ಯುವಜನರ ಪ್ರಶ್ನೆಗಳು
ಅಶ್ಲೀಲ ಚಿತ್ರಗಳನ್ನ ನೋಡೋದು ತಪ್ಪು ಯಾಕೆ?
ಅಶ್ಲೀಲ ಚಿತ್ರಗಳನ್ನ ನೋಡದೇ ಇರೋಕೆ ನಿಮ್ಮಿಂದ ಆಗುತ್ತಾ?
ನೀವು ಇಂಟರ್‌ನೆಟ್‌ನ ಬಳಸ್ತಾ ಇದ್ರೆ ಒಂದಲ್ಲ ಒಂದಿನ ಅಶ್ಲೀಲ ಚಿತ್ರಗಳು ನಿಮ್ಮ ಕಣ್ಮುಂದೆ ಬಂದೇ ಬರುತ್ತೆ. “ಅದಕ್ಕೋಸ್ಕರ ನೀವು ಯಾವ ವೆಬ್‌ಸೈಟನ್ನ ಹುಡುಕಬೇಕಾಗಿಲ್ಲ, ಅದೇ ನಿಮ್ಮನ್ನ ಹುಡುಕೊಂಡು ಬರುತ್ತೆ” ಅಂತ 17 ವರ್ಷದ ಹಾಲಿ ಹೇಳ್ತಾರೆ.
ಅಶ್ಲೀಲ ಚಿತ್ರಗಳನ್ನ ನೋಡಬಾರದು ಅಂತ ದೃಢ ನಿರ್ಧಾರ ಮಾಡಿದ್ರೂ ಕೆಲವೊಂದು ಸಲ ಅದನ್ನ ನೋಡಿ ಬಿಡಬಹುದು. 18 ವರ್ಷದ ಗ್ರೆಗ್ ಹೇಳೋದು, “ನಾನು ಏನ್ ಮಾಡಬಾರದು ಅಂತ ದೃಢ ನಿರ್ಧಾರ ಮಾಡಿದ್ದೀನೋ ಅದನ್ನೇ ಮಾಡಿಬಿಟ್ಟೆ. ನಮ್ಮ ಮೇಲೆ ನಾವು ಜಾಸ್ತಿ ಭರವಸೆ ಇಡಬಾರದು. ಇದು ಯಾವತ್ತೂ ನಂಗೆ ಆಗೋದೇ ಇಲ್ಲ ಅಂತ ಅಂದುಕೊಳ್ಳಬಾರದು.”
ಹಿಂದೆಂದಿಗಿಂತಲೂ ಅಶ್ಲೀಲ ಚಿತ್ರಗಳನ್ನ ನೋಡೋದು ಈಗ ತುಂಬಾ ಸುಲಭ ಆಗಿಬಿಟ್ಟಿದೆ. ಅದನ್ನ ಹುಡುಕೋಕೆ ಅಷ್ಟೇನೂ ಕಷ್ಟಪಡಬೇಕಾಗಿಲ್ಲ. ಸೆಕ್ಸ್ಟಿಂಗ್ ಶುರು ಆದಾಗಿಂದ ಕೆಲವು ಹುಡುಗ ಹುಡುಗಿಯರು ತಮ್ಮದೇ ಅಶ್ಲೀಲ ಫೋಟೋಗಳನ್ನ, ವಿಡಿಯೋಗಳನ್ನ ಮಾಡಿ ಬೇರೆಯವರಿಗೆ ಕಳಿಸ್ತಾರೆ.
