ಮಾಹಿತಿ ಇರುವಲ್ಲಿ ಹೋಗಲು

ಯುವಜನರ ಪ್ರಶ್ನೆಗಳು

ನಾನು ಯಾವ ತರ ಸಂಗೀತ ಕೇಳ್ತೀನಿ ಅನ್ನೋದು ಮುಖ್ಯನಾ?

ನಾನು ಯಾವ ತರ ಸಂಗೀತ ಕೇಳ್ತೀನಿ ಅನ್ನೋದು ಮುಖ್ಯನಾ?

 “ಮ್ಯೂಸಿಕ್‌ ಕೇಳೋದಂದ್ರೆ ನನಗೆ ತುಂಬಾ ಇಷ್ಟ. ನಾನು ರೆಡಿ ಆಗೋವಾಗ, ಕಾರ್‌ ಓಡಿಸೋವಾಗ, ರೆಸ್ಟ್‌ ಮಾಡೋವಾಗ, ಕ್ಲೀನ್‌ ಮಾಡೋವಾಗ, ಬುಕ್‌ ಓದೋವಾಗ್ಲೂ ಮ್ಯೂಸಿಕ್‌ ಹಾಕೊಂಡೇ ಇರ್ತೀನಿ. ಒಟ್ನಲ್ಲಿ ನಾನು ಯಾವಾಗಲೂ ಮ್ಯೂಸಿಕ್‌ ಕೇಳ್ತಾನೇ ಇರ್ತೀನಿ.”—ಕಾರ್ಲಾ.

 ಕಾರ್ಲಾ ತರ ನಿಮಗೂ ಸಂಗೀತ ಕೇಳೋಕೆ ತುಂಬಾ ಇಷ್ಟನಾ? ಹಾಗಾದ್ರೆ ಈ ಲೇಖನದಲ್ಲಿ ಸಂಗೀತ ಕೇಳೋದ್ರಿಂದ ಏನು ಪ್ರಯೋಜನ? ಅದ್ರಿಂದ ಬರೋ ಅಪಾಯಗಳಿಂದ ಹೇಗೆ ದೂರ ಇರಬಹುದು? ಒಳ್ಳೇ ಸಂಗೀತನ ಹೇಗೆ ಆರಿಸಿಕೊಳ್ಳಬಹುದು? ಅಂತ ತಿಳಿದುಕೊಳ್ಳಿ.

 ಪ್ರಯೋಜನಗಳು

 ಸಂಗೀತ ಕೇಳೋದನ್ನ ಊಟ ಮಾಡೋದಕ್ಕೆ ಹೋಲಿಸಬಹುದು. ಸರಿಯಾದ ಸಮಯದಲ್ಲಿ ಎಷ್ಟು ಬೇಕೋ ಅಷ್ಟು ಊಟ ತಿಂದ್ರೆ ಮಾತ್ರ ಆರೋಗ್ಯಕ್ಕೆ ಒಳ್ಳೇದು. ಸಂಗೀತ ಕೇಳೋ ವಿಷಯದಲ್ಲೂ ಇದು ನಿಜ. ಉದಾಹರಣೆಗೆ,

  •   ಸಂಗೀತ ಕೇಳೋದ್ರಿಂದ ನಿಮ್ಮ ಮೂಡ್‌ ಚೆನ್ನಾಗಿರುತ್ತೆ.

     “ನನಗೇನಾದ್ರೂ ಬೇಜಾರಾದ್ರೆ ನನ್ನ ಫೆವರೇಟ್‌ ಮ್ಯೂಸಿಕ್‌ ಕೇಳ್ತೀನಿ. ಆಗ ತಕ್ಷಣ ನನ್ನ ಮೂಡ್‌ ಸರಿ ಹೋಗಿಬಿಡುತ್ತೆ.—ಮಾರ್ಕ್‌.

  •   ಸಂಗೀತ ಸವಿ ನೆನಪುಗಳನ್ನ ನೆನಪಿಗೆ ತರುತ್ತೆ.

     “ಕೆಲವು ಹಾಡುಗಳನ್ನ ಕೇಳಿದಾಗ ಹಿಂದೆ ಆದಂಥ ಸವಿನೆನಪುಗಳು ಮನಸ್ಸಿಗೆ ಬರುತ್ತೆ. ಪ್ರತಿಸಲ ಇದನ್ನ ಕೇಳಿದಾಗಲೂ ಅಷ್ಟೇ ಖುಷಿ ಆಗುತ್ತೆ.”—ಶೈಲಾ.

