ಮಾಹಿತಿ ಇರುವಲ್ಲಿ ಹೋಗಲು

ಬದುಕು ಬದಲಾದ ವಿಧ

ಅತಿ ದೊಡ್ಡ ಬಹುಮಾನ ಸಿಕ್ಕಿತು

ಅತಿ ದೊಡ್ಡ ಬಹುಮಾನ ಸಿಕ್ಕಿತು
  • ಜನನ: 1967

  • ದೇಶ: ಫಿನ್ಲೆಂಡ್‌

  • ಹಿಂದೆ: ಟೆನ್ನಿಸ್‌ ಆಟಗಾರ

ಹಿನ್ನೆಲೆ

 ನಾನು ಫಿನ್ಲೆಂಡಿನ ಟ್ಯಾಂಪರೆಯಲ್ಲಿ ಬೆಳೆದೆ. ಇದು ಹಸಿರಿನಿಂದ ಕಂಗೊಳಿಸುತ್ತಿದ್ದ ಪ್ರಶಾಂತ ವಾತಾವರಣವಿರುವ ಊರು. ನನ್ನ ಹೆತ್ತವರು ಧರ್ಮಕ್ಕೆ ಅಷ್ಟೊಂದು ಪ್ರಾಮುಖ್ಯತೆ ಕೊಡುತ್ತಿರಲಿಲ್ಲ. ಆದರೆ, ವಿದ್ಯಾಭ್ಯಾಸ ಮತ್ತು ಒಳ್ಳೇ ಗುಣಗಳಿಗೆ ತುಂಬ ಪ್ರಾಮುಖ್ಯತೆ ಕೊಡುತ್ತಿದ್ದರು. ನನ್ನ ತಾಯಿ ಜರ್ಮನಿಯವರಾಗಿದ್ದರು. ನಾನು ಚಿಕ್ಕವನಿದ್ದಾಗ ಅಪರೂಪಕ್ಕೊಮ್ಮೆ ಜರ್ಮನಿಯಲ್ಲಿದ್ದ ನನ್ನ ಅಜ್ಜಿ, ತಾತನ ಮನೆಗೆ ಹೋಗುತ್ತಿದ್ದೆ.

 ನನಗೆ ಚಿಕ್ಕವಯಸ್ಸಿನಿಂದಲೇ ಆಟ ಅಂದರೆ ಪಂಚಪ್ರಾಣ. ಆಗ ನಾನು ಬೇರೆ ಬೇರೆ ರೀತಿಯ ಆಟೋಟಗಳಲ್ಲಿ ಭಾಗವಹಿಸಿದ್ದೆ. ಆದರೆ ನನಗೆ ಸುಮಾರು 14 ವರ್ಷ ಆದಾಗ ಟೆನ್ನಿಸ್‌ ಆಟದಲ್ಲೇ ಮುಂದುವರಿಯಲು ನಿರ್ಧರಿಸಿದೆ. 16ನೇ ವಯಸ್ಸಿಗೆ ನನಗೆ ದಿನಕ್ಕೆ ಎರಡು ಮೂರು ಸಲ ಈ ಆಟದ ತರಬೇತಿ ಕೊಡಲಾಗುತ್ತಿತ್ತು. ಇಬ್ಬರು ತರಬೇತಿಗಾರರು ಎರಡು ಸಲ ತರಬೇತಿ ಕೊಟ್ಟರೆ, ಸಂಜೆ ನಾನೇ ಪ್ರ್ಯಾಕ್ಟೀಸ್‌ ಮಾಡುತ್ತಿದ್ದೆ. ಈ ಆಟದ ಬೇರೆ ಬೇರೆ ವಿಷಯಗಳು ನನಗೆ ತುಂಬ ಇಷ್ಟವಾದವು. ಟೆನ್ನಿಸ್‌ ಆಟದಿಂದ ಮಾನಸಿಕವಾಗಿ ಮತ್ತು ಶಾರೀರಿಕವಾಗಿ ಹೆಚ್ಚೆಚ್ಚು ಸಾಧಿಸಲು ಸಾಧ್ಯವಾಗುತ್ತಿತ್ತು. ಸ್ನೇಹಿತರೊಂದಿಗೆ ಸಮಯ ಕಳೆಯುವುದು ನನಗಿಷ್ಟವಾಗುತ್ತಿತ್ತು. ಕೆಲವೊಮ್ಮೆ ಅವರೊಂದಿಗೆ ಬಿಯರ್‌ ಕುಡಿಯುತ್ತಿದ್ದೆನಾದರೂ ನಾನು ಯಾವತ್ತೂ ಅಮಲೌಷಧ ಅಥವಾ ಮಧ್ಯದ ಚಟಕ್ಕೆ ಬೀಳಲಿಲ್ಲ. ಟೆನ್ನಿಸೇ ನನ್ನ ಜೀವನವಾಗಿತ್ತು. ಅದೇ ನನಗೆ ಸರ್ವಸ್ವವಾಗಿತ್ತು.

