ಮಾಹಿತಿ ಇರುವಲ್ಲಿ ಹೋಗಲು

ಬದುಕು ಬದಲಾದ ವಿಧ

ಕೊನೆಗೂ ಅಪ್ಪನ ಜೊತೆ ರಾಜಿಯಾದೆ

ಕೊನೆಗೂ ಅಪ್ಪನ ಜೊತೆ ರಾಜಿಯಾದೆ
  • ಜನನ: 1954

  • ದೇಶ: ಫಿಲಿಪೀನ್ಸ್‌

  • ಹಿಂದೆ: ಕ್ರೂರ ತಂದೆಯಿಂದ ಓಡಿ ಹೋದ ವ್ಯಕ್ತಿ

ಹಿನ್ನೆಲೆ

 ಫಿಲಿಪೀನ್ಸಿನ ಪಾಗ್ಸಾನ್‌ಹಾನ್‌ ಎಂಬ ಸ್ಥಳದಲ್ಲಿ ನನ್ನ ತಂದೆ ನಾರ್ಡೋ ಲೆರೋನ್‌ರು ಬಡತನದಲ್ಲಿ ಬೆಳೆದರು. ಆ ಊರು ಸುತ್ತಮುತ್ತಲಿನ ಜಲಪಾತಗಳಿಂದಾಗಿ ಪ್ರಸಿದ್ಧವಾಗಿದ್ದು, ಈಗಲೂ ಅಲ್ಲಿಗೆ ಅನೇಕ ಪ್ರವಾಸಿಗರು ಬರುತ್ತಾರೆ. ಅಲ್ಲಿನ ಸರಕಾರದಲ್ಲಿ, ಪೊಲೀಸರಲ್ಲಿ ಮತ್ತು ತಮ್ಮ ಕೆಲಸದ ಸ್ಥಳದಲ್ಲಿ ಇದ್ದ ಭ್ರಷ್ಟಾಚಾರ ನೋಡಿ ನಮ್ಮ ತಂದೆಗೆ ಕಹಿ ಮನೋಭಾವ ಬೆಳೆದಿತ್ತು ಮತ್ತು ಕೋಪಿಷ್ಠರಾಗಿದ್ದರು.

 ನಮ್ಮ ತಂದೆ-ತಾಯಿಗೆ ನಾವು ಒಟ್ಟು ಎಂಟು ಮಕ್ಕಳು. ನಮ್ಮನ್ನು ಬೆಳೆಸಲಿಕ್ಕೆ ಅವರು ತುಂಬ ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು. ಅವರು ಪರ್ವತಗಳಲ್ಲಿ ಬೆಳೆಗಳನ್ನು ನೋಡಿಕೊಳ್ಳುತ್ತಿದ್ದದರಿಂದ ಎಷ್ಟೋ ಸಮಯ ಮನೆಯಲ್ಲಿ ಇರುತ್ತಿರಲಿಲ್ಲ. ತುಂಬ ಸಾರಿ ನಾನು ಮತ್ತು ನನ್ನ ಅಣ್ಣ ರೊಡೀಲಿಯೊ ಇಬ್ಬರೇ ಇರಬೇಕಾಗುತ್ತಿತ್ತು. ಆವಾಗೆಲ್ಲಾ ಎಷ್ಟೋ ಸಾರಿ ತುಂಬ ಹಸಿವೆ ಆಗುತ್ತಿತ್ತು, ಆದರೆ ಊಟ ಇರುತ್ತಿರಲಿಲ್ಲ. ಚಿಕ್ಕ ವಯಸ್ಸಲ್ಲಿ ಆಟ ಆಡಲಿಕ್ಕೂ ಸಿಗುತ್ತಿರಲಿಲ್ಲ. ಏಳು ವರ್ಷದವರಾದಾಗ, ಪ್ರತಿಯೊಬ್ಬರೂ ಒಂದು ತೋಟದಲ್ಲಿ ಕೆಲಸ ಮಾಡಬೇಕಿತ್ತು. ತೆಂಗಿನಕಾಯಿ ತುಂಬಿದ ಭಾರವಾದ ಚೀಲಗಳನ್ನು ಕಡಿದಾದ ಪರ್ವತದ ದಾರಿಗಳಲ್ಲಿ ಹೊತ್ತುಕೊಂಡು ಹೋಗಬೇಕಿತ್ತು. ಅದು ಹೊರಲಿಕ್ಕಾಗದಷ್ಟು ಭಾರವಾಗಿದ್ದರೆ ಎಳೆದುಕೊಂಡಾದರೂ ಹೋಗಲೇಬೇಕಿತ್ತು.

