ಮಾಹಿತಿ ಇರುವಲ್ಲಿ ಹೋಗಲು

ನೋಹ ಮತ್ತು ಜಲಪ್ರಳಯ—ನಿಜನಾ? ಕಟ್ಟುಕಥೆನಾ?

ನೋಹ ಮತ್ತು ಜಲಪ್ರಳಯ—ನಿಜನಾ? ಕಟ್ಟುಕಥೆನಾ?

ಬೈಬಲ್‌ ಕೊಡೋ ಉತ್ತರ

 ಭೂಮಿ ಮೇಲೆ ನಿಜವಾಗ್ಲೂ ಜಲಪ್ರಳಯ ನಡೆದಿತ್ತು. ಕೆಟ್ಟ ಜನ್ರನ್ನ ನಾಶ ಮಾಡಕ್ಕೋಸ್ಕರ ದೇವ್ರು ಜಲಪ್ರಳಯನ ತಂದನು. ಆದ್ರೆ ಒಳ್ಳೇ ಜನರನ್ನ, ಪ್ರಾಣಿಗಳನ್ನ ಕಾಪಾಡಕ್ಕೋಸ್ಕರ ನಾವೆ ಕಟ್ಟೋಕೆ ನೋಹನಿಗೆ ಹೇಳಿದನು. (ಆದಿಕಾಂಡ 6:11-20) ಜಲಪ್ರಳಯ ನಿಜವಾಗಿ ನಡೀತು ಅಂತ ನಾವು ಕಣ್ಣುಮುಚ್ಚಿ ನಂಬಬಹುದು, ಯಾಕಂದ್ರೆ ‘ದೇವರಿಂದ ಪ್ರೇರಿತವಾದ’ ಬೈಬಲಿನಲ್ಲಿ ಇದ್ರ ಬಗ್ಗೆ ಹೇಳಿದೆ.—2 ತಿಮೊತಿ 3:16.

 ನಿಜನಾ? ಕಟ್ಟುಕಥೆನಾ?

 ನೋಹ ನಿಜವಾಗ್ಲೂ ಇದ್ದ. ಅವನ ಕಾಲದಲ್ಲಿ ಜಲಪ್ರಳಯ ನಡೀತು ಅಂತ ಬೈಬಲ್‌ ಸ್ಪಷ್ಟವಾಗಿ ಹೇಳುತ್ತೆ.

  •   ಬೈಬಲನ್ನ ಬರೆದವ್ರು ಕೂಡ ನೋಹ ನಿಜವಾಗ್ಲೂ ಇದ್ದ ಅಂತ ನಂಬ್ತಿದ್ರು. ಉದಾಹರಣೆಗೆ ಬೈಬಲ್‌ ಬರಹಗಾರರಾದ ಎಜ್ರ ಮತ್ತು ಲೂಕ ಒಳ್ಳೇ ಇತಿಹಾಸಕಾರರಾಗಿದ್ರು. ಅವ್ರು ಬೈಬಲಿನಲ್ಲಿ ಇಸ್ರಾಯೇಲ್ಯರ ವಂಶಾವಳಿಯ ಬಗ್ಗೆ ಬರೆಯುವಾಗ ನೋಹನ ಹೆಸರನ್ನ ಕೂಡ ಸೇರಿಸಿದ್ರು. (1 ಪೂರ್ವಕಾಲವೃತ್ತಾಂತ 1:4; ಲೂಕ 3:36) ಯೇಸು ಭೂಮಿಲಿದ್ದಾಗ ನೋಹನ ಬಗ್ಗೆ ಮತ್ತು ಜಲಪ್ರಳಯದ ಬಗ್ಗೆ ಮಾತಾಡಿದನು. ಇದ್ರ ಬಗ್ಗೆ ಮತ್ತಾಯ ಮತ್ತು ಲೂಕ ತಮ್ಮ ಸುವಾರ್ತಾ ಪುಸ್ತಕದಲ್ಲಿ ಬರೆದಿದ್ದಾರೆ.—ಮತ್ತಾಯ 24:37-39; ಲೂಕ 17:26, 27.

