ಬಹುಕಾಲ ಬಾಳಿಕೆ ಬರಲೆಂದು ತಯಾರಿಸಲಾದ ಬೈಬಲ್
ಬೈಬಲ್‌ಗಿಂತ ಪ್ರಾಮುಖ್ಯವಾದ ಪುಸ್ತಕ ಯೆಹೋವನ ಸಾಕ್ಷಿಗಳಿಗೆ ಬೇರೊಂದಿಲ್ಲ. ಅವರು ಅದನ್ನು ಕ್ರಮವಾಗಿ ಓದುತ್ತಾರೆ, ಅಲ್ಲದೇ ದೇವರ ರಾಜ್ಯದ ಸುವಾರ್ತೆಯ ಕುರಿತು ಇತರರಿಗೆ ಬೋಧಿಸಲು ಅದನ್ನು ಉಪಯೋಗಿಸುತ್ತಾರೆ. (ಮತ್ತಾಯ 24:14) ಹೀಗೆ ಬೈಬಲನ್ನು ಅವರು ಹೆಚ್ಚು ಉಪಯೋಗಿಸುವುದರಿಂದ ಅವರ ಬೈಬಲ್‌ಗಳು ದೀರ್ಘಕಾಲ ಬಾಳಿಕೆ ಬರುತ್ತಿರಲಿಲ್ಲ. ಹಾಗಾಗಿ ಪರಿಷ್ಕರಿಸಲಾದ ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರವನ್ನು 2013ರಲ್ಲಿ ಬಿಡುಗಡೆ ಮಾಡಲಾದಾಗ, ಅದು ಆಕರ್ಷಕವಾಗಿಯೂ ಮತ್ತು ಹೆಚ್ಚಿಗೆ ಬಾಳಿಕೆ ಬರುವಂಥದ್ದು ಆಗಿರಬೇಕೆಂದು ಸಾಕ್ಷಿಗಳು ಸರ್ವ ಪ್ರಯತ್ನ ಹಾಕಿದರು.
ಈ ಹೊಸ ಬೈಬಲ್ ದೀರ್ಘಕಾಲ ಬಾಳಿಕೆ ಬರುವಂತಿರಬೇಕಾಗಿತ್ತು. ಅಮೆರಿಕದ ವಾಲ್‌ಕಿಲ್‌ನಲ್ಲಿ ಮುದ್ರಣ ಸಿಬ್ಬಂದಿಗಳಾಗಿರುವ ಕೆಲವು ಸಾಕ್ಷಿಗಳು ಬೈಂಡಿಂಗ್ ಕಂಪನಿಯೊಂದರ ಮುಖ್ಯ ಅಧಿಕಾರಿಯ ಮುಂದೆ ತಮ್ಮ ಬೇಡಿಕೆಗಳನ್ನಿಟ್ಟರು. ಆಗ ಆತನು, “ನೀವು ಕೇಳುವಂಥ ರೀತಿಯಲ್ಲಿ ಬೈಬಲನ್ನು ಮಾಡುವುದು ಅಸಾಧ್ಯ” ಅಂದನು. ಜೊತೆಗೆ ಅವನಂದದ್ದು “ನೋಡಿ, ಕಹಿಯಾಗಿದ್ದರೂ ಒಂದು ಸತ್ಯ ಏನೆಂದರೆ, ಹೆಚ್ಚಿನ ಬೈಬಲ್‌ಗಳನ್ನ ಕಾಫಿ ಟೇಬಲ್ ಮೇಲೆ ಅಥವಾ ಕಪಾಟಿನಲ್ಲಿಟ್ಟಾಗ ಅಂದವಾಗಿ ಕಾಣಬೇಕು ಅಂತ ತಯಾರಿಸುತ್ತಾರೆ ಹೊರತು ತುಂಬಾ ಬಾಳಿಕೆ ಬರಬೇಕಂತಲ್ಲ.”