 ನಮ್ಮ ಅಪ್ಪ ನಮಗೆ ಹೊಡೆಯುತ್ತಿದ್ದರು. ಆದರೆ ಆ ನೋವಿಗಿಂತ ನಮ್ಮ ತಾಯಿ ಮೇಲೆ ಕೈ ಮಾಡುತ್ತಿದ್ದರಲ್ಲಾ, ಅದೇ ತುಂಬ ನೋವು ಮಾಡುತ್ತಿತ್ತು. ನಾವು ಅವರನ್ನ ತಡಿಯಲಿಕ್ಕೆ ಪ್ರಯತ್ನಿಸುತ್ತಿದ್ವಿ, ಆದರೆ ಆಗುತ್ತಿರಲಿಲ್ಲ. ರೊಡೀಲಿಯೊ ಮತ್ತು ನಾನು, ದೊಡ್ಡವರಾದ ಮೇಲೆ ನಮ್ಮ ತಂದೆಯನ್ನು ಸಾಯಿಸಬೇಕು ಅಂತ ತೀರ್ಮಾನಿಸಿದ್ವಿ. ಬೇರೆಯವರ ಥರ ನಮಗೂ ಪ್ರೀತಿ ಮಾಡೋ ಅಪ್ಪ ಇರಬೇಕಿತ್ತು ಅಂತ ಯಾವಾಗಲೂ ಅನಿಸುತ್ತಿತ್ತು.

 ತಂದೆಯ ಹಿಂಸೆಯಿಂದ ನನಗೆ ಸಾಕಾಗಿ ಹೋಗಿ ಕೋಪದಿಂದ ಮನೆಬಿಟ್ಟು ಹೋದೆ. ಆಗ ನನಗೆ 14 ವರ್ಷ. ಸ್ವಲ್ಪ ಸಮಯ ನಾನು ಬೀದಿಗಳಲ್ಲೇ ಜೀವನ ಮಾಡಿದೆ. ಗಾಂಜಾ ತೆಗೆದುಕೊಳ್ಳೋಕೆ ಶುರು ಮಾಡಿದೆ. ಕೊನೆಗೆ ನಾನು ಪ್ರವಾಸಿಗರನ್ನು ಜಲಪಾತದ ಹತ್ತಿರಕ್ಕೆ ಕರಕೊಂಡು ಹೋಗುವ ದೋಣಿಯನ್ನು ನಡೆಸುವ ಕೆಲಸ ಮಾಡಿದೆ.