 ನಾನು 17ನೇ ಪ್ರಾಯದಲ್ಲಿ ಎಟಿಪಿ ಪಂದ್ಯಗಳಲ್ಲಿ ಆಡಲು ಆರಂಭಿಸಿದೆ. a ಇಂಥ ಅನೇಕ ಪಂದ್ಯಾವಳಿಗಳಲ್ಲಿ ಗೆದ್ದ ನಂತರ ನಾನು ದೇಶದಾದ್ಯಂತ ಪ್ರಸಿದ್ಧನಾದೆ. 22ರ ವಯಸ್ಸಿನಲ್ಲೇ ಜಗತ್ತಿನ 50 ಅತ್ಯುತ್ತಮ ಕ್ರೀಡಾಪಟುಗಳಲ್ಲಿ ನಾನೂ ಒಬ್ಬನಾಗಿದ್ದೆ.

 ಅನೇಕ ವರ್ಷಗಳವರೆಗೆ, ನಾನು ಜಗತ್ತಿನ ಅನೇಕ ದೇಶಗಳಿಗೆ ಹೋಗಿ ಆಡಿದ್ದೇನೆ. ಆಗೆಲ್ಲಾ ನಾನು ಕೆಲವು ಸುಂದರ ಸ್ಥಳಗಳನ್ನು ನೋಡಿದ್ದೇನೆ. ಆದರೆ, ಅದೇ ಸಮಯದಲ್ಲಿ ಜಗತ್‌ವ್ಯಾಪಕ ಸಮಸ್ಯೆಗಳೇನೆಂದು ಸಹ ತಿಳಿದಿದ್ದೇನೆ. ಉದಾಹರಣೆಗೆ, ಅಪರಾಧ, ಅಮಲೌಷಧದ ದುರುಪಯೋಗ ಮತ್ತು ನೈಸರ್ಗಿಕ ಸಮಸ್ಯೆಗಳು. ಒಮ್ಮೆ ಅಮೆರಿಕದಲ್ಲಿದ್ದಾಗ, ಅಲ್ಲಿನ ಕೆಲವು ಪಟ್ಟಣಗಳಲ್ಲಿ ಹೆಚ್ಚು ಅಪರಾಧಗಳು ನಡೆಯುತ್ತಿದ್ದರಿಂದ ಅಲ್ಲಿ ಹೋಗದಂತೆ ನಮಗೆ ತಿಳಿಸಲಾಗಿತ್ತು. ಈ ಎಲ್ಲಾ ವಿಷಯಗಳು ನನ್ನ ನೆಮ್ಮದಿ ಕೆಡಿಸುತ್ತಿದ್ದವು. ನಾನು ಜೀವನದಲ್ಲಿ ನನಗಿಷ್ಟವಾದದ್ದನ್ನೇ ಮಾಡುತ್ತಿದ್ದರೂ ನಿರಾಶೆ ನನ್ನಲ್ಲಿ ಮನೆಮಾಡಿತ್ತು.