  •   ಒಗ್ಗಟ್ಟನ್ನ ಜಾಸ್ತಿ ಮಾಡೋ ಶಕ್ತಿ ಸಂಗೀತಕ್ಕೆ ಇದೆ.

     “ನಾನು ಯೆಹೋವನ ಸಾಕ್ಷಿಗಳ ಅಂತರಾಷ್ಟ್ರೀಯ ಅಧಿವೇಶನಕ್ಕೆ ಹಾಜರಾಗಿದ್ದೆ. ಅಧಿವೇಶನದ ಕೊನೆ ಹಾಡನ್ನ ಎಲ್ಲರೂ ಹಾಡುವಾಗ ನನ್ನ ಕಣ್ಣು ತುಂಬಿ ಬಂತು. ನಾವೆಲ್ಲರೂ ಬೇರೆ ಬೇರೆ ಭಾಷೆ ಮಾತಾಡ್ತಾ ಇದ್ರೂ ಸಂಗೀತ ನಮ್ಮೆಲ್ಲರನ್ನ ಒಂದು ಮಾಡ್ತು.”—ಟ್ಯಾಮಿ.

  •   ಸಂಗೀತ ಒಳ್ಳೇ ಗುಣಗಳನ್ನ ಬೆಳೆಸಿಕೊಳ್ಳೋಕೆ ಸಹಾಯ ಮಾಡುತ್ತೆ.

     “ನಾವು ಸಂಗೀತ ನುಡಿಸೋದನ್ನ ಕಲಿಯೋದ್ರಿಂದ ನಮ್ಮಲ್ಲಿ ಶಿಸ್ತು ಮತ್ತು ತಾಳ್ಮೆ ಜಾಸ್ತಿ ಆಗುತ್ತೆ. ಹಾಗಂತ ನಾವು ಅದನ್ನ ಒಂದೇ ದಿನದಲ್ಲಿ ಕಲಿಯೋಕಾಗಲ್ಲ. ಪ್ರತಿದಿನ ಪ್ರಾಕ್ಟೀಸ್‌ ಮಾಡಿದ್ರೆ ಖಂಡಿತ ಕಲಿಬಹುದು.”—ಆ್ಯನಾ.

 ನಿಮಗೆ ಗೊತ್ತಿತ್ತಾ? ಬೈಬಲಲ್ಲಿರುವ ಅತ್ಯಂತ ದೊಡ್ಡ ಪುಸ್ತಕ—ಕೀರ್ತನೆಗಳು—ಇದರಲ್ಲಿ 150 ಹಾಡುಗಳಿವೆ.

ಏನ್‌ ತಿನ್ನಬೇಕು ಅನ್ನೋದನ್ನ ಹೇಗೆ ಹುಷಾರಾಗಿ ಆಯ್ಕೆ ಮಾಡ್ತೀರೋ ಹಾಗೆ ಸಂಗೀತವನ್ನ ಬುದ್ಧಿವಂತಿಕೆಯಿಂದ ಆರಿಸಿ

 ಅಪಾಯಗಳು

 ಕೆಲವೊಂದು ಸಂಗೀತ ಕೆಟ್ಟು ಹೋಗಿರುವ ಆಹಾರದಷ್ಟೇ ವಿಷಕಾರಿಯಾಗಿದೆ. ಯಾಕಂತ ನೋಡೋಣ ಬನ್ನಿ.

  •   ಅನೇಕ ಹಾಡುಗಳಲ್ಲಿ ಅನೈತಿಕತೆ ತುಂಬಿ ತುಳುಕ್ತಾ ಇದೆ.

     “ಎಲ್ಲಾ ಫೇಮಸ್‌ ಹಾಡುಗಳಲ್ಲಿ ಸೆಕ್ಸ್‌ ಬಗ್ಗೆ ಇರುತ್ತೆ. ಅವರು ಯಾವುದೇ ಮುಚ್ಚುಮರೆ ಇಲ್ಲದೇ ಇದನ್ನ ಹಾಡ್ತಾರೆ.”—ಹನ್ನ.