 ಕೆಲವು ವರ್ಷಗಳಾದ ಮೇಲೆ ನಾನು ಮನಿಲದಲ್ಲಿ ಕಾಲೇಜಿಗೆ ಹೋಗಲು ಶುರು ಮಾಡಿದೆ. ಆದರೆ ವಾರಾಂತ್ಯದಲ್ಲಿ ಪಾಗ್ಸಾನ್‌ಹಾನ್‌ಗೆ ಹೋಗಿ ಕೆಲಸ ಮಾಡುತ್ತಿದ್ದೆ. ಹಾಗಾಗಿ ನನಗೆ ಓದಲಿಕ್ಕೆ ಜಾಸ್ತಿ ಸಮಯ ಸಿಗುತ್ತಿರಲಿಲ್ಲ. ನನ್ನ ಜೀವನ ಮುಂದೆ ಹೋಗದೆ ಸುತ್ತಿದ ಕಡೆನೇ ಸುತ್ತುತ್ತಿತ್ತು. ಆಗ ಗಾಂಜಾದಿಂದಲೂ ನನ್ನ ಚಿಂತೆ ಕಡಿಮೆ ಆಗುತ್ತಿರಲಿಲ್ಲ. ಅದಕ್ಕೇ, ನಾನು ಕೋಕೇನ್‌, ಹೆರಾಯಿನ್‌ ಮತ್ತು ಬೇರೆ ಡ್ರಗ್ಸ್‌ಗಳನ್ನು ತಗೊಳ್ಳಲು ಶುರು ಮಾಡಿದೆ. ಜೊತೆಗೆ, ಲೈಂಗಿಕ ಅನೈತಿಕತೆಯಲ್ಲೂ ಒಳಗೂಡುತ್ತಿದ್ದೆ. ಸಮಾಜದಲ್ಲಿ ಎಲ್ಲಿ ನೋಡಿದರೂ ಬಡತನ, ಅನ್ಯಾಯ ಮತ್ತು ನರಳಾಟನೇ ಕಾಣುತ್ತಿತ್ತು. ಇದೆಲ್ಲದಕ್ಕೂ ಸರ್ಕಾರವೇ ಕಾರಣ ಎಂದು ನೆನೆಸುತ್ತಿದ್ದೆ ಮತ್ತು ಸರ್ಕಾರವನ್ನು ದ್ವೇಷಿಸುತ್ತಿದ್ದೆ. “ಜೀವನ ಈ ಥರ ಯಾಕಿದೆ?” ಅಂತ ದೇವರನ್ನು ಕೇಳುತ್ತಿದ್ದೆ. ಆದರೆ ನಾನು ಪರಿಶೀಲಿಸಿದ ಯಾವ ಧರ್ಮಗಳೂ ಅದಕ್ಕೆ ಉತ್ತರ ಕೊಡಲಿಲ್ಲ. ಈ ಹತಾಶೆಯಿಂದ ಹೊರಬರಲು ಇನ್ನಷ್ಟು ಡ್ರಗ್ಸ್‌ ತಗೊಳ್ಳುತ್ತಿದ್ದೆ.

 1972ರಲ್ಲಿ ಫಿಲಿಪೀನ್ಸ್‌ನಲ್ಲಿ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲು ಯೋಜಿಸಿದರು. ಅಂಥ ಒಂದು ಪ್ರತಿಭಟನೆಯಲ್ಲಿ ನಾನೂ ಭಾಗವಹಿಸಿದೆ. ಸ್ವಲ್ಪದರಲ್ಲೇ ಅದು ಹಿಂಸಾಚಾರಕ್ಕೆ ತಿರುಗಿತು, ತುಂಬ ಜನರನ್ನು ಬಂಧಿಸಲಾಯಿತು. ಇದಾಗಿ ಕೆಲವು ತಿಂಗಳುಗಳ ನಂತರ, ದೇಶದ ಎಲ್ಲಾ ಕಡೆ ಸೇನೆಯ ಆಡಳಿತವನ್ನು ಜಾರಿಗೆ ತರಲಾಯಿತು.

 ದಂಗೆಯಲ್ಲಿ ಭಾಗವಹಿಸಿದ್ದರಿಂದ ಅಧಿಕಾರಿಗಳ ಭಯದಿಂದ ನಾನು ಪುನಃ ಬೀದಿಗಳಲ್ಲಿ ಜೀವನ ಮಾಡಬೇಕಾಯಿತು. ಡ್ರಗ್ಸ್‌ ಖರೀದಿಸಲಿಕ್ಕಾಗಿ ನಾನು ಕಳ್ಳತನ ಮಾಡುತ್ತಿದ್ದೆ. ಕೊನೆಗೆ, ಶ್ರೀಮಂತರಿಗೆ ಮತ್ತು ವಿದೇಶಿಯರಿಗೆ ಪುರುಷ ವೇಶ್ಯೆಯಾಗಿ ಕೆಲಸ ಮಾಡೋವಷ್ಟರ ಮಟ್ಟಿಗೆ ಇಳಿದುಬಿಟ್ಟೆ. ನನಗೆ ಬದುಕಬೇಕನ್ನೋ ಆಸೆನೂ ಇರಲಿಲ್ಲ, ಸಾಯುತ್ತೀನನ್ನೋ ಚಿಂತೆನೂ ಇರಲಿಲ್ಲ.

