ಕೆಲಸ ಬೇಕು, ಸಂಬಳ ಬೇಡ!
28 ವರ್ಷಗಳಲ್ಲಿ 11 ಸಾವಿರಕ್ಕಿಂತ ಹೆಚ್ಚು ಯೆಹೋವನ ಸಾಕ್ಷಿಗಳು ತಮ್ಮ ಮನೆ, ದೇಶವನ್ನು ಬಿಟ್ಟು ದೂರ-ದೂರ ದೇಶಗಳಿಗೆ ಹೋಗಿದ್ದಾರೆ. ಕಾರಣ, 120 ದೇಶಗಳಲ್ಲಿ ಕಟ್ಟಡಗಳನ್ನು ಕಟ್ಟುವ ಅಗತ್ಯವಿದ್ದುದರಿಂದಲೇ. ಇವರೆಲ್ಲರೂ ತಮ್ಮ ಕೌಶಲ, ಶಕ್ತಿ ಮತ್ತು ಸಾಮರ್ಥ್ಯವನ್ನು ಧಾರೆಯೆರೆದು ಸಂತೋಷದಿಂದ ಪೂರ್ಣ ಸಮಯ ಕೆಲಸ ಮಾಡಿದ್ದಾರೆ. ಆದರೆ ಅದಕ್ಕಾಗಿ ಸಂಬಳ ತೆಗೆದುಕೊಂಡಿಲ್ಲ.
ಕೆಲವರು ತಮ್ಮ ಸ್ವಂತ ಖರ್ಚಿನಲ್ಲೇ ಕಟ್ಟಡ ನಿರ್ಮಾಣ ಕೆಲಸ ಮಾಡಲು ಹೋಗಿದ್ದಾರೆ. ಇನ್ನು ಕೆಲವರು ತಮ್ಮ ಕಂಪೆನಿ ಕೊಡುವ ರಜೆಗಳನ್ನು ಈ ಕೆಲಸ ಮಾಡಲು ಉಪಯೋಗಿಸಿಕೊಂಡಿದ್ದಾರೆ. ಇನ್ನೂ ಕೆಲವರು ಸ್ವತಃ ಅವರೇ ರಜೆ ಹಾಕಿ ಸಾಕಷ್ಟು ಸಂಬಳವನ್ನು ತ್ಯಾಗಮಾಡಿದ್ದಾರೆ.
ಇಂಥ ತ್ಯಾಗಗಳನ್ನು ಮಾಡಲು ಅವರಿಗೆ ಯಾರೂ ಬಲವಂತ ಮಾಡಿಲ್ಲ. ಬದಲಿಗೆ ಸ್ವತಃ ಅವರೇ ಲೋಕವ್ಯಾಪಕವಾಗಿ ನಡೆಯುತ್ತಿರುವ ದೇವರ ರಾಜ್ಯದ ಸುವಾರ್ತೆ ಸಾರುವ ಕೆಲಸವನ್ನು ಬೆಂಬಲಿಸಲು ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡಿದ್ದಾರೆ. (ಮತ್ತಾಯ 24:14) ಅವರು ಬೈಬಲ್ ಮತ್ತು ಬೈಬಲಾಧಾರಿತ ಸಾಹಿತ್ಯಗಳನ್ನು ಮುದ್ರಿಸುವ ಕಟ್ಟಡಗಳನ್ನು, ಕಛೇರಿಗಳನ್ನು, ವಸತಿ ಗೃಹಗಳನ್ನು ನಿರ್ಮಾಣ ಮಾಡಿದ್ದಾರೆ. ಜೊತೆಗೆ, 10 ಸಾವಿರದಷ್ಟು ಆಸನಗಳಿರುವ ಸಮ್ಮೇಳನ ಸಭಾಂಗಣಗಳನ್ನು ಮತ್ತು 300ರಷ್ಟು ಆಸನಗಳಿರುವ ರಾಜ್ಯಸಭಾಗೃಹಗಳನ್ನೂ ಕಟ್ಟಿದ್ದಾರೆ.
ಕಟ್ಟಡ ನಿರ್ಮಾಣ ಕೆಲಸ ಈಗಲೂ ನಡೆಯುತ್ತಾ ಇದೆ. ಕಟ್ಟಡ ಕಟ್ಟುವ ಸ್ಥಳಕ್ಕೆ ಸ್ವಯಂಸೇವಕರು ಬಂದಾಗ ಅವರಿಗೆ ಉಳಿದುಕೊಳ್ಳಲು ವಸತಿಯನ್ನು, ಆಹಾರವನ್ನು, ಅವರ ಬಟ್ಟೆ ಒಗೆಯುವುದನ್ನು ಮತ್ತು ಇನ್ನಿತರ ಅವಶ್ಯಕತೆಗಳನ್ನು ಸ್ಥಳೀಯ ಬ್ರಾಂಚ್ ಆಫೀಸ್ ನೋಡಿಕೊಳ್ಳುತ್ತದೆ. ಇವರೊಟ್ಟಿಗೆ ಹತ್ತಿರದ ಸ್ಥಳದಲ್ಲಿರುವ ಸಾಕ್ಷಿಗಳೂ ಕೈ ಜೋಡಿಸುತ್ತಾರೆ.