ಈ ಹಿಂದೆ ತಯಾರಾದಂಥ ನೂತನ ಲೋಕ ಭಾಷಾಂತರ ಬೈಬಲಿನ ಕೆಲವು ಆವೃತ್ತಿಗಳು ಹೆಚ್ಚು ಬಾಳಿಕೆ ಬರಲಿಲ್ಲ. ಕೆಲವೊಮ್ಮೆ ಅವು ತುಂಬಾ ಬಿಸಿಯ ಹವಾಮಾನಕ್ಕೆ ಬೇಗ ಕಿತ್ತು ಹೋಗುತ್ತಿದ್ದವು. ಹಾಗಾಗಿ ಮುದ್ರಣ ಸಿಬ್ಬಂದಿ ಪುಸ್ತಕದ ಬೈಂಡುಗಳನ್ನು, ಅದಕ್ಕಾಗಿ ಬಳಸುತ್ತಿದ್ದ ಗೋಂದು ಮತ್ತು ಬೈಂಡಿಂಗ್ ವಿಧಾನಗಳನ್ನು ಪರಿಶೀಲಿಸಿದರು. ಯಾವುದೇ ವಾತಾವರಣದಲ್ಲಿ, ಎಷ್ಟೇ ಉಪಯೋಗಿಸಿದರು ಬೈಬಲ್ ಬಾಳಿಕೆ ಬರುವಂತಹ ರೀತಿಯಲ್ಲಿ ಇರಬೇಕೆಂದು ಸಾಕಷ್ಟು ಪ್ರಯತ್ನಗಳನ್ನು ಹಾಕಿದರು. ಕಲೆ ಹಾಕಿದ ಈ ಎಲ್ಲಾ ಮಾಹಿತಿಗನುಗುಣವಾಗಿ ಕೆಲವು ಬೈಬಲ್‌ಗಳನ್ನು ತಯಾರಿಸಿದರು. ತುಂಬಾ ಉಷ್ಣವಲಯದ ವಾತಾವರಣದಿಂದಿಡಿದು ಅಲಾಸ್ಕದಂತಹ ಶೀತಲ ಪ್ರದೇಶಗಳಲ್ಲಿ ಉಪಯೋಗಿಸುವಂತೆ ಸಾಕ್ಷಿಗಳಿಗೆ ಅವುಗಳನ್ನು ಕೊಡಲಾಯಿತು.
ಆರು ತಿಂಗಳ ನಂತರ ನೀಡಲಾಗಿದ್ದ ಬೈಬಲ್‌ಗಳನ್ನು ಪರಿಶೀಲಿಸಲು ವಾಪಸ್ಸು ಪಡೆಯಲಾಯಿತು. ನಂತರ ಮುದ್ರಣ ಸಿಬ್ಬಂದಿ ಮತ್ತಷ್ಟು ಸುಧಾರಣೆ ಮಾಡಿದ ಬೈಬಲ್‌ಗಳನ್ನು ತಯಾರಿಸಿ ಅವುಗಳನ್ನು ಪರೀಕ್ಷೆಗಾಗಿ ಕಳುಹಿಸಿಕೊಟ್ಟರು. ಹೀಗೆ ಸುಮಾರು 1,697 ಬೈಬಲಗಳನ್ನು ಪರೀಕ್ಷೆಗೊಳಪಡಿಸಲಾಯಿತು. ಅವುಗಳನ್ನು ಪುನಃ ವಾಪಾಸ್ಸು ಪಡೆಯುವಾಗ ಅನಿರೀಕ್ಷಿತ ಘಟನೆಗಳಿಂದಾಗಿ ಕೆಲವು ಒಳ್ಳೆಯ ಸ್ಥಿತಿಯಲ್ಲಿರಲಿಲ್ಲ. ಉದಾಹರಣೆಗೆ ಒಂದು ಬೈಬಲ್ ರಾತ್ರಿಯಿಡೀ ಮಳೆಯಲ್ಲಿ ನೆಂದು ಹೋಗಿತ್ತು. ಮತ್ತೊಂದು, ಚಂಡಮಾರುತದಿಂದಾದ ಪ್ರವಾಹದ ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿಹೋಗಿತ್ತು. ಕ್ಷೇತ್ರದಲ್ಲಿ ಮಾಡಲಾದಂಥ ಪರೀಕ್ಷೆಗಳ ಮತ್ತು ಅನಿರೀಕ್ಷಿತ ಘಟನೆಗಳ ಫಲಿತಾಂಶಗಳು ಪುಸ್ತಕದ ಬಾಳಿಕೆಯ ಕುರಿತು ಬಹು ಅಮೂಲ್ಯ ಮಾಹಿತಿ ನೀಡಿದವು.
