ಮಾಹಿತಿ ಇರುವಲ್ಲಿ ಹೋಗಲು

ಯುವಜನರ ಪ್ರಶ್ನೆಗಳು

ನಾನು ಚೆನ್ನಾಗಿ ಮಾತಾಡೋ ಕಲೆನಾ ಬೆಳೆಸಿಕೊಳ್ಳೋಕೆ ಏನು ಮಾಡಲಿ?

ನಾನು ಚೆನ್ನಾಗಿ ಮಾತಾಡೋ ಕಲೆನಾ ಬೆಳೆಸಿಕೊಳ್ಳೋಕೆ ಏನು ಮಾಡಲಿ?

 ಮುಖಾಮುಖಿಯಾಗಿ ಮಾತಾಡೋದು ಯಾಕೆ ಒಳ್ಳೇದು?

 ಜನರ ಹತ್ರ ಮುಖಾಮುಖಿಯಾಗಿ ಮಾತಾಡೋಕೆ ತುಂಬಾ ಕಷ್ಟ ಆಗುತ್ತೆ, ಆದ್ರೆ ಮೆಸೆಜನ್ನ ಸುಲಭವಾಗಿ ಮಾಡಿಬಿಡಬಹುದು ಅಂತ ತುಂಬಾ ಜನ ಹೇಳ್ತಾರೆ.

 “ಜನ್ರ ಹತ್ರ ನೇರವಾಗಿ ಮಾತಾಡೋಕೆ ತುಂಬಾ ಕಷ್ಟ, ಯಾಕಂದ್ರೆ ಒಂದು ಸಲ ಹೇಳಿದ ಮಾತನ್ನ ನಾವು ಸರಿ ಮಾಡೋಕೂ ಆಗಲ್ಲ, ಡಿಲೀಟ್‌ ಮಾಡೋಕೂ ಆಗಲ್ಲ.”—ಆ್ಯನಾ.

 “ಮೆಸೆಜ್‌ ಮಾಡೋದು ಈಗಾಗಲೇ ರೆಕಾರ್ಡ್‌ ಮಾಡಿರೋ ಪ್ರೋಗ್ರಾಮ್‌ ತರ, ಆದ್ರೆ ಬೇರೆವ್ರ ಜೊತೆ ಮಾತಾಡೋದು ನೇರ ಪ್ರಸಾರದ ತರ. ನಾನು ಬೇರೆವ್ರ ಜೊತೆ ಮಾತಾಡೋವಾಗ ಹುಷಾರಾಗಿ ಮಾತಾಡಬೇಕು ಮತ್ತು ಬಾಯಿ ತಪ್ಪಿ ಏನು ಹೇಳಬಾರದು ಅಂತ ಆಗಾಗ ಜ್ಞಾಪಕ ಮಾಡ್ಕೊತೀನಿ.”—ಜೆನ್‌.

 ಒಂದಲ್ಲ ಒಂದು ದಿನ ನಾವು ಬೇರೆವ್ರ ಹತ್ರ ಚೆನ್ನಾಗಿ ಮಾತಾಡೋದನ್ನ ಕಲಿಲೇಬೇಕಾಗುತ್ತೆ. ಉದಾಹರಣೆಗೆ, ಫ್ರೆಂಡ್ಸ್‌ ಮಾಡ್ಕೊಳ್ಳೋಕೆ, ಕೆಲಸ ಹುಡುಕೋಕೆ, ಸಿಕ್ಕಿದ ಕೆಲ್ಸನಾ ಉಳಿಸಿಕೊಳ್ಳೋಕೆ, ಮದ್ವೆ ವಯಸ್ಸಿಗೆ ಬಂದಾಗ ಒಳ್ಳೇ ಸಂಗಾತಿ ಹುಡುಕೋಕೂ ಮಾತಿನ ಕಲೆ ಬೇಕಾಗುತ್ತೆ.

