ಬದುಕು ಬದಲಾದ ವಿಧ
“ನನಗಿದ್ದ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿಲಿಲ್ಲ”
ಜನನ: 1976
ದೇಶ: ಹೊಂಡುರಾಸ್
ಹಿಂದೆ: ಪಾಸ್ಟರ್
ಹಿನ್ನೆಲೆ
ಹೊಂಡುರಾಸ್‌ನ ಲಾಸೈಬಾ ಅನ್ನೋ ನಗರದಲ್ಲಿ ನಾನು ಹುಟ್ಟಿದೆ. ಅಪ್ಪಅಮ್ಮಗೆ 5 ಮಕ್ಕಳು, ನಾನೇ ಕೊನೆಯವನು. ನಮ್ಮ ಕುಟುಂಬದಲ್ಲಿ ನನ್ನೊಬ್ಬನಿಗೇ ಕಿವಿ ಕೇಳ್ತಿರಲಿಲ್ಲ. ನಾವು ತುಂಬ ಬಡವರಾಗಿದ್ವಿ. ಸುತ್ತಮುತ್ತ ಇದ್ದ ಜನ ತುಂಬ ಕೆಟ್ಟವರು. ಒಂದು ದಿನ ಕೆಲಸದ ಜಾಗದಲ್ಲಿ ಏನೋ ಅಪಘಾತ ಆಗಿ ಅಪ್ಪ ಸತ್ತುಹೋದ್ರು. ಆಗ ನನಗೆ ಇನ್ನು 4 ವರ್ಷ. ಅಪ್ಪ ಸತ್ತ ಮೇಲೆ ನಮ್ಮ ಬದುಕು ಮೂರಾಬಟ್ಟೆ ಆಯ್ತು.
ಅಕ್ಕಂದಿರನ್ನ, ನನ್ನನ್ನ ನೋಡ್ಕೊಳ್ಳೋಕೆ ಅಮ್ಮ ತುಂಬ ಕಷ್ಟಪಟ್ರು. ನನಗೆ ಬಟ್ಟೆ ತಗೊಳ್ಳಕ್ಕೂ ಅವರ ಹತ್ರ ದುಡ್ಡು ಇರ್ತಿರಲಿಲ್ಲ. ಮಳೆ ಬಂದಾಗ ನನಗೆ ತುಂಬ ಚಳಿ ಆಗ್ತಿತ್ತು. ಏಕೆಂದ್ರೆ ಬೆಚ್ಚಗಿಟ್ಟುಕೊಳ್ಳೋಕೆ ನನ್ನ ಹತ್ರ ಬಟ್ಟೆ ಇರಲಿಲ್ಲ.
ದೊಡ್ಡವನಾದ ಮೇಲೆ ಹೊಂಡುರಾಸ್ ಸನ್ನೆ ಭಾಷೆ ಕಲಿತೆ. ಇದು ಕಲಿತಿದ್ರಿಂದ ಕಿವಿ ಕೇಳಿಸದೇ ಇರೋರ ಜೊತೆ ಮಾತಾಡಲಿಕ್ಕೆ ನನಗಾಯ್ತು. ಅಮ್ಮಗೂ ಅಕ್ಕಂದಿರಿಗೂ ಈ ಭಾಷೆ ಗೊತ್ತಿರಲಿಲ್ಲ. ಆದ್ರೆ ನನ್ನ ಜೊತೆ ಮಾತಾಡ್ಲಿಕ್ಕೆ ಅವರದ್ದೇ ಒಂದು ಸನ್ನೆ ಮಾಡ್ತಿದ್ರು. ಅಮ್ಮನಿಗೆ ನಾನಂದ್ರೆ ತುಂಬ ಇಷ್ಟ. ನಾನು ಕೆಟ್ಟ ದಾರಿಗೆ ಹೋಗದೇ ಇರೋ ಹಾಗೆ ನೋಡ್ಕೊಂಡ್ರು. ಅವರಿಗೆ ಗೊತ್ತಿದ್ದ ಅಷ್ಟೋಇಷ್ಟೋ ಸನ್ನೆಗಳಿಂದ ಸಿಗರೇಟ್ ಸೇದಬಾರದು, ಕುಡಿಬಾರದು ಅಂತ ಎಚ್ಚರಿಕೆ ಕೊಟ್ರು. ಹಾಗಾಗಿ ನನಗೆ ಯಾವುದೇ ಕೆಟ್ಟ ಅಭ್ಯಾಸ ಇರಲಿಲ್ಲ.
