತಮ್ಮ ಮದುವೆಯನ್ನ ಕಾನೂನುಬದ್ಧವಾಗಿ ನೋಂದಾಯಿಸಲು ಸಾಧ್ಯವಿರುವಾಗ, ಹಾಗೆ ಮಾಡೋದು ಅವರು ಮದುವೆ ಬಗ್ಗೆ ದೇವರ ನೀತಿ ನಿಯಮಗಳನ್ನ ಪಾಲಿಸ್ತೀವಿ ಹಾಗೂ ಸರ್ಕಾರ ಮತ್ತು ಅಧಿಕಾರಿಗಳನ್ನ ಗೌರವಿಸ್ತೀವಿ ಅಂತ ತೋರಿಸಿದ ಹಾಗೆ ಇರುತ್ತೆ. ಯಾಕೆಂದ್ರೆ ದೇವರ ದೃಷ್ಟಿಯಲ್ಲಿ ಮದುವೆ ಅನ್ನೋದು ಒಂದು ಶಾಶ್ವತ ಬಂಧ a
ಮದುವೆ ಜೀವನದಲ್ಲಿ ಗಂಡ ಹಾಗೂ ಹೆಂಡತಿಯ ಪಾತ್ರವೇನು ಮತ್ತು ಅವರಿಗೆ ಯಾವ ಜವಾಬ್ದಾರಿಗಳಿವೆ ಅಂತ ಬೈಬಲ್ ಹೇಳುತ್ತೆ?
ಇಬ್ಬರಿಗೂ ಇರೋ ಜವಾಬ್ದಾರಿಗಳು. ಗಂಡ ಹೆಂಡತಿ ಒಬ್ಬರಿಗೊಬ್ಬರು ಪ್ರೀತಿ ಹಾಗೂ ಗೌರವ ತೋರಿಸಬೇಕು. (ಎಫೆಸ 5:33) ಗಂಡ ಹೆಂಡತಿ ಇಬ್ಬರೂ ತಮ್ಮ ಸಂಗಾತಿಯ ಲೈಂಗಿಕ ಅವಶ್ಯಕತೆಗಳನ್ನ ಪ್ರೀತಿಯಿಂದ ನೋಡಿಕೊಳ್ಳಬೇಕು, ಹಾಗೂ ಒಬ್ರಿಗೊಬ್ರು ದ್ರೋಹ ಮಾಡುವಂಥ ಎಲ್ಲಾ ವಿಷಯಗಳಿಂದ ದೂರ ಇರಬೇಕು. (1 ಕೊರಿಂಥ 7:3; ಇಬ್ರಿಯ 13:4) ಮಕ್ಕಳಿರೋದಾದ್ರೆ, ಅವರನ್ನ ಬೆಳೆಸೋ ಜವಾಬ್ದಾರಿ ಗಂಡ ಹೆಂಡತಿ ಇಬ್ಬರಿಗೂ ಇದೆ.—ಜ್ಞಾನೋಕ್ತಿ 6:20.
ಐಹಿಕ ಕೆಲಸ ಹಾಗೂ ಮನೆ ಕೆಲಸವನ್ನ ಗಂಡ ಹೆಂಡತಿ ಹೇಗೆ ಹಂಚಿಕೊಂಡು ಮಾಡಬೇಕಂತ ಬೈಬಲ್ ವಿವರವಾಗಿ ಹೇಳೋದಿಲ್ಲ. ಅವರವರ ಕುಟುಂಬಕ್ಕೆ ಯಾವುದು ಸರಿ ಅಂತ ದಂಪತಿಗಳು ಒಟ್ಟಿಗೆ ನಿರ್ಧಾರ ಮಾಡಬಹುದು.