 ಆದ್ರೆ ನಿಜ ಏನಂದ್ರೆ, ಜನರ ಹತ್ರ ಮುಖಾಮುಖಿಯಾಗಿ ಮಾತಾಡೋಕೆ ಭಯ ಪಡಬೇಕಾಗಿಲ್ಲ. ಒಂದುವೇಳೆ ನೀವು ನಾಚಿಕೆ ಸ್ವಭಾವದವರಾಗಿದ್ರೂ ಮಾತಿನ ಕಲೆ ಬೆಳೆಸಿಕೊಳ್ಳಬಹುದು.

 “ಕೆಲವೊಂದು ಸಲ ನಾವು ತಪ್ಪಾಗಿ ಮಾತಾಡಿ ಆಮೇಲೆ ‘ಅಯ್ಯೋ ನಾನ್ಯಾಕೆ ಹೀಗೆ ಮಾತಾಡಿದೆ’ ಅಂತ ಅನಿಸಬಹುದು. ಒಂದು ವಿಷ್ಯ ಮರಿಬೇಡಿ, ತಪ್ಪಾಗೋದು ಸಹಜ.”—ನೀಲ್‌.

 ಮಾತನ್ನ ಹೇಗೆ ಶುರು ಮಾಡೋದು?

  •   ಪ್ರಶ್ನೆ ಕೇಳಿ. ಜನರಿಗೆ ಯಾವ ವಿಷ್ಯದಲ್ಲಿ ಆಸಕ್ತಿ ಇದೆ ಅಂತ ಯೋಚ್ನೆ ಮಾಡಿ, ಅದ್ರ ಬಗ್ಗೆ ಮಾತು ಶುರು ಮಾಡಿ. ಉದಾಹರಣೆಗೆ:

     “ರಜೆಯಲ್ಲಿ ಎಲ್ಲಾದ್ರೂ ಹೋಗಿದ್ರಾ?”

     “ಈ ವೆಬ್‌ಸೈಟ್‌ ತುಂಬಾ ಚೆನ್ನಾಗಿದೆ. ನೀವು ಇದನ್ನ ನೋಡಿದ್ದೀರಾ?”

     “ನೀವು . . . ಇದ್ರ ಬಗ್ಗೆ ಕೇಳಿದ್ದೀರಾ?”

     ಇನ್ನೂ ನಿರ್ದಿಷ್ಟವಾಗಿ ಮಾತಾಡಬೇಕಾ? ನಿಮಗೂ ಮತ್ತೆ ನಿಮ್ಮ ಜೊತೆ ಮಾತಾಡೋರಿಗೂ ಇಷ್ಟ ಆಗೋ ವಿಷ್ಯದ ಬಗ್ಗೆ ಮಾತಾಡಿ. ಉದಾಹರಣೆಗೆ, ನೀವಿಬ್ಬರೂ ಒಂದೇ ಸ್ಕೂಲಲ್ಲಿ ಅಥವಾ ಒಂದೇ ಜಾಗದಲ್ಲಿ ಕೆಲ್ಸ ಮಾಡ್ತಿರಬಹುದು. ಅದ್ರ ಬಗ್ಗೆ ಪ್ರಶ್ನೆ ಕೇಳ್ತಾ ಮಾತು ಮುಂದುವರೆಸಿ.

     ನಿಮಗೆ ಆಸಕ್ತಿ ಇರೋ ವಿಷ್ಯದ ಬಗ್ಗೆ ಯೋಚ್ನೆ ಮಾಡಿ ಮತ್ತು ನೀವು ಯಾವ ಪ್ರಶ್ನೆಗಳಿಗೆ ಬೇರೆವ್ರಿಂದ ಉತ್ರ ತಿಳ್ಕೊಳ್ಳೋಕೆ ಇಷ್ಟಪಡ್ತೀರಾ ಅಂತಾನೂ ಯೋಚ್ನೆ ಮಾಡಿ.”—ಮಾರಿಟ್‌ಜ಼ಾ.