ನನ್ನ ಬದುಕನ್ನೇ ಬದಲಾಯಿಸಿತು ಬೈಬಲ್‌

 ನನ್ನ ಗರ್ಲ್‌ಫ್ರೆಂಡ್‌ ಸಾನ್ನ ಯೆಹೋವನ ಸಾಕ್ಷಿಗಳ ಜೊತೆ ಬೈಬಲ್‌ ಕಲಿಯಲು ಆರಂಭಿಸಿದ್ದಳು. ಧಾರ್ಮಿಕ ವಿಷಯಗಳಲ್ಲಿ ಅವಳಿಗಿರುವ ಆಸಕ್ತಿ ನೋಡಿ ನನಗೆ ಸ್ವಲ್ಪ ಆಶ್ಚರ್ಯ ಆಯಿತು. ಆದರೆ ನಾನದಕ್ಕೆ ಅಡ್ಡಿ ಮಾಡಲಿಲ್ಲ. 1990ರಲ್ಲಿ ನಾವು ಮದುವೆಯಾದೆವು. ಮುಂದಿನ ವರ್ಷ ಅವಳು ದೀಕ್ಷಾಸ್ನಾನ ಪಡೆದು ಒಬ್ಬ ಯೆಹೋವನ ಸಾಕ್ಷಿಯಾದಳು. ನಾನು ದೇವರಿದ್ದಾನೆ ಅಂತ ನಂಬುತ್ತಿದ್ದೆ, ಆದರೆ ನನಗೆ ಧರ್ಮಗಳಲ್ಲಿ ಆಸಕ್ತಿ ಇರಲಿಲ್ಲ. ಜರ್ಮನಿಯಲ್ಲಿದ್ದ ನನ್ನ ಅಜ್ಜಿ ನನಗೆ ತುಂಬ ಸಲ ಬೈಬಲ್‌ ಓದಿ ಹೇಳುತ್ತಿದ್ದದ್ದು ನನಗಿನ್ನೂ ನೆನಪಿದೆ. ಅವರು ನನಗೆ ಪ್ರಾರ್ಥನೆ ಮಾಡುವುದನ್ನೂ ಕಲಿಸಿದ್ದರು.

