ಕಾವಲಿನಬುರುಜು—ವಿಶ್ವದ ನಂಬರ್ ಒನ್ ಪತ್ರಿಕೆ
ವಿಶ್ವದಲ್ಲೇ ಅತಿ ಹೆಚ್ಚು ವಿತರಣೆಯಾಗುವ ನಂಬರ್ ಒನ್ ಪತ್ರಿಕೆ ಕಾವಲಿನಬುರುಜು. ಇದರ ಪ್ರತಿ ಸಂಚಿಕೆ ಸುಮಾರು 4 ಕೋಟಿ 20 ಲಕ್ಷಗಳಷ್ಟು ವಿತರಣೆಯಾಗುತ್ತದೆ. ಇನ್ನು ಎಚ್ಚರ! ಪತ್ರಿಕೆ ಸುಮಾರು 4 ಕೋಟಿ 10 ಲಕ್ಷದಷ್ಟು ವಿತರಣೆಯಾಗುವ ಮೂಲಕ ಎರಡನೇ ಸ್ಥಾನವನ್ನು ಅಲಂಕರಿಸಿದೆ. ಈ ಎರಡೂ ಪತ್ರಿಕೆಗಳು ಯೆಹೋವನ ಸಾಕ್ಷಿಗಳಿಂದ ಪ್ರಕಟಿತವಾಗಿದ್ದು ಸುಮಾರು 236 ದೇಶಗಳಲ್ಲಿ ವಿತರಣೆಯಾಗುತ್ತಿದೆ.
ವಿಶ್ವದ ಇತರ ಪ್ರಸಿದ್ಧ ಪತ್ರಿಕೆಗಳ ಕುರಿತೇನು? ಬನ್ನಿ ಸ್ವಲ್ಪ ತಿಳಿಯೋಣ. ದಿ ಅಸೋಸಿಯೇಷನ್ ಆಫ್ ಮ್ಯಾಗಜಿನ್ ಮೀಡಿಯ ಎಂಬ ಸಂಸ್ಥೆಯ ವರದಿಯ ಪ್ರಕಾರ ಅತಿ ಹೆಚ್ಚು ವಿತರಣೆಯಾಗುವ ಪತ್ರಿಕೆ ಅಮೆರಿಕಾದ AARP ಎಂಬ ಸಂಸ್ಥೆಯಿಂದ ಪ್ರಕಟವಾಗುತ್ತದೆ. ಈ ಸಂಸ್ಥೆ 50 ವರ್ಷ ವಯೋಮಿತಿಯಿರುವ ಜನರಿಗಾಗಿ ಪತ್ರಿಕೆಗಳನ್ನು ತಯಾರಿಸುತ್ತದೆ. ಅದು ತಯಾರಿಸುವ ಪತ್ರಿಕೆಗಳ ಸಂಖ್ಯೆ 2 ಕೋಟಿ 24 ಲಕ್ಷ. ಜರ್ಮನಿಯ ಎಡಿಎಸಿ ಮೋಟರ್‌ವೆಲ್ಟ್ ಎಂಬ ಪತ್ರಿಕೆ ಸುಮಾರು 1 ಕೋಟಿ 40 ಲಕ್ಷದಷ್ಟು ವಿತರಣೆಯಾದರೆ, ಚೀನಾದ ಗುಶೀ ಹ್ವಾ (ಕಥೆಗಳು) 54 ಲಕ್ಷದಷ್ಟು ಪ್ರತಿಗಳು ವಿತರಣೆಯಾಗುತ್ತಿವೆ.
ಇನ್ನೂ ವಾರ್ತಾ ಪತ್ರಿಕೆಗಳಲ್ಲಿ ನೋಡುವುದಾದರೆ ಜಪಾನಿನ ಯೋಮಿಉರಿ ಶೀ೦ಬೂನ್ ವಿತರಣೆಯಲ್ಲಿ ಮೊದಲನೇ ಸ್ಥಾನ ಪಡೆದಿದೆ. ಅದು ಮುದ್ರಿಸುವ ಪ್ರತಿಗಳ ಸಂಖ್ಯೆ ಸುಮಾರು 1 ಕೋಟಿ.