ಗಂಡನ ಪಾತ್ರ. “ಗಂಡ ತನ್ನ ಹೆಂಡತಿಗೆ ಯಜಮಾನ ಆಗಿದ್ದಾನೆ” ಅಂತ ಬೈಬಲ್ ಹೇಳುತ್ತೆ. (ಎಫೆಸ 5:23) ಯಜಮಾನ ಅಂದ್ರೆ ಒಬ್ಬ ಗಂಡನಾಗಿ ಅವನು ತನ್ನ ಕುಟುಂಬಕ್ಕೆ ಬೇಕಾದ ಮಾರ್ಗದರ್ಶನೆ ಕೊಡಬೇಕು ಹಾಗೂ ತನ್ನ ಹೆಂಡತಿ ಮತ್ತು ಮಕ್ಕಳಿಗೆ ಪ್ರಯೋಜನ ಆಗೋ ತರ ನಿರ್ಧಾರಗಳನ್ನ ಮಾಡಬೇಕು.
ಗಂಡ ತನ್ನ ಕುಟುಂಬದ ಎಲ್ಲಾ ಅಗತ್ಯಗಳನ್ನ ನೋಡಿಕೊಳ್ಳಬೇಕು. ತನ್ನ ಕುಟುಂಬದವರೆಲ್ಲರೂ ಆರೋಗ್ಯವಾಗಿರೋಕೆ, ಖುಷಿಯಾಗಿರೋಕೆ ಹಾಗೂ ಯೆಹೋವ ದೇವರ ಜೊತೆ ಸಂಬಂಧ ಗಟ್ಟಿಯಾಗಿರೋಕೆ ಬೇಕಾದ ಎಲ್ಲವನ್ನ ಮಾಡಬೇಕು. (1 ತಿಮೊತಿ 5:8) ತನ್ನ ಹೆಂಡತಿ ಜೊತೆ ಒಟ್ಟಿಗೆ ಕೆಲಸಗಳನ್ನ ಮಾಡ್ತ ಅವಳ ಸಾಮರ್ಥ್ಯಗಳನ್ನ ಗೌರವಿಸುತ್ತಾನೆ ಹಾಗೂ ಅವಳಲ್ಲಿರೋ ಗುಣಗಳನ್ನ ತುಂಬಾ ಅತ್ಯಮೂಲ್ಯವಾಗಿ ನೋಡ್ತಾನೆ. ಯಾವುದೇ ನಿರ್ಧಾರಗಳನ್ನ ಮಾಡುವಾಗ ತನ್ನ ಹೆಂಡತಿಯ ಭಾವನೆ ಹಾಗೂ ಅಭಿಪ್ರಾಯಗಳಿಗೆ ಬೆಲೆಕೊಡ್ತಾನೆ. (ಜ್ಞಾನೋಕ್ತಿ 31:11, 28) ಗಂಡ ತನ್ನ ಜವಾಬ್ದಾರಿಗಳನೆಲ್ಲಾ ನೋಡಿಕೊಳ್ಳುವಾಗ ಅದನ್ನ ಪ್ರೀತಿಯಿಂದ ಮಾಡಬೇಕು ಅಂತ ಬೈಬಲ್ ಹೇಳುತ್ತೆ.—ಕೊಲೊಸ್ಸೆ 3:19.
ಹೆಂಡತಿಯ ಪಾತ್ರ. “ಹೆಂಡತಿ ತನ್ನ ಗಂಡನಿಗೆ ಆಳವಾದ ಗೌರವ ಕೊಡಬೇಕು” ಅಂತ ಬೈಬಲ್ ಹೇಳುತ್ತೆ. (ಎಫೆಸ 5:33) ಹೆಂಡತಿ ತನ್ನ ಗಂಡನಿಗೆ ದೇವರು ಕೊಟ್ಟಿರೋ ಜವಾಬ್ದಾರಿಯನ್ನ ಗೌರವಿಸುವಾಗ ದೇವರು ಅದನ್ನ ಮೆಚ್ಚುತ್ತಾನೆ.
ಹೆಂಡತಿ ತನ್ನ ಗಂಡನಿಗೆ ಸಹಾಯಕಿಯಾಗಿದ್ದಾಳೆ. ಅವನು ಒಳ್ಳೆ ನಿರ್ಧಾರಗಳನ್ನ ಮಾಡೋಕೆ ಸಹಾಯ ಮಾಡ್ತಾ ಯಜಮಾನನ ಆ ಸ್ಥಾನಕ್ಕೆ ಬೆಂಬಲ ಕೊಡ್ತಾಳೆ. (ಆದಿಕಾಂಡ 2:18) ಮದುವೆ ಜೀವನದಲ್ಲಿ ತನ್ನ ಪಾತ್ರವನ್ನ ಚೆನ್ನಾಗಿ ಮಾಡೋ ಹೆಂಡತಿಯನ್ನ ಬೈಬಲ್ ಹೊಗಳುತ್ತೆ.—ಜ್ಞಾನೋಕ್ತಿ 31:10.
