ಬೈಬಲ್ ವಚನಗಳ ವಿವರಣೆ
ವಿಮೋಚನಕಾಂಡ 20:12—“ನಿಮ್ಮ ಅಪ್ಪಅಮ್ಮನಿಗೆ ಗೌರವ ಕೊಡಿ”
“ನಿಮ್ಮ ಅಪ್ಪಅಮ್ಮನಿಗೆ ಗೌರವ ಕೊಡಿ. ಗೌರವ ಕೊಟ್ರೆ ನಿಮ್ಮ ದೇವರಾದ ಯೆಹೋವ ನಿಮಗೆ ಕೊಡೋ ದೇಶದಲ್ಲಿ ಜಾಸ್ತಿ ವರ್ಷ ಬದುಕ್ತೀರ.”—ವಿಮೋಚನಕಾಂಡ 20:12, ಹೊಸ ಲೋಕ ಭಾಷಾಂತರ.
“ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು; ಸನ್ಮಾನಿಸಿದರೆ ನಿನ್ನ ದೇವರಾದ ಯೆಹೋವನು ನಿನಗೆ ಅನುಗ್ರಹಿಸುವ ದೇಶದಲ್ಲಿ ನೀನು ಬಹುಕಾಲ ಇರುವಿ.”—ವಿಮೋಚನಕಾಂಡ 20:12, ಸತ್ಯವೇದವು.
ವಿಮೋಚನಕಾಂಡ 20:12—ಅರ್ಥ
ಅಪ್ಪಅಮ್ಮನಿಗೆ ಗೌರವ ಕೊಡಬೇಕು ಅಂತ ದೇವರು ಹಿಂದಿನ ಕಾಲದ ಇಸ್ರಾಯೇಲ್ಯರಿಗೆ ಆಜ್ಞೆ ಕೊಟ್ಟನು. ಆ ಆಜ್ಞೆಯನ್ನು ಪಾಲಿಸಿದರೆ ಪ್ರಯೋಜನ ಸಿಗುತ್ತೆ ಅಂತ ಹೇಳಿದನು. ಧರ್ಮಶಾಸ್ತ್ರ ಅಂದ್ರೆ ದೇವರು ಆ ಇಸ್ರಾಯೇಲ್ಯರಿಗೆ ಕೊಟ್ಟ ನಿಯಮವನ್ನು ಕ್ರೈಸ್ತರು ಪಾಲಿಸುವ ಅವಶ್ಯಕತೆ ಇಲ್ಲದಿದ್ರೂ ದೇವರ ಮಟ್ಟಗಳು ಇವತ್ತಿಗೂ ಬದಲಾಗಿಲ್ಲ. ಅದರಲ್ಲಿರುವ ತತ್ವಗಳಿಂದ ಇವತ್ತಿಗೂ ಪ್ರಯೋಜನ ಇದೆ. ಹಾಗಾಗಿ ಅಪ್ಪಅಮ್ಮನಿಗೆ ಗೌರವ ಕೊಡಬೇಕು ಎಂಬ ನಿಯಮ ನಮಗೆ ತುಂಬ ಮುಖ್ಯ.—ಕೊಲೊಸ್ಸೆ 3:20.
ಮಕ್ಕಳು ಚಿಕ್ಕವರಾಗಿರಲಿ ದೊಡ್ಡವರಾಗಿರಲಿ ಅಪ್ಪಅಮ್ಮನಿಗೆ ಗೌರವ ಕೊಟ್ಟು ಅವರ ಮಾತು ಕೇಳಬೇಕು. (ಯಾಜಕಕಾಂಡ 19:3; ಜ್ಞಾನೋಕ್ತಿ 1:8) ಮಕ್ಕಳು ದೊಡ್ಡವರಾಗಿ ಕುಟುಂಬಸ್ಥರಾದ್ರೂ ಅಪ್ಪಅಮ್ಮನಿಗೆ ಸಹಾಯ ಮಾಡಬೇಕು, ಅವರನ್ನು ಪ್ರೀತಿಸಬೇಕು. ಉದಾಹರಣೆಗೆ, ವಯಸ್ಸಾದ ಅಪ್ಪಅಮ್ಮನಿಗೆ ಬೇಕಾದ ಆರೈಕೆ ಸಿಗುವ ತರ ನೋಡಿಕೊಳ್ಳಬೇಕು, ಅಗತ್ಯವಿದ್ದಾಗ ಹಣಕಾಸಿನ ವಿಷಯಲ್ಲೂ ಸಹಾಯ ಮಾಡಬೇಕು.—ಮತ್ತಾಯ 15:4-6; 1 ತಿಮೊತಿ 5:4, 8.
