ನಮ್ಮ ಪ್ರಕಾಶನಗಳಲ್ಲಿರುವ ವರ್ಣರಂಜಿತ ಚಿತ್ರಗಳು
ನಮ್ಮ ಪ್ರಕಾಶನಗಳಲ್ಲಿ ಮಾಹಿತಿಯ ಜೊತೆ ಅದಕ್ಕೆ ಸರಿಹೊಂದುವ ಬಣ್ಣ ಬಣ್ಣದ ಚಿತ್ರಗಳು ಸಹ ಇರುತ್ತವೆ. ಆದರೆ ಹಿಂದೆ ಈ ರೀತಿ ಇರಲಿಲ್ಲ. 1879ರಲ್ಲಿ ಪ್ರಕಾಶಿಸಲಾದ ಝಯನ್ಸ್ ವಾಚ್ ಟವರ್ ಪತ್ರಿಕೆಯ ಮೊಟ್ಟ ಮೊದಲ ಸಂಚಿಕೆಯಲ್ಲಿ ಚಿತ್ರಗಳೇ ಇರಲಿಲ್ಲ. ಅನೇಕ ದಶಕಗಳವರೆಗೆ ನಮ್ಮ ಪತ್ರಿಕೆಗಳಲ್ಲಿ ಮಾಹಿತಿ ಮಾತ್ರ ಇರುತ್ತಿತ್ತು, ಅಪರೂಪಕ್ಕೊಮ್ಮೆ ಚಿತ್ರ ಅಥವಾ ಕಪ್ಪು-ಬಿಳಿ ಬಣ್ಣದ ಫೊಟೋವನ್ನು ಕೊಡಲಾಗುತ್ತಿತ್ತು.
ಆದರೆ ಈಗ ನಮ್ಮ ಹೆಚ್ಚಿನ ಪ್ರಕಾಶನಗಳಲ್ಲಿ ತುಂಬ ಚಿತ್ರಗಳಿವೆ. ಮುದ್ರಿತ ಪ್ರಕಾಶನಗಳಲ್ಲಿ ಮತ್ತು ಈ ವೆಬ್‌ಸೈಟ್‌ನಲ್ಲಿ ಕಂಡುಬರುವ ಹೆಚ್ಚಿನ ಚಿತ್ರಗಳನ್ನು, ಫೊಟೋಗಳನ್ನು ನಮ್ಮ ಸ್ವಂತ ಚಿತ್ರಕಲಾಕಾರರು ಮತ್ತು ಫೊಟೋಗ್ರಾಫರ್‌ಗಳೇ ತಯಾರಿಸುತ್ತಾರೆ. ಇತಿಹಾಸಕ್ಕೆ ಮತ್ತು ಬೈಬಲ್ ವಿಷಯಗಳಿಗೆ ಸಂಬಂಧಿಸಿದ ಚಿತ್ರಗಳನ್ನು ಬಿಡಿಸಲು ಜಾಗರೂಕತೆಯಿಂದ ಸಂಶೋಧನೆ ಮಾಡಿ ಪೂರ್ತಿ ಮಾಹಿತಿ ತಿಳಿದುಕೊಳ್ಳಬೇಕಾಗುತ್ತದೆ.