     ಪ್ರವಾದಿ ಯೆಹೆಜ್ಕೇಲ ಮತ್ತು ಅಪೊಸ್ತಲ ಪೌಲ ನೋಹನನ್ನ ನಂಬಿಗಸ್ತ ಮತ್ತು ನೀತಿವಂತ ವ್ಯಕ್ತಿ, ಅವನ ಮಾದರಿಯನ್ನ ಅನುಕರಿಸಬೇಕು ಅಂತ ಹೇಳಿದ್ದಾರೆ. (ಯೆಹೆಜ್ಕೇಲ 14:14, 20; ಇಬ್ರಿಯ 11:7) ನೋಹ ನಿಜವಾಗಿ ಇರಲಿಲ್ಲ ಅಂದಿದ್ರೆ ಅವ್ನ ಮಾದರಿಯನ್ನ ಅನುಕರಿಸೋಕೆ ಅವ್ರು ಯಾಕೆ ಹೇಳ್ತಿದ್ರು? ಇದ್ರಿಂದ ನಮ್ಗೆ ಏನು ಗೊತ್ತಾಗುತ್ತೆ ಅಂದ್ರೆ ನೋಹ ಮತ್ತೆ ಬೇರೆ ನಂಬಿಗಸ್ತ ಸ್ತ್ರೀಪುರುಷರ ಮಾದರಿಯನ್ನ ನಾವು ಅನುಕರಿಸಬಹುದು, ಯಾಕಂದ್ರೆ ಅವ್ರು ನಿಜವಾಗ್ಲೂ ಇದ್ರು.—ಇಬ್ರಿಯ 12:1; ಯಾಕೋಬ 5:17.

  •   ಜಲಪ್ರಳಯದ ಬಗ್ಗೆ ಬೈಬಲ್‌ ನಿರ್ದಿಷ್ಟವಾದ ಮಾಹಿತಿ ಕೊಡುತ್ತೆ. ಜನ ಕಟ್ಟುಕಥೆ ಹೇಳುವಾಗ “ಒಂದಾನೊಂದು ಕಾಲದಲ್ಲಿ” ಅಂತ ಶುರು ಮಾಡ್ತಾರೆ. ಆದ್ರೆ ಬೈಬಲಿನಲ್ಲಿ ಜಲಪ್ರಳಯದ ಬಗ್ಗೆ ಹೇಳುವಾಗ ಅದು ನಡೆದಂಥ ವರ್ಷ, ತಿಂಗಳು, ದಿನದ ಬಗ್ಗೆ ಸ್ಪಷ್ಟವಾಗಿ ತಿಳಿಸುತ್ತೆ. (ಆದಿಕಾಂಡ 7:11; 8:4, 13, 14) ನೋಹ ಕಟ್ಟಿದ ನಾವೆ ಹೇಗಿತ್ತು ಅಂತ ನಿಖರವಾಗಿ ಹೇಳುತ್ತೆ. ಅದ್ರ ಉದ್ದ ಅಗಲ ಎಷ್ಟಿತ್ತು ಅಂತನೂ ಹೇಳುತ್ತೆ. (ಆದಿಕಾಂಡ 6:15) ಇದನ್ನೆಲ್ಲಾ ನೋಡ್ವಾಗ ಜಲಪ್ರಳಯ ನಿಜವಾಗ್ಲೂ ನಡೆದಿತ್ತು ಅದು ಕಟ್ಟುಕಥೆಯಲ್ಲ ಅಂತ ಸ್ಪಷ್ಟವಾಗಿ ಗೊತ್ತಾಗುತ್ತೆ.

 ಜಲಪ್ರಳಯ ಯಾಕೆ ಆಯ್ತು?

