ಬೈಬಲ್ ವಚನಗಳ ವಿವರಣೆ
ಮತ್ತಾಯ 6:33—“ದೇವರ ಆಳ್ವಿಕೆಗೆ ಮೊದಲ ಸ್ಥಾನ ಕೊಡಿ”
“ನಿಮ್ಮ ಜೀವನದಲ್ಲಿ ದೇವರ ಆಳ್ವಿಕೆಗೆ, ದೇವರ ಮಾತು ಕೇಳೋದಕ್ಕೆ ಯಾವಾಗ್ಲೂ ಮೊದಲ ಸ್ಥಾನ ಕೊಡಿ. ಆಗ ದೇವರೇ ನಿಮಗೆ ಬೇಕಾದ ಎಲ್ಲ ವಿಷ್ಯಗಳನ್ನ ಕೊಡ್ತಾನೆ.”—ಮತ್ತಾಯ 6:33, ಹೊಸ ಲೋಕ ಭಾಷಾಂತರ.
“ಹೀಗಿರುವದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು.” —ಮತ್ತಾಯ 6:33, ಸತ್ಯವೇದವು.
ಮತ್ತಾಯ 6:33—ಅರ್ಥ
ದೇವರ ಆಳ್ವಿಕೆ ಅಂದ್ರೆ ಸ್ವರ್ಗದಿಂದ ದೇವರೇ ನಡೆಸುವ ಸರ್ಕಾರ. ಇದು ದೇವರ ಇಷ್ಟದ ಪ್ರಕಾರ ಭೂಮಿ ಮೇಲೆ ಆಳ್ವಿಕೆ ಮಾಡುತ್ತೆ. (ಮತ್ತಾಯ 6:9, 10) ದೇವರ ಆಳ್ವಿಕೆಗೆ ಮೊದಲ ಸ್ಥಾನ ಕೊಡೋದರ ಅರ್ಥ, ಅದೇ ತಮ್ಮ ಜೀವನದಲ್ಲಿ ಬೇರೆಲ್ಲದಕ್ಕಿಂತ ಪ್ರಾಮುಖ್ಯ ಅಂತ ಯೋಚಿಸುವುದು. a ದೇವರ ಸರ್ಕಾರದ ಬಗ್ಗೆ ತಿಳಿದುಕೊಳ್ಳುವುದು ಮಾತ್ರ ಅಲ್ಲ, ಅದು ತರುವಂಥ ಆಶೀರ್ವಾದಗಳು ಮತ್ತು ಪ್ರಯೋಜನಗಳ ಬಗ್ಗೆ ಬೇರೆಯವರಿಗೆ ಹೇಳೋದು ಕೂಡ ಸೇರಿದೆ. (ಮತ್ತಾಯ 24:14) ದೇವರ ಸರ್ಕಾರಕ್ಕೆ ಮೊದಲ ಸ್ಥಾನ ಕೊಡುವ ವ್ಯಕ್ತಿ, ಅದು ಈ ಭೂಮಿ ಮೇಲೆ ಬರಬೇಕು ಅಂತ ಪ್ರಾರ್ಥನೆ ಮಾಡ್ತಾನೆ. —ಲೂಕ 11:2.
ದೇವರ ನೀತಿಗಾಗಿ ಹುಡುಕುವುದು ಅಂದ್ರೆ ಒಬ್ಬ ವ್ಯಕ್ತಿ ಯಾವುದು ಸರಿ, ಯಾವುದು ತಪ್ಪು ಅಂತ ದೇವರು ಹೇಳೋ ತರ ನಡೆದುಕೊಳ್ತಾನೆ. (ಕೀರ್ತನೆ 119:172) ದೇವರ ನೈತಿಕ ಮಟ್ಟಗಳನ್ನ ಪಾಲಿಸಿ ಅದರಿಂದ ಪ್ರಯೋಜನ ಪಡಕೊಳ್ತಾನೆ—ಯೆಶಾಯ 48:17.
ನಿಮಗೆ ಬೇಕಾದ ಎಲ್ಲ ವಿಷ್ಯಗಳನ್ನ ಕೊಡ್ತಾನೆ ಅಂದ್ರೆ ದೇವರ ಆಳ್ವಿಕೆಗೆ ಮತ್ತು ಆತನ ಮಾತಿಗೆ ಯಾರು ತಮ್ಮ ಜೀವನದಲ್ಲಿ ಮೊದಲ ಸ್ಥಾನ ಕೊಡ್ತಾರೋ ಅವರಿಗೆ ಬೇಕಾದ ಎಲ್ಲವನ್ನ ಪೂರೈಸ್ತೀನಿ ಅಂತ ದೇವರು ಮಾತು ಕೊಟ್ಟಿದ್ದಾನೆ.—ಮತ್ತಾಯ 6:31, 32.