 ಒಮ್ಮೆ, ಸಾನ್ನ ಮತ್ತು ನಾನು ಯೆಹೋವನ ಸಾಕ್ಷಿಗಳಾದ ಕಾರೀ ಮತ್ತವರ ಪತ್ನಿಯ ಮನೆಗೆ ಹೋಗಿದ್ದೆವು. ಆಗ ಕಾರೀಯವರು, ‘ಕಡೆ ದಿವಸಗಳ’ ಬಗ್ಗೆ ಬೈಬಲಿನಲ್ಲಿರುವ ಪ್ರವಾದನೆಯನ್ನು ನನಗೆ ತೋರಿಸಿದರು. (2 ತಿಮೊಥೆಯ 3:1-5) ಈ ಲೋಕದಲ್ಲಿ ಯಾಕಿಷ್ಟು ಕೆಟ್ಟ ವಿಷಯಗಳು ನಡೆಯುತ್ತಿವೆ ಅಂತ ನನಗಾಗ ಅರ್ಥವಾಯಿತು. ಆ ದಿನ ನಾವು ಧರ್ಮದ ಬಗ್ಗೆ ಅಷ್ಟೇನೂ ಮಾತಾಡಲಿಲ್ಲ. ಆದರೂ ಆ ಕ್ಷಣದಿಂದ ನಾನು ಕಾರೀಯವರ ಜೊತೆ ಬೈಬಲಿನಲ್ಲಿರುವ ವಿಷಯಗಳ ಬಗ್ಗೆ ಮಾತಾಡಲು ಆರಂಭಿಸಿದೆ. ನಾನು ಕಲಿತ ವಿಷಯ ತರ್ಕಬದ್ಧವಾಗಿದೆ ಎಂದು ನನಗನಿಸಿತು. ನಾನು ತುಂಬ ಬ್ಯುಸಿ ಆಗಿದ್ದರಿಂದ ಮತ್ತು ಬೇರೆ ಬೇರೆ ಕಡೆಗೆ ಪ್ರಯಾಣಿಸುತ್ತಾ ಇದ್ದದರಿಂದ ಕ್ರಮವಾಗಿ ಇದರ ಬಗ್ಗೆ ಚರ್ಚಿಸಲು ಆಗುತ್ತಿರಲಿಲ್ಲ. ಹಾಗಂತ ಕಾರೀ ಪ್ರಯತ್ನ ಬಿಡಲಿಲ್ಲ. ಬೈಬಲ್‌ ಅಧ್ಯಯನದ ಸಮಯದಲ್ಲಿ ನಾನು ಕೇಳಿದ್ದ ಪ್ರಶ್ನೆಗಳಿಗೆ ಪತ್ರದ ಮೂಲಕ ಅವರು ಉತ್ತರವನ್ನು ಬರೆದು ಕಳುಹಿಸುತ್ತಿದ್ದರು. ಜೀವನದ ಬಗ್ಗೆ ನನಗಿದ್ದ ಎಲ್ಲಾ ಪ್ರಶ್ನೆಗಳಿಗೂ ಬೈಬಲ್‌ನಲ್ಲಿ ಅರ್ಥಭರಿತ ಉತ್ತರ ಇತ್ತು. ಇದರ ಬಗ್ಗೆ ಕಲಿಯುತ್ತಾ ಹೋದಂತೆ ಬೈಬಲಿನ ಮುಖ್ಯ ವಿಷಯ, ದೇವರ ರಾಜ್ಯ ಎಂದು ತಿಳಿಯಿತು. ಆ ರಾಜ್ಯ ದೇವರ ಉದ್ದೇಶಗಳನ್ನು ನೆರವೇರಿಸುತ್ತದೆ ಎಂದು ಕಲಿತೆ. ದೇವರ ಹೆಸರು ಯೆಹೋವ ಎಂದೂ, ಆತನು ನಮಗಾಗಿ ಏನೆಲ್ಲಾ ಮಾಡಿದ್ದಾನೆಂದು ಕಲಿತಾಗ ಅದು ನನ್ನ ಮೇಲೆ ತುಂಬ ಪ್ರಭಾವ ಬೀರಿತು. (ಕೀರ್ತನೆ 83:18) ದೇವರು ಮಾನವರಿಗಾಗಿ ಕೊಟ್ಟ ವಿಮೋಚನಾ ಮೌಲ್ಯ ನನ್ನನ್ನು ಎಲ್ಲಕ್ಕಿಂತ ಹೆಚ್ಚು ಪ್ರಭಾವಿಸಿತು. ಇದು ದೇವರು ತನ್ನ ನ್ಯಾಯದ ಮಟ್ಟಗಳನ್ನು ಅನುಸರಿಸಿ ಮಾಡಿದ ಏರ್ಪಾಡಾಗಿತ್ತಾದರೂ ಅದರಲ್ಲಿ ದೇವರ ಪ್ರೀತಿ ಎದ್ದುಕಾಣುತ್ತಿತ್ತು. (ಯೋಹಾನ 3:16) ನಾನು ಸಹ ದೇವರ ಸ್ನೇಹಿತ ಆಗಸಾಧ್ಯವಿದೆ ಮತ್ತು ಈ ಭೂಮಿ ಶಾಂತಿ-ಸಮಾಧಾನದಿಂದ ತುಂಬಿದ ತೋಟದಂತೆ ಆಗುವಾಗ ಸಾವೇ ಇಲ್ಲದೆ ಶಾಶ್ವತವಾಗಿ ಬದುಕಸಾಧ್ಯವಿದೆ ಎಂದು ಕಲಿತೆ. (ಯಾಕೋಬ 4:8) “ನಾನಿದಕ್ಕೆಲ್ಲಾ ಹೇಗೆ ಕೃತಜ್ಞತೆ ತೋರಿಸಲಿ?” ಎಂದು ನನ್ನನ್ನೇ ಪ್ರಶ್ನಿಸಿಕೊಳ್ಳುತ್ತಿದ್ದೆ.

