ಮಾಹಿತಿ ಇರುವಲ್ಲಿ ಹೋಗಲು

ಮಹಾ ಸಂಕಟ ಅಂದ್ರೆ ಏನು?

ಮಹಾ ಸಂಕಟ ಅಂದ್ರೆ ಏನು?

ಬೈಬಲ್‌ ಕೊಡೋ ಉತ್ತರ

 ಮಹಾ ಸಂಕಟ ಮುಂದೆ ಆಗೋ ಒಂದು ಪ್ರಾಮುಖ್ಯ ಘಟನೆಯಾಗಿದೆ. ಈ ಸಮಯದಲ್ಲಿ ಮನುಷ್ಯರು ಇದುವರೆಗೂ ಅನುಭವಿಸದೇ ಇರುವಷ್ಟು ಕಷ್ಟಗಳನ್ನ ಅನುಭವಿಸ್ತಾರೆ. ಬೈಬಲ್‌ ಭವಿಷ್ಯವಾಣಿ ಹೇಳೋ ತರ ಈ ಮಹಾ ಸಂಕಟ “ಕೊನೇ ದಿನ” ಅಥವಾ “ಅಂತ್ಯದ” ಸಮಯದಲ್ಲಿ ನಡೆಯುತ್ತೆ. (2 ತಿಮೊತಿ 3:1; ದಾನಿಯೇಲ 12:4) ಅದು ಹೇಗಿರುತ್ತೆ? “ದೇವರು ಜನ್ರನ್ನ ಸೃಷ್ಟಿ ಮಾಡಿದಾಗಿಂದ ಇವತ್ತಿನ ತನಕ ಅಂಥ ಕಷ್ಟ ಬಂದೇ ಇಲ್ಲ. ಇನ್ನು ಮುಂದೆನೂ ಬರಲ್ಲ.”—ಮಾರ್ಕ 13:19; ದಾನಿಯೇಲ 12:1; ಮತ್ತಾಯ 24:21, 22.

ಮಹಾಸಂಕಟದ ಸಮಯದಲ್ಲಿ ನಡಿಯೋ ಘಟನೆಗಳು

  •   ಸುಳ್ಳು ಧರ್ಮದ ನಾಶನ. ಕಣ್ಮುಚ್ಚಿ ತೆಗೆಯೋಷ್ಟರಲ್ಲಿ ಸುಳ್ಳು ಧರ್ಮ ನಾಶ ಆಗುತ್ತೆ. (ಪ್ರಕಟನೆ 17:1, 5; 18:9, 10, 21) ಈ ನಾಶವನ್ನ ರಾಜಕೀಯ ಶಕ್ತಿಗಳನ್ನ ಪ್ರತಿನಿಧಿಸೋ ವಿಶ್ವ ಸಂಸ್ಥೆ ಮೂಲಕ ದೇವರು ಮಾಡ್ತಾನೆ.—ಪ್ರಕಟನೆ 17:3, 15-18. a

  •   ಸತ್ಯ ಧರ್ಮದ ಮೇಲೆ ಆಕ್ರಮಣ. ಯೆಹೆಜ್ಕೇಲ ಪುಸ್ತಕದಲ್ಲಿ ಹೇಳಿರೋ “ಮಾಗೋಗ್‌ ದೇಶದ ಗೋಗ” ಜನಾಂಗಗಳ ಗುಂಪನ್ನ ಸೂಚಿಸುತ್ತೆ. ಇದು ಸತ್ಯ ಧರ್ಮದ ಮೇಲೆ ಆಕ್ರಮಣ ಮಾಡುತ್ತೆ. ಆದ್ರೆ ದೇವರು ತನ್ನ ಆರಾಧಕರನ್ನ ಕಾಪಾಡ್ತಾನೆ.—ಯೆಹೆಜ್ಕೇಲ 38:1, 2, 9-12, 18-23.