ನಾನು ಚಿಕ್ಕವನಿದ್ದಾಗ ಅಮ್ಮ ನನ್ನನ್ನ ಕ್ಯಾಥೋಲಿಕ್ ಚರ್ಚ್‌ಗೆ ಕರಕೊಂಡು ಹೋಗ್ತಿದ್ರು. ಆದ್ರೆ ನನಗೆ ಒಂದೂ ಅರ್ಥ ಆಗ್ತಿರಲಿಲ್ಲ. ಏಕೆಂದ್ರೆ ಅಲ್ಲಿ ಹೇಳೋದನ್ನ ಸನ್ನೆ ಭಾಷೆಯಲ್ಲಿ ನನಗೆ ಹೇಳಿಕೊಡಲಿಕ್ಕೆ ಯಾರೂ ಇರಲಿಲ್ಲ, ನನಗೆ ತುಂಬ ಬೋರ್ ಆಗ್ತಿತ್ತು. ಅದಕ್ಕೇ 10 ವಯಸ್ಸಲ್ಲೇ ಚರ್ಚ್‌ಗೆ ಹೋಗೋದನ್ನ ಬಿಟ್ಟುಬಿಟ್ಟೆ. ಆದ್ರೂ ಒಳಗೊಳಗೆ ದೇವರ ಬಗ್ಗೆ ಜಾಸ್ತಿ ತಿಳ್ಕೊಬೇಕು ಅನ್ನೋ ಆಸೆ ಇತ್ತು.
1999 ರಲ್ಲಿ ನನಗೆ ಅಮೆರಿಕದ ಸ್ತ್ರೀಯೋಬ್ಬಳ ಪರಿಚಯ ಆಯ್ತು. ಇವಾಂಜಲಿಕಲ್ ಚರ್ಚ್‌ಗೆ ಹೋಗ್ತಿದ್ದ ಅವಳು ನನಗೆ ಬೈಬಲಲ್ಲಿರೋ ವಿಷ್ಯಗಳನ್ನ ಹೇಳಿಕೊಟ್ಟಳು ಮತ್ತು ಅಮೆರಿಕನ್ ಸನ್ನೆ ಭಾಷೆಯನ್ನೂ ಹೇಳಿಕೊಟ್ಟಳು. ಆಗ ನನಗೆ 23 ವರ್ಷ. ಬೈಬಲಲ್ಲಿರೋ ವಿಷ್ಯ ಎಷ್ಟು ಇಷ್ಟ ಆಯ್ತು ಅಂದ್ರೆ ಪಾಸ್ಟರ್ ಆಗಬೇಕು ಅಂತ ಅಂದುಕೊಂಡೆ. ಹಾಗಾಗಿ ಪೋರ್ಟರಿಕೊದಲ್ಲಿ ಕಿವುಡರಿಗಾಗಿದ್ದ ಕ್ರೈಸ್ತ ತರಬೇತಿ ಕೇಂದ್ರಕ್ಕೆ ಹೋದೆ. 2002 ರಲ್ಲಿ ಲಾಸೈಬಾಕ್ಕೆ ವಾಪಸ್ ಬಂದು ಕಿವುಡರಿಗೋಸ್ಕರ ಒಂದು ಚರ್ಚ್ ಶುರುಮಾಡ್ದೆ. ನನ್ನ ಗೆಳತಿಯರು ಇದಕ್ಕೆ ಸಹಾಯ ಮಾಡಿದ್ರು. ಅವರಲ್ಲಿ ಒಬ್ಬಳ ಹೆಸರು ಪೆಟ್ರಿಶಿಯ. ಆಮೇಲೆ ನಾನು ಅವಳನ್ನ ಮದುವೆ ಆದೆ.
