ಯುವಜನರ ಪ್ರಶ್ನೆಗಳು
ಬ್ರೇಕಪ್ ಇಂದ ಆಗೋ ನೋವನ್ನ ನಾನು ಹೇಗೆ ನಿಭಾಯಿಸಬಹುದು?
ಸ್ಟೀವನ್ ಹೀಗೆ ಹೇಳ್ತಾನೆ “ನನ್ನ ಗರ್ಲ್‌ಫ್ರೆಂಡ್ ಜೊತೆ ಬ್ರೇಕಪ್ ಆದಾಗ, ನನಗೆ ಹೇಗನಿಸ್ತಿತ್ತು ಅಂತ ಮಾತಲ್ಲಿ ಹೇಳಕ್ಕಾಗಲ್ಲ, ನನ್ನ ಜೀವನ ತಲೆಕೆಳಗಾದ ಹಾಗೆ ಅನಿಸ್ತು. ನೋವಲ್ಲಿ ಮುಳುಗಿಹೋಗಿದ್ದೆ ಅದನ್ನ ಸಹಿಸಿಕೊಳ್ಳೋಕೆ ಆಗ್ತಿರಲಿಲ್ಲ.”
ನಿಮಗೂ ಯಾವಾಗಾದರೂ ಈತರ ಅನಿಸಿದೆಯಾ? ಹಾಗಾದರೆ ಈ ಲೇಖನ ನಿಮಗೆ ಸಹಾಯ ಮಾಡುತ್ತೆ.
ಬ್ರೇಕಪ್ ಆದಾಗ ಹೇಗನಿಸುತ್ತೆ
ಬ್ರೇಕಪ್ ಆದಾಗ ಅದರಿಂದ ಹುಡುಗ ಹುಡುಗಿ ಇಬ್ಬರಿಗೂ ನೋವಾಗುತ್ತೆ.
ಒಂದುವೇಳೆ ನೀವೇ ಬ್ರೇಕಪ್ ಮಾಡಿರೋದಾದರೆ, ನಿಮಗೂ ಜಾಸ್ಮಿನ್ ತರ ಅನಿಸಬಹುದು. ಅವಳು ಹೀಗೆ ಹೇಳ್ತಾಳೆ, “ನೀವು ತುಂಬ ಕಾಳಜಿವಹಿಸೋ ಒಬ್ಬ ವ್ಯಕ್ತಿಯ ಮನಸ್ಸನ ನೋಯಿಸಿದಾಗ, ನಮ್ಮ ಮನಸ್ಸಾಕ್ಷಿ ಆಗಾಗ ಚುಚ್ಚುತ್ತಿರುತ್ತೆ. ಅಂಥ ನೋವು ಮತ್ತೆ ಬೇಡಪ್ಪಾ ಅನಿಸುತ್ತೆ”
ಒಂದುವೇಳೆ ನಿಮ್ಮ ಗರ್ಲ್‌ಫ್ರೆಂಡ್ ಅಥವಾ ಬಾಯ್‌ಫ್ರೆಂಡ್ ನಿಮ್ಮ ಜೊತೆ ಬ್ರೇಕಪ್ ಮಾಡಿರೋದಾದರೆ, ಕೆಲವರು ಈ ಅನುಭವನ ನಮ್ಮವರು ಯಾರೋ ಸತ್ತುಹೋದಾಗ ಹೇಗನಿಸುತ್ತೋ ಹಾಗೇ ನೋವಾಗುತ್ತೆ ಅಂತ ಯಾಕೆ ಹೇಳ್ತಾರೆ ಅನ್ನೋದನ್ನ ನೀವು ಬಹುಶಃ ಅರ್ಥಮಾಡಿಕೊಳ್ಳಬಹುದು. ಜಾನೆಟ್ ಅನ್ನೋ ಯುವತಿ ಹೀಗೆ ಹೇಳ್ತಾಳೆ, “ನಂಗೆ ಆ ನೋವಿಂದ ಹೊರಬರೋಕೆ ತುಂಬಾ ಸಮಯ ಹಿಡೀತು. ತುಂಬ ಕೋಪ ಬರ್ತಿತ್ತು, ಒಂಟಿ ಭಾವನೆ ಕಾಡ್ತಿತ್ತು, ಯಾರೂ ಬೇಡ ಅನಿಸ್ತಿತ್ತು, ಡಿಪ್ರೆಶನ್‌ಗೆ ಹೋಗ್ಬಿಟ್ಟಿದ್ದೆ. ಬ್ರೇಕಪ್ ಆಗಿರೋದನ್ನ ಒಪ್ಪಿಕೊಳ್ಳೋಕೆ ಸುಮಾರು ಒಂದು ವರ್ಷ ಹಿಡೀತು.”
