ಈ ಬೈಬಲಿಡುವಷ್ಟು ಜಾಗ ನಿಮ್ಮ ಮನೆಯಲ್ಲಿ ಇದೆಯಾ?
ಯೆಹೋವನ ಸಾಕ್ಷಿಗಳಿಂದ ಬ್ರೇಲ್ ಲಿಪಿಯ ಬೈಬಲನ್ನು ತೆಗೆದುಕೊಳ್ಳುವ ಮೊದಲು ಅದನ್ನಿಟ್ಟುಕೊಳ್ಳಲು ನಿಮ್ಮ ಮನೆಯಲ್ಲಿ ಜಾಗವಿದೆಯಾ ಅಂತ ಸ್ವಲ್ಪ ನೋಡಿ! ಕಾರಣ ನೂತನ ಲೋಕ ಭಾಷಾಂತರ ಬೈಬಲನ್ನು ಇಂಗ್ಲಿಷ್, ಸ್ಪಾನಿಷ್ ಮತ್ತು ಇಟಾಲಿಯನ್ ಬ್ರೇಲ್‌ನಲ್ಲಿ ತಯಾರಿಸಲಾಗಿದೆ. ಅವು ಸುಮಾರು 18 ರಿಂದ 28 ಸಂಚಿಕೆಗಳಷ್ಟಿವೆ. ಅವುಗಳನ್ನಿಡಲು ಕನಿಷ್ಠ ಪಕ್ಷ 6 ಅಡಿ 5 ಇಂಚಿನ ಕಪಾಟು ಬೇಕಾಗುತ್ತದೆ.
ಉಬ್ಬಿದ ಕಾಗದದಿಂದ ತಯಾರಾಗುವ ಬ್ರೇಲ್ ಲಿಪಿಯ ಬೈಬಲನ್ನಿಡಲು, ಬೇರೆಲ್ಲಾ ವಿಧಗಳಲ್ಲಿ ಸಿಗುವ ಬ್ರೇಲ್ ಲಿಪಿಯ ಬೈಬಲ್‌ಗಳಿಗಿಂತ ಹೆಚ್ಚು ಸ್ಥಳ ಬೇಕಾಗುತ್ತದೆ. ಬ್ರೇಲ್ ಲಿಪಿಯಲ್ಲಿರುವ ನೋಟ್ ಟೇಕರ್ಸ್‌ಗಳಲ್ಲಿ ಟಿಪ್ಪಣಿಗಳನ್ನ ಬರೆದುಕೊಳ್ಳಬಹುದು, ಜೊತೆಗೆ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಸ್ಟೋರ್ ಮಾಡಿ ಇಡಲಾಗಿರುವಂಥದ್ದನ್ನ ಪೋರ್ಟಬಲ್ ಡಿವೈಸ್‌ಗಳ ಮೂಲಕ ಪಡೆದುಕೊಳ್ಳಬಹುದು. ಇದರಿಂದ ಅಂಧರಿಗೆ ತುಂಬಾ ಸಹಾಯವಾಗಿದೆ. ಸ್ಕ್ರೀನ್ ರೀಡರ್ಸ್ ಎಂಬ ಪ್ರೋಗ್ರಾಮ್ ಮುದ್ರಿತ ಮಾಹಿತಿಯನ್ನು ಓದುತ್ತದೆ. ಇದನ್ನ ಬಳಸಿ ಅಂಧರು ಪ್ರಕಾಶನಗಳನ್ನ ಗುರುತಿಸಿ, ಅದರಲ್ಲಿರುವ ಮಾಹಿತಿಯನ್ನು ಕೇಳಿಸಿಕೊಳ್ಳಬಹುದು.