ಚರ್ಚಲ್ಲಿ ನಾನು ಹೊಂಡುರಾಸ್ ಸನ್ನೆ ಭಾಷೆಯಲ್ಲಿ ಭಾಷಣ ಕೊಡ್ತಿದ್ದೆ. ಬೈಬಲ್ ಕಥೆಗಳ ಚಿತ್ರಗಳನ್ನ ತೋರಿಸ್ತಿದ್ದೆ. ಆ ಕಥೆಗಳನ್ನ ಕಿವುಡರಿಗೆ ಅರ್ಥಮಾಡಿಸ್ಲಿಕ್ಕೆ ಅಭಿನಯ ಮಾಡಿ ತೋರಿಸ್ತಿದ್ದೆ. ಅಕ್ಕಪಕ್ಕದ ಪಟ್ಟಣಗಳಿಗೆ ಹೋಗಿ ಕಿವುಡರನ್ನ ಹುಡುಕಿ ಅವರಿಗೆ ಪ್ರೋತ್ಸಾಹ ಕೊಡ್ತಿದ್ದೆ. ಅವರಿಗೆ ಏನಾದ್ರೂ ಸಮಸ್ಯೆಗಳಿದ್ರೆ ಸಹಾಯ ಮಾಡ್ತಿದ್ದೆ. ಅಲ್ಲದೆ ಅಮೆರಿಕ ಮತ್ತು ಜಾಂಬಿಯಗೆ ಮಿಷನರಿಯಾಗಿ ಹೋದೆ. ನಿಜ ಹೇಳಬೇಕಂದ್ರೆ ನನಗೆ ಬೈಬಲ್ ಬಗ್ಗೆ ಅಷ್ಟೇನೂ ಗೊತ್ತಿರಲಿಲ್ಲ. ಬೇರೆಯವರು ನನಗೆ ಏನು ಹೇಳಿದ್ರೋ ಅದನ್ನ, ಚಿತ್ರಗಳಿಂದ ನನಗೆ ಏನು ಅರ್ಥ ಆಯಿತೋ ಅದನ್ನ ಚರ್ಚಲ್ಲಿ ಹೇಳಿಕೊಡ್ತಿದ್ದೆ. ಆದ್ರೆ ಮನಸ್ಸಲ್ಲಿ ನೂರೆಂಟು ಪ್ರಶ್ನೆಗಳು ಇದ್ವು.
ಒಂದಿನ ಚರ್ಚಲಿದ್ದ ಕೆಲವು ಸ್ತ್ರೀಯರು ನನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಕ್ಕೆ ಶುರುಮಾಡಿದ್ರು. ನಾನು ಕುಡುಕ, ಹೆಂಡತಿಗೆ ಮೋಸ ಮಾಡುವವನು ಅಂತ ಹೇಳಿದ್ರು. ನನಗೆ ತುಂಬ ಬೇಜಾರಾಯ್ತು. ಕೋಪನೂ ಬಂತು. ಸ್ವಲ್ಪದ್ರಲ್ಲೇ ನಾನು, ನನ್ನ ಹೆಂಡತಿ ಆ ಚರ್ಚಿಗೆ ಹೋಗೋದನ್ನ ಬಿಟ್ಟುಬಿಟ್ವಿ.
ಬದುಕನ್ನೇ ಬದಲಾಯಿಸಿತು ಬೈಬಲ್
ಯೆಹೋವನ ಸಾಕ್ಷಿಗಳು ನಮ್ಮನ್ನ ಆಗಾಗ ಭೇಟಿ ಮಾಡ್ತಿದ್ರು. ಆದ್ರೆ ನಾವು ಯಾವತ್ತೂ ಅವರು ಹೇಳೋದನ್ನ ಕೇಳ್ತಿರಲಿಲ್ಲ. ಚರ್ಚ್‌ಗೆ ಹೋಗೋದನ್ನ ಬಿಟ್ಟ ಮೇಲೆ ಥಾಮಸ್ ಮತ್ತು ಲಿಸ್ಸಿ ಹತ್ರ ನನ್ನ ಹೆಂಡ್ತಿ ಬೈಬಲ್ ಕಲಿಯಕ್ಕೆ ಶುರುಮಾಡಿದಳು. ಕಿವುಡರಲ್ಲದಿದ್ರೂ ಅವರಿಗೆ ಸನ್ನೆ ಭಾಷೆ ಗೊತ್ತಿತ್ತು! ಇದನ್ನ ನೋಡಿ ತುಂಬ ಆಶ್ಚರ್ಯ ಆಯ್ತು. ಹಾಗಾಗಿ ನಾನೂ ಬೈಬಲ್ ಕಲಿಯೋಕೆ ಶುರುಮಾಡಿದೆ.