 ಅದೇ ಸಮಯದಲ್ಲಿ, ನನ್ನ ತಾಯಿ ಮತ್ತು ತಮ್ಮ ಯೆಹೋವನ ಸಾಕ್ಷಿಗಳ ಜೊತೆ ಬೈಬಲಿನ ಬಗ್ಗೆ ಕಲಿಯಲಿಕ್ಕೆ ಶುರು ಮಾಡಿದ್ದರು. ಇದರಿಂದ ನನ್ನ ತಂದೆ ತುಂಬ ಸಿಟ್ಟುಗೊಂಡು ಅವರ ಬೈಬಲ್‌ ಸಾಹಿತ್ಯವನ್ನು ಸುಟ್ಟು ಹಾಕಿದರು. ಆದರೆ ನನ್ನ ತಾಯಿ ಮತ್ತು ತಮ್ಮ ಪಟ್ಟುಬಿಡದೆ ಯೆಹೋವನ ಸಾಕ್ಷಿಗಳಾಗಿ ದೀಕ್ಷಾಸ್ನಾನ ಪಡೆದರು.

 ಒಂದು ದಿನ ಯೆಹೋವನ ಸಾಕ್ಷಿಗಳಲ್ಲೊಬ್ಬರು ನನ್ನ ತಂದೆ ಹತ್ತಿರ ಬೈಬಲಿನಲ್ಲಿರುವ ಒಂದು ಮಾತಿನ ಬಗ್ಗೆ ಹೇಳಿದರು. ಮುಂದೊಂದು ದಿನ ಭೂಮಿ ಮೇಲೆ ಎಲ್ಲೂ ಅನ್ಯಾಯನೇ ಇರಲ್ಲ ಅಂದರು. (ಕೀರ್ತನೆ 72:12-14) ಅದು ನನ್ನ ತಂದೆಗೆ ಎಷ್ಟು ಹಿಡಿಸಿತೆಂದರೆ ಅದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನಿರ್ಣಯಿಸಿದರು. ಬೈಬಲಿನಿಂದ ಅವರು, ನ್ಯಾಯವಾಗಿ ಆಳ್ವಿಕೆ ಮಾಡುವ ಒಂದು ಸರ್ಕಾರದ ಬಗ್ಗೆ ಮಾತ್ರವಲ್ಲ, ಗಂಡಂದಿರಿಂದ ಮತ್ತು ತಂದೆಗಳಿಂದ ದೇವರು ಏನು ಅಪೇಕ್ಷಿಸುತ್ತಾನೆ ಎನ್ನುವುದರ ಬಗ್ಗೆಯೂ ತಿಳಿದುಕೊಂಡರು. (ಎಫೆಸ 5:28; 6:4) ಸ್ವಲ್ಪ ಸಮಯದ ನಂತರ ನನ್ನ ತಂದೆ ಮತ್ತು ನನ್ನ ಎಲ್ಲಾ ಒಡಹುಟ್ಟಿದವರು ಸಾಕ್ಷಿಗಳಾದರು. ನಾನು ಮನೆಯಿಂದ ದೂರ ಇದ್ದದರಿಂದ ಇದ್ಯಾವುದೂ ನನಗೆ ಗೊತ್ತಿರಲಿಲ್ಲ.