ಇಸವಿ 2011ರಲ್ಲಿ ಅತ್ತ ಕ್ಷೇತ್ರದಲ್ಲಿ ಬೈಬಲಿನ ಬಾಳಿಕೆಯ ಕುರಿತು ಪರೀಕ್ಷಿಸಲಾಗುತ್ತಿದ್ದರೆ, ಇತ್ತ ಜಪಾನಿನ ಎಬೀನಾ ಮತ್ತು ವಾಲ್‌ಕಿಲ್‌ನ ಮುದ್ರಣಾಲಯಗಳಿಗಾಗಿ ಅತೀ ವೇಗದಲ್ಲಿ ಬೈಂಡಿಂಗ್ ಮಾಡುವ ಹೊಸ ಯಂತ್ರಗಳನ್ನು ಖರೀದಿಸಲಾಯಿತು. ಇದರ ಉದ್ದೇಶ ಪುಸ್ತಕಗಳ ಬೇಡಿಕೆಯನ್ನು ಪೂರೈಸುವುದು ಮಾತ್ರವಲ್ಲ, ಬೇರೆ ಬೇರೆ ಕಡೆಯಲ್ಲಿ ಬೈಬಲ್ ಮುದ್ರಣವಾದರೂ ಒಂದೇ ತರನಾಗಿರಬೇಕು ಎಂದೇ ಆಗಿತ್ತು.
ಮಡಚಲು ಸುಲಭವಾಗಿರುವ ರಟ್ಟಿನಿಂದಾದ ಸಮಸ್ಯೆಗಳು
2012ರ ಆರಂಭದಲ್ಲಿ, ಈ ಎರಡು ಮುದ್ರಣಾಲಯಗಳು ನೂತನ ಲೋಕ ಭಾಷಾಂತರದ ಈ ಹಿಂದಿನ ಆವೃತ್ತಿಯನ್ನು ತಯಾರಿಸಲು ಪ್ರಾರಂಭಿಸಿದವು. ಆಗ ಪಾಲಿಯುರಥೇನ್ ಬಳಸಿ ಕಪ್ಪು ಮತ್ತು ಕಡುಕೆಂಪು ಬಣ್ಣದ ಹೊಸ ಬೈಬಲ್ ಬೈಂಡ್‌ಗಳನ್ನು ತಯಾರಿಸಲಾಯಿತು. ಈ ಬೈಂಡ್‌ಗಳನ್ನು ಹೊಸ ಯಂತ್ರಗಳಲ್ಲಿ ತಯಾರಿಸುವಾಗ ಗೋಂದು ಮತ್ತು ಲೈನರನ್ನು ಬಳಸಲಾಯಿತು. ಅವುಗಳನ್ನು ಪರೀಕ್ಷಿಸಲಾಗಿರಲಿಲ್ಲ. ಹಾಗಾಗಿ ಅವುಗಳನ್ನು ಉಪಯೋಗಿಸಿ ಮಾಡಲಾದ ಬೈಂಡ್‌ಗಳು ತುಂಬಾ ಮಡಚಿಕೊಳ್ಳುತ್ತಿದ್ದವು. ಯಾವ ಸಮಸ್ಯೆಯನ್ನು ನಿವಾರಿಸಲು ಆರಂಭದಲ್ಲಿ ಪ್ರಯತ್ನಗಳನ್ನು ಮಾಡಲಾಗಿತ್ತೋ ಅವೆಲ್ಲವು ವಿಫಲವಾದ್ದರಿಂದ ಬೈಬಲ್ ಮುದ್ರಣದ ಕಾರ್ಯ ಸ್ಥಗಿತಗೊಂಡಿತು.
