ಮಾಹಿತಿ ಇರುವಲ್ಲಿ ಹೋಗಲು

50 ವರ್ಷಗಳಿಂದ ಕೊಯ್ಲಿನ ಕೆಲಸಕ್ಕೆ ಆಧಾರವಾದ ವಾಚ್‌ಟವರ್‌ ಜಮೀನುಗಳು

50 ವರ್ಷಗಳಿಂದ ಕೊಯ್ಲಿನ ಕೆಲಸಕ್ಕೆ ಆಧಾರವಾದ ವಾಚ್‌ಟವರ್‌ ಜಮೀನುಗಳು

ನ್ಯೂ ಯಾರ್ಕ್‌ ನಗರದ ಉತ್ತರ ದಿಕ್ಕಿನಿಂದ ಸುಮಾರು 145 ಕಿ.ಮೀ. (90 ಮೈಲಿ) ದೂರದಲ್ಲಿರುವ ವಾಲ್‌ಕಿಲ್‌ನಲ್ಲಿ ಕೆಲವು ಜಮೀನುಗಳಿವೆ. ಈ ಜಮೀನುಗಳು ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಬೈಬಲ್‌ ಶಿಕ್ಷಣ ಕಾರ್ಯದಲ್ಲಿ ಬಹಳ ಪ್ರಾಮುಖ್ಯ ಪಾತ್ರವನ್ನು ನಿರ್ವಹಿಸಿವೆ. ಅವುಗಳಲ್ಲಿ ಮೊದಲ ಜಮೀನನ್ನು 50 ವರ್ಷಗಳ ಹಿಂದೆ ಅಂದರೆ ಜನವರಿ 2, 1963ರಲ್ಲಿ ಖರೀದಿಸಲಾಗಿತ್ತು.

ವಾಲ್‌ಕಿಲ್‌ನಲ್ಲಿ ಕೆಲಸ ಶುರುವಾದ ದಿನಗಳಿಂದಲೂ ಸೇವೆ ಮಾಡಿದ ಯೆಹೋವನ ಸಾಕ್ಷಿ ಡೇವಿಡ್‌ ವಾಕರ್‌ ಮೊದಲ ಜಮೀನನ್ನು ಖರೀದಿಸಲು ಕಾರಣವೇನೆಂದು ತಿಳಿಸುತ್ತಾರೆ: “ನ್ಯೂ ಯಾರ್ಕಿನ ಬ್ರೂಕ್ಲಿನ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಮುಖ್ಯ ಕಾರ್ಯಾಲಯದಲ್ಲಿ ಕೆಲಸ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿತ್ತು. ಅವರಿಗೆಲ್ಲ ಆಹಾರವನ್ನು ಸಾಧ್ಯವಾದಷ್ಟು ಕಡಿಮೆ ಖರ್ಚಿನಲ್ಲಿ ಒದಗಿಸಬೇಕಿತ್ತು. ಈಗಾಗಲೇ ನ್ಯೂ ಯಾರ್ಕಿನ ಉತ್ತರದಲ್ಲಿ ಒಂದು ಜಮೀನಿತ್ತು. ಆದರೆ ಬ್ರೂಕ್ಲಿನ್‌ನಿಂದ ಅಲ್ಲಿಗೆ ಹೋಗಲು ಸುಮಾರು 6ರಿಂದ 8 ತಾಸು ಬೇಕಾಗುತ್ತಿತ್ತು. ಆದರೆ ವಾಲ್‌ಕಿಲ್‌ಗೆ ಕೇವಲ 2 ತಾಸುಗಳಲ್ಲೇ ತಲುಪಬಹುದಿತ್ತು. ಹಾಗಾಗಿ ಈ ಸ್ಥಳ ನಮ್ಮ ಅಗತ್ಯಕ್ಕೆ ಸೂಕ್ತವಾದ ಸ್ಥಳವಾಗಿತ್ತು.” ಆರಂಭದಲ್ಲಿ, ಯೆಹೋವನ ಸಾಕ್ಷಿಗಳು ವಾಲ್‌ಕಿಲ್‌ನ ಜಮೀನಿನಲ್ಲಿ ಹಣ್ಣುಗಳನ್ನು, ತರಕಾರಿಗಳನ್ನು ಬೆಳೆಸುತ್ತಿದ್ದರು. ಮಾಂಸಕ್ಕಾಗಿ ಕೋಳಿ, ಹಂದಿ ಮತ್ತು ದನದ ಸಾಕಣೆ ಕೇಂದ್ರವನ್ನು ಆರಂಭಿಸಿದ್ದರು. ಜೊತೆಗೆ ಹಾಲಿನ ಪದಾರ್ಥಗಳನ್ನು ಸಹ ಇಲ್ಲೇ ಉತ್ಪಾದಿಸುತ್ತಿದ್ದರು. ಸ್ವಲ್ಪ ಸಮಯದಲ್ಲೇ ಇನ್ನೂ ಕೆಲವು ಜಮೀನುಗಳನ್ನು ಖರೀದಿಸಿದರು.