ಪಾಠ: ನಿಮ್ಮ ಅಪ್ಪ-ಅಮ್ಮ ಅಥವಾ ಅಜ್ಜ-ಅಜ್ಜಿ ನಿಮ್ಮ ವಯಸ್ಸಲ್ಲಿ ಇದ್ದಾಗ ಎದುರಿಸಿರೋ ಸಮಸ್ಯೆಗಳಿಗಿಂತ ನೀವೀಗ ಜಾಸ್ತಿ ಸಮಸ್ಯೆಗಳನ್ನ ಎದುರಿಸಬೇಕು. ಆದ್ರೆ ಪ್ರಶ್ನೆ ಏನಂದ್ರೆ, ಅಶ್ಲೀಲ ಚಿತ್ರಗಳನ್ನ ನೋಡದೇ ಇರೋಕೆ ನಿಮ್ಮಿಂದ ಆಗುತ್ತಾ?—ಕೀರ್ತನೆ 97:10.
ನೀವು ಮನಸ್ಸು ಮಾಡಿದ್ರೆ ಖಂಡಿತ ಆಗುತ್ತೆ. ಅದಕ್ಕೂ ಮುಂಚೆ ಅಶ್ಲೀಲ ಚಿತ್ರಗಳನ್ನ ನೋಡೋದು ತಪ್ಪು ಅಂತ ನೀವು ನಂಬಬೇಕು. ಅಶ್ಲೀಲ ಚಿತ್ರಗಳನ್ನ ನೋಡೋದ್ರ ಬಗ್ಗೆ ಒಬ್ಬೊಬ್ರು ಒಂದೊಂದು ತರ ಹೇಳ್ತಾರೆ. ಆದ್ರೆ ಅದು ಸರಿನಾ ತಪ್ಪಾ ಅಂತ ಈಗ ನೋಡೋಣ.
ತಪ್ಪಾಭಿಪ್ರಾಯ ಮತ್ತು ನಿಜತ್ವ
ತಪ್ಪಾಭಿಪ್ರಾಯ: ಅಶ್ಲೀಲ ಚಿತ್ರಗಳನ್ನ ನೋಡೋದ್ರಿಂದ ನಂಗೆ ಯಾವ ತೊಂದ್ರೆನೂ ಆಗಲ್ಲ.
ನಿಜತ್ವ: ಅಶ್ಲೀಲ ಚಿತ್ರಗಳನ್ನ ನೋಡೋದು ಸಿಗರೇಟ್ ಸೇದೋದಕ್ಕೆ ಸಮ. ಸಿಗರೇಟ್ ಸೇದೋದ್ರಿಂದ ಶ್ವಾಸಕೋಶ ಹಾಳಾಗುತ್ತೆ, ಅಶ್ಲೀಲ ಚಿತ್ರಗಳನ್ನ ನೋಡೋದ್ರಿಂದ ಮನಸ್ಸು ಹಾಳಾಗುತ್ತೆ. ದೇವರು ಗಂಡ ಹೆಂಡತಿ ನಡುವೆ ಶಾಶ್ವತವಾಗಿ ಇರಬೇಕು ಅಂತ ಸೃಷ್ಟಿ ಮಾಡಿರೋ ಬಾಂಧವ್ಯವನ್ನ ಇದು ಕೀಳಾಗಿ ನೋಡೋ ತರ ಮಾಡಿ ಬಿಡುತ್ತೆ. (ಆದಿಕಾಂಡ 2:24) ಅಶ್ಲೀಲ ಚಿತ್ರಗಳನ್ನ ನೋಡೋ ಚಟಕ್ಕೆ ಬಿದ್ರೆ ನಿಮ್ಮ ಮನಸ್ಸು ಮರಗಟ್ಟಿ ಹೋಗುತ್ತೆ. ಆಗ ಯಾವುದು ಸರಿ, ಯಾವುದು ತಪ್ಪು ಅಂತ ತಿಳ್ಕೊಳ್ಳೋಕೆ ಆಗಲ್ಲ. ಉದಾಹರಣೆ, ಕೆಲವು ವಿದ್ವಾಂಸರು ಹೇಳೋ ಪ್ರಕಾರ ಯಾವ ಗಂಡಸ್ರು ಅಶ್ಲೀಲ ಚಿತ್ರಗಳನ್ನ ನೋಡೋ ಚಟಕ್ಕೆ ಬಿದ್ದಿರ್ತಾರೋ ಅವ್ರು ಸ್ತ್ರೀಯರನ್ನ ತುಂಬಾ ಕೀಳಾಗಿ ನೋಡ್ತಾರೆ. ಅವರ ಮೇಲೆ ದೌರ್ಜನ್ಯ, ಹಿಂಸೆ ಮಾಡೋಕೆ ಹಿಂದೆ ಮುಂದೆ ನೋಡಲ್ಲ.
