ಹೊಸ ಯೆರೂಸಲೇಮ್ ಅಂದ್ರೇನು?
ಬೈಬಲ್ ಕೊಡೋ ಉತ್ತರ
“ಹೊಸ ಯೆರೂಸಲೇಮ್” ಅನ್ನೋ ಪದ ಬೈಬಲಲ್ಲಿ ಎರಡು ಸಲ ಇದೆ. ಇದೊಂದು ಸಾಂಕೇತಿಕ ಪಟ್ಟಣ. ಸ್ವರ್ಗಕ್ಕೆ ಹೋಗಿ ದೇವರ ರಾಜ್ಯದಲ್ಲಿ ಯೇಸು ಜೊತೆ ಆಳ್ವಿಕೆ ಮಾಡೋ ಯೇಸುವಿನ ಶಿಷ್ಯರ ಗುಂಪನ್ನ ಇದು ಸೂಚಿಸುತ್ತೆ. (ಪ್ರಕಟನೆ 3:12; 21:2) ಬೈಬಲಲ್ಲಿ ಈ ಗುಂಪನ್ನ ಕ್ರಿಸ್ತನ ವಧು ಅಂತಾನೂ ಹೇಳಿದೆ.
ಹೊಸ ಯೆರೂಸಲೇಮ್ ಅಂದ್ರೇನು ಅಂತ ಅರ್ಥ ಮಾಡ್ಕೊಳ್ಳೋಕೆ ಸಹಾಯ ಮಾಡೋ ವಿಷ್ಯಗಳು
1. ಹೊಸ ಯೆರೂಸಲೇಮ್ ಸ್ವರ್ಗದಲ್ಲಿದೆ. ಬೈಬಲಲ್ಲಿ ಹೊಸ ಯೆರೂಸಲೇಮ್ ಬಗ್ಗೆ ಹೇಳುವಾಗೆಲ್ಲ ಅದು ಸ್ವರ್ಗದಿಂದ ಇಳಿದು ಬರ್ತಿದೆ ಮತ್ತು ಆ ಪಟ್ಟಣದ ಹೆಬ್ಬಾಗಿಲುಗಳನ್ನ ದೇವದೂತರು ಕಾಯ್ತಾ ಇದ್ದಾರೆ ಅಂತ ಹೇಳುತ್ತೆ. (ಪ್ರಕಟನೆ 3:12; 21:2, 10, 12) ಅಷ್ಟೇ ಅಲ್ಲ, ಆ ಪಟ್ಟಣದ ಅಳತೆ ನೋಡಿದ್ರೆ ಅದು ಭೂಮಿ ಮೇಲೆ ಇರೋಕೆ ಸಾಧ್ಯ ಇಲ್ಲ. ಆ ಪಟ್ಟಣದ ಸುತ್ತಳತೆ ಸುಮಾರು 2,220 ಕಿ.ಮೀ. ಇತ್ತು. (ಪ್ರಕಟನೆ 21:16) ಅದ್ರ ಗೋಡೆಗಳು ಸುಮಾರು 560 ಕಿ.ಮೀ. ಎತ್ತರ ಅಂತರಿಕ್ಷದ ತನಕ ಇತ್ತು.