ಇಂಥ ದೊಡ್ಡ ಚಟುವಟಿಕೆಯನ್ನು ಏರ್ಪಾಡು ಮಾಡಲು ಮತ್ತು ವ್ಯವಸ್ಥಿತವಾಗಿ ನಿರ್ವಹಿಸಲು 1985ರಲ್ಲಿ ಒಂದು ಅಂತರರಾಷ್ಟ್ರೀಯ ಕಾರ್ಯಕ್ರಮವನ್ನು ಶುರುಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಭಾಗಿಗಳಾಗಬೇಕೆಂದರೆ ಅವರು ಯೆಹೋವನ ಸಾಕ್ಷಿಗಳಾಗಿರಬೇಕು. ವಯಸ್ಸು 19ರಿಂದ 55ರೊಳಗಿರಬೇಕು. ನಿರ್ಮಾಣ ಕೆಲಸದ ಯಾವುದಾದರೊಂದು ವಿಷಯದಲ್ಲಿ ನಿಪುಣತೆ ಹೊಂದಿರಬೇಕು. ಈ ಕಾರ್ಯಕ್ರಮದಲ್ಲಿ ಕೊಡುವ ನೇಮಕದ ಕಾಲಾವಧಿ 2 ವಾರದಿಂದ ಮೂರು ತಿಂಗಳಿನವರೆಗೆ ಇರುತ್ತದೆ. ಕೆಲವೊಮ್ಮೆ 1 ವರ್ಷ ಅಥವಾ ಅದಕ್ಕಿಂತ ಹೆಚ್ಚು ಸಮಯವೂ ತಗಲಬಹುದು.
ನಿರ್ಮಾಣ ಕೆಲಸಗಾರರ ಪತ್ನಿಯರು ಕಾಂಕ್ರೀಟನ್ನು ಬಲಪಡಿಸುವ ಉಕ್ಕಿನ ಕಂಬಿಗಳನ್ನು ಸರಿಗೆಯಿಂದ ಕಟ್ಟಲು, ಟೈಲ್ಸ್‌ಗಳನ್ನು ಜೋಡಿಸಲು, ಮರಳನ್ನು ಜರಡಿ ಹಿಡಿಯಲು ಮತ್ತು ಪೈಂಟ್‌ಮಾಡಲು ತರಬೇತಿ ಪಡೆದುಕೊಂಡಿರುತ್ತಾರೆ. ಅವರಲ್ಲಿ ಇನ್ನು ಕೆಲವರು ನಿರ್ಮಾಣ ಕೆಲಸ ಮಾಡುತ್ತಿರುವವರಿಗೆ ಆಹಾರವನ್ನು ತಯಾರಿಸುತ್ತಾರೆ, ಅವರ ವಸತಿ ಗೃಹಗಳನ್ನು ಶುಚಿಮಾಡುತ್ತಾರೆ.
ನಿರ್ಮಾಣ ಕೆಲಸ ಮುಗಿದ ನಂತರ ತಮ್ಮ ಮನೆಗಳಿಗೆ ಹಿಂದಿರುಗುವ ಸ್ವಯಂಸೇವಕರು ಈ ಕೆಲಸ ಮಾಡಲು ಆಮಂತ್ರಿಸಿದ್ದಕ್ಕಾಗಿ ಕೃತಜ್ಞತಾ ಪತ್ರಗಳನ್ನು ಬರೆದಿದ್ದಾರೆ. ಓರ್ವ ದಂಪತಿ ಬರೆದದ್ದು: “ಬುಡಾಪೆಸ್ಟ್ ಬ್ರಾಂಚಿನಲ್ಲಿ ಕೆಲಸ ಮಾಡಲು ಅವಕಾಶ ಕೊಟ್ಟಿದ್ದಕ್ಕಾಗಿ ನಾವು ನಿಮಗೆ ಕೃತಜ್ಞತೆ ಹೇಳುತ್ತೇವೆ. ಹಂಗೇರಿಯಲ್ಲಿರುವ ಸಾಕ್ಷಿಗಳು ತುಂಬ ಪ್ರೀತಿ ಮಾಡುವ ಜನರಾಗಿದ್ದಾರೆ, ನಮ್ಮನ್ನು ಮಾನ್ಯ ಮಾಡುತ್ತಾರೆ. ಅವರನ್ನು ಬಿಟ್ಟು ಬರಲು ನಮಗೆ ತುಂಬ ಕಷ್ಟವಾಯಿತು. ಈ ರೀತಿ ಆಗೋದು ಸಹಜಾನೇ. ಬೇಸಿಗೆಯಲ್ಲಿ ಮತ್ತೆ ಅಲ್ಲಿಗೆ ಹೋಗುತ್ತೇವೆಂಬ ನಿರೀಕ್ಷೆಯಿದೆ. ನಮಗೆ ಕೊಟ್ಟಿರುವ ನೇಮಕದಲ್ಲಿ ಭಾಗವಹಿಸಿದಾಗೆಲ್ಲ ಇದೇ ನಮ್ಮ ಜೀವನದ ಅತ್ಯುತ್ತಮ ಸಮಯ ಅಂತ ಅನಿಸುತ್ತದೆ.”