ಮಾಹಿತಿ ಇರುವಲ್ಲಿ ಹೋಗಲು

ಬ್ರೂಕ್ಲಿನ್‌ನವರಿಗೆ ಚಿರಪರಿಚಿತವಾದ ವಾಚ್‌ಟವರ್‌ ಚಿಹ್ನೆ

ಬ್ರೂಕ್ಲಿನ್‌ನವರಿಗೆ ಚಿರಪರಿಚಿತವಾದ ವಾಚ್‌ಟವರ್‌ ಚಿಹ್ನೆ

40ಕ್ಕಿಂತ ಹೆಚ್ಚು ವರ್ಷಗಳಿಂದ ಹಗಲು, ರಾತ್ರಿ ಯೆಹೋವನ ಸಾಕ್ಷಿಗಳ ಮುಖ್ಯ ಕಾರ್ಯಾಲಯದ ಮೇಲೆ ಇರುವ 4.6 ಮೀ. (15 ಅಡಿ) ಎತ್ತರದ ಕೆಂಪು ಅಕ್ಷರಗಳು ನ್ಯೂ ಯಾರ್ಕಿನ ಪ್ರತಿಯೊಬ್ಬರಿಗೂ ಚಿರಪರಿಚಿತ. ಅನೇಕರು ಇದರಲ್ಲಿರುವ ಸಮಯ ಮತ್ತು ಹವಾಮಾನ ತಿಳಿಸುವ ಸಾಧನಗಳಿಂದ ಪ್ರಯೋಜನ ಪಡೆದಿದ್ದಾರೆ.

ಎಬನೀಗೆ ತನ್ನ ಅಪಾರ್ಟ್‌ಮೆಂಟ್‌ನಿಂದ ಈ ವಾಚ್‌ಟವರ್‌ ಚಿಹ್ನೆ ಕಾಣಿಸುತ್ತದೆ. ಅವಳು ಹೀಗೆ ಹೇಳುತ್ತಾಳೆ: “ನಾನು ಕೆಲಸಕ್ಕೆ ಹೋಗುವ ಮುಂಚೆ ಸಮಯ ಎಷ್ಟಾಯಿತೆಂದು ಮತ್ತು ಹವಾಮಾನ ಹೇಗಿದೆ ಎಂದು ನೋಡುತ್ತೇನೆ. ಇದರಿಂದ ಸಮಯಕ್ಕೆ ಸರಿಯಾಗಿ ತಲುಪಲು ಮತ್ತು ಹವಾಮಾನಕ್ಕೆ ತಕ್ಕಂತೆ ಬಟ್ಟೆ ಧರಿಸಲು ಸಾಧ್ಯವಾಗುತ್ತದೆ.”

ಈ ಸಮಯ ಮತ್ತು ಹವಾಮಾನ ತಿಳಿಸುವ ಸಾಧನಗಳು ಇನ್ನೂ 40 ವರ್ಷ ಇರುತ್ತವಾ? ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಯೆಹೋವನ ಸಾಕ್ಷಿಗಳು ತಮ್ಮ ಮುಖ್ಯ ಕಾರ್ಯಾಲಯವನ್ನು ನ್ಯೂ ಯಾರ್ಕಿನ ಉತ್ತರ ಭಾಗಕ್ಕೆ ಸ್ಥಳಾಂತರಿಸಲು ನಿರ್ಧರಿಸುವುದರಿಂದ ಈ ಸಾಧನ ಇರುತ್ತಾ ಇರುವುದಿಲ್ಲವಾ ಅನ್ನುವುದು ಇದರ ಮುಂದಿನ ಮಾಲೀಕರ ಮೇಲೆ ಅವಲಂಬಿಸಿದೆ.

70 ವರ್ಷಗಳ ಹಿಂದೆ, ಮುಂಚಿನ ಮಾಲೀಕರು ಇಲ್ಲಿ ಒಂದು ಚಿಹ್ನೆಯನ್ನು ಹಾಕಿಸಿದ್ದರು. ಯೆಹೋವನ ಸಾಕ್ಷಿಗಳು 1969ರಲ್ಲಿ ಈ ಕಟ್ಟಡವನ್ನು ಖರೀದಿಸಿದಾಗ ಅದನ್ನು ಈಗ ಇರುವ ಚಿಹ್ನೆಗೆ ಬದಲಾಯಿಸಿದರು.