ಬದುಕನ್ನೇ ಬದಲಾಯಿಸಿತು ಬೈಬಲ್‌

 1978ರಲ್ಲಿ ನಾನು ಆಸ್ಟ್ರೇಲಿಯಕ್ಕೆ ಹೋದೆ. ಆದರೆ ಆ ಶಾಂತ ಮತ್ತು ಶ್ರೀಮಂತ ದೇಶದಲ್ಲೂ ನನಗೆ ನೆಮ್ಮದಿ ಸಿಗಲಿಲ್ಲ. ನಾನು ಕುಡಿಯುವುದನ್ನು ಮತ್ತು ಡ್ರಗ್ಸ್‌ ತಗೊಳ್ಳುವುದನ್ನು ಮುಂದುವರಿಸಿದೆ. ಆ ವರ್ಷದ ಕೊನೆಯಲ್ಲಿ ಯೆಹೋವನ ಸಾಕ್ಷಿಗಳು ನನ್ನನ್ನು ಭೇಟಿ ಮಾಡಿದರು. ಅವರು ಭೂಮಿಯ ಮೇಲೆ ಶಾಂತಿ ತುಂಬಿರುತ್ತದೆ ಅಂತ ಬೈಬಲಿನಿಂದ ತೋರಿಸಿದಾಗ ನನಗದು ತುಂಬ ಇಷ್ಟ ಆಯಿತು. ಆದರೂ ಅವರ ಜೊತೆ ಸೇರಲಿಲ್ಲ.

 ಇದಾಗಿ ಸ್ವಲ್ಪದರಲ್ಲಿ ನಾನು ಕೆಲವು ವಾರಗಳ ಮಟ್ಟಿಗೆ ಫಿಲಿಪೀನ್ಸ್‌ಗೆ ವಾಪಸ್ಸು ಹೋದೆ. ನಮ್ಮ ಅಪ್ಪ ತುಂಬ ಕಷ್ಟಪಟ್ಟು ಒಬ್ಬ ಒಳ್ಳೇ ವ್ಯಕ್ತಿ ಆಗಿದ್ದಾರೆ ಅಂತ ನನ್ನ ಅಣ್ಣ ಮತ್ತು ತಮ್ಮ-ತಂಗಿಯರು ಹೇಳಿದರು. ಆದರೆ ನನ್ನ ಹೃದಯದಲ್ಲಿ ಕಹಿಭಾವನೆ ಎಷ್ಟಿತ್ತೆಂದರೆ ನಾನು ಅಪ್ಪನಿಂದ ದೂರನೇ ಉಳಿದೆ.

 ಜೀವನದಲ್ಲಿ ಯಾಕಿಷ್ಟು ಕಷ್ಟ ಮತ್ತು ಅನ್ಯಾಯ ಇದೆ ಅಂತ ನನ್ನ ತಂಗಿ ಬೈಬಲಿನಿಂದ ವಿವರಿಸಿದಳು. ಅಷ್ಟೇನು ಅನುಭವ ಇಲ್ಲದ ಹದಿವಯಸ್ಸಿನಲ್ಲಿದ್ದ ನನ್ನ ತಂಗಿಗೆ ನನ್ನ ಪ್ರಶ್ನೆಗಳಿಗೆಲ್ಲಾ ಉತ್ತರ ಗೊತ್ತಿತ್ತು. ಇದನ್ನು ನೋಡಿ ನನಗೆ ಆಶ್ಚರ್ಯ ಆಯ್ತು. ನಾನು ಅಲ್ಲಿಂದ ಹೊರಡುವ ಮುಂಚೆ ನನ್ನ ತಂದೆ ನನಗೆ, ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ a ಎಂಬ ಪುಸ್ತಕ ಕೊಟ್ಟರು. ಅವರು ನನಗೆ, “ಸಾಕು, ಈಗ ನಿಲ್ಲಿಸು. ನೀನು ಯಾವ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿದ್ದೀಯೋ ಆ ಉತ್ತರಗಳು ಈ ಪುಸ್ತಕದಲ್ಲಿವೆ” ಅಂದರು. ಆಸ್ಟ್ರೇಲಿಯಕ್ಕೆ ಹೋದ ಮೇಲೆ ಯೆಹೋವನ ಸಾಕ್ಷಿಗಳನ್ನು ಭೇಟಿ ಮಾಡುವಂತೆ ನನ್ನನ್ನು ಉತ್ತೇಜಿಸಿದರು.