     ಬೈಬಲ್‌ ಹೇಳೋ ಮಾತು: “ಲೈಂಗಿಕ ಅನೈತಿಕತೆ, ಎಲ್ಲ ತರದ ಅಶುದ್ಧತೆ, ದುರಾಸೆ ಇವುಗಳ ಬಗ್ಗೆ ನೀವು ಮಾತಾಡ್ಲೂಬಾರದು.” (ಎಫೆಸ 5:3) ಈ ನಿಯಮನ ಪಾಲಿಸೋದಕ್ಕೆ ನಾನು ಕೇಳೋ ಸಂಗೀತ ಅಡ್ಡಿ ಮಾಡ್ತಾ ಇದೆಯಾ? ಅಂತ ನಿಮ್ಮನ್ನೇ ಕೇಳಿಕೊಳ್ಳಿ.

  •   ಕೆಲವು ಹಾಡುಗಳು ನಿಮ್ಮ ದುಃಖನ ಜಾಸ್ತಿ ಮಾಡುತ್ತೆ.

     “ನಾನು ಕೆಲವೊಂದು ಸಲ ಮಲಗಿಕೊಂಡು ಹಾಡುಗಳನ್ನ ಕೇಳ್ತೀನಿ. ಕೆಲವು ಹಾಡುಗಳು ನಾನು ಕುಗ್ಗಿ ಹೋಗೋ ತರ ಮಾಡಿ ಬಿಡುತ್ತೆ, ನನ್ನ ನೋವನ್ನ ಜಾಸ್ತಿ ಮಾಡುತ್ತೆ. ಈ ತರ ನೋವಿನ ಹಾಡುಗಳನ್ನ ಕೇಳ್ತಾ ಇರೋದ್ರಿಂದ ನಾನು ತುಂಬಾ ಕುಗ್ಗಿ ಹೋಗ್ತಿನಿ.”—ಟ್ಯಾಮಿ.

     ಬೈಬಲ್‌ನಲ್ಲಿರೋ ಮಾತುಗಳು: “ಎಲ್ಲಕ್ಕಿಂತ ಮುಖ್ಯವಾಗಿ ನಿನ್ನ ಹೃದಯ ಕಾಪಾಡ್ಕೊ.” (ಜ್ಞಾನೋಕ್ತಿ 4:23) ‘ನಾನು ಕೇಳೋ ಹಾಡುಗಳು ನಾನಿನ್ನೂ ದುಃಖದಲ್ಲಿ ಮುಳುಗಿ ಹೋಗೋ ತರ ಮಾಡುತ್ತಾ?’ ಅಂತ ನಿಮ್ಮನ್ನೇ ಕೇಳಿಕೊಳ್ಳಿ.

  •   ಕೆಲವು ಹಾಡುಗಳು ನಮ್ಮ ಕೋಪನ ಜಾಸ್ತಿ ಮಾಡುತ್ತೆ.

     “ಕೋಪ ದ್ವೇಷದಿಂದ ತುಂಬಿರೋ ಹಾಡುಗಳನ್ನ ಕೇಳಿದಾಗ ನಂಗೆ ತುಂಬಾ ತೊಂದ್ರೆ ಆಗಿದೆ. ನನ್ನ ಮನಸ್ಸಲ್ಲೂ ಅದೇ ಭಾವನೆಗಳು ಬಂದಿದೆ. ಅಂಥಾ ಹಾಡುಗಳನ್ನ ಕೇಳಿದಾಗ ನನ್ನ ಮನಸ್ಥಿತಿ ಸಂಪೂರ್ಣ ಬದಲಾಗುತ್ತೆ ಅಂತ ನಾನೇ ನೋಡಿದ್ದೀನಿ. ಅಷ್ಟೇ ಅಲ್ಲ, ನನ್ನ ಕುಟುಂಬದವರು ಇದನ್ನ ಗಮನಿಸಿದ್ದಾರೆ.”—ಜಾನ್‌.