ಮತ್ತಾಯ 6:33—ಸಂದರ್ಭ
ಮತ್ತಾಯ 5-7 ಅಧ್ಯಾಯಗಳಲ್ಲಿ ತಿಳಿಸಿರುವ ಮಾತುಗಳನ್ನು ಯೇಸು ಬೆಟ್ಟದ ಮೇಲೆ ಭಾಷಣ ಕೊಡ್ತಿರುವಾಗ ಹೇಳಿದನು. ಯೇಸುವಿನ ಶಿಷ್ಯರಲ್ಲಿ ತುಂಬ ಜನ ಬಡವರಾಗಿದ್ರು. ಪ್ರತಿ ದಿನ ದುಡಿದು ಜೀವನ ನಡೆಸೋದೇ ಕಷ್ಟ ಆಗಿತ್ತು ಆದ್ರಿಂದ ಅವರಿಗೆ ದೇವರ ಸರ್ಕಾರದ ಬಗ್ಗೆ ಯೋಚಿಸೋಕೆ ಸಮಯ ಇರುತ್ತಿರಲಿಲ್ಲ. ಅಲ್ಲಿದ್ದ ಜನರಿಗೆ ಯೇಸು, ಪ್ರಾಣಿ ಮತ್ತು ಗಿಡಗಳನ್ನ ದೇವರು ಹೇಗೆಲ್ಲ ಪೋಷಿಸ್ತಾನೆ ಅಂತ ಹೇಳಿಕೊಡುವ ಮೂಲಕ ಅವರಿಗೆ ಚೈತನ್ಯ ತುಂಬಿಸಿದನು. ಅದೇ ತರ ಆತನ ಸರ್ಕಾರವನ್ನ ಹುಡುಕುವವರಿಗೂ ದೇವರು ಹಾಗೇ ನೋಡಿಕೊಳ್ಳುತ್ತಾನೆ ಅಂತ ಪ್ರೋತ್ಸಾಹ ಕೊಟ್ಟನು.—ಮತ್ತಾಯ 6:25-30.
ಮತ್ತಾಯ 6:33—ತಪ್ಪಭಿಪ್ರಾಯಗಳು
ತಪ್ಪಭಿಪ್ರಾಯ: ದೇವರ ಆಳ್ವಿಕೆ ಬಗ್ಗೆ ತಿಳಿದುಕೊಳ್ಳುವವರು ಶ್ರೀಮಂತರಾಗುತ್ತಾರೆ.
ನಿಜ: ಯೇಸು ಹೇಳಿದ ಮಾತಿನ ಅರ್ಥ ಯಾರು ದೇವರ ವಿಷಯಗಳನ್ನ ಕಲಿಯೋಕೆ ತಮ್ಮ ಜೀವನದಲ್ಲಿ ಮೊದಲ ಸ್ಥಾನ ಕೊಡ್ತಾರೋ ಅವರಿಗೆ ಊಟ, ಬಟ್ಟೆ, ಜೀವನ ನಡೆಸಲು ಬೇಕಾದ ವಿಷಯಗಳು ಸಿಗುತ್ತವೆ. (ಮತ್ತಾಯ 6:25, 31, 32) ಆದರೆ ಸುಖದ ಸುಪ್ಪತ್ತಿಗೆಯಲ್ಲಿ ಇರಬಹುದು ಅಥವಾ ನಾವು ನೆನಸಿದ್ದೆಲ್ಲವನ್ನ ದೇವರು ಕೊಡ್ತಾನೆ ಅಂತ ಹೇಳಲಿಲ್ಲ. ಬದಲಾಗಿ ಭೂಮಿಯಲ್ಲಿ ಆಸ್ತಿ ಪಾಸ್ತಿ ಸೇರಿಸಿಕೊಳ್ಳಬೇಡಿ. ದೇವರ ವಿಷಯಗಳನ್ನ ಹುಡುಕೋಕೆ ಐಶ್ವರ್ಯ ತಡೆಯಾಗಿ ಇರುತ್ತೆ ಅಂತ ಯೇಸು ತನ್ನ ಶಿಷ್ಯರಿಗೆ ಎಚ್ಚರಿಕೆ ಕೊಟ್ಟನು. (ಮತ್ತಾಯ 6:19, 20, 24) ಅಪೊಸ್ತಲ ಪೌಲ ತನ್ನ ಜೀವನದಲ್ಲಿ ದೇವರ ಸೇವೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟ ಆದರೂ ಅವನು ಬಡವನಾಗಿದ್ದ, ಜೀವನ ನಡೆಸೋಕೆ ಕಷ್ಟ ಪಟ್ಟು ಸಣ್ಣ ಪುಟ್ಟ ಕೆಲಸ ಮಾಡ್ತಿದ್ದ. ಯೇಸು ತರಾನೇ ಪೌಲ ಸಹ ಶ್ರೀಮಂತರಾಗೋಕೆ ಪ್ರಯತ್ನಿಸಿದ್ರೆ ಏನೆಲ್ಲಾ ಅಪಾಯಗಳು ಬರುತ್ತೆ ಅನ್ನೋ ಎಚ್ಚರಿಕೆಗಳನ್ನ ಕೊಟ್ಟ.—ಫಿಲಿಪ್ಪಿ 4:11, 12; 1 ತಿಮೊತಿ 6:6-10.