 ಅದಕ್ಕಾಗಿ ಮೊದಲು ನಾನು ಅಲ್ಲಿವರೆಗಿನ ನನ್ನ ಜೀವನದ ಬಗ್ಗೆ ತುಂಬ ಯೋಚಿಸಿದೆ. ಕೊಡುವುದರಲ್ಲೇ ಹೆಚ್ಚು ಸಂತೋಷ ಸಿಗುತ್ತದೆ ಎಂದು ಬೈಬಲಿನಿಂದ ಕಲಿತಿದ್ದೆ. ಹಾಗಾಗಿ ನನಗೆ ನನ್ನ ನಂಬಿಕೆಗಳ ಬಗ್ಗೆ ಇತರರಿಗೆ ತಿಳಿಸಬೇಕೆಂದು ಅನಿಸಿತು. (ಅಪೊಸ್ತಲರ ಕಾರ್ಯಗಳು 20:35) ಮಾತ್ರವಲ್ಲ, ನಾನು ವರ್ಷದಲ್ಲಿ ಸುಮಾರು 200 ದಿನ ಪಂದ್ಯಗಳಲ್ಲಿ ಭಾಗವಹಿಸುತ್ತಿದ್ದರಿಂದ ಮನೆಯಲ್ಲಿ ಇರುತ್ತಿರಲಿಲ್ಲ. ನನ್ನ ಕುಟುಂಬದವರೆಲ್ಲರೂ ನನ್ನ ತರಬೇತಿ, ನನ್ನ ಅಭ್ಯಾಸ, ನನ್ನ ಜೀವನವೃತ್ತಿಗೇ ಪ್ರಾಮುಖ್ಯತೆ ಕೊಡುತ್ತಿದ್ದರು. ನನ್ನ ಕುಟುಂಬದಲ್ಲಿ ನಾನೇ ಮುಖ್ಯವಾಗಿದ್ದೆ. ಹಾಗಾಗಿ, ನಾನು ಬದಲಾವಣೆ ಮಾಡಿಕೊಳ್ಳಬೇಕು ಎಂದು ಅರ್ಥಮಾಡಿಕೊಂಡೆ.

 ಪ್ರಸಿದ್ಧನಾಗುತ್ತಾ ಇದ್ದಾಗಲೇ ಧಾರ್ಮಿಕ ಕಾರಣಗಳಿಗಾಗಿ ಆಡುವುದನ್ನು ಬಿಟ್ಟುಬಿಡುವುದು ಹುಚ್ಚು ಅಂತ ಅನೇಕರಿಗೆ ಅನಿಸಬಹುದು. ಯೆಹೋವನ ಬಗ್ಗೆ ಚೆನ್ನಾಗಿ ತಿಳಿಯುವ ಮತ್ತು ನಿತ್ಯಜೀವ ಪಡೆಯುವ ಅವಕಾಶವು, ಯಾವುದೇ ಟೆನ್ನಿಸ್‌ ಪಂದ್ಯದಲ್ಲಿ ಸಿಗುವ ಬಹುಮಾನಕ್ಕಿಂತ ಹೆಚ್ಚು ಅಮೂಲ್ಯವಾಗಿದೆ. ಆದ್ದರಿಂದ ಮುಂದೇನು ಮಾಡಬೇಕೆಂದು ನಿರ್ಧರಿಸಲು ನನಗೆ ಕಷ್ಟವಾಗಲಿಲ್ಲ. ಇದು ನನ್ನ ನಿರ್ಧಾರ, ಜನ ಏನು ಹೇಳುತ್ತಾರೆ ಎನ್ನುವುದರ ಬಗ್ಗೆ ತಲೆಕೆಡಿಸಿಕೊಳ್ಳಬಾರದು ಎಂದು ನಾನು ದೃಢ ತೀರ್ಮಾನ ಮಾಡಿದ್ದೆ. ಇಂಥ ಒತ್ತಡವನ್ನು ಎದುರಿಸಲು ನನಗೆ ಸಹಾಯ ಮಾಡಿದ ಒಂದು ವಚನ ಕೀರ್ತನೆ 118:6. ಅಲ್ಲಿ ಹೀಗೆ ಹೇಳುತ್ತೆ, “ಯೆಹೋವನು ನನಗಿದ್ದಾನೆ; ಭಯಪಡೆನು. ಮನುಷ್ಯನು ನನಗೆ ಏನು ಮಾಡಾನು?”