 ನನ್ನ ತಂದೆ ಕೊಟ್ಟ ಸಲಹೆಯಂತೆ ಬ್ರಿಸ್ಬೇನ್‌ನಲ್ಲಿ ನನ್ನ ಮನೆಗೆ ಹತ್ತಿರವಿದ್ದ ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹವನ್ನು ಹುಡುಕಿದೆ. ಬೈಬಲಿನ ಬಗ್ಗೆ ಕಲಿತುಕೊಳ್ಳಲು ಒಪ್ಪಿಕೊಂಡೆ. ಕಿಂಚಿತ್ತೂ ಭ್ರಷ್ಟಾಚಾರವಿಲ್ಲದ ದೇವರ ಸರಕಾರ ನಮ್ಮನ್ನು ಆಳಲಿದೆ ಅಂತ ಬೈಬಲಿನ ದಾನಿಯೇಲ 7ನೇ ಅಧ್ಯಾಯ ಮತ್ತು ಯೆಶಾಯ 9ನೇ ಅಧ್ಯಾಯದಿಂದ ಗೊತ್ತಾಯಿತು. ನಾವು ಭೂಮಿಯಲ್ಲೇ ಸುಂದರ ತೋಟದಂಥ ವಾತಾವರಣದಲ್ಲಿ ಆನಂದದಿಂದ ಜೀವಿಸುತ್ತೇವೆ ಎಂದೂ ಕಲಿತೆ. ದೇವರು ಇಷ್ಟಪಡುವಂಥ ವ್ಯಕ್ತಿಯಾಗಬೇಕನ್ನುವ ಆಸೆ ಆಗ ನನಗೆ ಹುಟ್ಟಿತು. ಹಾಗಾಗಬೇಕೆಂದರೆ ನಾನು ನನ್ನ ಭಾವನೆಗಳನ್ನು ನಿಯಂತ್ರಣದಲ್ಲಿಡಬೇಕು ಅಂತ ಅರ್ಥಮಾಡಿಕೊಂಡೆ. ಡ್ರಗ್ಸ್‌ ತಗೊಳ್ಳುವುದನ್ನು, ಕುಡಿಯುವುದನ್ನು ಮತ್ತು ಅನೈತಿಕ ಜೀವನ ರೀತಿಯನ್ನು ಬಿಟ್ಟುಬಿಡಬೇಕಿತ್ತು. ಮದುವೆಯಾಗದೆ ಒಂದು ಹುಡುಗಿ ಜೊತೆ ಇರುತ್ತಿದ್ದ ನಾನು ಈಗ ಬೇರೆ ಮನೆ ಮಾಡಿದೆ. ನನ್ನ ಕೆಟ್ಟ ಚಟಗಳನ್ನು ಬಿಟ್ಟೆ. ಯೆಹೋವನ ಮೇಲೆ ಭರವಸೆ ಹೆಚ್ಚಾದಂತೆ ನಾನು ಇನ್ನಿತರ ಬದಲಾವಣೆಗಳನ್ನು ಮಾಡಿಕೊಳ್ಳಲು ಸಹಾಯಕ್ಕಾಗಿ ಪ್ರಾರ್ಥಿಸಿದೆ.