ಇಂದು ವಿವಾಹಿತ ದಂಪತಿಗಳಿಗೆ ಮಕ್ಕಳು ಇರಲೇಬೇಕು ಅಂತ ದೇವರು ಬಯಸುತ್ತಾನಾ?
ಇಲ್ಲ. ಬೈಬಲ್ ಕಾಲದಲ್ಲಿ ದೇವರು ತನ್ನ ಜನರಲ್ಲಿ ಕೆಲವರಿಗೆ ಮಕ್ಕಳನ್ನ ಪಡೆಯಬೇಕು ಅಂತ ಆಜ್ಞೆ ಕೊಟ್ಟನು. (ಆದಿಕಾಂಡ 1:28; 9:1) ಆದರೆ ಇಂದು ಕ್ರೈಸ್ತರಿಗೆ ಈ ನಿಯಮ ಅನ್ವಯಿಸೋದಿಲ್ಲ. ಯೇಸು ತನ್ನ ಹಿಂಬಾಲಕರಿಗೆ ಮಕ್ಕಳನ್ನ ಪಡೆಯಬೇಕು ಅಂತ ಎಲ್ಲೂ ಹೇಳಲಿಲ್ಲ. ಆರಂಭದಲ್ಲಿದ್ದ ತನ್ನ ಶಿಷ್ಯರೂ ಕೂಡ ಎಲ್ಲೂ ಮದುವೆಯಾದವರಿಗೆ ಮಕ್ಕಳು ಇರಲೇಬೇಕು ಅಂತ ಹೇಳಲಿಲ್ಲ. ದಂಪತಿಗಳು ಅವರಿಗೆ ಮಕ್ಕಳು ಬೇಕಾ ಬೇಡವಾ ಅಂತ ಅವರೇ ನಿರ್ಧಾರ ಮಾಡಬಹುದು.
ನನ್ನ ಮದುವೆ ಜೀವನ ಚೆನ್ನಾಗಿರೋಕೆ ಬೈಬಲ್ ಹೇಗೆ ಸಹಾಯ ಮಾಡುತ್ತೆ?
ದಂಪತಿಗಳಿಗೆ ತಮ್ಮ ಮದುವೆ ಜೀವನ ಶುರುವಾದಾಗಿಂದ ಒಂದು ಆನಂದ ಸಾಗರವಾಗೋಕೆ ಸಹಾಯ ಮಾಡೋ ತತ್ವಗಳು ಬೈಬಲಿನಲ್ಲಿದೆ. ಈ ತತ್ವಗಳು ದಂಪತಿಗಳಿಗೆ ಸಮಸ್ಯೆಗಳನ್ನ ನಿಭಾಯಿಸೋಕೆ ಅಥವಾ ಅದನ್ನ ತಡೆಯೋಕೆ ಸಹಾಯ ಮಾಡುತ್ತೆ.
ಮದುವೆಯಾಗಿರೋ ದಂಪತಿಗಳಿಗೆ ಈ ಬೈಬಲ್ ತತ್ವಗಳು ಸಹಾಯ ಮಾಡುತ್ತೆ-
ನಿಜವಾದ ಪ್ರೀತಿ ತೋರಿಸಿ.—1 ಕೊರಿಂಥ 13:4-7; ಕೊಲೊಸ್ಸೆ 3:14.
a ಸಾಂಪ್ರದಾಯಿಕ ಅಥವಾ ಬುಡಕಟ್ಟು ವಿವಾಹಗಳ ಬಗ್ಗೆ ಬೈಬಲ್ ಏನು ಹೇಳುತ್ತೆ ಅಂತ ತಿಳಿಯೋಕೆ ಕಾವಲಿನಬುರುಜು ನವೆಂಬರ್ 1, 2006, ಪುಟ 14, ಪ್ಯಾರ 12 ನೋಡಿ.