ಇದನ್ನು ಸುಸ್ಥಿತಿಯಲ್ಲಿಡಲು ಕ್ರಮವಾಗಿ ಪರೀಕ್ಷಿಸಿ, ರಿಪೇರಿ ಮಾಡುವುದು ಅಗತ್ಯ. ಸಮಸ್ಯೆಯಿದ್ದಾಗ ದಿನದ ಯಾವುದೇ ಸಮಯದಲ್ಲಾದರೂ ಬಂದು ರಿಪೇರಿ ಮಾಡುವ ಮೂಲಕ ಅನೇಕ ತಲೆಮಾರಿನ ಯುವಕರು ಈ ಚಿಹ್ನೆಯನ್ನು ಸುಸ್ಥಿತಿಯಲ್ಲಿಡಲು ಕೆಲಸ ಮಾಡಿದ್ದಾರೆ.

ರಾತ್ರಿ ಕೆಲಸ ಮಾಡುವ ವ್ಯಕ್ತಿಯೊಬ್ಬನು ಹೀಗೆ ತಿಳಿಸುತ್ತಾನೆ: “ಒಂದು ದಿನ ರಾತ್ರಿ ಟಿ.ವಿ. ನ್ಯೂಸ್‌ ನಿರ್ದೇಶಕನಿಂದ ನಮಗೆ ಕರೆ ಬಂತು. ನಮ್ಮ ಗಡಿಯಾರದಲ್ಲಿರುವ ಸಮಯದಲ್ಲಿ 15 ಸೆಕೆಂಡುಗಳ ವ್ಯತ್ಯಾಸವಿದೆ ಅಂತ ಅವನು ಹೇಳಿದನು. ನಮ್ಮ ಗಡಿಯಾರವನ್ನು ಆ ರಾತ್ರಿ ತನ್ನ ಕಾರ್ಯಕ್ರಮದಲ್ಲಿ ತೋರಿಸಲು ಬಯಸಿದ್ದರಿಂದ ಅದನ್ನು ಸರಿಮಾಡುವಂತೆ ಅವನು ಕೇಳಿಕೊಂಡನು. ಕೂಡಲೇ, ಅದನ್ನು ರಿಪೇರಿ ಮಾಡುವವನು ನಿದ್ದೆ ಕಣ್ಣಲ್ಲೇ ಬಂದು ಸರಿಮಾಡಿದನು.”

ಸರಿಯಾಗಿ ಮತ್ತು ಉತ್ತಮ ರೀತಿಯಲ್ಲಿ ಕೆಲಸ ಮಾಡಬೇಕೆಂಬ ಉದ್ದೇಶದಿಂದ ಇದರಲ್ಲಿ ಅನೇಕ ಸಾರಿ ಬದಲಾವಣೆಗಳನ್ನು ಮಾಡಲಾಯಿತು. 1985ರ ಸುಮಾರಿಗೆ ಸಮಯವನ್ನು ತೋರಿಸುವ ಮತ್ತು ಹವಾಮಾನವನ್ನು ಫ್ಯಾರನ್‌ಹೈಟ್‌ನಲ್ಲಿ ತಿಳಿಸುವ ಸಾಧನದ ಜೊತೆ ಹವಾಮಾನವನ್ನು ಸೆಲ್ಸಿಯಸ್‌ನಲ್ಲಿ ತಿಳಿಸುವ ಸಾಧನವನ್ನೂ ಅಳವಡಿಸಲಾಯಿತು.

2009ರಲ್ಲಿ ಹಳೆಯ ಬಲ್ಬುಗಳನ್ನು ತೆಗೆದು ಉತ್ತಮ ದರ್ಜೆಯ ಬಲ್ಬುಗಳನ್ನು ಅಳವಡಿಸಲಾಯಿತು. ಇವು ಹೆಚ್ಚು ಸಮಯ ಬಾಳಿಕೆ ಬರುತ್ತವೆ, ಇದರಿಂದಾಗಿ ವರ್ಷಕ್ಕೆ ಸುಮಾರು 4,000 ಅಮೆರಿಕನ್‌ ಡಾಲರ್‌ ಉಳಿತಾಯವಾಗುತ್ತಿದೆ. ಈ ಚಿಹ್ನೆಗೆ ಮುಂಚೆಗಿಂತ ಈಗ ತುಂಬ ಕಡಿಮೆ ವಿದ್ಯುತ್‌ ಖರ್ಚಾಗುತ್ತಿದೆ.