ತಪ್ಪಭಿಪ್ರಾಯ: ಕ್ರೈಸ್ತರು ಜೀವನ ನಡೆಸಲು ಕೆಲಸ ಮಾಡುವ ಅಗತ್ಯವಿಲ್ಲ.
ನಿಜ: ತಮ್ಮ ಕುಟುಂಬವನ್ನ ನೋಡಿಕೊಳ್ಳೋಕೆ ಒಬ್ಬ ಕ್ರೈಸ್ತ ಕೆಲಸ ಮಾಡಬೇಕು ಅಂತ ಬೈಬಲ್ ಹೇಳುತ್ತೆ. (1 ಥೆಸಲೊನೀಕ 4:11, 12; 2 ಥೆಸಲೊನೀಕ 3:10; 1 ತಿಮೊತಿ 5:8) ದೇವರ ಸರ್ಕಾರನ ಮಾತ್ರ ಹುಡುಕಬೇಕು ಅಂತ ಯೇಸು ತನ್ನ ಶಿಷ್ಯರಿಗೆ ಹೇಳಲಿಲ್ಲ, ಬದಲಿಗೆ ದೇವರ ಸರ್ಕಾರಕ್ಕೆ ಮೊದಲ ಸ್ಥಾನ ಕೊಡಬೇಕು ಅಂತ ಹೇಳಿದ.
ದೇವರ ಸೇವೆಗೆ ಮೊದಲ ಸ್ಥಾನ ಕೊಡುತ್ತಾ ತನ್ನ ಕುಟುಂಬವನ್ನು ನೋಡಿಕೊಳ್ಳೋಕೆ ಕಷ್ಟಪಟ್ಟು ಕೆಲಸಮಾಡುವವರಿಗೆ ದೇವರು ಅವರ ಜೀವನದ ಅವಶ್ಯಕತೆಗಳನ್ನ ಪೂರೈಸಿಕೊಳ್ಳೋಕೆ ಸಹಾಯ ಮಾಡ್ತಾರೆ.—1 ತಿಮೊತಿ 6:17-19.
a ಯಾವಾಗ್ಲೂ ಮೊದಲ ಸ್ಥಾನ ಕೊಡಿ, ಇದರಲ್ಲಿ ಉಪಯೋಗಿಸಿರುವ ಗ್ರೀಕ್ ಕ್ರಿಯಾಪದ ಶ್ರಮಪಟ್ಟು ಪ್ರಯತ್ನಹಾಕಿ ಮುಂದುವರಿಯೋದನ್ನು ಸೂಚಿಸುತ್ತದೆ. ಇದು “ಸತತವಾಗಿ ಪ್ರಯತ್ನ” ಮಾಡೋದನ್ನ ತಿಳಿಸುತ್ತದೆ. ದೇವರ ಸೇವೆ ಜೀವನದಲ್ಲಿ ಆದ್ಯತೆ ಕೊಡುವ ತುಂಬ ಮುಖ್ಯವಾದ ವಿಷಯವಾಗಿರಬೇಕು ಬದಲಾಗಿ ಯಾವಾಗಲೋ ಒಂದು ಸಲ ಮಾಡುವ ವಿಷಯ ಆಗಿರಬಾರದು.