  •   ಭೂಮಿ ಮೇಲಿರೋ ಜನರಿಗೆ ನ್ಯಾಯತೀರ್ಪು. ಯೇಸು ಭೂಮಿಯಲ್ಲಿರೋ ಎಲ್ಲಾ ಜನರಿಗೆ ನ್ಯಾಯತೀರ್ಪು ಮಾಡ್ತಾನೆ. “ಒಬ್ಬ ಕುರುಬ ಕುರಿಗಳನ್ನ ಆಡುಗಳಿಂದ ಬೇರೆ ಮಾಡೋ ತರ” ಜನರನ್ನ ಬೇರೆ ಮಾಡ್ತಾನೆ. (ಮತ್ತಾಯ 25:31-33) ಯಾವ ಆಧಾರದ ಮೇಲೆ ನ್ಯಾಯತೀರ್ಪು ಮಾಡ್ತಾನೆ? ತನ್ನ ಜೊತೆ ಸ್ವರ್ಗದಲ್ಲಿ ಆಳುವ ‘ಸಹೋದರರಿಗೆ’ ಜನ ಹೇಗೆ ಬೆಂಬಲ ಕೊಟ್ಟರು ಅನ್ನೋದರ ಮೇಲೆ ನ್ಯಾಯತೀರ್ಪು ಮಾಡ್ತಾನೆ.—ಮತ್ತಾಯ 25:34-46.

  •   ದೇವರ ಸರ್ಕಾರದ ರಾಜರ ಒಟ್ಟುಗೂಡಿಸುವಿಕೆ. ಯೇಸು ತನ್ನ ಜೊತೆ ಆಳೋದಕ್ಕೆ ಆರಿಸಿಕೊಂಡ ನಂಬಿಗಸ್ತ ರಾಜರು ತಮ್ಮ ಭೂ ಜೀವನವನ್ನ ಮುಗಿಸಿ ಸ್ವರ್ಗಕ್ಕೆ ಹೋಗ್ತಾರೆ.—ಮತ್ತಾಯ 24:31; 1 ಕೊರಿಂಥ 15:50-53; 1 ಥೆಸಲೊನೀಕ 4:15-17.

  •   ಹರ್ಮಗೆದೋನ್‌. ಇದು “ಸರ್ವಶಕ್ತ ದೇವರ ಮಹಾ ದಿನದಲ್ಲಿ ಆಗೋ ಯುದ್ಧ” ಆಗಿದೆ, ಇದನ್ನ “ಯೆಹೋವನ ದಿನ” ಅಂತನೂ ಕರೆಯಲಾಗಿದೆ. (ಪ್ರಕಟನೆ 16:14, 16; ಯೆಶಾಯ 13:9; 2 ಪೇತ್ರ 3:12) ಯೇಸು ಯಾರನ್ನ ಕೆಟ್ಟವರು ಅಂತ ತೀರ್ಪು ಮಾಡ್ತಾನೋ ಅವ್ರೆಲ್ಲಾ ಈ ಯುದ್ಧದಲ್ಲಿ ನಾಶ ಆಗ್ತಾರೆ. (ಚೆಫನ್ಯ 1:18; 2 ಥೆಸಲೊನೀಕ 1:6-10) ಅಷ್ಟೇ ಅಲ್ಲ, ಲೋಕದಲ್ಲಿರೋ ಎಲ್ಲಾ ರಾಜಕೀಯ ವ್ಯವಸ್ಥೆನೂ ನಾಶ ಆಗುತ್ತೆ. ಈ ರಾಜಕೀಯ ವ್ಯವಸ್ಥೆಯನ್ನ ಬೈಬಲಿನಲ್ಲಿ ಏಳು ತಲೆಯ ಕಾಡುಪ್ರಾಣಿ ಅಂತ ಕರೆಯಲಾಗಿದೆ.—ಪ್ರಕಟನೆ 19:19-21.