     ಹುಷಾರಾಗಿರಿ: ಪತ್ತೆದಾರಿಗಳ ತರ ಒಂದಾದ ಮೇಲೆ ಒಂದು ಪ್ರಶ್ನೆ ಕೇಳೋಕೆ ಹೋಗಬೇಡಿ. ತೀರ ವೈಯಕ್ತಿಕ ಪ್ರಶ್ನೆಗಳನ್ನೂ ಕೇಳಬೇಡಿ. “ಯಾವುದಕ್ಕೆ ನೀವು ತುಂಬಾ ಭಯಪಡ್ತೀರಾ?” “ಯಾಕೆ ನೀವು ಯಾವಾಗ್ಲೂ ಬ್ಲೂ ಕಲರ್‌ ಬಟ್ಟೆನೇ ಹಾಕೊತೀರಾ?” ಈ ತರ ಪ್ರಶ್ನೆಗಳನ್ನ ಕೇಳಬೇಡಿ. ಅದ್ರಲ್ಲೂ ಎರಡನೇ ಪ್ರಶ್ನೆಯಂತೂ ಅವ್ರನ್ನ ಆಡಿಕೊಳ್ಳೋ ತರ ಅನಿಸಬಹುದು.

     ಈ ತರ ಆಗಬಾರದು ಅಂದ್ರೆ ಪ್ರಶ್ನೆ ಕೇಳಿದ ಮೇಲೆ ಅಥವಾ ಅದಕ್ಕೂ ಮುಂಚೆ ಆ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅಂತ ಹೇಳಿ. ಆಗ ಅದು ಸಂದರ್ಶನದ ತರ ಅಲ್ಲ, ಸಂಭಾಷಣೆ ತರ ಇರುತ್ತೆ.

    ನೀವು ಕೇಳೋ ಪ್ರಶ್ನೆಗಳು ಬೇರೆಯವರಿಗೆ ನೀವೊಬ್ಬ ಪತ್ತೆದಾರಿ ಅನ್ನೋ ತರ ಮಾಡುತ್ತಾ?

     ಬೈಬಲ್‌ ಹೇಳೋ ಮಾತು: “ಮನುಷ್ಯನ ಮನಸ್ಸಲ್ಲಿರೋ ಯೋಚ್ನೆಗಳು ಬಾವಿ ನೀರಿನ ತರ, ಬುದ್ಧಿವಂತ ಅದನ್ನ ಸೇದ್ತಾನೆ.”—ಜ್ಞಾನೋಕ್ತಿ 20:5.

  •   ಚೆನ್ನಾಗಿ ಕೇಳಿಸಿಕೊಳ್ಳಿ. ನೀವು ಚೆನ್ನಾಗಿ ಮಾತಾಡಬೇಕಂದ್ರೆ ಮೊದಲು ಕೇಳಿಸಿಕೊಳ್ಳಬೇಕು. ಗಮನ ಕೊಟ್ಟು ಕೇಳಿಸಿಕೊಂಡರೆ ಚೆನ್ನಾಗಿ ಮಾತಾಡೋಕೆ ಆಗುತ್ತೆ.

     “ನಾನು ಯಾರ ಜೊತೆ ಮಾತಾಡ್ತಿನೋ ಅವ್ರ ಬಗ್ಗೆ ಒಂದು ಹೊಸ ವಿಷ್ಯ ತಿಳ್ಕೊಳ್ಳೋಕೆ ಪ್ರಯತ್ನ ಮಾಡ್ತೀನಿ. ಅದನ್ನ ಜ್ಞಾಪಕದಲ್ಲಿ ಇಟ್ಕೊಂಡು ಮುಂದೆ ಯಾವ ಪ್ರಶ್ನೆ ಕೇಳಬೇಕು ಅಂತ ಯೋಚ್ನೆ ಮಾಡ್ತೀನಿ. ಇದ್ರಿಂದ ನಮ್ಮ ಮಾತುಕತೆ ಮುಂದುವರೆಯುತ್ತೆ.”—ತಾಮರ.