ಹತ್ತು ವರ್ಷಗಳಷ್ಟರೊಳಗೆ ಲೋಕವ್ಯಾಪಕವಾಗಿ ಯೆಹೋವನ ಸಾಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ವಾಲ್‌ಕಿಲ್‌ನಲ್ಲಿ ಹೊಸ ಯೋಜನೆಗಳು ಆರಂಭವಾದವು. ಆಹಾರ ಪದಾರ್ಥಗಳನ್ನು ಬೆಳೆಸಿ ಕೊಯ್ಲು ಮಾಡುವುದರ ಜೊತೆಗೆ ಯೇಸು ಹೇಳಿದ ಸಾಂಕೇತಿಕ ಕೊಯ್ಲಿನ ಕೆಲಸಕ್ಕೆ ಸಹಾಯ ಮಾಡುವಂಥ ಸಾಹಿತ್ಯಗಳನ್ನು ತಯಾರಿಸುವ ಕೆಲಸವನ್ನು ಸಹ ಅಲ್ಲಿ ಆರಂಭಿಸಲಾಯಿತು. (ಮತ್ತಾಯ 9:​37; ಲೂಕ 10:2; ಯೋಹಾನ 4:​35, 36) ಇದಕ್ಕೆ ಸಂಬಂಧಿಸಿದಂತೆ ವಾಲ್‌ಕಿಲ್‌ನಲ್ಲಿ ನಡೆದ ಕೆಲವು ಕೆಲಸಗಳ ಬಗ್ಗೆ ಕೆಳಗೆ ಕೊಡಲಾಗಿದೆ.

ಮುದ್ರಣ: 1950ರ ಆಸುಪಾಸಿನಲ್ಲಿ ನಮ್ಮ ಹೆಚ್ಚಿನ ಬೈಬಲ್‌ ಆಧರಿತ ಸಾಹಿತ್ಯಗಳನ್ನು ನ್ಯೂ ಯಾರ್ಕಿನ ಬ್ರೂಕ್ಲಿನ್‌ನಲ್ಲಿದ್ದ ಮುದ್ರಣಾಲಯದಲ್ಲಿ ತಯಾರಿಸಲಾಗುತ್ತಿತ್ತು. ಆದರೆ ನಮ್ಮ ಸಾಹಿತ್ಯಗಳಿಗೆ ಬೇಡಿಕೆ ಹೆಚ್ಚಾದಂತೆ ಅದನ್ನು ಸಾಕಷ್ಟು ಪ್ರಮಾಣದಲ್ಲಿ ಮುದ್ರಿಸಲು ಬ್ರೂಕ್ಲಿನ್‌ ಮುದ್ರಣಾಲಯದಿಂದ ಸಾಧ್ಯವಾಗಲಿಲ್ಲ. ಹಾಗಾಗಿ, 1973ರಲ್ಲಿ ಯೆಹೋವನ ಸಾಕ್ಷಿಗಳು ವಾಲ್‌ಕಿಲ್‌ನಲ್ಲಿ ಇನ್ನೊಂದು ಮುದ್ರಣಾಲಯವನ್ನು ನಿರ್ಮಾಣ ಮಾಡಿದರು. ಆಗಿನಿಂದ ಮುದ್ರಣ ಕೆಲಸ ನಡೆಯುವ ಕಟ್ಟಡಗಳು ವಿಸ್ತರಣೆಯಾಗುತ್ತಲೇ ಇವೆ. 2004ರಲ್ಲೂ ಇವನ್ನು ವಿಸ್ತರಣೆ ಮಾಡಲಾಯಿತು.

ಕಂಪ್ಯೂಟರ್‌ ತಂತ್ರಜ್ಞಾನ: 1979ರಲ್ಲಿ ಯೆಹೋವನ ಸಾಕ್ಷಿಗಳ ತಂಡವೊಂದು ವಾಲ್‌ಕಿಲ್‌ನಲ್ಲಿ ಒಂದು ಹೊಸ ಕಂಪ್ಯೂಟರ್‌ ಪ್ರೋಗ್ರ್ಯಾಮನ್ನು ತಯಾರಿಸಲು ಆರಂಭಿಸಿದರು. ಅದರ ಹೆಸರು ಮಲ್ಟಿಲ್ಯಾಂಗ್ವೇಜ್‌ ಎಲೆಕ್ಟ್ರಾನಿಕ್‌ ಪಬ್ಲಿಷಿಂಗ್‌ ಸಿಸ್ಟಮ್‌ (ಮೆಪ್ಸ್‌). ಈ ಪ್ರೋಗ್ರ್ಯಾಮ್‌ನಿಂದ ಬೈಬಲ್‌ ಸಾಹಿತ್ಯಗಳನ್ನು ಸುಮಾರು 600 ಭಾಷೆಗಳಲ್ಲಿ ಪ್ರಕಾಶಿಸಲು ಸಾಧ್ಯವಾಗುತ್ತಿದೆ.