ಕೆಲವು ಜನರಲ್ಲಿ “ನೈತಿಕ ಪ್ರಜ್ಞೆ ಒಂಚೂರು ಇಲ್ಲ” ಅಂತ ಬೈಬಲ್ ಹೇಳುತ್ತೆ. (ಎಫೆಸ 4:19) ಅವರ ಮನಸ್ಸು ಎಷ್ಟು ಮರಗಟ್ಟಿ ಹೋಗಿರುತ್ತೆ ಅಂದ್ರೆ ತಪ್ಪು ಮಾಡಿದ್ರೂ ಅವರಿಗೆ ಏನೂ ಅನಿಸಲ್ಲ, ಮನಸಾಕ್ಷಿ ಚುಚ್ಚಲ್ಲ.
ತಪ್ಪಾಭಿಪ್ರಾಯ: ಅಶ್ಲೀಲ ಚಿತ್ರಗಳನ್ನ ನೋಡೋದ್ರಿಂದ ಸೆಕ್ಸ್ ಬಗ್ಗೆ ಕಲಿಬಹುದು.
ನಿಜತ್ವ: ಅಶ್ಲೀಲ ಚಿತ್ರಗಳನ್ನ ನೋಡೋ ಚಟ ಕೆಟ್ಟ ಆಸೆಗಳನ್ನ ತೀರಿಸಿಕೊಳ್ಳೋದನ್ನ ಕಲಿಸುತ್ತೆ. ಈ ಚಟಕ್ಕೆ ಬಿದ್ದವ್ರು ಬೇರೆಯವರನ್ನ ಆಟದ ಸಾಮಾನಿನ ತರ ನೋಡ್ತಾರೆ. ತಮಗೆ ಇಷ್ಟ ಬಂದ ಹಾಗೆ ಅವರನ್ನ ಉಪಯೋಗಿಸಿಕೊಳ್ಳಬಹುದು, ತಮ್ಮ ಆಸೆಗಳನ್ನ ತೀರಿಸಿಕೊಳ್ಳೋಕೆ ಅವರಿರೋದು ಅಂತ ಅಂದ್ಕೊಳ್ತಾರೆ. ಅದಕ್ಕೆ ಇಂಥವರು ಮದುವೆ ಆದ್ಮೇಲೆ ತಮ್ಮ ಸಂಗಾತಿ ಜೊತೆ ಸಂತೋಷದಿಂದ, ತೃಪ್ತಿಯಿಂದ ಇರಲ್ಲ ಅಂತ ಒಂದು ವರದಿ ಹೇಳುತ್ತೆ.
ಕ್ರೈಸ್ತರಾದ ನಾವು “ಲೈಂಗಿಕ ಅನೈತಿಕತೆ, ಅಶುದ್ಧತೆ, ಹತೋಟಿ ಇಲ್ಲದ ಕಾಮದಾಸೆ, ಕೆಟ್ಟದು ಮಾಡೋ ಅತಿಯಾಸೆ”ಯಿಂದ ದೂರ ಇರಬೇಕು ಅಂತ ಬೈಬಲ್ ಹೇಳುತ್ತೆ. ಆದ್ರೆ ಈ ಅಶ್ಲೀಲ ಚಿತ್ರಗಳು ಈ ಕೆಟ್ಟ ವಿಷ್ಯಗಳನ್ನ ಮಾಡೋಕೆ ಪ್ರಚೋದನೆ ಕೊಡುತ್ತೆ.—ಕೊಲೊಸ್ಸೆ 3:5.