ನಮಗಿರೋ ಪಾಠ: ಬ್ರೇಕಪ್ ಆದಾಗ ನಮ್ಮ ಖುಷಿ ಕಡಿಮೆಯಾಗಿ ಬೇಜಾರಲ್ಲಿ ಮುಳುಗಿಹೋಗ್ತೀವಿ. ಇದರ ಬಗ್ಗೆ ಬೈಬಲ್ ಹೀಗೆ ಹೇಳುತ್ತೆ: “ಹರ್ಷಹೃದಯ ಒಳ್ಳೇ ಮದ್ದು, ಕುಗ್ಗಿದ ಮನಸ್ಸು ಒಬ್ಬನ ಶಕ್ತಿಯನ್ನೆಲ್ಲಾ ಹೀರಿಹಾಕುತ್ತೆ.”—ಜ್ಞಾನೋಕ್ತಿ 17:22.
ಇಂಥ ಸಮಯದಲ್ಲಿ ನೀವು ಏನು ಮಾಡಬಹುದು?
ನೀವು ನಂಬುವ ಒಬ್ಬ ಪ್ರೌಢ ವ್ಯಕ್ತಿ ಜೊತೆ ಮಾತಾಡಿ. ಬೈಬಲ್ ಹೀಗೆ ಹೇಳುತ್ತೆ: “ನಿಜವಾದ ಸ್ನೇಹಿತ ಎಲ್ಲ ಸಮಯದಲ್ಲೂ ಪ್ರೀತಿಸ್ತಾನೆ. ಕಷ್ಟಕಾಲದಲ್ಲಿ ಅವನು ನಿಮ್ಮ ಸಹೋದರನಾಗ್ತಾನೆ.” (ಜ್ಞಾನೋಕ್ತಿ 17:17) ನಿಮ್ಮ ಮನದಾಳದ ಭಾವನೆಗಳನ್ನ ಮುಚ್ಚುಮರೆ ಇಲ್ಲದೆ ನಿಮ್ಮ ಅಪ್ಪ ಅಮ್ಮ ಹತ್ತಿರ ಅಥವಾ ಒಬ್ಬ ಪ್ರೌಢ ಸ್ನೇಹಿತನ ಹತ್ತಿರ ಹೇಳಿಕೊಳ್ಳೋದರಿಂದ ಇಂಥ ಸಮಯದಲ್ಲಿ ಸರಿಯಾಗಿ ಯೋಚಿಸೋಕೆ ನಿಮಗೆ ಸಹಾಯ ಸಿಗುತ್ತೆ.
“ಕೆಲವು ತಿಂಗಳು ನಾನು ಯಾರ ಹತ್ರನೂ ಮಾತಾಡದೆ ನನ್ನ ಭಾವನೆಗಳನ್ನ ಹೇಳಿಕೊಳ್ಳದೆ ಒಬ್ಬಳೇ ಇದ್ದೆ. ಆಮೇಲೆ ನನ್ ಫ್ರೆಂಡ್ಸ್‌ಗೆ ನನ್ನ ಮನಸಲ್ಲಿರೋದನ್ನೆಲ್ಲ ಹೇಳ್ಕೊಂಡೆ, ಇದರಿಂದ ನನಗೆ ಮನಸ್ಸಿಗೆ ನೆಮ್ಮದಿ ಸಿಗ್ತು. ಬೇಜಾರಿಂದ ಹೊರಬರೋಕೆ ನಮ್ ಫ್ರೆಂಡ್ಸ್ ನಿಜವಾಗಲೂ ಸಹಾಯ ಮಾಡುತ್ತಾರೆ”—ಜಾನೆಟ್.
ಏನಾಯ್ತೋ ಅದ್ರಿಂದ ಕಲಿಯಿರಿ. ಬೈಬಲಿನ ಜ್ಞಾನೋಕ್ತಿ ಪುಸ್ತಕದಲ್ಲಿ ಹೀಗಿದೆ: “ವಿವೇಕವನ್ನ ಸಂಪಾದಿಸು, ವಿವೇಚನೆಯನ್ನ ಗಳಿಸು.” (ಜ್ಞಾನೋಕ್ತಿ 4:5) ನಮಗೆ ಆದ ಕಹಿ ಅನುಭವಗಳಿಂದ ನಮ್ಮನ್ನೇ ನಾವು ಚೆನ್ನಾಗಿ ತಿಳ್ಕೊಬಹುದು ಹಾಗೂ ನಿರಾಶೆಯನ್ನ ಹೇಗೆ ನಿಭಾಯಿಸೋದು ಅನ್ನೋದನ್ನೂ ನಾವು ಕಲಿಯೋಕೆ ಆಗುತ್ತೆ.