2. ಹೊಸ ಯೆರೂಸಲೇಮ್ ಕ್ರಿಸ್ತನ ವಧು ಆಗಿರೋ ಯೇಸುವಿನ ಶಿಷ್ಯರ ಗುಂಪನ್ನ ಸೂಚಿಸುತ್ತೆ. ಹೊಸ ಯೆರೂಸಲೇಮನ್ನ ‘ವಧು ಅಂದ್ರೆ ಕುರಿಮರಿಯ ಪತ್ನಿ’ ಅಂತ ಬೈಬಲ್ ಹೇಳುತ್ತೆ. (ಪ್ರಕಟನೆ 21:9, 10) ಇಲ್ಲಿ ಕುರಿಮರಿ ಯೇಸುವನ್ನ ಸೂಚಿಸುತ್ತೆ. (ಯೋಹಾನ 1:29; ಪ್ರಕಟನೆ 5:12) “ಕುರಿಮರಿಯ ಪತ್ನಿ” ಅಂದ್ರೆ ಕ್ರಿಸ್ತನ ವಧು ಸ್ವರ್ಗದಲ್ಲಿ ಯೇಸುವಿನ ಜೊತೆ ಸೇರಿ ಆಳೋ ಕ್ರೈಸ್ತರನ್ನ ಸೂಚಿಸುತ್ತೆ. ಯೇಸು ಮತ್ತು ಈ ಕ್ರೈಸ್ತರನ್ನ ಬೈಬಲ್ ಗಂಡ-ಹೆಂಡತಿಗೆ ಹೋಲಿಸಿದೆ. (2 ಕೊರಿಂಥ 11:2; ಎಫೆಸ 5:23-25) ಅಷ್ಟೇ ಅಲ್ಲ, ಹೊಸ ಯೆರೂಸಲೇಮಿನ ಅಸ್ತಿವಾರದ ಕಲ್ಲುಗಳ ಮೇಲೆ “ಹನ್ನೆರಡು ಮಂದಿ ಅಪೊಸ್ತಲರ ಹನ್ನೆರಡು ಹೆಸರುಗಳಿದ್ದವು.” (ಪ್ರಕಟನೆ 21:14) ಸ್ವರ್ಗಕ್ಕೆ ಹೋಗೋ ಕ್ರೈಸ್ತರನ್ನ “ಅಪೊಸ್ತಲರ ಮತ್ತು ಪ್ರವಾದಿಗಳ ಅಸ್ತಿವಾರದ ಮೇಲೆ” ಕಟ್ಟಲಾಗಿದೆ. ಹೊಸ ಯೆರೂಸಲೇಮ್ ಅಂದ್ರೇನು ಅಂತ ಈ ವಿಷ್ಯಗಳಿಂದ ಗೊತ್ತಾಗುತ್ತೆ.—ಎಫೆಸ 2:20.
3. ಹೊಸ ಯೆರೂಸಲೇಮ್ ಸರ್ಕಾರದ ಭಾಗ. ಹಿಂದಿನ ಕಾಲದಲ್ಲಿ ಯೆರೂಸಲೇಮ್ ಇಸ್ರಾಯೇಲಿನ ರಾಜಧಾನಿ ಆಗಿತ್ತು. ಯೆರೂಸಲೇಮಿಂದ ರಾಜ ದಾವೀದ, ಅವನ ಮಗ ಸೊಲೊಮೋನ, ಆಮೇಲೆ ಅವನ ವಂಶದವರು “ಯೆಹೋವನ ಸಿಂಹಾಸನದಲ್ಲಿ ಕೂತುಕೊಂಡು” ಆಳ್ತಿದ್ರು. (1 ಪೂರ್ವಕಾಲವೃತ್ತಾಂತ 29:23) ಯೆರೂಸಲೇಮನ್ನ “ಪವಿತ್ರನಗರ” ಅಂತಾನೂ ಬೈಬಲ್ ಹೇಳುತ್ತೆ. ಹೀಗೆ ದಾವೀದನ ವಂಶ ದೇವರ ಆಳ್ವಿಕೆಯನ್ನ ಪ್ರತಿನಿಧಿಸಿತು. (ನೆಹೆಮೀಯ 11:1) ಹೊಸ ಯೆರೂಸಲೇಮನ್ನ ಕೂಡ ಬೈಬಲ್ “ಪವಿತ್ರ ನಗರ” ಅಂತ ಹೇಳುತ್ತೆ. ಇದು ಯೇಸು ಜೊತೆ ಸೇರಿ ಸ್ವರ್ಗದಿಂದ ‘ಭೂಮಿಯ ಮೇಲೆ ರಾಜರಾಗಿ ಆಳುವವರನ್ನ’ ಸೂಚಿಸುತ್ತೆ.—ಪ್ರಕಟನೆ 5:9, 10; 21:2.