 ಆ ತೀರ್ಮಾನ ಮಾಡಿದಾಗಲೇ, ನನಗೊಂದು ಅತ್ಯಾಕರ್ಷಕ ಅವಕಾಶ ಸಿಕ್ಕಿತು. ಇದಕ್ಕೆ ಒಪ್ಪಿದ್ದರೆ ಅನೇಕ ವರ್ಷಗಳವರೆಗೆ ನಾನು ಟೆನ್ನಿಸ್‌ ಆಡುತ್ತಾ ಚಿಂತೆ ಇಲ್ಲದೆ ಜೀವನ ಮಾಡಬಹುದಿತ್ತು. ಆದರೆ, ನಾನು ಈಗಾಗಲೇ ನಿರ್ಧಾರ ಮಾಡಿ ಆಗಿತ್ತು. ಹಾಗಾಗಿ, ನಾನು ಅವರು ಕೊಟ್ಟ ಅವಕಾಶವನ್ನು ಸ್ವೀಕರಿಸಲಿಲ್ಲ. ಕ್ರಮೇಣ ಎಟಿಪಿ ಪಂದ್ಯಗಳಲ್ಲಿ ಆಡುವುದನ್ನೇ ನಿಲ್ಲಿಸಿಬಿಟ್ಟೆ. ಬೈಬಲ್‌ ಅಧ್ಯಯನವನ್ನು ಮುಂದುವರಿಸಿದೆ ಮತ್ತು ಜುಲೈ 2, 1994ರಂದು ದೀಕ್ಷಾಸ್ನಾನ ಪಡೆದು ಯೆಹೋವನ ಸಾಕ್ಷಿಯಾದೆ.

ಸಿಕ್ಕಿದ ಪ್ರಯೋಜನಗಳು

 ನಾನು ಏನೋ ಒಂದು ದುರಂತದ ಕಾರಣದಿಂದಾಗಿ ದೇವರ ಬಗ್ಗೆ ಯೋಚಿಸೋಕೆ ಪ್ರಾರಂಭಿಸಲಿಲ್ಲ. ಹಾಗಂತ, ಸತ್ಯಕ್ಕಾಗಿ ಹುಡುಕುವ ವ್ಯಕ್ತಿನೂ ನಾನಾಗಿರಲಿಲ್ಲ. ಬೈಬಲ್‌ ಸತ್ಯನೇ ನನಗಾಗಿ ಹುಡುಕುತ್ತಿರುವಂತೆ ಅನಿಸಿತು. ನಾನು ಜೀವನದ ನಿಜ ಅರ್ಥ ತಿಳಿದುಕೊಂಡೆ. ಈಗ ನನ್ನ ಜೀವನ ನಾನು ಊಹಿಸಿದ್ದಕ್ಕಿಂತಲೂ ತುಂಬ ಚೆನ್ನಾಗಿದೆ. ನನ್ನ ಕುಟುಂಬ ಹೆಚ್ಚು ಆಪ್ತ ಮತ್ತು ಐಕ್ಯವಾಗಿದೆ. ನನ್ನ ಮೂರು ಗಂಡು ಮಕ್ಕಳೂ ಕ್ರೀಡೆಯನ್ನು ಆರಿಸಿಕೊಳ್ಳದೆ ನನ್ನಂತೆಯೇ ಕ್ರೈಸ್ತ ಮಾರ್ಗದಲ್ಲಿ ನಡೆಯುತ್ತಿರುವುದರಿಂದ ನಾನು ಸಂತೋಷವಾಗಿದ್ದೇನೆ.