ತಪ್ಪಾಭಿಪ್ರಾಯ: ಅಶ್ಲೀಲ ಚಿತ್ರಗಳನ್ನ ನೋಡ್ದೆ ಇರೋರು ಸೆಕ್ಸ್ ಬಗ್ಗೆ ಮಾತಾಡೋಕೆ ಹಿಂಜರಿತಾರೆ.
ನಿಜತ್ವ: ನಿಜ ಏನಂದ್ರೆ ಅಶ್ಲೀಲ ಚಿತ್ರಗಳನ್ನ ನೋಡದೆ ಇರೋರು ಸೆಕ್ಸ್ ಬಗ್ಗೆ ಸರಿಯಾದ ನೋಟವನ್ನ ಇಟ್ಕೊಳ್ತಾರೆ. ಇದು ಗಂಡ ಹೆಂಡತಿ ಮಧ್ಯ ಇರುವ ಬಾಂಧವ್ಯನ ಬಲಪಡಿಸೋಕೆ, ಮದ್ವೆ ಸಮಯದಲ್ಲಿ ಅವರು ಕೊಟ್ಟ ಮಾತಿನ ಪ್ರಕಾರ ನಡಕೊಳ್ಳೋಕೆ ಇದು ದೇವರು ಕೊಟ್ಟ ಗಿಫ್ಟ್ ಅಂತ ನೆನಸ್ತಾರೆ. ಯಾರು ಹೀಗೆ ಯೋಚನೆ ಮಾಡ್ತಾರೋ ಅವರು ತಮ್ಮ ಸಂಗಾತಿ ಜೊತೆ ಲೈಂಗಿಕ ಸಂಬಂಧದಲ್ಲಿ ತೃಪ್ತಿಯಾಗಿರ್ತಾರೆ.
ಬೈಬಲ್ ಸೆಕ್ಸ್ ಬಗ್ಗೆ ಮುಚ್ಚುಮರೆಯಿಲ್ಲದೇ ಹೇಳುತ್ತೆ. ಉದಾಹರಣೆಗೆ ಗಂಡಂದಿರಿಗೆ, “ನಿನ್ನ ಯೌವನದ ಹೆಂಡತಿ ಜೊತೆ ಖುಷಿಯಾಗಿರು . . . ಅವಳ ಪ್ರೀತಿಯ ಬಂಧನದಲ್ಲಿ ನೀನು ಸದಾಕಾಲ ಸೆರೆಯಾಗಿರು.”—ಜ್ಞಾನೋಕ್ತಿ 5:18, 19.
ಅಶ್ಲೀಲ ಚಿತ್ರಗಳನ್ನ ನೋಡೋದ್ರಿಂದ ಹೇಗೆ ದೂರ ಇರಬಹುದು?
ಒಂದುವೇಳೆ ಅಶ್ಲೀಲ ಚಿತ್ರಗಳನ್ನ ನೋಡೋ ಚಟಕ್ಕೆ ನೀವು ಬಿದ್ದಿರೋದಾದ್ರೆ ಆಗೇನು? “ಅಶ್ಲೀಲ ಚಿತ್ರಗಳನ್ನ ನೋಡೋದ್ರಿಂದ ನಾನು ಹೇಗೆ ದೂರ ಇರೋದು” ಅನ್ನೋ ವರ್ಕ್‌ಶೀಟನ್ನ ನೋಡಿ.
ಅಶ್ಲೀಲ ಚಿತ್ರಗಳನ್ನ ನೋಡೋ ಆಸೆನಾ ನೀವು ಖಂಡಿತ ಜಯಿಸಬಹುದು. ಒಂದುವೇಳೆ ಈ ಚಟಕ್ಕೆ ಬಿದ್ದಿದ್ರೆ ಅದನ್ನ ನಿಲ್ಲಿಸೋದಕ್ಕೆ ಗ್ಯಾರಂಟಿ ನಿಮ್ಮಿಂದ ಆಗುತ್ತೆ. ಈ ತರ ಮಾಡೋದ್ರಿಂದ ನಿಮಗೇ ಒಳ್ಳೇದು.
