ಮಾಹಿತಿ ಇರುವಲ್ಲಿ ಹೋಗಲು

136ನೇ ಸ್ಕೂಲ್‌ ಆಫ್‌ ಗಿಲ್ಯಡ್‌ ಕ್ಲಾಸ್‌ನ ಪದವಿ ಪ್ರಧಾನ ಕಾರ್ಯಕ್ರಮ

136ನೇ ಸ್ಕೂಲ್‌ ಆಫ್‌ ಗಿಲ್ಯಡ್‌ ಕ್ಲಾಸ್‌ನ ಪದವಿ ಪ್ರಧಾನ ಕಾರ್ಯಕ್ರಮ

ಶನಿವಾರ 2014ರ, ಮಾರ್ಚ್‌ 8ರಂದು ಗಿಲ್ಯಡ್‌ ಶಾಲೆಯ 136ನೇ ಕ್ಲಾಸ್‌ನ ಪದವಿ ಪ್ರಧಾನ ಕಾರ್ಯಕ್ರಮ ಜರುಗಿತು. ಸತತವಾಗಿ 5 ತಿಂಗಳು ಬೈಬಲನ್ನು ಆಳವಾಗಿ ಅಧ್ಯಯನ ಮಾಡಿದ ಈ ಶಾಲೆಯ ವಿದ್ಯಾರ್ಥಿಗಳು ತಮ್ಮ ನೇಮಕವನ್ನು ಪಡೆಯಲು ಕಾತುರರಾಗಿದ್ದರು. ಸಾರುವುದರಲ್ಲಿ ತುಂಬಾ ಅನುಭವಸ್ಥರಾಗಿರುವ ಯೆಹೋವನ ಸಾಕ್ಷಿಗಳು ತಮ್ಮ ಸಾರುವಿಕೆಯಲ್ಲಿ ಹೆಚ್ಚಿನ ಪ್ರತಿಫಲ ಪಡೆಯುವುದರ ಮತ್ತು ತಮ್ಮ ಜೊತೆ ವಿಶ್ವಾಸಿಗಳ ನಂಬಿಕೆಯನ್ನು ಬಲಪಡಿಸುವುದರ ಕುರಿತು ಈ ಶಾಲೆಯಲ್ಲಿ ಕಲಿಯುತ್ತಾರೆ. ಈ ಕಾರ್ಯಕ್ರಮ ನ್ಯೂಯಾರ್ಕ್‌ನ ಪ್ಯಾಟರ್ಸನ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಶೈಕ್ಷಣಿಕ ಕೇಂದ್ರದಲ್ಲಿ ಜರುಗಿತು. ಕೆಲವರಿಗೆ ಅಲ್ಲೇ ಹಾಜರಾಗುವ ಅವಕಾಶ ಸಿಕ್ಕಿತು. ಇನ್ನು ಕೆಲವರು ಕೆನಡಾ, ಜಮೈಕಾ, ಪೋರ್ಟರಿಕೊ ಮತ್ತು ಅಮೆರಿಕದಲ್ಲಿ ನಡೆದಂಥ ನೇರ ಪ್ರಸಾರದ ಮೂಲಕ ಇದನ್ನು ನೋಡಿ ಆನಂದಿಸಿದರು. ಈ ಕಾರ್ಯಕ್ರಮವನ್ನು ಆನಂದಿಸಿದವರ ಒಟ್ಟು ಸಂಖ್ಯೆ 11,548.