ಸಲೀಸಾಗಿ ಬಾಗುವಂತ ಬೈಂಡಿಂಗ್‌ಗಳಲ್ಲಿ ಈ ಸಮಸ್ಯೆ ಸಾಮಾನ್ಯವಾಗಿರುತ್ತದೆ. ಅಲ್ಲದೇ, ಈ ಸಮಸ್ಯೆಗೆ ಪರಿಹಾರ ತುಂಬನೇ ಕಷ್ಟ ಎಂಬ ವಿಷಯವನ್ನು ರಟ್ಟು ತಯಾರಕರು ಸಾಕ್ಷಿಗಳ ಗಮನಕ್ಕೆ ತಂದರು. ಈ ವಿಷಯ ಗೊತ್ತಾದ ಮೇಲೂ ತಮ್ಮ ಪ್ರಯತ್ನವನ್ನು ಸಾಕ್ಷಿಗಳು ಬಿಡಲಿಲ್ಲ. ಗಟ್ಟಿಯಾದ ರಟ್ಟನ್ನು ಬೈಬಲ್‌ಗೆ ಬಳಸಲಿಲ್ಲ. ಬದಲಿಗೆ ಸಲೀಸಾಗಿ ಬಾಗುವಂತಹ ಮತ್ತು ನೋಡಲು ಚೆನ್ನಾಗಿರುವಂತಹ ರಟ್ಟನ್ನೇ ಉಪಯೋಗಿಸಬೇಕೆಂದು ದೃಢತೀರ್ಮಾನ ಮಾಡಿದರು.
ಹೀಗೆ ನಾಲ್ಕು ತಿಂಗಳು ಬೇರೆ ಬೇರೆ ಗೋಂದುಗಳ ಜೊತೆ ಲೈನರ್‌ಗಳನ್ನು ಉಪಯೋಗಿಸಿ ಪರೀಕ್ಷಿಸಿದರು. ಕೊನೆಗೊಂದು ದಿನ ಅವರ ಪ್ರಯತ್ನಕ್ಕೆ ಫಲ ಸಿಕ್ಕಿತು. ಒಂದು ರೀತಿಯ ಗೋಂದು ಮತ್ತು ಲೈನರನ್ನು ಬಳಸಿದಾಗ ಅದು ಸಲೀಸಾಗಿ ಬಾಗುವಂತಹ ಮತ್ತು ನೋಡಲು ಚೆನ್ನಾಗಿರುವಂತಹ ರಟ್ಟನ್ನು ತಯಾರಿಸಲು ಪೂರಕವಾಗಿದ್ದವು.