ಅಮೆರಿಕನ್ ಸನ್ನೆ ಭಾಷೆಯಲ್ಲಿರೋ ವಿಡಿಯೋಗಳನ್ನ ತೋರಿಸಿ ನಮಗೆ ಬೈಬಲ್ ಹೇಳಿಕೊಡ್ತಿದ್ರು. ಆದ್ರೆ ಕೆಲವು ತಿಂಗಳಾದ ಮೇಲೆ ಯೆಹೋವನ ಸಾಕ್ಷಿಗಳ ಹತ್ರ ಬೈಬಲ್ ಕಲಿಯೋದನ್ನ ಬಿಟ್ಟುಬಿಟ್ವಿ. ಯಾಕಂದ್ರೆ ಅವರು ಮನುಷ್ಯರ ಅನುಯಾಯಿಗಳು ಅಂತ ನಮ್ಮ ಗೆಳತಿಯರು ಹೇಳಿದ್ರು. ಆದ್ರೆ ಯೆಹೋವನ ಸಾಕ್ಷಿಗಳು ಯಾವ ಮನುಷ್ಯರನ್ನು ನಾಯಕರನ್ನಾಗಿ ಮಾಡಿಕೊಂಡಿಲ್ಲ, ಅವರನ್ನ ಹಿಂಬಾಲಿಸಲ್ಲ ಅಂತ ಥಾಮಸ್ ನನಗೆ ಆಧಾರಗಳನ್ನ ಕೊಟ್ರೂ ನಾನು ಅವನನ್ನ ನಂಬಲಿಲ್ಲ.
ಕೆಲವು ತಿಂಗಳು ಆದ ಮೇಲೆ ಪೆಟ್ರಿಶಿಯ ತುಂಬ ಖಿನ್ನತೆಗೆ ಒಳಗಾದಳು. ಯೆಹೋವನ ಸಾಕ್ಷಿಗಳನ್ನ ಮತ್ತೆ ನಮ್ಮ ಮನೆಗೆ ಬರೋ ಹಾಗೆ ಮಾಡು ಅಂತ ಅವಳು ಪ್ರಾರ್ಥನೆ ಮಾಡಿದಳು. ನಮ್ಮ ಪಕ್ಕದ ಮನೆಯವರು ಒಬ್ಬರು ಯೆಹೋವನ ಸಾಕ್ಷಿ ಆಗಿದ್ರು. ಅವರು ಒಂದು ದಿನ ಪೆಟ್ರಿಶಿಯನ ಮಾತಾಡಿಸಿಕೊಂಡು ಹೋಗಲು ಮನೆಗೆ ಬಂದ್ರು. ನಿಮ್ಮ ಮನೆಗೆ ಮತ್ತೆ ಬರಕ್ಕೆ ಲಿಸ್ಸಿಗೆ ಹೇಳಲಾ ಅಂತ ಕೇಳಿದಳು. ಇದಾದ ಮೇಲೆ ಲಿಸ್ಸಿ ಪ್ರತಿ ವಾರ ನಮ್ಮ ಮನೆಗೆ ಬಂದು ಪೆಟ್ರಿಶಿಯಗೆ ಪ್ರೋತ್ಸಾಹ ಕೊಡ್ತಿದ್ದಳು ಮತ್ತು ಬೈಬಲ್ ಕಲಿಸ್ತಿದ್ದಳು. ನಿಜವಾಗ್ಲೂ ಅವಳು ಒಳ್ಳೇ ಫ್ರೆಂಡ್. ಇಷ್ಟೆಲ್ಲ ಆದ್ರೂ ಯೆಹೋವನ ಸಾಕ್ಷಿಗಳ ಮೇಲೆ ನನಗೆ ನಂಬಿಕೆ ಬರಲಿಲ್ಲ.
2012 ರಲ್ಲಿ ಯೆಹೋವನ ಸಾಕ್ಷಿಗಳ ಒಂದು ವಿಶೇಷ ಅಭಿಯಾನ ನಡೆಯಿತು. ಅದ್ರಲ್ಲಿ ಈ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಬಯಸುತ್ತೀರೋ? ಅನ್ನೋ ಹೊಂಡುರಾಸ್ ಸನ್ನೆ ಭಾಷೆಯ ವಿಡಿಯೋವನ್ನ ಜನ್ರಿಗೆ ತೋರಿಸ್ತಿದ್ರು. ಲಿಸ್ಸಿ ನಮಗೂ ಆ ವಿಡಿಯೋ ತೋರಿಸಿದಳು. ಅದನ್ನ ನೋಡಿ ಬಾಯಿ ಮೇಲೆ ಬೆರಳಿಟ್ಟುಕೊಂಡೆ. ಏಕೆಂದ್ರೆ ನರಕ, ಆತ್ಮ ಅಮರ ಈ ತರ ನಾನು ಕಲಿಸ್ತಿದ್ದ ಎಷ್ಟೋ ವಿಷ್ಯಗಳು ಬೈಬಲಲ್ಲಿ ಇಲ್ಲವೇ ಇಲ್ಲ ಅಂತ ನನಗೆ ಆಗ ಗೊತ್ತಾಯ್ತು.