     ಹುಷಾರಾಗಿರಿ: ಮುಂದೆ ಏನು ಮಾತಾಡಬೇಕು ಅಂತ ಜಾಸ್ತಿ ತಲೆ ಕೆಡಿಸಿಕೊಳ್ಳಬೇಡಿ. ಬೇರೆವ್ರ ಮಾತನ್ನ ಚೆನ್ನಾಗಿ ಕೇಳಿಸಿಕೊಂಡ್ರೆ ಮುಂದೆ ಏನು ಮಾತಾಡಬೇಕು ಅಂತ ನಿಮಗೇ ಗೊತ್ತಾಗುತ್ತೆ.

     ಬೈಬಲ್‌ ಹೇಳೋ ಮಾತು: “ಕೇಳಿಸ್ಕೊಳ್ಳೋದನ್ನ ಜಾಸ್ತಿ ಮಾಡಿ, ಮಾತಾಡೋದನ್ನ ಕಮ್ಮಿ ಮಾಡಿ.”—ಯಾಕೋಬ 1:19.

  •    ನಿಜವಾದ ಆಸಕ್ತಿ ತೋರಿಸಿ. ನೀವು ಯಾರ ಜೊತೆ ಮಾತಾಡ್ತಿರೋ ಅವ್ರ ಮೇಲೆ ನಿಮಗೆ ಕಾಳಜಿ ಇದ್ರೆ ನಿಮ್ಮ ಮಾತುಕತೆ ಚೆನ್ನಾಗೇ ಇರುತ್ತೆ.

     “ನಿಮಗೆ ಏನು ಮಾತಾಡಬೇಕು ಅಂತ ಗೊತ್ತಾಗದೇ ಇದ್ರೂ ನೀವು ಮಾತಾಡೋ ವ್ಯಕ್ತಿ ಮೇಲೆ ನಿಮಗೆ ನಿಜವಾದ ಕಾಳಜಿ ಇದೆ ಅಂತ ಅವ್ರಿಗೆ ಗೊತ್ತಾದ್ರೆ ನಿಮ್ಮ ಮಾತುಕತೆ ಕಮ್ಮಿ ಇದ್ರೂ ಅದು ಹಿತವಾಗಿ ಇರುತ್ತೆ.”—ಮೇರಿ.

     ಹುಷಾರಾಗಿರಿ: ತೀರ ವೈಯಕ್ತಿಕ ಪ್ರಶ್ನೆ ಕೇಳಬೇಡಿ. ಉದಾಹರಣೆಗೆ, “ಡ್ರೆಸ್‌ ಚೆನ್ನಾಗಿದೆ, ಎಷ್ಟು ಕೊಟ್ರಿ” ಅಂತ ಕೇಳಿದ್ರೆ ಅವ್ರಿಗೆ ಇಷ್ಟ ಆಗದೇ ಇರಬಹುದು.

     ಬೈಬಲ್‌ ಹೇಳೋ ಮಾತು: “ನಿಮ್ಮ ಬಗ್ಗೆ ಮಾತ್ರ ಯೋಚಿಸದೆ, ಬೇರೆಯವ್ರ ಬಗ್ಗೆನೂ ಯೋಚ್ನೆ ಮಾಡಿ.”—ಫಿಲಿಪ್ಪಿ 2:4.

 ಮಾತುಕತೆನಾ ನೀವು ಹೇಗೆ ಮುಗಿಸಬಹುದು? “ಮಾತು ಮುಗಿಸೋವಾಗ ಏನಾದ್ರೂ ಒಳ್ಳೇ ವಿಷ್ಯ ಹೇಳಿ. ‘ನಿಮ್ಮ ಜೊತೆ ಮಾತಾಡಿ ತುಂಬಾ ಖುಷಿ ಆಯ್ತು’ ಅಥವಾ ‘ಹ್ಯಾವ್‌ ಎ ಗುಡ್‌ ಡೇ’ ಅಂತ ಹೇಳಿದ್ರೆ ಮುಂದಿನ ಸಲ ಅವ್ರ ಜೊತೆ ಮಾತಾಡೋಕೆ ಸುಲಭ ಆಗುತ್ತೆ” ಅಂತ 23 ವರ್ಷದ ಜೊರ್ಡನ್‌ ಹೇಳ್ತಾರೆ.