ಉದಾಹರಣೆಗೆ, ಕ್ಯಾಲ್ವಿನ್ ಅನ್ನೋ ಹುಡುಗ 13ನೇ ವಯಸ್ಸಿಂದಾನೇ ಅಶ್ಲೀಲ ಚಿತ್ರಗಳನ್ನ ನೋಡೋ ಚಟಕ್ಕೆ ಬಲಿ ಬಿದ್ದಿದ್ದ. “ಇದು ತಪ್ಪು ಅಂತ ನನಗೆ ಗೊತ್ತಿತ್ತು, ಆದ್ರೂ ನಾನು ಅದನ್ನ ಮಾಡ್ತಿದ್ದೆ. ಇಂಥ ಕೆಟ್ಟ ಚಿತ್ರಗಳನ್ನ ನೋಡಿದ ಮೇಲೆ ಮನಸ್ಸಿಗೆ ತುಂಬಾ ಬೇಜಾರಾಗ್ತಿತ್ತು. ಆಮೇಲೆ ಈ ವಿಷ್ಯ ನಮ್ಮ ಅಪ್ಪಾಗೆ ಗೊತ್ತಾಯ್ತು. ನಿಜ ಹೇಳಬೇಕಂದ್ರೆ ಇದರಿಂದ ನಂಗೆ ಒಳ್ಳೇದೇ ಆಯ್ತು. ಆ ಕೆಟ್ಟ ಚಟದಿಂದ ಹೊರಗೆ ಬರೋಕೆ ಸಹಾಯ ಸಿಕ್ತು.”
ಕ್ಯಾಲ್ವಿನ್ ಅಶ್ಲೀಲ ಚಿತ್ರಗಳನ್ನ ನೋಡೋ ಚಟದಿಂದ ಆಚೆ ಬಂದ. ಅವನು ಹೇಳೋದು, “ಈ ಚಿತ್ರಗಳನ್ನ ನೋಡಿದ್ದಕ್ಕೆ ನಂಗೆ ಈಗ್ಲೂ ಬೇಜಾರಾಗ್ತಿದೆ. ಯಾಕಂದ್ರೆ ಈಗ್ಲೂ ಆ ಚಿತ್ರಗಳು ನನ್ನ ಕಣ್ಮುಂದೆ ಬರುತ್ತೆ. ಕೆಲವು ಸಲ ಆ ಚಿತ್ರಗಳನ್ನ ನೋಡಬೇಕು ಅಂತ ಆಸೆ ಆಗುತ್ತೆ. ಆಗೆಲ್ಲಾ ನಾನು ಯೆಹೋವ ದೇವರಿಗೆ ಇಷ್ಟ ಆಗೋ ತರ ನಡ್ಕೊಂಡ್ರೆ ತುಂಬಾ ಖುಷಿಯಾಗಿರ್ತೀನಿ, ಒಳ್ಳೇ ಮನಸ್ಸಾಕ್ಷಿ ಇರುತ್ತೆ ಅಷ್ಟೇ ಅಲ್ಲ, ಮುಂದೆ ನನ್ನ ಜೀವನನೂ ಚೆನ್ನಾಗಿರುತ್ತೆ ಅನ್ನೋದನ್ನ ನೆನಪು ಮಾಡ್ಕೊಳ್ತೀನಿ. ಈ ರೀತಿ ಮಾಡಿದ್ರಿಂದ ಆ ಕೆಟ್ಟ ಆಸೆ ವಿರುದ್ಧ ಹೋರಾಡೋಕೆ ಆಗ್ತಿದೆ.”