“ಈ ಮನೋಭಾವವು ನಿಮ್ಮಲ್ಲಿಯೂ ಇರಲಿ.” ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಸದಸ್ಯರಾದ ಡೇವಿಡ್‌ ಸ್ಪ್ಲೇನ್‌ರ ಆರಂಭದ ಮಾತುಗಳು ಫಿಲಿಪ್ಪಿ 2:5-7​ರ ಮೇಲೆ ಆಧರಿತವಾಗಿತ್ತು. ಅದು ಹೇಳುವುದು: “ಕ್ರಿಸ್ತ ಯೇಸುವಿನಲ್ಲಿದ್ದ ಈ ಮನೋಭಾವವು ನಿಮ್ಮಲ್ಲಿಯೂ ಇರಲಿ.” ಯೇಸು ಭೂಮಿಯಲ್ಲಿದ್ದಾಗ ದೀನತೆಯಿಂದ ದೇವರ ಕೆಲಸದಲ್ಲಿ ತಲ್ಲೀನನಾಗಿದ್ದನೇ ಹೊರತು ಸ್ಥಾನಮಾನಗಳ ಕುರಿತು ಯೋಚಿಸುತ್ತಿರಲಿಲ್ಲ.

ಉದಾಹರಣೆಗೆ, ಯೇಸು ಇಸ್ರಾಯೇಲ್‌ ಜನಾಂಗಕ್ಕೆ ಮೋಶೆ ಹೇಳಿದ ಮಾತುಗಳನ್ನು ಉಲ್ಲೇಖಿಸುತ್ತಾ ಹೀಗೆ “ಬರೆದದೆ” ಎಂದು ಹೇಳುವ ಮೂಲಕ ಸೈತಾನನ ಶೋಧನೆಗಳನ್ನು ಪ್ರತಿ ಬಾರಿ ಅಲ್ಲಗಳೆದನು. (ಮತ್ತಾಯ 4:4, 7, 10; ಧರ್ಮೋಪದೇಶಕಾಂಡ 6:13, 16; 8:3) ಯೇಸು ದೇವರ ಅಭಿಷಿಕ್ತ ಮಗನಾಗಿದ್ದನು. ಆತನಿಗೆ ಅವನದ್ದೇ ಆದ ಅಧಿಕಾರವಿತ್ತು. ಅದೇ ಅಧಿಕಾರವನ್ನು ಉಪಯೋಗಿಸಿ ಸೈತಾನನಿಗೆ ಉತ್ತರ ಕೊಡಬಹುದಿತ್ತು. ಆದರೆ ಯೇಸು ಮೋಶೆಯ ಮಾತುಗಳನ್ನು ಉಲ್ಲೇಖಿಸುವ ಮೂಲಕ ದೀನತೆಯಿಂದ ಅವನನ್ನು ಮಾನ್ಯ ಮಾಡಿದನು. ಯೇಸುವಿನಂತೆ ನಾವು ಸಹ ಇತರರ ಸಾಮರ್ಥ್ಯಗಳನ್ನು ಯಥಾರ್ಥವಾಗಿ ಒಪ್ಪಿಕೊಂಡು, ಅವರನ್ನು ಧಾರಾಳವಾಗಿ ಪ್ರಶಂಸಿಸಬೇಕು.