 ನಾನೀಗಲೂ ಟೆನ್ನಿಸ್‌ ಆಡುತ್ತೇನೆ. ಒಂದು ಟೆನ್ನಿಸ್‌ ಕೇಂದ್ರದ ಮ್ಯಾನೇಜರ್‌ ಮತ್ತು ಟೆನ್ನಿಸ್‌ ಕೋಚ್‌ ಆಗಿ ಕೆಲಸ ಮಾಡುವ ಮೂಲಕ ಜೀವನ ನಡೆಸುತ್ತಿದ್ದೇನೆ. ಆದರೆ, ಈಗ ಟೆನ್ನಿಸ್‌ ನನ್ನ ಜೀವನ, ಸರ್ವಸ್ವ ಆಗಿಲ್ಲ. ಹಿಂದೆ ನಾನು ಉತ್ತಮ ಟೆನ್ನಿಸ್‌ ಆಟಗಾರ ಮತ್ತು ಚಾಂಪಿಯನ್‌ ಆಗಲಿಕ್ಕಾಗಿ ವಾರದಲ್ಲಿ ಹೆಚ್ಚಿನ ತಾಸು ತರಬೇತಿ ಪಡೆಯುತ್ತಿದ್ದೆ. ಈಗ, ನಾನು ನನ್ನ ಬದುಕನ್ನೇ ಬದಲಾಯಿಸಿದ ಬೈಬಲ್‌ ತತ್ವಗಳನ್ನು ಇತರರಿಗೆ ಕಲಿಸುವುದರಲ್ಲಿ ಸಮಯವನ್ನು ಕಳೆಯುತ್ತೇನೆ. ಯೆಹೋವನ ಜೊತೆಗೆ ನನಗಿರುವ ಬಂಧಕ್ಕೆ ಮತ್ತು ನನಗಿರುವ ಉಜ್ವಲ ಭವಿಷ್ಯದ ನಿರೀಕ್ಷೆಯ ಕುರಿತು ಇತರರಿಗೆ ಹೇಳುವುದಕ್ಕೆ ನಾನು ಎಲ್ಲದಕ್ಕಿಂತ ಹೆಚ್ಚು ಪ್ರಾಮುಖ್ಯತೆ ನೀಡುತ್ತೇನೆ.—1 ತಿಮೊಥೆಯ 6:19.

a ಎಟಿಪಿ ಅಂದರೆ ಟೆನ್ನಿಸ್‌ ಆಟಗಾರರ ಸಂಸ್ಥೆ (ಅಸೋಸಿಯೇಷನ್‌ ಆಫ್‌ ಟೆನ್ನಿಸ್‌ ಪ್ರೊಫೆಶನಲ್ಸ್‌). ಇದು ಪುರುಷರ ಟೆನ್ನಿಸ್‌ ಪಂದ್ಯಾವಳಿಗಳ ಕ್ಷೇತ್ರಗಳನ್ನು ನೋಡಿಕೊಳ್ಳುವ ಆಡಳಿತ ಸಮತಿ ಆಗಿದೆ. ಇದರಲ್ಲಿ ಅನೇಕ ಪಂದ್ಯಾವಳಿಗಳು ನಡೆಯುತ್ತವೆ, ಗೆದ್ದವರಿಗೆ ಬಹುಮಾನವಾಗಿ ಅಂಕಗಳು (ಪಾಯಿಂಟ್ಸ್‌) ಅಥವಾ ಹಣ ಕೊಡಲಾಗುತ್ತದೆ. ಈ ಪಂದ್ಯಾವಳಿಗಳಲ್ಲಿ ಒಬ್ಬರಿಗೆ ಎಷ್ಟು ಅಂಕಗಳು ಸಿಕ್ಕಿವೆಯೋ ಅದನ್ನಾಧರಿಸಿ ಜಗತ್ತಿನ ಆಟಗಾರರ ಪಟ್ಟಿಯಲ್ಲಿ ಅವರ ಸ್ಥಾನವನ್ನು ನಿರ್ಧರಿಸಲಾಗುತ್ತದೆ.