ಮುಂದಿನ ವಾರ ನಾನು ಥಾಮಸ್ ಹತ್ರ ಮಾತಾಡಕ್ಕೆ ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹಕ್ಕೆ ಹೋದೆ. ಕಿವುಡರಿಗೆ ಬೈಬಲಲ್ಲಿರೋ ಸತ್ಯನ ತಿಳಿಸಬೇಕು ಅಂತ ಆಸೆ, ಆದ್ರೆ ನಾನು ಒಬ್ಬ ಯೆಹೋವನ ಸಾಕ್ಷಿ ಆಗಿ ಇದನ್ನ ಮಾಡಲ್ಲ. ಕಿವುಡರಿಗೋಸ್ಕರ ನಾನೇ ಒಂದು ಹೊಸ ಚರ್ಚ್ ಶುರು ಮಾಡಬೇಕು ಅಂತಿದ್ದೇನೆ ಅಂದೆ. ನನ್ನ ಹುರುಪು ನೋಡಿ ಥಾಮಸ್ ನನ್ನನ್ನ ಹೊಗಳಿದ್ರು. ಆಮೇಲೆ ಎಫೆಸ 4:5 ತೋರಿಸಿ ಸತ್ಯ ಕ್ರೈಸ್ತರ ಸಭೆ ಐಕ್ಯವಾಗಿ ಇರಬೇಕು ಅಂತ ಒತ್ತಿ ಹೇಳಿದ್ರು.
ಥಾಮಸ್ ನನಗೆ, ಯೆಹೋವನ ಸಾಕ್ಷಿಗಳು ಮತ್ತವರ ಸಜೀವ ನಂಬಿಕೆ—ಭಾಗ 1: ಕತ್ತಲೆಯಿಂದ ಬೆಳಕಿಗೆ ಅನ್ನೋ ವಿಡಿಯೋನ ಅಮೆರಿಕನ್ ಸನ್ನೆ ಭಾಷೆಯಲ್ಲಿ ತೋರಿಸಿದ್ರು. ಕೆಲವು ಪ್ರಾಮುಖ್ಯ ವಿಷಯಗಳ ಬಗ್ಗೆ ಸತ್ಯ ಏನು ಅಂತ ತಿಳ್ಕೊಳೋಕೆ ಕೆಲವು ಪುರುಷರು ಎಷ್ಟು ಜಾಗ್ರತೆಯಿಂದ ಬೈಬಲನ್ನ ಅಧ್ಯಯನ ಮಾಡಿದ್ರು ಅಂತ ವಿಡಿಯೋದಲ್ಲಿ ಇದೆ. ಆಗ ಅವರಿಗೆ ಹೇಗೆ ಅನಿಸಿರಬಹುದು ಅಂತ ನನಗೆ ಅರ್ಥ ಆಯ್ತು. ಏಕೆಂದ್ರೆ ಅವರ ತರಾನೇ ನಾನು ಸತ್ಯ ಏನು ಅಂತ ಹುಡುಕ್ತಿದ್ದೆ. ಸಾಕ್ಷಿಗಳು ಕಲಿಸೋದೆಲ್ಲ ಸತ್ಯ ಏಕೆಂದ್ರೆ ಬೈಬಲಲ್ಲಿ ಇರೋದನ್ನೇ ಅವರು ನಂಬುತ್ತಾರೆ ಅಂತ ಆ ವಿಡಿಯೋ ನೋಡಿದ ಮೇಲೆ ನನಗೆ ಮನವರಿಕೆ ಆಯ್ತು. ಹಾಗಾಗಿ ಬೈಬಲ್ ಕಲಿಯೋಕೆ ಮತ್ತೆ ಶುರುಮಾಡಿದೆ. 2014 ರಲ್ಲಿ ನಾವು ದೀಕ್ಷಾಸ್ನಾನ ಪಡೆದು ಯೆಹೋವನ ಸಾಕ್ಷಿಗಳು ಆದ್ವಿ.