ಯೆಹೋವನ ಸಾಕ್ಷಿಗಳು ಒಂದು ಕಂಪ್ಯೂಟರ್ ಪ್ರೋಗ್ರಾಮನ್ನು ತಯಾರಿಸಿದ್ದಾರೆ. ಆ ಪ್ರೋಗ್ರಾಮಿನಲ್ಲಿ ಬೇರೆ ಬೇರೆ ಭಾಷೆಗಳ ಅಕ್ಷರಗಳನ್ನ, ಬ್ರೇಲ್ ಲಿಪಿಯನ್ನ ಎರಡನ್ನು ಸೇರಿಸಲಾಗಿರುತ್ತದೆ. ಇಂಥ ಅಕ್ಷರಕ್ಕೆ ಇಂಥ ಬ್ರೇಲ್ ಲಿಪಿ ಬರಬೇಕೆಂದು ಪ್ರೋಗ್ರಾಮ್ ಮಾಡಲಾಗಿರುತ್ತದೆ. ಇದರಿಂದಾಗಿ ಆ ಪ್ರೋಗ್ರಾಮಿನ ಮೂಲಕ ಬೇರೆ ಬೇರೆ ಭಾಷೆಗಳಲ್ಲಿ ಬ್ರೇಲ್ ಲಿಪಿಯನ್ನು ಪಡೆಯಬಹುದು. ಇದು ಅಂಧರು ಸುಲಭವಾಗಿ ಓದುವಂತಹ ರೀತಿಯಲ್ಲಿ ಪ್ರಕಾಶನಗಳನ್ನ ಮಾರ್ಪಡಿಸುತ್ತದೆ. ಇದರಿಂದಾಗಿ ಯಾವೆಲ್ಲಾ ಭಾಷೆಗಳಲ್ಲಿ ಬ್ರೇಲ್ ಲಿಪಿಯಿದೆಯೋ ಅವುಗಳಲೆಲ್ಲಾ ಬ್ರೇಲ್ ಲಿಪಿಯ ಪ್ರಕಾಶನಗಳನ್ನು ಮತ್ತು ಬೈಬಲನ್ನು ತಯಾರಿಸಲು ಸುಲಭವಾಗಿದೆ. ಅಂಥ ಭಾಷೆಗಳಲ್ಲಿ ರೋಮನ್ ಲಿಪಿಗಳಿಲ್ಲದ ಭಾಷೆಗಳು ಸಹ ಸೇರಿವೆ.
ನೂರಕ್ಕೂ ಹೆಚ್ಚು ವರ್ಷಗಳಿಂದ ಯೆಹೋವನ ಸಾಕ್ಷಿಗಳು ಬೈಬಲಾಧಾರಿತ ಪ್ರಕಾಶನಗಳನ್ನು ಅಂಧರಿಗಾಗಿ ತಯಾರಿಸುತ್ತಿದ್ದಾರೆ. ಬ್ರೇಲ್ ಲಿಪಿಯ ಪ್ರಕಾಶನಗಳು ಈಗ ಸುಮಾರು 19 ಭಾಷೆಗಳಲ್ಲಿ ಲಭ್ಯ. ಆಸಕ್ತ ಅಂಧರು ಈ ಪ್ರಕಾಶನಗಳನ್ನು ಉಚಿತವಾಗಿ ಪಡೆಯಬಹುದಾದರೂ ಹೆಚ್ಚಿನವರು ತಮ್ಮ ಮನಪೂರ್ವಕ ಕಾಣಿಕೆಗಳನ್ನು ಕೊಟ್ಟು ಅದನ್ನು ಪಡೆದುಕೊಳ್ಳುತ್ತಾರೆ.