     ಬೈಬಲ್‌ ಹೇಳೋ ಮಾತು: “ಕ್ರೋಧ, ಕೋಪ, ಕೆಟ್ಟತನ, ಬೈಗುಳಗಳನ್ನ ಪೂರ್ತಿ ಬಿಟ್ಟುಬಿಡಿ. ನಿಮ್ಮ ಬಾಯಲ್ಲಿ ಕೆಟ್ಟ ಮಾತು ಬರಲೇ ಬಾರದು.” (ಕೊಲೊಸ್ಸೆ 3:8) ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ, ‘ನಾನು ಕೇಳೋ ಸಂಗೀತ ನನ್ನಲ್ಲಿರುವ ಕೋಪನಾ ಜಾಸ್ತಿ ಮಾಡುತ್ತಾ? ಬೇರೆಯವರ ಭಾವನೆಗಳನ್ನ ಅರ್ಥ ಮಾಡಿಕೊಳ್ಳದಷ್ಟು ನನ್ನ ಮನಸ್ಸನ್ನ ಕಲ್ಲು ಮಾಡುತ್ತಾ?’

 ಒಂದು ವಿಷ್ಯನ ಮನಸ್ಸಿನಲ್ಲಿಡಿ. ಸಂಗೀತನ ಬುದ್ಧಿವಂತಿಕೆಯಿಂದ ಆಯ್ಕೆ ಮಾಡಿ. ಜೂಲಿನೂ ಹೀಗೆ ಮಾಡಿದ್ಲು. “ನಾನು ಕೇಳೋ ಹಾಡುಗಳ ಪಟ್ಟಿಯನ್ನ ನಾನು ಆಗಾಗ ಪರಿಶೀಲನೆ ಮಾಡ್ತೀನಿ. ಯಾವ ಹಾಡುಗಳು ಚೆನ್ನಾಗಿ ಇರಲ್ವೋ ಅಂಥಾ ಹಾಡುಗಳನ್ನ ಡಿಲೀಟ್‌ ಮಾಡ್ತೀನಿ. ಹೀಗೆ ಮಾಡೋದು ಅಷ್ಟು ಸುಲಭ ಅಲ್ಲ. ಆದ್ರೆ ಹೀಗೆ ಮಾಡೋದೆ ಸರಿ ಅಂತ ನಂಗೆ ಚೆನ್ನಾಗಿ ಗೊತ್ತು” ಅಂತ ಅವಳು ಹೇಳ್ತಾಳೆ.

 ತಾರಾ ಕೂಡ ಹೀಗೆ ಮಾಡ್ತಾಳೆ. ಅವಳು ಹೇಳೋದು, “ಕೆಲವೊಂದು ಸಲ ರೇಡಿಯೋದಲ್ಲಿ ಸಕ್ಕತ್ತಾಗಿರೋ ಹಾಡುಗಳು ಬರ್ತವೆ. ಆದ್ರೆ ಅದ್ರ ಸಾಹಿತ್ಯ ತುಂಬಾ ಕೆಟ್ಟದ್ದಾಗಿರುತ್ತೆ. ಆಗ ನಾನು ರೇಡಿಯೋ ಸ್ಟೇಷನ್‌ ಬದಲಾಯಿಸ್ತೀನಿ. ಈ ತರ ಚೇಂಜ್‌ ಮಾಡೋದು ಹೇಳಿದಷ್ಟು ಸುಲಭ ಅಲ್ಲ. ಇದು ಹೇಗಿರುತ್ತೆ ಅಂದ್ರೆ, ರುಚಿಯಾದ ಕೇಕನ್ನ ಸ್ವಲ್ಪ ತಿಂದು ಬಿಸಾಡಿದ ತರ ಇರುತ್ತೆ. ಲೈಂಗಿಕ ಅನೈತಿಕತೆ ತುಂಬಿರುವ ಹಾಡನ್ನ ಕೇಳಬಾರದು ಅಂತ ನಾವು ಈಗ ನಿರ್ಧಾರ ಮಾಡಿದ್ರೆ, ಮುಂದೆ ಮದುವೆಗಿಂತ ಮುಂಚೆ ಸೆಕ್ಸ್‌ ಮಾಡೋ ಒತ್ತಡ ಬರೋವಾಗ ಅದ್ರಿಂದ ದೂರ ಇರೋಕೆ ಆಗುತ್ತೆ. ಹಾಡುಗಳು ನಮ್ಮ ಮೇಲೆ ತುಂಬಾ ಪರಿಣಾಮ ಬೀರುತ್ತೆ, ಹಾಗಾಗಿ ಇದನ್ನ ಆಯ್ಕೆ ಮಾಡೋ ವಿಚಾರವನ್ನ ನಾನು ತುಂಬಾ ಗಂಭೀರವಾಗಿ ನೋಡ್ತೀನಿ.”