“ಬ್ರೇಕಪ್ ಆದ ಮೇಲೆ ನನ್ ಫ್ರೆಂಡ್ ನನಗೆ, ‘ಈ ರಿಲೇಷನ್ಶಿಪ್ ಇಂದ ಏನ್ ಕಲಿತೆ?, ಮುಂದೆ ಯಾರ ಜೊತೆಗಾದರೂ ಡೇಟಿಂಗ್ ಮಾಡುವಾಗ ಕಲ್ತಿರೋದನ್ನ ಹೇಗೆ ಬಳಸ್ತೀಯಾ?’ ಅಂತ ಕೇಳಿದ”—ಸ್ಟೀವನ್.
ಪ್ರಾರ್ಥನೆ ಮಾಡಿ. ಬೈಬಲ್ ಹೀಗೆ ಹೇಳುತ್ತೆ: “ನಿನಗಿರೋ ಭಾರನೆಲ್ಲ ಯೆಹೋವನ ಮೇಲೆ ಹಾಕು, ಆತನೇ ನಿನಗೆ ಆಧಾರವಾಗಿ ಇರ್ತಾನೆ.” (ಕೀರ್ತನೆ 55:22) ಪ್ರಾರ್ಥನೆಯು ನಿಮ್ಮ ದುಃಖವನ್ನು ನಿಭಾಯಿಸೋಕೆ ಹಾಗೂ ಬ್ರೇಕಪ್ ಅನ್ನು ಬೇರೆ ದೃಷ್ಟಿಕೋನದಿಂದ ನೋಡಲು ಸಹಾಯ ಮಾಡುತ್ತೆ.
“ನಿಮ್ಮ ಪರಿಸ್ಥಿತಿ ಹಾಗೂ ನಿಮಗೆ ಆಗೋ ನೋವಿನ ಬಗ್ಗೆ ನಿಮಗಿಂತ ಚೆನ್ನಾಗಿ ಯೆಹೋವ ದೇವರಿಗೆ ಗೊತ್ತಿದೆ. ಅದಕ್ಕೆ ಯಾವಾಗಲೂ ಪ್ರಾರ್ಥನೆ ಮಾಡ್ತಾ ಇರಿ”—ಮಾರ್ಸಿಯ.
ಬೇರೆಯವರಿಗೆ ಸಹಾಯ ಮಾಡಿ. ಬೈಬಲ್ ಹೀಗೆ ಹೇಳುತ್ತೆ: “ನಿಮ್ಮ ಬಗ್ಗೆ ಮಾತ್ರ ಯೋಚಿಸದೆ, ಬೇರೆಯವ್ರ ಬಗ್ಗೆನೂ ಯೋಚ್ನೆ ಮಾಡಿ.” (ಫಿಲಿಪ್ಪಿ 2:4) ನೀವು ಬೇರೆಯವರಿಗೆ ಎಷ್ಟು ಸಹಾಯ ಮಾಡುತ್ತೀರೋ ಅಷ್ಟು ಬೇಗ ನಿಮಗೆ ಬ್ರೇಕಪ್ ಅನ್ನು ಸರಿಯಾದ ದೃಷ್ಟಿಕೋನದಿಂದ ನೋಡಲು ಸಹಾಯ ಸಿಗುತ್ತೆ.
“ಬ್ರೇಕಪ್ ಆದಾಗ ಲೋಕಾನೇ ಅಂತ್ಯ ಆದ ಹಾಗೆ ಅನಿಸುತ್ತೆ. ಇದು ಮೈಮೇಲೆ ಆಗೋ ಗಾಯಕ್ಕಿಂತ ಜಾಸ್ತಿ ನೋವು ಕೊಡುತ್ತೆ. ಆದರೆ ಸಮಯ ಕಳೆದ ಹಾಗೆ ಗಾಯ ಗುಣ ಆಗುತ್ತೆ, ಪರಿಸ್ಥಿತಿ ಸರಿ ಹೋಗುತ್ತೆ ಅಂತ ಗೊತ್ತಾಯ್ತು.”—ಈವ್ಲಿನ್.