ಮತ್ತೊಮ್ಮೆ ಮುದ್ರಣ ಕಾರ್ಯ ಸ್ಥಗಿತಗೊಂಡಿತು
2012ರ ಸೆಪ್ಟಂಬರ್‌ನಲ್ಲಿ, ಬೈಬಲಿನ ಆಗಿನ ಸಂಚಿಕೆಯ ಉತ್ಪಾದನಾ ಕೆಲಸವನ್ನು ನಿಲ್ಲಿಸುವಂತೆ ಮತ್ತು ಸ್ಟಾಕ್‌ನಲ್ಲಿದ್ದವುಗಳನ್ನು ವಿತರಿಸಿ ಮುಗಿಸುವಂತೆ ಮುದ್ರಣಾಲಯದ ಸಿಬ್ಬಂದಿಗಳಿಗೆ ತಿಳಿಸಲಾಯಿತು. ಜೊತೆಗೆ, ನೂತನ ಲೋಕ ಭಾಷಾಂತರದ ಪರಿಷ್ಕೃತ ಸಂಚಿಕೆಯನ್ನು ಉತ್ಪಾದಿಸಲು ಎದುರು ನೋಡುವಂತೆ ಹೇಳಲಾಯಿತು. ಈ ಹೊಸ ಬೈಬಲ್ ಆವೃತ್ತಿಯನ್ನು ಅಕ್ಟೋಬರ್ 5, 2013ರಂದು ನಡೆಯಲಿರುವ ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ಪೆನ್ಸಿಲ್‌ವೇನಿಯದ ವಾರ್ಷಿಕ ಕೂಟದಲ್ಲಿ ಬಿಡುಗಡೆ ಮಾಡಬೇಕೆಂದು ಯೋಜಿಸಲಾಗಿತ್ತು.
ಹೊಸ ಬೈಬಲಿನ ಎಲೆಕ್ಟ್ರಾನಿಕ್ ಫೈಲುಗಳನ್ನು ಆಗಸ್ಟ್ 9, 2013ರಂದು ಮುದ್ರಣಾಲಯಕ್ಕೆ ನೀಡಲಾಯಿತು. ಇದಾದ ಮರುದಿನವೇ ಮುದ್ರಣಕಾರ್ಯ ಪ್ರಾರಂಭವಾಯಿತು. ಆಗಸ್ಟ್ 15ಕ್ಕೆ ಬೈಬಲಿನ ಹೊಸ ಆವೃತ್ತಿಯ ಮೊದಲ ಪ್ರತಿಯನ್ನು ಮುದ್ರಿಸಲಾಯಿತು. ಅಲ್ಲಿಂದ ಏಳು ವಾರಗಳಲ್ಲಿ ವಾಲ್‌ಕಿಲ್ ಮತ್ತು ಎಬೀನಾ ಮುದ್ರಣಾಲಯದಲ್ಲಿರುವ ಸಿಬ್ಬಂದಿಗಳು ಹಗಲು ರಾತ್ರಿಯೆನ್ನದೆ ಮುದ್ರಣ ಕೆಲಸವನ್ನು ಮಾಡಿ ಸುಮಾರು 16 ಲಕ್ಷ ಬೈಬಲ್‌ಗಳನ್ನು ತಯಾರಿಸಿದರು. ಯಾರೆಲ್ಲಾ ಆ ವಾರ್ಷಿಕ ಕೂಟಕ್ಕೆ ಹಾಜರಾಗಲಿದ್ದರೋ ಅವರೆಲ್ಲರಿಗೂ ಒಂದೊಂದು ಪ್ರತಿಯನ್ನು ಕೊಡಬೇಕೆಂದು ಹೀಗೆ ಮಾಡಲಾಯಿತು.
ಬೈಬಲ್‌ನ ಈ ಹೊಸ ಆವೃತ್ತಿ ನೋಡಲು ಬಹಳ ಸುಂದರವಾದದ್ದು, ಬಹು ಕಾಲ ಬಾಳಿಕೆ ಬರುವಂತದ್ದು ಆಗಿರುವುದರ ಜೊತೆಗೆ ಅದರಲ್ಲಿರುವ ಸಂದೇಶ ಬಹು ಅಮೂಲ್ಯವಾಗಿದ್ದು ಜೀವ ರಕ್ಷಕ ಸಂದೇಶವಾಗಿದೆ. ಸ್ವಂತ ಪ್ರತಿಯನ್ನು ಪಡೆದ ಮರುದಿನ “ಈ ಹೊಸ ಆವೃತ್ತಿಯಿಂದ ಈಗ ನಾನು ಬೈಬಲನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿದೆ” ಎಂದು ಅಮೆರಿಕದ ಸ್ತ್ರೀಯೊಬ್ಬಳು ಬರೆದಳು.