ಈ ಹಿಂದೆ ಅಧಿವೇಶನಗಳಲ್ಲಿ ಬಿಡುಗಡೆಯಾಗುವ ಹೊಸ ಪ್ರಕಾಶನಗಳು ಬ್ರೇಲ್‌ನಲ್ಲಿ ಬೇಕಿದ್ದರೆ ಅದಕ್ಕಾಗಿ ಸಭಿಕರು ವಿನಂತಿಸಿಕೊಳ್ಳಬೇಕಾಗಿತ್ತು. ಆದರೆ ಹೋದ ವರ್ಷ ಅಮೆರಿಕದ ಬ್ರಾಂಚ್ ಆಫೀಸ್ ಸಭೆಗಳನ್ನು ಸರ್ವೇ ಮಾಡಿ, ಅಂಧರು ಯಾವ ಅಧಿವೇಶನವನ್ನ ಹಾಜರಾಗುತ್ತಾರೆ ಮತ್ತು ಹೊಸ ಪ್ರಕಾಶನವನ್ನು ಯಾವ ರೀತಿಯಲ್ಲಿ (ಉಬ್ಬಿದ ಕಾಗದ, ಎಲೆಕ್ಟ್ರಾನಿಕ್ ನೋಟ್ ಟೇಕರ್ಸ್ ಅಥವಾ ಎಲೆಕ್ಟ್ರಾನಿಕ್ ಸ್ಕ್ರೀನ್ ರೀಡರ್) ಪಡೆಯಲು ಇಚ್ಚಿಸುತ್ತಾರೆಂದು ತಿಳಿದುಕೊಂಡಿತು.
ಉಬ್ಬಿದ ಕಾಗದದಿಂದ ತಯಾರಾದ ಪ್ರಕಾಶನಗಳನ್ನು ಅಂಧರು ಹಾಜರಾಗುವಂಥ ಅಧಿವೇಶನಗಳಿಗೆ ಕಳುಹಿಸಿ ಕೊಡಲಾಯಿತು. ಹಾಗಾಗಿ ಬೇರೆ ಪ್ರಚಾರಕರೊಂದಿಗೆ ಅಂಧರು ಸಹ ಹೊಸದಾಗಿ ಬಿಡುಗಡೆಯಾದ ಪ್ರಕಾಶನಗಳನ್ನು ಪಡೆದುಕೊಳ್ಳಲು ಸಾಧ್ಯವಾಯಿತು. ಯಾರು ಎಲೆಕ್ಟ್ರಾನಿಕ್ ರೂಪದಲ್ಲಿ ಬೇಕೆಂದು ಕೇಳಿಕೊಂಡಿದ್ದರೋ ಅವರಿಗೆ ಅಧಿವೇಶನದ ಒಂದು ವಾರದ ನಂತರ ಅದನ್ನು ಇ-ಮೇಲ್ ಮಾಡಲಾಯಿತು.
ಸಾಕ್ಷಿಯಾಗಿರುವ ಅಂಧ ವ್ಯಕ್ತಿಯೊಬ್ಬರು ಹೀಗೆ ಹೇಳಿದರು:“ಹೊಸದಾಗಿ ಬಿಡುಗಡೆಯಾಗುವ ಪ್ರಕಾಶನಗಳು ಬೇರೆಯವರಿಗೆ ಸಿಗುವಾಗ ನಮಗೂ ಸಿಗುವುದು ನಿಜಕ್ಕೂ ಒಂದು ಸುಯೋಗವಾಗಿದೆ. ಕೀರ್ತನೆ 37:4ರಲ್ಲಿ ನಿಮ್ಮ ಇಷ್ಟಾರ್ಥಗಳನ್ನು ನೆರವೇರಿಸುವೆನು ಎಂದು ಯೆಹೋವನು ಕೊಟ್ಟಿರುವ ಮಾತು ನೆರವೇರಿತು.” ಮತ್ತೊಬ್ಬ ಅಳುತ್ತಾ “ನನ್ನ ಬಗ್ಗೆನೂ ಯೋಚಿಸುತ್ತಾರೆ. ನಮ್ಮನ್ನ ಇಷ್ಟು ಚೆನ್ನಾಗಿ ನೋಡಿಕೊಳ್ಳುವ ಯೆಹೋವನಿಗೆ ಧನ್ಯವಾದ” ಎಂದನು.