ಉದಾಹರಣೆಗೆ, ಈ ಲೇಖನದಲ್ಲಿ ಕೊಡಲಾದ ಚಿತ್ರವನ್ನು ಗಮನಿಸಿ. ಇದು “ಬೇರಿಂಗ್ ಥರೋ ವಿಟ್ನೆಸ್” ಎಬೌಟ್ ಗಾಡ್ಸ್ ಕಿಂಗ್‌ಡಮ್ ಎಂಬ ಇಂಗ್ಲಿಷ್ ಪುಸ್ತಕದ 19ನೇ ಅಧ್ಯಾಯದಲ್ಲಿ ಇರುವ ಚಿತ್ರ. ಇದು ಪುರಾತನ ಕೊರಿಂಥದಲ್ಲಿ ನಡೆದ ದೃಶ್ಯವಾಗಿದೆ. ಬೈಬಲಿನ ಅಪೊಸ್ತಲರ ಕಾರ್ಯಗಳು ಪುಸ್ತಕದ 18ನೇ ಅಧ್ಯಾಯದಲ್ಲಿ ತಿಳಿಸಲಾದಂತೆ, ಅಪೊಸ್ತಲ ಪೌಲನು ಬೀಮ ಅಥವಾ ನ್ಯಾಯಸ್ಥಾನದ ಮುಂದೆ ಇದ್ದಾನೆ. ಪೌಲನನ್ನು ಗಲ್ಲಿಯೋನನ ಮುಂದೆ ತಂದಾಗ ಅಲ್ಲಿದ್ದ ಕಲ್ಲಿನ ಕಟ್ಟಡ ಯಾವ ಬಣ್ಣದ್ದಾಗಿತ್ತು ಮತ್ತು ಯಾವ ದಿಕ್ಕಿಗಿತ್ತು ಎಂಬ ವಿವರವನ್ನು ಪುರಾತನ ವಸ್ತುಗಳನ್ನು ಪರಿಶೀಲಿಸುವ ಸಂಶೋಧಕರಿಂದ ಪಡೆದು ಚಿತ್ರ ರಚಿಸಲಾಗಿದೆ. ಸಂಶೋಧಕರಿಂದ ರೋಮನ್ ಬಟ್ಟೆಗಳ ಬಗ್ಗೆ ಮಾಹಿತಿಯನ್ನು ಸಹ ಪಡೆದುಕೊಳ್ಳಲಾಗಿದೆ. ಇದರಿಂದ ಚಿತ್ರದ ಮಧ್ಯದಲ್ಲಿರುವ ಪ್ರಾಂತಾಧಿಕಾರಿ ಗಲ್ಲಿಯೋನ ಆಗಿನ ರಾಜಮನೆತನದ ಬಟ್ಟೆಯನ್ನು ಧರಿಸಿರುವಂತೆ ಚಿತ್ರಿಸಲು ಸಾಧ್ಯವಾಗಿದೆ. ಅವನು ಟ್ಯೂನಿಕ್ ಎಂಬ ತೋಳಿಲ್ಲದ ಅಂಗಿ ಮತ್ತು ಟೋಗಾ ಎಂಬ ನೇರಳೆ ಅಂಚಿನ ಬಟ್ಟೆಯನ್ನು, ಕಾಲಿಗೆ ಕ್ಯಾಲ್ಸಿ ಎಂಬ ಶೂಗಳನ್ನು ಹಾಕಿಕೊಂಡಿರುವುದನ್ನು ಚಿತ್ರದಲ್ಲಿ ನೋಡಬಹುದು. ನ್ಯಾಯಸ್ಥಾನದಲ್ಲಿ ನಿಂತ ಗಲ್ಲಿಯೋನನು ವಾಯುವ್ಯ ದಿಕ್ಕಿಗೆ ಮುಖ ಮಾಡಿಕೊಂಡಿದ್ದಿರಬೇಕೆಂದು ಸಂಶೋಧಕರು ತಿಳಿಸಿದ್ದಾರೆ. ಇದನ್ನಾಧರಿಸಿ, ಬೆಳಕು ಯಾವ ಕಡೆಯಿಂದ ಬೀಳುತ್ತಿರುವಂತೆ ಕಾಣಬೇಕೆಂದು ಅಂದಾಜು ಮಾಡಿ ಚಿತ್ರಕಾರನು ಚಿತ್ರ ಬಿಡಿಸಿದ್ದಾನೆ.