 ನಾನು ಕಲಿಯುತ್ತಿರುವ ವಿಷಯ ಒಬ್ಬ ವ್ಯಕ್ತಿಯನ್ನು ನಿಜಕ್ಕೂ ಬದಲಾಯಿಸುತ್ತದೆ ಎಂದು ನನಗೆ ನಿಧಾನವಾಗಿ ಅರ್ಥ ಆಯಿತು. ಪ್ರಯಾಸಪಟ್ಟರೆ “ನೂತನ ವ್ಯಕ್ತಿತ್ವವನ್ನು” ಬೆಳೆಸಿಕೊಳ್ಳಬಹುದು ಎಂದು ಬೈಬಲ್‌ ಹೇಳುತ್ತದೆ. (ಕೊಲೊಸ್ಸೆ 3:9, 10) ಅದನ್ನೇ ಮಾಡಲು ಪ್ರಯತ್ನಿಸುತ್ತಾ ಹೋದೆ. ಆಗ ನನಗೆ, ನನ್ನ ತಂದೆ ಸಹ ನಿಜವಾಗಿಯೂ ತಮ್ಮ ವ್ಯಕ್ತಿತ್ವವನ್ನು ಬದಲಾಯಿಸಿಕೊಂಡಿರಬೇಕು ಅಂತ ಅನಿಸಿತು. ಅವರ ಮೇಲೆ ಕೋಪ ಮತ್ತು ದ್ವೇಷ ತೋರಿಸದೆ, ಶಾಂತಿಯಿಂದ ಸಮಾಧಾನ ಮಾಡಿಕೊಳ್ಳಬೇಕು ಅಂತ ಅನಿಸಿತು. ಕೊನೆಗೂ ನಾನು ನನ್ನ ತಂದೆಯನ್ನು ಕ್ಷಮಿಸಿ, ಚಿಕ್ಕ ವಯಸ್ಸಿನಿಂದ ಅವರ ಮೇಲೆ ಬೆಳೆಸಿಕೊಂಡ ದ್ವೇಷವನ್ನು ನನ್ನ ಮನಸ್ಸಿನಿಂದ ಕಿತ್ತೆಸೆದೆ.

ಸಿಕ್ಕಿದ ಪ್ರಯೋಜನಗಳು

 ಯುವಕನಾಗಿದ್ದಾಗ ನಾನು ಬೇರೆಯವರನ್ನು ನೋಡಿ ಕೆಟ್ಟ, ನೋವು ತರುವ ಜೀವನ ರೀತಿಯನ್ನು ಅನುಸರಿಸಿದೆ. ಬೈಬಲಿನ ಎಚ್ಚರಿಕೆ ನನ್ನ ಜೀವನದಲ್ಲಿ ನಿಜ ಆಗಿತ್ತು—ಕೆಟ್ಟವರ ಸಹವಾಸದಿಂದ ನಾನು ದಾರಿ ತಪ್ಪಿದ್ದೆ. (1 ಕೊರಿಂಥ 15:33) ಆದರೆ ಯೆಹೋವನ ಸಾಕ್ಷಿಗಳಲ್ಲಿ ನನಗೆ ಭರವಸಾರ್ಹ ಸ್ನೇಹಿತರು ಸಿಕ್ಕಿದ್ದಾರೆ ಮತ್ತು ಅವರು ನಾನು ಒಳ್ಳೇ ವ್ಯಕ್ತಿ ಆಗಲು ಸಹಾಯ ಮಾಡಿದ್ದಾರೆ. ಇವರಲ್ಲಿ ನನ್ನ ಪ್ರೀತಿಯ ಹೆಂಡತಿಯಾದ ಲೋರೆಟಳೂ ಒಬ್ಬಳು. ನಾವಿಬ್ಬರೂ ಇತರರಿಗೆ, ಬೈಬಲ್‌ ಹೇಗೆ ಸಹಾಯ ಮಾಡುತ್ತದೆ ಎಂದು ಕಲಿಸುತ್ತೇವೆ.

