ಮಾಹಿತಿ ಇರುವಲ್ಲಿ ಹೋಗಲು

ಒಳ್ಳೆಯ ಉದ್ದೇಶಗಳಿಗಾಗಿ ಒಂದಾದ ಬ್ರಾಂಚ್‌ಗಳು

ಒಳ್ಳೆಯ ಉದ್ದೇಶಗಳಿಗಾಗಿ ಒಂದಾದ ಬ್ರಾಂಚ್‌ಗಳು

ಸೆಪ್ಟಂಬರ್‌ 2012ರಲ್ಲಿ ಯೆಹೋವನ ಸಾಕ್ಷಿಗಳ 20 ಬ್ರಾಂಚ್‌ ಆಫೀಸ್‌ಗಳನ್ನು ದೊಡ್ಡ ಬ್ರಾಂಚ್‌ಗಳೊಂದಿಗೆ ಕೂಡಿಸಲಾಯಿತು.

ಅಲ್ಲದೇ ಸರ್ಬಿಯ ಮತ್ತು ಮ್ಯಾಸಿಡೋನಿಯದಲ್ಲಿ ಹೊಸದಾಗಿ ಬ್ರಾಂಚನ್ನು ಆರಂಭಿಸಲಾಯಿತು. ಇದಕ್ಕೆ ಎರಡು ಕಾರಣಗಳಿವೆ. ಬನ್ನಿ ಅದ್ಯಾವುದೆಂದು ತಿಳಿಯೋಣ.

1. ಕೆಲಸವನ್ನು ಕಡಿಮೆಗೊಳಿಸಿದ ತಂತ್ರಜ್ಞಾನ

ಇತ್ತೀಚಿನ ವರ್ಷಗಳಲ್ಲಿ ಸಂಪರ್ಕ ಮತ್ತು ಮುದ್ರಣ ತಂತ್ರಜ್ಞಾನದಲ್ಲಿ ತುಂಬಾ ಬೆಳವಣಿಗೆಯಾಗಿರುವುದರಿಂದ ಬ್ರಾಂಚ್‌ನಲ್ಲಿ ಸ್ವಯಂಸೇವಕರ ಅವಶ್ಯಕತೆ ಕಡಿಮೆಯಾಗಿದೆ. ಇದರಿಂದಾಗಿ ದೊಡ್ಡ ದೊಡ್ಡ ಬ್ರಾಂಚ್‌ಗಳಲ್ಲಿ ಉಳಿದುಕೊಳ್ಳಲು ರೂಂಗಳು ಲಭ್ಯವಿದೆ. ಇದನ್ನು ಚಿಕ್ಕ ಬ್ರಾಂಚ್‌ಗಳಲ್ಲಿ ಕೆಲಸ ಮಾಡುವವರು ಬಳಸಿಕೊಳ್ಳುವ ಮೂಲಕ ಉಳಿತಾಯ ಮಾಡಬಹುದಿತ್ತು. ಈ ಕಾರಣಕ್ಕಾಗಿಯೇ ಬ್ರಾಂಚ್‌ಗಳನ್ನು ಒಟ್ಟುಗೂಡಿಸಲಾಯಿತು.

ಈಗ ಪ್ರತಿಯೊಂದು ಬ್ರಾಂಚ್‌ನಲ್ಲಿ ತುಂಬಾ ಅನುಭವವುಳ್ಳ ಸಾಕ್ಷಿಗಳು ಬೈಬಲ್‌ ಶಿಕ್ಷಣ ಕಾರ್ಯಕ್ರಮವನ್ನು ನೋಡಿಕೊಳ್ಳಲು ಸಾಧ್ಯವಾಗಿದೆ. ಉದಾಹರಣೆಗೆ, ಕೊಸ್ಟಾರಿಕ, ಎಲ್‌ ಸಾಲ್ವಡಾರ್‌, ಗ್ವಾಟೆಮಾಲ, ಹೊಂಡುರಾಸ್‌, ನಿಕರಾಗ್ವ ಮತ್ತು ಪನಾಮ ದೇಶಗಳಲ್ಲಿನ ಸಾಕ್ಷಿ ಕಾರ್ಯದ ಮೇಲ್ವಿಚಾರಣೆಯನ್ನು ಮೆಕ್ಸಿಕೊ ಬ್ರಾಂಚ್‌ ನೋಡಿಕೊಳ್ಳುತ್ತಿದೆ. ಹಾಗಾಗಿ ಆ ದೇಶಗಳ ಬ್ರಾಂಚ್‌ಗಳನ್ನು ಮುಚ್ಚಲಾಯಿತು.