ಬರೀ ಪತ್ರಿಕೆಗಳ ವಿತರಣೆಯಲ್ಲಿ ಅಷ್ಟೇ ಅಲ್ಲ ಯೆಹೋವನ ಸಾಕ್ಷಿಗಳು ಪತ್ರಿಕೆಗಳನ್ನು ಭಾಷಾಂತರಿಸುವುದರಲ್ಲೂ ಮುಂದಿದ್ದಾರೆ. ಕಾವಲಿನಬುರುಜು ಪತ್ರಿಕೆಯು ಸುಮಾರು 190 ಭಾಷೆಗಳಲ್ಲಿ ಮತ್ತು ಎಚ್ಚರ! ಸುಮಾರು 80 ಭಾಷೆಗಳಲ್ಲಿ ಭಾಷಾಂತರವಾಗುತ್ತಿವೆ. ಆದರೆ ತುಂಬಾ ಪ್ರಸಿದ್ಧವಾದ ರೀಡರ್ಸ್ ಡೈಜೆಸ್ಟ್ ಎಷ್ಟು ಭಾಷೆಗಳಲ್ಲಿ ಭಾಷಾಂತರವಾಗುತ್ತಿದೆ ಗೊತ್ತಾ? ಅದರಲ್ಲಿರುವ ಮಾಹಿತಿ ದೇಶದಿಂದ ದೇಶಕ್ಕೆ ಭಿನ್ನವಾಗಿರುವುದಾದರೂ ಅದು ಕೇವಲ 21 ಭಾಷೆಗಳಲ್ಲಿ ಭಾಷಂತರವಾಗುತ್ತದೆ.
ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಮತ್ತೊಂದು ವಿಶೇಷತೆ ಏನೆಂದರೆ ಸ್ವಯಂ ಪ್ರೇರಿತ ದೇಣಿಗೆಗಳ ಮೂಲಕ ಈ ಪತ್ರಿಕೆಗಳು ಮುದ್ರಣವಾಗುತ್ತಿವೆ. ಪತ್ರಿಕೆಗಳ ವಿತರಣೆಗಾಗಿ ಯಾವುದೇ ಪ್ರಚಾರ ಕಾರ್ಯವನ್ನು ಮಾಡಲಾಗಿಲ್ಲ. ಅಲ್ಲದೇ ಅವುಗಳ ಮೇಲೆ ಯಾವುದೇ ಮುದ್ರಿತ ಬೆಲೆಯಿಲ್ಲ.
ಈ ಕಾವಲಿನಬುರುಜು ಪತ್ರಿಕೆಯ ಉದ್ದೇಶ ಬೈಬಲ್ ಬೋಧನೆಗಳನ್ನು, ಅದರಲ್ಲೂ ದೇವರ ರಾಜ್ಯದ ಬಗ್ಗೆ ಬೈಬಲ್ ವಚನಗಳು ಏನು ಹೇಳುತ್ತವೆ ಎಂಬುದನ್ನು ವಿವರಿಸುವುದೇ ಆಗಿದೆ. 1879ರಿಂದ ಈ ಪತ್ರಿಕೆಯನ್ನು ಮುದ್ರಿಸಲಾಗುತ್ತಿದೆ. ಎಚ್ಚರ! ಪತ್ರಿಕೆಯು ಸಾಮಾನ್ಯವಾದ ವಿಷ್ಯಗಳ ಬಗ್ಗೆ ಅಂದರೆ ಪ್ರಕೃತಿ ಮತ್ತು ವಿಜ್ಞಾನದ ಬಗ್ಗೆ ತಿಳಿಸುತ್ತಾ ಸೃಷ್ಟಿಕರ್ತನ ಮೇಲೆ ನಂಬಿಕೆಯನ್ನು ಬೆಳೆಸಿಕೊಳ್ಳಲು ನೆರವಾಗುತ್ತಿದೆ. ಅಲ್ಲದೇ ನಮ್ಮ ಜೀವನದಲ್ಲಿ ಬೈಬಲ್ ಎಷ್ಟು ಪ್ರಯೋಜನಕಾರಿ ಎಂಬ ವಿಷಯವನ್ನು ಒತ್ತಿ ಹೇಳುತ್ತದೆ.