ಇಸ್ರಾಯೇಲ್ಯ ಮಕ್ಕಳು ಅಪ್ಪನಿಗೆ ಗೌರವ ಕೊಡುವ ಹಾಗೆ ಅಮ್ಮನಿಗೂ ಗೌರವ ಕೊಡಬೇಕಿತ್ತು ಅನ್ನೋದನ್ನು ಗಮನಿಸಿ. ಏಕೆಂದರೆ ಕುಟುಂಬದಲ್ಲಿ ಅಮ್ಮನಿಗೂ ಮುಖ್ಯ ಸ್ಥಾನ ಇತ್ತು. (ಜ್ಞಾನೋಕ್ತಿ 6:20; 19:26) ಇವತ್ತು ಕೂಡ ಮಕ್ಕಳು ಅಪ್ಪಅಮ್ಮ ಇಬ್ಬರಿಗೂ ಗೌರವ ಕೊಡಬೇಕು.
ಆದರೆ ದೇವರ ಮಾತನ್ನು ಮೀರುವ ಏನನ್ನಾದ್ರು ಮಾಡಲು ಅಪ್ಪಅಮ್ಮ ಹೇಳಿದರೆ ಅದನ್ನು ಇಸ್ರಾಯೇಲ್ಯ ಮಕ್ಕಳು ಯಾವತ್ತೂ ಮಾಡಬಾರದಿತ್ತು. ಅಪ್ಪಅಮ್ಮ ಆಗಲಿ ಬೇರೆ ಯಾರೇ ಆಗಲಿ ಅಂಥದ್ದೇನಾದ್ರೂ ಹೇಳಿದರೆ ಅವರ ಮಾತು ಕೇಳುವ ಅವಶ್ಯಕತೆ ಇರಲಿಲ್ಲ. (ಧರ್ಮೋಪದೇಶಕಾಂಡ 13:6-8) ಇವತ್ತು ಕೂಡ ಕ್ರೈಸ್ತರು, ‘ಮನುಷ್ಯರಿಗಿಂತ ಹೆಚ್ಚಾಗಿ ದೇವ್ರಿಗೇ ವಿಧೇಯರಾಗುತ್ತಾರೆ.’—ಅಪೊಸ್ತಲರ ಕಾರ್ಯ 5:29.
ಇಸ್ರಾಯೇಲ್ಯರಿಗೆ ದೇವರು ಕೊಟ್ಟ ನಿಯಮ ಪುಸ್ತಕದಲ್ಲಿ ಮಕ್ಕಳು ಅಪ್ಪಅಮ್ಮನಿಗೆ ಗೌರವ ಕೊಟ್ಟರೆ ದೇವರು ಕೊಡೋ ದೇಶದಲ್ಲಿ ‘ಜಾಸ್ತಿ ವರ್ಷ ಬದುಕ್ತಾರೆ, ಅವರಿಗೆ ಒಳ್ಳೇದಾಗುತ್ತೆ’ ಅಂತಿದೆ. (ಧರ್ಮೋಪದೇಶಕಾಂಡ 5:16) ದೇವರ ನಿಯಮನ ಅಸಡ್ಡೆ ಮಾಡಿ ಹೆತ್ತವರ ವಿರುದ್ಧ ದಂಗೆ ಏಳುವ ಮಕ್ಕಳಿಗೆ ಸಿಗುವ ಶಿಕ್ಷೆ ಅಂಥ ಮಕ್ಕಳಿಗೆ ಸಿಗುತ್ತಿರಲಿಲ್ಲ. (ಧರ್ಮೋಪದೇಶಕಾಂಡ 21:18-21) ಕಾಲ ಬದಲಾದ್ರೂ ಆ ನಿಯಮಗಳಿಗೆ ಆಧಾರವಾಗಿರೋ ತತ್ವಗಳು ಬದಲಾಗಿಲ್ಲ. (ಎಫೆಸ 6:1-3) ಚಿಕ್ಕವರಾಗಿರಲಿ ದೊಡ್ಡವರಾಗಿರಲಿ ನಾವು ನಮ್ಮ ಸೃಷ್ಟಿಕರ್ತನಿಗೆ ಲೆಕ್ಕ ಕೊಡಬೇಕು. ಸೃಷ್ಟಿಕರ್ತನ ಮತ್ತು ಅಪ್ಪಅಮ್ಮನ ಮಾತು ಕೇಳೋ ಮಕ್ಕಳು ಆತನು ಹೇಳಿದ ಹಾಗೆ ತುಂಬ ವರ್ಷ ಬದುಕುತ್ತಾರೆ. ಹೇಳಬೇಕಂದರೆ, ಶಾಶ್ವತವಾಗಿ ಬದುಕುವ ನಿರೀಕ್ಷೆ ಅವರಿಗಿದೆ.—1 ತಿಮೊತಿ 4:8; 6:18, 19.