ಆ ಆರು ಬ್ರಾಂಚ್‌ಗಳಲ್ಲಿದ್ದ ಸುಮಾರು ನಲ್ವತ್ತು ಸಾಕ್ಷಿಗಳನ್ನು ಮೆಕ್ಸಿಕೊ ಬ್ರಾಂಚ್‌ ಆಫೀಸಿಗೆ ಮರುನೇಮಕ ಮಾಡಲಾಯಿತು. ಸುಮಾರು 95 ಸಾಕ್ಷಿಗಳನ್ನು ಅವರ ಸ್ವಂತ ದೇಶದಲ್ಲೇ ಉಳಿದುಕೊಳ್ಳುವಂತೆ ಹೇಳಲಾಯಿತು. ಅವರೆಲ್ಲರೂ ಪೂರ್ಣ ಸಮಯದ ಸೇವೆಯನ್ನು ಕೈಗೆತ್ತಿಕೊಂಡರು.

ಇನ್ನೂ ಕೆಲವರು ಮೆಕ್ಸಿಕೊ ಬ್ರಾಂಚ್‌ ಆಫೀಸಿನ ಮೇಲ್ವಿಚಾರಣೆಯ ಕೆಳಗೆ ಬರುವ ಭಾಷಾಂತರ ಕಚೇರಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಉದಾಹರಣೆಗೆ, ಪನಾಮದಲ್ಲಿ ಸುಮಾರು 20 ಸಾಕ್ಷಿಗಳು ಅಲ್ಲಿನ ಪ್ರಾದೇಶಿಕ ಭಾಷೆಗಳಲ್ಲಿ ಬೈಬಲ್‌ ಪ್ರಕಾಶನಗಳನ್ನು ಭಾಷಾಂತರಿಸುತ್ತಿದ್ದಾರೆ. ಗ್ವಾಟೆಮಾಲ ಬ್ರಾಂಚ್‌ ಆಫೀಸಿನಲ್ಲಿ ಕೂಡ ಸುಮಾರು 16 ಸಾಕ್ಷಿಗಳು ಅಲ್ಲಿನ ಸ್ಥಳೀಯ ಭಾಷೆಗಳಲ್ಲಿ ಪ್ರಕಾಶನಗಳನ್ನು ಭಾಷಾಂತರಿಸುತ್ತಿದ್ದಾರೆ. ಹಾಗಾಗಿ ಈ ಒಟ್ಟುಗೂಡಿಸುವಿಕೆಯಿಂದ ಮಧ್ಯ ಅಮೆರಿಕದ ಬ್ರಾಂಚ್‌ ಆಫೀಸ್‌ಗಳಲ್ಲಿದ್ದ ಸ್ವಯಂ ಸೇವಕರ ಸಂಖ್ಯೆ 300ರಿಂದ 75ಕ್ಕೆ ಕಡಿಮೆಯಾಯಿತು.

2. ಸಾರುವ ಕೆಲಸವನ್ನು ಹೆಚ್ಚುಗೊಳಿಸಿದ ಒಟ್ಟುಗೂಡಿಸುವಿಕೆ

ಈ ಒಟ್ಟುಗೂಡಿಸುವಿಕೆಯಿಂದ ಚಿಕ್ಕ ಬ್ರಾಂಚ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಸ್ವಯಂಸೇವಕರು ಈಗ ಸುವಾರ್ತೆ ಸಾರುವ ಕೆಲಸಕ್ಕೆ ಹೆಚ್ಚಿನ ಗಮನ ಕೊಡಲು ಸಾಧ್ಯವಾಗಿದೆ.

ಮೊದಲು ಬ್ರಾಂಚ್‌ನಲ್ಲಿ ಕೆಲಸ ಮಾಡುತ್ತಿದ್ದು ನಂತರ ಸಾರುವ ಕೆಲಸಕ್ಕೆ ಮರು ನೇಮಕ ಹೊಂದಿದ ಆಫ್ರಿಕಾದ ಸಾಕ್ಷಿಯೊಬ್ಬಳು ಹೀಗೆ ಹೇಳಿದಳು: “ಹೊಸ ಸನ್ನಿವೇಶಕ್ಕೆ ಹೊಂದಿಕೊಳ್ಳೋದು ಅಷ್ಟು ಸುಲಭ ಆಗಿರಲಿಲ್ಲ. ಆರಂಭದ ಕೆಲವು ತಿಂಗಳು ಅಲ್ಲಿನ ಜೀವನಶೈಲಿಗೆ ಹೊಂದಿಕೊಳ್ಳಲು ತುಂಬಾ ಕಷ್ಟ ಆಯಿತು. ಆದರೆ ಪ್ರತಿದಿನ ಸೇವೆಗೆ ಹೋಗುತ್ತಿದ್ದರಿಂದ ನಾನು ನೆನಸಿದ್ದಕ್ಕಿಂತ ಹೆಚ್ಚಿನ ಸಂತೋಷ ಮತ್ತು ಆಶೀರ್ವಾದಗಳನ್ನು ಪಡೆದಿದ್ದೇನೆ. ಈಗ ನಾನು 20 ಬೈಬಲ್‌ ಅಧ್ಯಯನಗಳನ್ನು ನಡೆಸುತ್ತಿದ್ದೇನೆ. ಅದರಲ್ಲಿ ಕೆಲವರು ಸಭಾ ಕೂಟಗಳಿಗೆ ಹಾಜರಾಗುತ್ತಿದ್ದಾರೆ.”