ನನ್ನ ಹೆಂಡತಿ ಮತ್ತು ಸ್ನೇಹಿತರೊಂದಿಗೆ ಊಟ ಮಾಡುತ್ತಿರುವಾಗ

 ನನ್ನ ತಂದೆ ಬದಲಾಗುತ್ತಾರೆ, ಅಮ್ಮನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ, ದೀನ ಶಾಂತಿಪ್ರಿಯ ವ್ಯಕ್ತಿಯಾಗುತ್ತಾರೆ ಎಂದು ನಾನ್ಯಾವತ್ತೂ ನೆನಸೇ ಇರಲಿಲ್ಲ. ಆದರೆ ಅವರು ಈಗ ಅಂಥ ವ್ಯಕ್ತಿಯಾಗಿದ್ದಾರೆ. ಇದಕ್ಕೆಲ್ಲ ಕಾರಣ ಬೈಬಲ್‌. ನಾನು 1987ರಲ್ಲಿ ದೀಕ್ಷಾಸ್ನಾನ ಪಡೆದುಕೊಂಡು ಒಬ್ಬ ಯೆಹೋವನ ಸಾಕ್ಷಿಯಾದೆ. ಆಗ ಅಪ್ಪ ನನ್ನ ಜೀವನದಲ್ಲೇ ಮೊದಲನೇ ಸಲ ನನ್ನನ್ನು ಅಪ್ಪಿಕೊಂಡರು!

 ನಮ್ಮ ಅಪ್ಪ 35ಕ್ಕಿಂತ ಹೆಚ್ಚಿನ ವರ್ಷ ಅಮ್ಮನ ಜೊತೆ ಸೇರಿ ಇತರರಿಗೆ ಬೈಬಲಲ್ಲಿ ತಿಳಿಸಲಾಗಿರುವ ನಿರೀಕ್ಷೆಯ ಬಗ್ಗೆ ಸಾರಿದರು. ಅವರು ಶ್ರಮಪಟ್ಟು ಕೆಲಸಮಾಡುತ್ತಿದ್ದರು, ಬೇರೆಯವರ ಕಾಳಜಿವಹಿಸುತ್ತಿದ್ದರು ಮತ್ತು ಇತರರಿಗೆ ಸಹಾಯ ಮಾಡೋದಕ್ಕೆ ಹೆಸರುವಾಸಿಯಾಗಿದ್ದರು. ಇದರಿಂದ ನನಗೆ ಅವರ ಮೇಲೆ ಗೌರವ ಮತ್ತು ಪ್ರೀತಿ ಹುಟ್ಟಿತು. ಅವರ ಮಗನೆಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಆಗುತ್ತದೆ! ಅವರು 2016ರಲ್ಲಿ ತೀರಿಹೋದರು. ಅವರ ಸವಿನೆನಪು ನನ್ನ ಹೃದಯದಲ್ಲಿ ಅಚ್ಚಳಿಯದೆ ಉಳಿದಿದೆ. ನಾವಿಬ್ಬರೂ ಬೈಬಲಿನ ಬೋಧನೆ ಪ್ರಕಾರ ನಡಕೊಂಡು ನಮ್ಮ ವ್ಯಕ್ತಿತ್ವದಲ್ಲಿ ದೊಡ್ಡ-ದೊಡ್ಡ ಬದಲಾವಣೆಗಳನ್ನು ಮಾಡಿಕೊಂಡಿದ್ದೆವು. ನನಗೀಗ ಎಳ್ಳಷ್ಟೂ ದ್ವೇಷ ಇಲ್ಲ. ಕುಟುಂಬದಲ್ಲಿ ಸಮಸ್ಯೆ, ಕಷ್ಟಗಳು ಬರಲು ಕಾರಣವಾಗಿರುವ ಎಲ್ಲಾ ವಿಷಯಗಳನ್ನು ತೆಗೆದುಹಾಕುತ್ತೇನೆಂದು ಯೆಹೋವನು ಮಾತು ಕೊಟ್ಟಿದ್ದಾನೆ. ಈ ನನ್ನ ಸ್ವರ್ಗೀಯ ತಂದೆ ತನ್ನ ಬಗ್ಗೆ ತಿಳಿದುಕೊಳ್ಳುವ ಅವಕಾಶವನ್ನು ನನಗೆ ಕೊಟ್ಟಿದ್ದಕ್ಕಾಗಿ ನಾನು ಆತನಿಗೆ ಕೃತಜ್ಞನಾಗಿದ್ದೇನೆ.

a ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ. ಈಗ ಮುದ್ರಣವಾಗುತ್ತಿಲ್ಲ.