ಮಹಾಸಂಕಟ ಆದ ಮೇಲೆ ನಡೆಯೋ ಘಟನೆಗಳು

  •   ಸೈತಾನ ಮತ್ತು ಅವನ ಕೆಟ್ಟ ದೇವದೂತರ ಬಂಧನ. ಒಬ್ಬ ಮಹಾ ದೇವದೂತ, ಸೈತಾನ ಮತ್ತು ಅವನ ಕೆಟ್ಟ ದೇವದೂತರನ್ನ “ಅಗಾಧ ಸ್ಥಳ”ಕ್ಕೆ ತಳ್ಳಿ ಬಿಡ್ತಾನೆ. ಈ ಸ್ಥಳ ಒಬ್ಬ ವ್ಯಕ್ತಿ ಸತ್ತು ಹೋದ್ರೆ ಹೇಗೆ ಏನೂ ಮಾಡೋದಕ್ಕೆ ಆಗಲ್ವೋ ಅಂಥಾ ನಿಷ್ಕ್ರಿಯ ಸ್ಥಿತಿಯನ್ನ ಸೂಚಿಸುತ್ತೆ. (ಪ್ರಕಟನೆ 20:1-3) ಅಗಾಧ ಸ್ಥಳದಲ್ಲಿ ಸೈತಾನ ಜೈಲಿನಲ್ಲಿ ಇರೋ ತರ ಇರ್ತಾನೆ, ಅವನು ಯಾರ ಮೇಲೂ, ಯಾವ ವಿಷ್ಯಗಳ ಮೇಲೂ ಪ್ರಭಾವ ಬೀರೋಕೆ ಆಗಲ್ಲ.—ಪ್ರಕಟನೆ 20:7.

  •   ಸಾವಿರ ವರ್ಷದ ಆಳ್ವಿಕೆಯ ಆರಂಭ. ದೇವರ ಸರ್ಕಾರ ತನ್ನ ಸಾವಿರ ವರ್ಷದ ಆಳ್ವಿಕೆಯನ್ನ ಶುರು ಮಾಡಿದಾಗ ಊಹೆ ಮಾಡೋಕೆ ಆಗದಿರುವಷ್ಟು ಆಶೀರ್ವಾದಗಳು ಮನುಷ್ಯರಿಗೆ ಸಿಗುತ್ತೆ. (ಪ್ರಕಟನೆ 5:9, 10; 20:4, 6) ಯಾರಿಂದನೂ ಲೆಕ್ಕ ಮಾಡೋಕೆ ಆಗದಷ್ಟು ಜನ್ರ ಒಂದು “ದೊಡ್ಡ ಗುಂಪು” “ಮಹಾ ಸಂಕಟವನ್ನ ಪಾರಾಗಿ” ಸಾವಿರ ವರ್ಷದ ಆಳ್ವಿಕೆ ಶುರು ಆಗೋದನ್ನ ಕಣ್ತುಂಬಿಕೊಳ್ಳುತ್ತೆ.—ಪ್ರಕಟನೆ 7:9, 14; ಕೀರ್ತನೆ 37:9-11.

a ಪ್ರಕಟನೆ ಪುಸ್ತಕದಲ್ಲಿ ಸುಳ್ಳು ಧರ್ಮವನ್ನ “ಪ್ರಸಿದ್ಧ ವೇಶ್ಯೆಗೆ” ಹೋಲಿಸಲಾಗಿದೆ, ಅದನ್ನ ಮಹಾ ಬಾಬೆಲ್‌ ಅಂತ ಕರೆಯಲಾಗಿದೆ. (ಪ್ರಕಟನೆ 17:1, 5) ಈ ಮಹಾ ಬಾಬೆಲನ್ನ ಕೆಂಪು ಕಾಡುಪ್ರಾಣಿ ನಾಶ ಮಾಡುತ್ತೆ. ಈ ಕಾಡುಪ್ರಾಣಿ ಲೋಕದ ಎಲ್ಲಾ ರಾಷ್ಟ್ರಗಳನ್ನ ಮತ್ತು ಅವು ಒಗ್ಗಟ್ಟಾಗಿರೋದನ್ನ ಸೂಚಿಸೋ ಸಂಘಟನೆ ಆಗಿದೆ. ಮೊದಲು ಇದನ್ನ ರಾಷ್ಟ್ರ ಸಂಘ ಅಂತ ಕರೀತಿದ್ರು, ಈಗ ಇದು ವಿಶ್ವ ಸಂಸ್ಥೆಯನ್ನ ಸೂಚಿಸುತ್ತೆ.