ಯೇಸುವಿನ ಮನೋಭಾವದ ಕುರಿತು ಸಹೋದರ ಸ್ಪ್ಲೇನ್‌ರ ಒತ್ತಿ ಹೇಳಿದರು. ತರಬೇತಿಯಂತಿದ್ದ ತನ್ನ ಭೂಜೀವಿತದ ಕೊನೆಯಲ್ಲಿ ಯೇಸು ಪ್ರಾರ್ಥಿಸಿದ್ದು: “ನೀನು ನನಗೆ ಮಾಡಲು ಕೊಟ್ಟಿರುವ ಕೆಲಸವನ್ನು ಪೂರೈಸುವ ಮೂಲಕ ನಾನು ಈ ಭೂಮಿಯಲ್ಲಿ ನಿನ್ನನ್ನು ಮಹಿಮೆಪಡಿಸಿದ್ದೇನೆ. ಆದುದರಿಂದ ಈಗ ತಂದೆಯೇ, ಲೋಕವು ಉಂಟಾಗುವುದಕ್ಕಿಂತ ಮುಂಚೆ ನಿನ್ನ ಬಳಿಯಲ್ಲಿ ನನಗಿದ್ದ ಮಹಿಮೆಯಿಂದ ನನ್ನನ್ನು ನಿನ್ನ ಬಳಿಯಲ್ಲಿ ಮಹಿಮೆಪಡಿಸು.” (ಯೋಹಾನ 17:4, 5) ಈ ಪ್ರಾರ್ಥನೆಯಲ್ಲಿ ಯೇಸು ಹೆಚ್ಚಿನ ಸುಯೋಗಗಳಿಗಾಗಿ ಆಸೆ ಪಡದೆ ಸ್ವರ್ಗದಲ್ಲಿ ತನಗಿದ್ದ ಸ್ಥಾನವನ್ನು ಅಥವಾ ‘ತನ್ನ ಹಳೇ ಕೆಲಸವನ್ನು’ ಕೊಡುವಂತೆ ಕೇಳಿಕೊಂಡನು. ಗಿಲ್ಯಡ್‌ ಪದವೀಧರರು ಸಹ ಯೇಸುವಿನಂತಿರಬೇಕು. ಅವರ ಗಮನವೆಲ್ಲಾ ಮಾಡಬೇಕಾದ ಕೆಲಸದ ಮೇಲೆ ಇರಬೇಕೆ ಹೊರತು ತಮ್ಮ ಸ್ಥಾನಮಾನಗಳ ಮೇಲಲ್ಲ. ಒಂದು ವೇಳೆ ತಮ್ಮ ನೇಮಕಕ್ಕೆ ಹಿಂದಿರುಗುವಾಗ ಯಾವುದೇ ಹೊಸ ಸುಯೋಗಗಳು ಸಿಗದಿದ್ದರೂ ನಿರಾಶರಾಗದೆ, ಇರುವುದರಲ್ಲೇ ತೃಪ್ತಿ ಪಡಬೇಕು.

“ವಿಷಾದ ಪಡದೆ ತ್ಯಾಗಗಳನ್ನು ಮಾಡಿ.” ಆಡಳಿತ ಮಂಡಲಿಯ ಟೀಚಿಂಗ್‌ ಕಮಿಟಿಗೆ ಸಹಾಯಕರಾಗಿರುವ ವಿಲ್ಯಮ್‌ ಮಾಲನ್ಫೊಂಟ್‌ರವರು ಅಪೊಸ್ತಲ ಪೌಲನ ಸ್ವತ್ಯಾಗ ಮನೋಭಾವವನ್ನು ಅನುಕರಿಸುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ದೇವರ ಸೇವೆಗಾಗಿ ಏನನ್ನು ಬಿಟ್ಟುಬಂದಿದ್ದನೋ ಅದಕ್ಕೆ ವಿಷಾದಪಡದೆ ಪೌಲ ಹೇಳಿದ್ದು: “ಹಿಂದಿನ ವಿಷಯಗಳನ್ನು ಮರೆತುಬಿಟ್ಟು ಮುಂದಿನ ವಿಷಯಗಳ ಕಡೆಗೆ ಮುಂದೊತ್ತುತ್ತಾ, ಕ್ರಿಸ್ತ ಯೇಸುವಿನ ಮೂಲಕ ದೇವರು ಕೊಡುವ ಮೇಲಣ ಕರೆಯ ಬಹುಮಾನದ ಗುರಿಯ ಕಡೆಗೆ ಓಡುತ್ತಾ ಇದ್ದೇನೆ.”​—ಫಿಲಿಪ್ಪಿ 3:13, 14.