ವ್ಯವಸ್ಥಿತ ಮತ್ತು ಅತ್ಯುತ್ತಮ ಸಂಗ್ರಹ ವಿಧಾನ
ಉಪಯೋಗಿಸಲಾದ ಚಿತ್ರಗಳನ್ನು ಸಂಗ್ರಹಿಸಿಡಲಾಗುತ್ತದೆ. ಇದರಿಂದಾಗಿ, ಸಂಶೋಧನೆಯಿಂದ ತಿಳಿದ ವಿಷಯಗಳೂ ದಾಖಲಾಗಿರುತ್ತವೆ ಮತ್ತು ಆ ಚಿತ್ರಗಳನ್ನು ಪುನಃ ಉಪಯೋಗಿಸಲೂ ಸಾಧ್ಯವಾಗುತ್ತದೆ. ಅನೇಕ ವರ್ಷಗಳವರೆಗೆ, ಚಿತ್ರಗಳನ್ನು ಅವು ಯಾವ ಪ್ರಕಾಶನದಲ್ಲಿ ಮೂಡಿಬಂದಿವೆ ಎನ್ನುವುದನ್ನಾಧರಿಸಿ ಫೈಲ್ ಮಾಡಿ ಇಡುತ್ತಿದ್ದೆವು. ಫೊಟೋಗಳನ್ನು ಅವು ಯಾವ ವಿಷಯಕ್ಕೆ ಸಂಬಂಧಿಸಿದ್ದು ಎನ್ನುವುದನ್ನಾಧರಿಸಿ ಫೈಲ್ ಮಾಡುತ್ತಿದ್ದೆವು. ಈ ಫೈಲ್‌ಗಳ ಸಂಖ್ಯೆ ಹೆಚ್ಚಾದಂತೆ ಅಗತ್ಯವಿದ್ದಾಗ ಅವುಗಳನ್ನು ಹುಡುಕುವುದು ಮತ್ತು ಪುನಃ ಉಪಯೋಗಿಸುವುದು ತುಂಬ ಕಷ್ಟವಾಯಿತು.
1991ರಲ್ಲಿ ಈ ಚಿತ್ರಗಳನ್ನು ಹುಡುಕಲು ಸುಲಭವಾಗುವಂತೆ ಅವುಗಳನ್ನು ಕಂಪ್ಯೂಟರ್‌ನಲ್ಲಿ ಸಂಗ್ರಹಿಸಿಡಲಾಯಿತು. ಇದಕ್ಕಾಗಿ ಉಪಯೋಗಿಸಲಾಗುವ ಪ್ರೋಗ್ರಾಮನ್ನು ಇಮೇಜ್ ಸರ್ವಿಸ್ ಸಿಸ್ಟಮ್ ಎಂದು ಕರೆಯಲಾಗುತ್ತದೆ. ಇದರಲ್ಲಿ ಈಗ 4ಲಕ್ಷದ 40ಸಾವಿರಕ್ಕೂ ಹೆಚ್ಚು ಚಿತ್ರಗಳಿವೆ. ನಮ್ಮ ಪ್ರಕಾಶನಗಳಲ್ಲಿ ಈಗಾಗಲೇ ಮೂಡಿಬಂದಿರುವ ಚಿತ್ರಗಳೇ ಅಲ್ಲದೆ ಮುಂದೆ ಉಪಯೋಗಿಸಲಿಕ್ಕಾಗಿ ಸಾವಿರಾರು ಹೊಸ ಫೊಟೋಗಳನ್ನೂ ಇದರಲ್ಲಿ ಸಂಗ್ರಹಿಸಲಾಗಿದೆ.
ಇದರಲ್ಲಿ ಚಿತ್ರಗಳ ವಿವರಗಳೂ ಇವೆ. ಉದಾಹರಣೆಗೆ, ಎಲ್ಲಿ, ಯಾವಾಗ ಈ ಚಿತ್ರವನ್ನು ಉಪಯೋಗಿಸಲಾಯಿತು, ಚಿತ್ರದಲ್ಲಿರುವವರ ಹೆಸರುಗಳೇನು, ಯಾವ ಕಾಲದ ಕುರಿತು ಈ ಚಿತ್ರ ತಿಳಿಸುತ್ತದೆ ಎಂಬ ವಿವರಗಳು ಸಹ ದಾಖಲಾಗಿರುತ್ತವೆ. ಆದ್ದರಿಂದ ಹೊಸ ಪ್ರಕಾಶನಗಳನ್ನು ತಯಾರಿಸುವಾಗ ಅಗತ್ಯವಿರುವ ಚಿತ್ರಗಳನ್ನು ಕ್ಷಣ ಮಾತ್ರದಲ್ಲಿ ಹುಡುಕಲು ಸಾಧ್ಯವಾಗುತ್ತಿದೆ.