ಸಿಕ್ಕಿದ ಪ್ರಯೋಜನಗಳು
ದೇವರು ಶುದ್ಧನಾಗಿರೋ ತರ ಯೆಹೋವನ ಸಾಕ್ಷಿಗಳು ಸಹ ಶುದ್ಧರಾಗಿದ್ದಾರೆ. ಅದಕ್ಕೆ ನನಗೆ ಅವರ ಸಭೆ ಅಂದ್ರೆ ತುಂಬ ಇಷ್ಟ. ಯೆಹೋವನ ಸೇವೆ ಮಾಡುವವರು ಅವರ ನಡೆನುಡಿಯಲ್ಲಿ ಶುದ್ಧರಾಗಿದ್ದಾರೆ. ಅವರು ಶಾಂತಶೀಲರಾಗಿದ್ದಾರೆ. ಪ್ರೋತ್ಸಾಹ ಕೊಡ್ತಾರೆ. ಅವರು ಯಾವುದೇ ದೇಶದಲ್ಲಿದ್ರೂ ಯಾವುದೇ ಭಾಷೆ ಮಾತಾಡಿದ್ರೂ ಒಗ್ಗಟಾಗಿದ್ದಾರೆ, ಬೈಬಲಿಂದ ಅವರು ಕಲಿಸೋ ವಿಷ್ಯನೂ ಒಂದೇ ತರ ಇದೆ.
ಬೈಬಲಲ್ಲಿ ನಿಜವಾಗ್ಲೂ ಏನಿದೆ ಅಂತ ಕಲಿತದ್ರಿಂದ ನನಗೆ ತುಂಬ ಖುಷಿ ಸಿಕ್ತು. ಯೆಹೋವನೇ ಸರ್ವಶಕ್ತ ದೇವರು, ಇಡೀ ಭೂಮಿಗೆ ರಾಜ ಆತನೇ ಅಂತ ಅರ್ಥಮಾಡ್ಕೊಂಡೆ. ಕಿವಿ ಕೇಳುವವರನ್ನ, ಕಿವುಡರನ್ನ ಎಲ್ಲರನ್ನ ಆತನು ಪ್ರೀತಿಸ್ತಾನೆ. ದೇವರು ನನಗೆ ತೋರಿಸೋ ಪ್ರೀತಿ ಒಂದು ನಿಧಿ ತರ. ಭೂಮಿ ಒಂದು ಸುಂದರ ಪರದೈಸ್ ಆಗುತ್ತೆ, ನಾವು ಸಂಪೂರ್ಣವಾಗಿ ಆರೋಗ್ಯವಾಗಿದ್ದು ಸದಾಕಾಲಕ್ಕೂ ಬದುಕಬಹುದು ಅಂತಾನೂ ಕಲಿತೆ. ಇದೆಲ್ಲ ನಿಜ ಆಗೋ ಸಮಯಕ್ಕೆ ನಾನು ತುಂಬ ಆಸೆಯಿಂದ ಕಾಯ್ತಾ ಇದ್ದೀನಿ.
ಬೈಬಲ್ ಬಗ್ಗೆ ಕಿವುಡರ ಹತ್ರ ಮಾತಾಡೋದಂದ್ರೆ ನನಗೂ ನನ್ನ ಹೆಂಡ್ತಿಗೂ ತುಂಬ ಇಷ್ಟ. ಮೊದಲು ನಮ್ಮ ಚರ್ಚಿನಲ್ಲಿದ್ದ ಕೆಲವರಿಗೆ ಈಗ ಬೈಬಲ್ ಕಲಿಸ್ತಾ ಇದ್ದೀವಿ. ಪಾಸ್ಟರ್ ಆಗಿದ್ದಾಗ ನಾನು ಏನು ಕಲಿಸ್ತಿದ್ನೋ ಅದರ ಬಗ್ಗೆನೇ ಮನಸ್ಸಲ್ಲಿ ನೂರೆಂಟು ಪ್ರಶ್ನೆಗಳು ಇದ್ವು. ಆದ್ರೆ ನನಗಿದ್ದ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿಲಿಲ್ಲ. ಯೆಹೋವನ ಸಾಕ್ಷಿಗಳಿಂದ ಸಹಾಯದಿಂದ ಬೈಬಲ್ ಕಲಿತು ಕೊನೆಗೂ ಅದೆಲ್ಲದಕ್ಕೆ ಉತ್ತರ ತಿಳ್ಕೊಂಡೆ.