ಶಿಕ್ಷಣ: 1988ರಲ್ಲಿ ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌, ಬ್ರೂಕ್ಲಿನ್‌ನಿಂದ ವಾಲ್‌ಕಿಲ್‌ಗೆ ಸ್ಥಳಾಂತರವಾಯಿತು. ಆ ವರ್ಷದ ಅಕ್ಟೋಬರ್‌ 17ರಿಂದ ತರಗತಿಗಳು ಆರಂಭವಾದವು. ಏಪ್ರಿಲ್‌ 1995ರಲ್ಲಿ ನ್ಯೂ ಯಾರ್ಕಿನ ಪ್ಯಾಟರ್‌ಸನ್‌ನಲ್ಲಿ ವಾಚ್‌ಟವರ್‌ ಎಜುಕೇಷನಲ್‌ ಸೆಂಟರ್‌ ಸ್ಥಾಪನೆಯಾಗುವವರೆಗೂ ಈ ಶಾಲೆಯನ್ನು ವಾಲ್‌ಕಿಲ್‌ನಲ್ಲೇ ನಡೆಸಲಾಗುತ್ತಿತ್ತು.

ಇತರ ಜಮೀನುಗಳಲ್ಲಾದಂತೆ ಕಳೆದ 5 ದಶಕಗಳಲ್ಲಿ ವಾಚ್‌ಟವರ್‌ನ ಜಮೀನುಗಳನ್ನು ಬೇರೆ-ಬೇರೆ ಕೆಲಸಗಳಿಗೆ ಉಪಯೋಗಿಸಲಾಯಿತು. ಆದರೂ ಅಮೆರಿಕದ ನ್ಯೂ ಯಾರ್ಕಿನ ಬೆತೆಲಿನಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಯೆಹೋವನ ಸಾಕ್ಷಿಗಳಿಗೆ ಉನ್ನತ ಗುಣಮಟ್ಟದ ಆಹಾರವನ್ನೇ ಕೊಡಲು ಸಾಕಷ್ಟು ಶ್ರಮವಹಿಸಲಾಗುತ್ತಿದೆ.

ಸದ್ಯಕ್ಕೆ ವಾಲ್‌ಕಿಲ್‌ನಲ್ಲಿ ಹೊಸ ಕಛೇರಿಗಳನ್ನು, ವಸತಿ ಗೃಹಗಳನ್ನು ಮತ್ತು ಇತರ ಕಟ್ಟಡಗಳನ್ನು ಕಟ್ಟಲಾಗುತ್ತಿದೆ. ಈಗಾಗಲೇ ಇರುವ ಕಟ್ಟಡಗಳನ್ನು ನವೀಕರಿಸಲಾಗುತ್ತಿದೆ. ಈ ಭಾಗದಲ್ಲಿರುವ ಯೆಹೋವನ ಸಾಕ್ಷಿಗಳೊಂದಿಗೆ ಸೇರಿ ಬರುತ್ತಿರುವವರ ಸಂಖ್ಯೆ ಹೆಚ್ಚಾದಂತೆ ಅವರ ಆಧ್ಯಾತ್ಮಿಕ ಅಗತ್ಯವನ್ನು ಪೂರೈಸಲು ವಾಚ್‌ಟವರ್‌ ಜಮೀನುಗಳಲ್ಲಿ ನಡೆಯುತ್ತಿರುವ ಎಲ್ಲ ಕೆಲಸಗಳಿಂದ ಸಹಾಯವಾಗುತ್ತಿದೆ.

ಆರಂಭದಲ್ಲಿ ತಿಳಿಸಲಾದ ಡೇವಿಡ್‌ ವಾಕರ್‌ ಹೇಳುವುದು: “ಕಳೆದ 50 ವರ್ಷಗಳಲ್ಲಿ, ವಾಲ್‌ಕಿಲ್‌ನಲ್ಲಿ ಚಿಕ್ಕ ಯೋಜನೆಗಳಿಂದ ಆರಂಭವಾಗಿ ದೊಡ್ಡ ದೊಡ್ಡ ಬೆಳವಣಿಗೆಗಳು ಆಗಿರುವುದನ್ನು ಮತ್ತು ಬೈಬಲ್‌ ಸಂದೇಶವನ್ನು ಲೋಕವ್ಯಾಪಕವಾಗಿ ಜನರಿಗೆ ಕಲಿಸಲು ಸಾಕಷ್ಟು ಶ್ರಮವಹಿಸಲಾಗುತ್ತಿರುವುದನ್ನು ನೋಡುವಾಗ ನನಗೆ ತುಂಬ ಸಂತೋಷವಾಗುತ್ತದೆ!”