ಕೆಲವೊಮ್ಮೆ ವಿಶೇಷ ಚಿತ್ರಗಳನ್ನು ನಮ್ಮ ಪ್ರಕಾಶನಗಳಲ್ಲಿ ಉಪಯೋಗಿಸಲು ಸಂಬಂಧಪಟ್ಟ ಮೂಲದಿಂದ ಅನುಮತಿ ಪಡೆಯಬೇಕಾಗುತ್ತದೆ. ಉದಾಹರಣೆಗೆ, ನಮ್ಮ ಎಚ್ಚರ! ಪತ್ರಿಕೆಯ ಒಂದು ಲೇಖನಕ್ಕಾಗಿ ಶನಿ ಗ್ರಹದ ಬಳೆಯ ಚಿತ್ರ ಬೇಕಿದೆ ಎಂದಿಟ್ಟುಕೊಳ್ಳಿ. ಆಗ ನಮ್ಮ ಸಹಾಯಕ ಸಿಬ್ಬಂದಿಗಳು ಅದಕ್ಕೆ ಸೂಕ್ತವಾದ ಚಿತ್ರವನ್ನು ಹುಡುಕುತ್ತಾರೆ ಮತ್ತು ಅದರ ಮಾಲೀಕನನ್ನು ಸಂಪರ್ಕಿಸಿ ಅದನ್ನು ಉಪಯೋಗಿಸಲು ಅನುಮತಿ ಕೇಳುತ್ತಾರೆ. ಕೆಲವರು ನಮ್ಮ ಲೋಕವ್ಯಾಪಕ ಬೈಬಲ್ ಶಿಕ್ಷಣ ನೀಡುವ ಕೆಲಸವನ್ನು ಮಾನ್ಯಮಾಡಿ ಉಚಿತವಾಗಿ ಅನುಮತಿ ಕೊಡುತ್ತಾರೆ. ಇನ್ನು ಕೆಲವರು ಅನುಮತಿಯನ್ನು ಕೊಡಲು ಹಣ ಕೇಳುತ್ತಾರೆ ಅಥವಾ ಚಿತ್ರದ ಜೊತೆಯಲ್ಲಿ ಅದರ ಮೂಲದ ಬಗ್ಗೆ ಮಾಹಿತಿಯನ್ನು ನೀಡಲು ಹೇಳುತ್ತಾರೆ. ಮಾಲೀಕರಿಂದ ಅನುಮತಿ ಪಡೆದ ನಂತರ ಅದನ್ನು ನಮ್ಮ ಪ್ರಕಾಶನಗಳಲ್ಲಿ ಉಪಯೋಗಿಸುತ್ತೇವೆ ಮತ್ತು ಕಂಪ್ಯೂಟರ್‌ನಲ್ಲಿ ಸಂಗ್ರಹಿಸಿಡುತ್ತೇವೆ.
ನಮ್ಮ ಕೆಲವು ಪ್ರಕಾಶನಗಳಲ್ಲಿ ಹೆಚ್ಚಾಗಿ ಚಿತ್ರಗಳೇ ಇವೆ. ಉದಾಹರಣೆಗೆ, ಈ ವೆಬ್‌ಸೈಟ್‌ನಲ್ಲಿರುವ ಇಲ್ಲಸ್ಟ್ರೇಟೆಡ್ ಬೈಬಲ್ ಸ್ಟೋರೀಸ್ (ಕನ್ನಡದಲ್ಲಿ ಲಭ್ಯವಿಲ್ಲ) ಮತ್ತು ಇಲ್ಲಿ ಹಾಗೂ ಮುದ್ರಿತ ರೂಪದಲ್ಲಿ ಇರುವ ದೇವರ ಮಾತನ್ನು ಆಲಿಸಿ ಎಂಬ ವರ್ಣರಂಜಿತ ಕಿರುಹೊತ್ತಗೆ. ಇವುಗಳಲ್ಲಿ ಕೆಲವೇ ಮಾತುಗಳಲ್ಲಿ ಪ್ರಾಮುಖ್ಯ ಪಾಠಗಳನ್ನು ತಿಳಿಸಲಾಗಿದೆ. ಈ ಪ್ರಕಾಶನಗಳು ಮತ್ತು ಆನ್‌ಲೈನ್‌ನಲ್ಲಿರುವ, ಮುದ್ರಿತ ರೂಪದಲ್ಲಿರುವ ಎಲ್ಲಾ ಪ್ರಕಾಶನಗಳು ಬೈಬಲಿನ ಬಗ್ಗೆ ತಿಳಿಸುತ್ತವೆ.