ವಿಷಾದ ಪಡದೆ ತ್ಯಾಗಗಳನ್ನು ಮಾಡುವ ಮೂಲಕ ವಿದ್ಯಾರ್ಥಿಗಳು ಪ್ರಾಚೀನ ಕಾಲದ ಮತ್ತು ಆಧುನಿಕ ಕಾಲದ ನಂಬಿಗಸ್ತರ ಮಾದರಿಯನ್ನು ಅನುಕರಿಸಬಹುದು. ಅತೀ ಚಿಕ್ಕ ಪ್ರಾಯದಲ್ಲೇ ಯೆಹೋವನ ಸೇವೆಯಲ್ಲಿ ಕಾರ್ಯಮಗ್ನಳಾಗಿದ್ದ ಕ್ಲಾರಾ ಗರ್ಬರ್‌ ಮೋಯರ್‌ ಎಂಬ ಸಹೋದರಿಯ ಹೇಳಿಕೆಯನ್ನು ಸಹೋದರ ಮಾಲನ್ಫೊಂಟ್‌ ನೆನಪಿಸಿಕೊಂಡರು. “ಯೆಹೋವನ ಸೇವೆಯಲ್ಲಿ ಕಳೆದ ಆ 80 ವರ್ಷಗಳನ್ನು ಹಿಂತಿರುಗಿ ನೋಡುವಾಗ ನನಗೆ ಸ್ವಲ್ಪವೂ ವಿಷಾದವಿಲ್ಲ. ನಿಜಕ್ಕೂ ಅದೊಂದು ಮಹಾ ಸುಯೋಗ! ನನಗೆ ನನ್ನ ಜೀವನವನ್ನು ಪುನಃ ಒಮ್ಮೆ ಜೀವಿಸಲು ಸಾಧ್ಯವಾದರೆ, ನಾನು ಅದೇ ರೀತಿಯಲ್ಲಿ ಜೀವಿಸಲು ಬಯಸುವೆ” ಎನ್ನುವುದು ಸೇವೆಯ ಕುರಿತು ಆಕೆಯ ಮನದಾಳದ ಮಾತುಗಳಾಗಿತ್ತು.

“ದೇವದೂತರೊಂದಿಗೆ ದೇವದೂತರಾಗಿ ರಾಜ್ಯದ ಸುವಾರ್ತೆಯನ್ನು ಸಾರಿ.” ಆಡಳಿತ ಮಂಡಲಿಯ ಸದಸ್ಯರಾದ ಗೆರಿಟ್‌ ಲಾಷ್‌, ಸುವಾರ್ತೆ ಸಾರುವವರಿಗೆ ಸಿಗುವಂಥ ಎರಡು ವಿಶೇಷ ಸುಯೋಗಗಳ ಕುರಿತು ತಿಳಿಸಿ, ಅವುಗಳನ್ನು ಮಾನ್ಯ ಮಾಡುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಬೈಬಲಿನಲ್ಲಿ “ದೇವದೂತ” ಎಂಬ ಪದಕ್ಕೆ ಬಳಸಲಾಗಿರುವ ಹೀಬ್ರೂ ಮತ್ತು ಗ್ರೀಕ್‌ ಪದದ ಮತ್ತೊಂದು ಅರ್ಥ “ಸಂದೇಶವಾಹಕ” ಎಂದಾಗಿದೆ. ಹಾಗಾಗಿ ದೇವರ ರಾಜ್ಯದ ಸಂದೇಶವನ್ನು ಜನರಿಗೆ ತಲುಪಿಸುವವರು ದೇವದೂತರಾಗಿ ಕೆಲಸಮಾಡುವುದೇ ಮೊದಲನೇ ಸುಯೋಗವಾಗಿದೆ. ಶಿಷ್ಯನಾಗಿದ್ದ ಫಿಲಿಪ್ಪನಂತೆ ದೇವದೂತರ ಮಾರ್ಗದರ್ಶನದ ಕೆಳಗೆ ಸುವಾರ್ತೆ ಸಾರುವ ಸುಯೋಗವೇ ಎರಡನೇಯದಾಗಿದೆ.​—ಅಪೊಸ್ತಲರ ಕಾರ್ಯಗಳು 8:26-35.