ವಿಮೋಚನಕಾಂಡ 20:12—ಸಂದರ್ಭ
ವಿಮೋಚನಕಾಂಡ 20:12 ರಲ್ಲಿರೋ ಆಜ್ಞೆಗೆ ದಶಾಜ್ಞೆಗಳಲ್ಲಿ ಒಂದು ವಿಶೇಷ ಸ್ಥಾನ ಇದೆ. (ವಿಮೋಚನಕಾಂಡ 20:1-17) ಹೇಗೆ? ಈ ಆಜ್ಞೆಗೆ ಮುಂಚೆ ಇರೋ ಆಜ್ಞೆಗಳು ದೇವರ ಆರಾಧನೆಗೆ ಸಂಬಂಧಪಟ್ಟಿವೆ. ಅವುಗಳಲ್ಲಿ ಒಂದು ದೇವರೊಬ್ಬನನ್ನೇ ಆರಾಧಿಸಬೇಕು ಅನ್ನೋ ಆಜ್ಞೆ. ಅಪ್ಪಅಮ್ಮನಿಗೆ ಗೌರವ ಕೊಡಬೇಕು ಅನ್ನೋ ಆಜ್ಞೆ ನಂತರ ಇರೋ ಆಜ್ಞೆಗಳು ಬೇರೆಯವರ ಜೊತೆ ಹೇಗೆ ನಡೆದುಕೊಳ್ಳಬೇಕು ಅನ್ನೋ ವಿಷಯಕ್ಕೆ ಸಂಬಂಧಪಟ್ಟಿವೆ. ಉದಾಹರಣೆಗೆ ಬಾಳಸಂಗಾತಿಗೆ ದ್ರೋಹ ಮಾಡಬಾರದು, ಕದಿಬಾರದು ಮುಂತಾದವು. ಹಾಗಾಗಿ ಒಬ್ಬ ವ್ಯಕ್ತಿ ವಿಮೋಚನಕಾಂಡ 20:12 ರಲ್ಲಿರೋ ಆಜ್ಞೆಯನ್ನು ಪಾಲಿಸಿದರೆ ದೇವರ ಮತ್ತು ಬೇರೆಯವರ ವಿಷಯದಲ್ಲಿ ಅವನಿಗಿರೋ ಕರ್ತವ್ಯಗಳನ್ನು ಪಾಲಿಸುತ್ತಾನೆ ಅಂತ ಹೇಳಬಹುದು. ಹಾಗಾಗಿ ಅಪ್ಪಅಮ್ಮನಿಗೆ ಗೌರವ ಕೊಡಬೇಕು ಅನ್ನೋ ಆಜ್ಞೆ ಅದಕ್ಕೆ ಮುಂಚೆ ಇರೋ 4 ಆಜ್ಞೆಗಳನ್ನು ಮತ್ತು ನಂತರ ಇರೋ 5 ಆಜ್ಞೆಗಳನ್ನು ಸೇರಿಸುವ ಕೊಂಡಿಯಾಗಿದೆ.
ವಿಮೋಚನಕಾಂಡ ಅಧ್ಯಾಯ 20 ಓದಿ. ಜೊತೆಗೆ ಪಾದಟಿಪ್ಪಣಿಗಳನ್ನು ಮತ್ತು ಅಡ್ಡ ಉಲ್ಲೇಖಗಳನ್ನು ಸಹ ಓದಿ.