4. ಹೊಸ ಯೆರೂಸಲೇಮ್ ಭೂಮಿಯಲ್ಲಿರೋ ಜನ್ರಿಗೆ ಆಶೀರ್ವಾದ ತರುತ್ತೆ. ಹೊಸ ಯೆರೂಸಲೇಮ್ ‘ಸ್ವರ್ಗದಿಂದ ದೇವರ ಬಳಿಯಿಂದ ಇಳಿದುಬರೋ’ ತರ ಬೈಬಲ್ ಚಿತ್ರಿಸುತ್ತೆ. ಸ್ವರ್ಗ ಬಿಟ್ಟು ಬೇರೆ ಕಡೆನೂ ಇವ್ರ ಮೂಲಕ ದೇವರು ಕೆಲಸ ಮಾಡ್ತಾನೆ ಅಂತ ಇದ್ರಿಂದ ಗೊತ್ತಾಗುತ್ತೆ. (ಪ್ರಕಟನೆ 21:2) ಹಾಗಾಗಿ ಹೊಸ ಯೆರೂಸಲೇಮಿಗೂ ದೇವರ ರಾಜ್ಯಕ್ಕೂ ಸಂಬಂಧ ಇದೆ. ದೇವರು ಇದನ್ನ ಉಪಯೋಗಿಸಿ ‘ಸ್ವರ್ಗದಲ್ಲೂ ಭೂಮಿಯಲ್ಲೂ ತನ್ನ ಚಿತ್ತವನ್ನ ನೆರವೇರಿಸ್ತಾನೆ.’ (ಮತ್ತಾಯ 6:10) ದೇವರು ಭೂಮಿಯಲ್ಲಿರೋ ಜನ್ರಿಗೆ ಈ ಮುಂದಿನ ಆಶೀರ್ವಾದಗಳನ್ನ ಕೊಡ್ತಾನೆ:
ಪಾಪದಿಂದ ಬಿಡುಗಡೆ. ಹೊಸ ಯೆರೂಸಲೇಮಿಂದ “ಜೀವಜಲದ ನದಿ” ಹರಿದು ‘ಜೀವವೃಕ್ಷಗಳಿಗೆ’ ನೀರು ಕೊಟ್ಟು ‘ಜನಾಂಗಗಳನ್ನ ವಾಸಿ ಮಾಡುತ್ತೆ.’ (ಪ್ರಕಟನೆ 22:1, 2) ಅವ್ರನ್ನ ಭೌತಿಕವಾಗಿ, ಆಧ್ಯಾತ್ಮಿಕವಾಗಿ ಪಾಪದಿಂದ ಬಿಡುಗಡೆ ಮಾಡುತ್ತೆ. ಹೀಗೆ ದೇವರು ಮೊದಲು ಅಂದ್ಕೊಂಡಿದ್ದ ಹಾಗೆ ಮನುಷ್ಯರು ಪರಿಪೂರ್ಣ ಜೀವ ಪಡ್ಕೊಳ್ತಾರೆ.—ರೋಮನ್ನರಿಗೆ 8:21.
ಮನುಷ್ಯರ ಮತ್ತು ದೇವರ ಮಧ್ಯ ಒಳ್ಳೇ ಸಂಬಂಧ. ಪಾಪದಿಂದಾಗಿ ಮನುಷ್ಯರು ದೇವರಿಂದ ದೂರ ಆದ್ರು. (ಯೆಶಾಯ 59:2) ಆದ್ರೆ ಪಾಪವನ್ನ ದೇವರು ತೆಗೆದುಹಾಕುವಾಗ ಮುಂದಿನ ಭವಿಷ್ಯವಾಣಿ ಸಂಪೂರ್ಣವಾಗಿ ನೆರವೇರುತ್ತೆ. “ದೇವರ ಗುಡಾರವು ಮಾನವಕುಲದೊಂದಿಗೆ ಇದೆ; ಆತನು ಅವರೊಂದಿಗೆ ವಾಸಮಾಡುವನು ಮತ್ತು ಅವರು ಆತನ ಜನರಾಗಿರುವರು. ದೇವರು ತಾನೇ ಅವರೊಂದಿಗಿರುವನು.”—ಪ್ರಕಟನೆ 21:3.
ಕಷ್ಟ, ಸಾವು ಇರಲ್ಲ. ದೇವರು ತನ್ನ ರಾಜ್ಯದ ಮೂಲಕ ಜನ್ರ ‘ಕಣ್ಣೀರನ್ನ ಒರಸಿಬಿಡ್ತಾನೆ; ಇನ್ನು ಮರಣ, ದುಃಖ, ಗೋಳಾಟ, ನೋವು ಇರಲ್ಲ.’—ಪ್ರಕಟನೆ 21:4.