 ಜಲಪ್ರಳಯಕ್ಕೆ ಮುಂಚೆ ‘ಮನುಷ್ಯರ ಕೆಟ್ಟತನ ಭೂಮಿ ಮೇಲೆ ಹೆಚ್ಚಾಗಿತ್ತು’ ಅಂತ ಬೈಬಲ್‌ ಹೇಳುತ್ತೆ. (ಆದಿಕಾಂಡ 6:5) “ಭೂಲೋಕದವರು ದೇವರ ದೃಷ್ಟಿಗೆ ಕೆಟ್ಟುಹೋಗಿದ್ದರು” ಅಂತನೂ ಹೇಳುತ್ತೆ. ಯಾಕಂದ್ರೆ ಅಲ್ಲಿ ಹಿಂಸೆ, ಅನೈತಿಕತೆ ತುಂಬಿತುಳುಕ್ತಿತ್ತು.—ಆದಿಕಾಂಡ 6:11; ಯೂದ 6, 7.

 ಇದಕ್ಕೆ ಮುಖ್ಯ ಕಾರಣ ಕೆಲವು ಕೆಟ್ಟ ದೇವದೂತರು ಸ್ವರ್ಗ ಬಿಟ್ಟು ಭೂಮಿಗೆ ಬಂದು ಹೆಣ್ಣು ಮಕ್ಕಳ ಜೊತೆ ಸಂಬಂಧ ಇಟ್ಟುಕೊಂಡ್ರು. ಅವ್ರಿಗೆ ಹುಟ್ಟಿದ ಮಕ್ಕಳನ್ನ ನೆಫೀಲಿಯರು ಅಂತ ಕರೀತಾರೆ, ಅವ್ರು ತುಂಬಾ ಕ್ರೂರಿಗಳಾಗಿದ್ರು, ಜನ್ರಿಗೆ ತುಂಬ ಕಾಟ ಕೊಡ್ತಿದ್ರು. (ಆದಿಕಾಂಡ 6:1, 2, 4) ಅದಕ್ಕೆ ದೇವರು ಭೂಮಿ ಮೇಲಿಂದ ದುಷ್ಟತನವನ್ನ ಅಳಿಸಿ ಹಾಕಿ ಒಳ್ಳೇ ಜನ್ರಿಂದ ಭೂಮಿಯನ್ನ ತುಂಬಿಸಬೇಕು ಅಂತ ನಿರ್ಧಾರ ಮಾಡಿದನು.—ಆದಿಕಾಂಡ 6:6, 7, 17.

 ಜಲಪ್ರಳಯ ಆಗುತ್ತೆ ಅಂತ ಜನ್ರಿಗೆ ಗೊತ್ತಿತ್ತಾ?

 ಹೌದು, ಗೊತ್ತಿತ್ತು. ಯಾಕಂದ್ರೆ ದೇವ್ರು ಮುಂಚೆನೇ ಪ್ರಳಯ ಆಗುತ್ತೆ, ನಾವೆ ಕಟ್ಟಿ ತನ್ನ ಕುಟುಂಬವನ್ನ ಪ್ರಾಣಿಗಳನ್ನ ಕಾಪಾಡಬೇಕು ಅಂತ ನೋಹನಿಗೆ ಹೇಳಿದನು. (ಆದಿಕಾಂಡ 6:13, 14; 7:1-4) ಮುಂದೆ ಆಗೋ ಜಲಪ್ರಳಯದ ಬಗ್ಗೆ ಜನ್ರಿಗೆ ತಿಳಿಸಿದ್ರೂ ಅವ್ರು ನೋಹನ ಮಾತು ಕೇಳಲಿಲ್ಲ. (2 ಪೇತ್ರ 2:5) ಅದಕ್ಕೆ ಬೈಬಲ್‌, “ಪ್ರಳಯವು ಬಂದು ಅವರೆಲ್ಲರನ್ನು ಕೊಚ್ಚಿಕೊಂಡುಹೋಗುವ ತನಕ ಅವರು ಲಕ್ಷ್ಯಕೊಡಲೇ ಇಲ್ಲ.” ಅಂತ ಹೇಳುತ್ತೆ.—ಮತ್ತಾಯ 24:37-39.

 ನೋಹ ಕಟ್ಟಿದ ನಾವೆ ಹೇಗಿತ್ತು?

