ಸರಳೀಕೃತ ಕಾವಲಿನಬುರುಜು
2011ರ ಜುಲೈ ತಿಂಗಳಿನಲ್ಲಿ ಇಂಗ್ಲಿಷ್‌ನ ಕಾವಲಿನಬುರುಜು ಪತ್ರಿಕೆಯ ಸರಳೀಕೃತ ಆವೃತ್ತಿಯನ್ನು ಹೊರತರಲಾಯಿತು. ಅದರಿಂದ ಓದುಗರಿಗೆ ಪ್ರಯೋಜನವಾಗುತ್ತದೋ ಇಲ್ಲವೋ ಎಂದು ತಿಳಿಯಲು ಒಂದು ವರ್ಷದ ಮಟ್ಟಿಗೆ ಅದನ್ನು ಪರೀಕ್ಷಿಸಲಾಯಿತು. ಈಗ ಆ ಪರೀಕ್ಷೆಯ ಅವಧಿ ಮುಗಿದಿದೆ. ಬಂದ ಫಲಿತಾಂಶದಿಂದ ಆ ಸರಳೀಕೃತ ಆವೃತ್ತಿಯನ್ನು ಮುಂದುವರಿಸಲು ತೀರ್ಮಾನಿಸಲಾಗಿದೆ.
2013ರ ಜನವರಿಯಿಂದ ಈ ಸರಳೀಕೃತ ಆವೃತ್ತಿ ಫ್ರೆಂಚ್, ಪೋರ್ಚುಗೀಸ್, ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲೂ ಲಭ್ಯವಿದೆ.
ಯಾರ ಮಾತೃ ಭಾಷೆ ಇಂಗ್ಲಿಷ್ ಆಗಿಲ್ಲವೋ, ಅಂಥವರು ಇಂಗ್ಲಿಷ್ ಭಾಷೆಯ ಕೂಟಗಳಿಗೆ ಹಾಜರಾಗುತ್ತಿದ್ದರೆ ಅವರ ಸಹಾಯಕ್ಕೆಂದು ಈ ಸರಳೀಕೃತ ಆವೃತ್ತಿಯನ್ನು ರಚಿಸಲಾಯಿತು.
ಅದರ ಮೊದಲ ಸಂಚಿಕೆಯಿಂದಲೇ ಗಣ್ಯತಾ ಪತ್ರಗಳ ಸುರಿ ಮಳೆಯೇ ಹರಿದು ಬಂತು. ಲೈಬಿರೀಯಾದಲ್ಲಿರುವ 64 ವರ್ಷ ವಯಸ್ಸಿನ ರೆಬೆಕ್ಕ ಎಂಬವರು ಶಾಲೆಯ ಮೆಟ್ಟಿಲನ್ನೇ ತುಳಿದಿಲ್ಲವಂತೆ. ಅವರು ಈ ಪತ್ರಿಕೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೀಗೆ ತಿಳಿಸಿದ್ದಾರೆ. “ನಾನು ಇನ್ನೂ ಓದೋದಕ್ಕೆ ಕಲೀತಿದ್ದೀನಿ. ಮೊದಮೊದಲು ನಾನು ಕಾವಲಿನಬುರುಜು ಪತ್ರಿಕೆಯನ್ನು ಓದೋವಾಗ ಏನೂ ಅರ್ಥ ಆಗ್ತಿರಲಿಲ್ಲ. ಸರಳೀಕೃತ ಆವೃತ್ತಿಯೆಂದರೆ ನನಗೆ ತುಂಬಾ ಇಷ್ಟ. ಯಾಕೆಂದರೆ ಈಗ ನಾನು ಓದಿದ್ದು ನನಗೆ ಅರ್ಥ ಆಗ್ತಿದೆ.”
ಯೆಹೋವನ ಸಾಕ್ಷಿಗಳ ಕೂಟದಲ್ಲಿ ಕಾವಲಿನಬುರುಜು ಪತ್ರಿಕೆಯ ಚರ್ಚೆ ಇರುತ್ತದೆ. ಹೆಚ್ಚಿನ ಹೆತ್ತವರು ಈ ಸರಳೀಕೃತ ಆವೃತ್ತಿಯನ್ನು ಉಪಯೋಗಿಸಿ ತಮ್ಮ ಮಕ್ಕಳು ಕಾವಲಿನಬುರುಜು ಅಧ್ಯಯನಕ್ಕಾಗಿ ತಯಾರಾಗುವಂತೆ ನೆರವು ನೀಡುತ್ತಿದ್ದಾರೆ.