 ನಾವೆ ಆಯತಾಕಾರವಾಗಿ ಒಂದು ಪೆಟ್ಟಿಗೆ ತರ ಇತ್ತು. ಅದರ ಉದ್ದ 133 ಮೀಟರ್‌ (437 ಅಡಿ), ಅಗಲ 22 ಮೀಟರ್‌ (73 ಅಡಿ), ಎತ್ತರ 13 ಮೀಟರ್‌ (44 ಅಡಿ) ಇತ್ತು. ನಾವೆಯನ್ನ ತುರಾಯಿ ಮರದಿಂದ ಮಾಡಿ ಅದರ ಒಳಗೆ ಮತ್ತು ಹೊರಗೆ ರಾಳ ಹಚ್ಚಲಾಗಿತ್ತು. ಮೂರು ಅಂತಸ್ತಿನ ನಾವೆಯಲ್ಲಿ ತುಂಬ ಕೋಣೆಗಳಿದ್ದವು. ಬಾಗಲು ಮತ್ತು ಕಿಟಕಿಗಳು ಇದ್ವು. ನಾವೆ ಮೇಲೆ ನೀರು ನಿಲ್ಲದೇ ಇರೋಕೆ ಅದರ ಚಾವಣಿ ಸ್ವಲ್ಪ ಇಳಿಜಾರಾಗಿತ್ತು.—ಆದಿಕಾಂಡ 6:14-16.

 ನಾವೆ ಕಟ್ಟೋಕೆ ಎಷ್ಟು ಸಮಯ ಹಿಡೀತು?

 ನೋಹನಿಗೆ ನಾವೆ ಕಟ್ಟೋಕೆ ಎಷ್ಟು ಸಮಯ ಹಿಡೀತು ಅಂತ ಬೈಬಲಿನಲ್ಲಿ ತಿಳಿಸಿಲ್ಲ. ಆದ್ರೆ ಅದನ್ನ ಕಟ್ಟೋಕೆ ಸುಮಾರು ವರ್ಷ ಹಿಡಿದಿರಬಹುದು. ನೋಹನಿಗೆ ಹಿರೀಮಗ ಹುಟ್ಟಿದಾಗ ಅವನಿಗೆ 500ಕ್ಕಿಂತ ಹೆಚ್ಚು ವಯಸ್ಸಾಗಿತ್ತು ಮತ್ತು ಜಲಪ್ರಳಯ ಆದಾಗ ಅವನ ವಯಸ್ಸು 600 ವರ್ಷ ಆಗಿತ್ತು. aಆದಿಕಾಂಡ 5:32; 7:6.

 ದೇವರು ನೋಹನಿಗೆ ಅವ್ನ ಮೂರು ಮಕ್ಕಳು ಬೆಳೆದು ದೊಡ್ಡವರಾಗಿ ಮದ್ವೆಯಾದ ಮೇಲೆ ನಾವೆ ಕಟ್ಟು ಅಂತ ಹೇಳಿದ್ರು. ಇದಕ್ಕೆ ಸುಮಾರು 50 ಅಥವಾ 60 ವರ್ಷ ಹಿಡಿದಿರಬಹುದು. (ಆದಿಕಾಂಡ 6:14, 18) ಇದ್ರ ಪ್ರಕಾರ, ನೋಹನಿಗೆ ನಾವೆ ಕಟ್ಟೋಕೆ ಸುಮಾರು 40 ಅಥವಾ 50 ವರ್ಷ ಹಿಡಿದಿರಬೇಕು.

a ನೋಹನ ತರ ಜಾಸ್ತಿ ಕಾಲ ಬದುಕಿದವ್ರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಡಿಸೆಂಬರ್‌ 1, 2020 ರ ಇಂಗ್ಲಿಷ್‌ ಕಾವಲಿನಬುರುಜುವಿನಲ್ಲಿರುವ “ಡಿಡ್‌ ಪೀಪಲ್‌ ಇನ್‌ ಬೈಬಲ್‌ ಟೈಮ್ಸ್‌ ರಿಯಲಿ ಲೀವ್‌ ಸೋ ಲಾಂಗ್‌?” ಲೇಖನ ನೋಡಿ.