ಮೂವರು ಮೊಮ್ಮಕ್ಕಳನ್ನು ಬೆಳೆಸುತ್ತಿರುವ ರೋಸ್‌ಮೇರಿ ಎಂಬವರು ಹೀಗೆ ಬರೆದರು: “ಕಾವಲಿನಬುರುಜು ಪತ್ರಿಕೆಯನ್ನು ನನ್ನ ಮೂವರು ಮೊಮ್ಮಕ್ಕಳೊಂದಿಗೆ ಚರ್ಚಿಸುವುದು ನಿಜವಾಗಿಯೂ ಒಂದು ಸವಾಲಾಗಿತ್ತು. ತಯಾರಾಗುವಾಗ ಕಷ್ಟದ ಪದಗಳ ಅರ್ಥವನ್ನು ಹುಡುಕಲು ಶಬ್ದಕೋಶವನ್ನು ಬಳಸುತ್ತಿದ್ದೆವು. ಹೀಗೆ ಪದಗಳ ಅರ್ಥವನ್ನು ಕಂಡು ಹಿಡಿಯುವುದರಲ್ಲೇ ಹೆಚ್ಚಿನ ಸಮಯ ಕಳೆದು ಹೋಗುತ್ತಿದ್ದರಿಂದ ಪ್ರಾಮುಖ್ಯ ಅಂಶಗಳನ್ನು ನಾವು ಗ್ರಹಿಸಲು ಸಾಧ್ಯವಾಗುತ್ತಿರಲಿಲ್ಲ. ಆದ್ರೆ ಈ ಸರಳೀಕೃತ ಆವೃತ್ತಿಯಿಂದ ನಾವು ನಮ್ಮ ಸಮಯವನ್ನು ಉತ್ತಮವಾಗಿ ಉಪಯೋಗಿಸುತ್ತಿದ್ದೇವೆ. ಈಗ ಶಬ್ದಾರ್ಥ ಹುಡುಕಲು ಅಲ್ಲ, ಬದಲಿಗೆ ಕೊಡಲಾಗಿರುವ ವಚನಗಳು ಚರ್ಚಿಸುತ್ತಿರುವ ವಿಷಯಕ್ಕೆ ಹೇಗೆ ಸಂಬಂಧಿಸಿವೆ ಎಂದು ಅರ್ಥ ಮಾಡಿಕೊಳ್ಳಲು ನಮ್ಮ ಸಮಯವನ್ನು ಉಪಯೋಗಿಸುತ್ತಿದ್ದೇವೆ.”
ಈ ಸರಳೀಕೃತ ಆವೃತ್ತಿಗೂ ಮೊದಲು ಉಪಯೋಗಿಸುತ್ತಿದ್ದ ಮೂಲ ಆವೃತ್ತಿಗೂ ಇರುವ ವ್ಯತ್ಯಾಸಕ್ಕೊಂದು ಉದಾಹರಣೆ ಇಲ್ಲಿದೆ. ಅಪೊಸ್ತಲರ ಕಾರ್ಯಗಳು 15ನೇ ಅಧ್ಯಾಯದಲ್ಲಿ ಒಂದು ಪ್ರಾಮುಖ್ಯ ವಿಚಾರದ ಕುರಿತು ಚರ್ಚಿಸಲು ಅಪೊಸ್ತಲರು ಕೂಡಿಬಂದಿರುವುದರ ಬಗ್ಗೆ ಜನವರಿ 15, 2012ರ ಕಾವಲಿನಬುರುಜುವಿನ ಮೂಲ ಆವೃತ್ತಿಯಲ್ಲಿ ಹೀಗೆ ತಿಳಿಸಲಾಗಿತ್ತು: “ಆ ಚರ್ಚೆ ದೇವತಾಶಾಸ್ತ್ರಕ್ಕೆ ಸಂಬಂಧಿಸಿದ ವಿಷಯಗಳ ಶಾಸ್ತ್ರೀಯವಾದ ಚರ್ಚೆ ಆಗಿರಲಿಲ್ಲ. ಬದಲಿಗೆ ಅದೊಂದು ಅರ್ಥಭರಿತ ಸೈದ್ಧಾಂತಿಕ ಚರ್ಚೆಯಾಗಿತ್ತು.” ಆದರೆ ಸರಳೀಕೃತ ಆವೃತ್ತಿಯಲ್ಲಿ ಇದನ್ನು ಹೀಗೆ ತಿಳಿಸಲಾಯಿತು: “ಆ ಕೂಟದಲ್ಲಿ ಹುರುಳಿಲ್ಲದ ವ್ಯರ್ಥ ವಾಗ್ವಾದ ನಡೆಯಲಿಲ್ಲ. ಶಾಸ್ತ್ರಗ್ರಂಥ ಏನು ಹೇಳುತ್ತದೆ ಎಂಬುದರ ಕುರಿತು ಆಸಕ್ತಿಕರ ಚರ್ಚೆ ನಡೆಯಿತು.”