ಇದಾದ ನಂತರ ಸಹೋದರ ಲಾಷ್‌, ಯೆಹೋವನ ಸಾಕ್ಷಿಗಳಿಗೆ ಸುವಾರ್ತಾ ಕೆಲಸದಲ್ಲಿ ಸಿಕ್ಕಿದ ಅನೇಕ ಅನುಭವಗಳನ್ನು ತಿಳಿಸಿದರು. ಉದಾಹರಣೆಗೆ, ಮೆಕ್ಸಿಕೋದಲ್ಲಿ ವಾಸವಾಗಿರುವ ಗೆಬಿನೋ ಎಂಬ ಸಹೋದರನ ಅನುಭವ. ಸಾಮಾನ್ಯವಾಗಿ ಸೇವೆಯಲ್ಲಿ ಒಂದು ಅಥವಾ ಎರಡು ಬಾರಿ ಮಾತ್ರ ಮನೆ ಬಾಗಿಲನ್ನು ತಟ್ಟುತ್ತಿದ್ದ ಗೆಬಿನೋ, ಒಮ್ಮೆ ಬಾಗಿಲನ್ನು ನಾಲ್ಕು ಬಾರಿ ತಟ್ಟಿದನು. ಬಾಗಿಲು ತೆರದ ಮನೆಯವನು ಗೆಬಿನೋ ಮನೆ ಬಾಗಿಲನ್ನು ತಟ್ಟುತ್ತಿದ್ದಾಗ ತನ್ನ ಜೀವನಕ್ಕೆ ಅಂತ್ಯ ಹಾಡಬೇಕು ಅಂತ ಅಂದುಕೊಂಡಿದ್ದ ಎಂದು ತಿಳಿಸಿದನು. ಅನಂತರ ಅವನು: “ನೀವು ನಾಲ್ಕನೇ ಸಾರಿ ತಟ್ಟಿದಾಗ ಉರುಲು ನನ್ನ ಕುತ್ತಿಗೆಯಲ್ಲಿತ್ತು. ನೀವು ಬಾಗಿಲನ್ನು ತಟ್ಟುತ್ತಾ ಇದ್ದಿದ್ದರಿಂದ ನಾನು ಕುತ್ತಿಗೆಯಿಂದ ಉರುಲನ್ನು ತೆಗೆದು, ಬಾಗಿಲನ್ನು ತೆರೆಯಲು ಬಂದೆ. ನಾನು ಇನ್ನೇನು ಜೀವ ಕಳೆದುಕೊಳ್ಳಬೇಕೆಂದಿದ್ದಾಗ ನೀವು ನನ್ನನ್ನು ತಡೆದದ್ದಕ್ಕಾಗಿ ನಿಮಗೆ ಧನ್ಯವಾದ. ಒಂದು ವೇಳೆ ನೀವು ಅಷ್ಟು ಬಾರಿ ಬಾಗಿಲನ್ನು ತಟ್ಟದೆ ಇದ್ದಿದ್ದರೆ ನಾನು ನನ್ನ ಜೀವ ಕಳೆದುಕೊಂಡು ಬಿಟ್ಟಿರುತ್ತಿದ್ದೆ.”

ಕೆಲವೊಮ್ಮೆ ಈ ರೀತಿಯ ಸಂದರ್ಭಗಳಲ್ಲಿ ನಾವು ಹೋಗುವುದಕ್ಕೂ ಅವರ ಪರಿಸ್ಥಿತಿಗೂ ಒಂದಕ್ಕೊಂದು ಸಂಬಂಧವಿಲ್ಲದಿರಬಹುದು. ಆದರೆ ಇದು ಯಾವಾಗಲೂ ಸತ್ಯವಾಗಿರುವುದಿಲ್ಲ. ಬದಲಾಗಿ ಈ ರೀತಿಯ ಘಟನೆಗಳು ದೇವದೂತರು ನಮ್ಮ ಲೋಕವ್ಯಾಪಕ ಸುವಾರ್ತಾ ಕೆಲಸವನ್ನು ಮಾರ್ಗದರ್ಶಿಸುತ್ತಿದ್ದಾರೆ ಎಂಬುದಕ್ಕೆ ಬಲವಾದ ಆಧಾರವಾಗಿವೆ.​—ಪ್ರಕಟನೆ 14:6.

“ಘನವಂತನು ಆಶೀರ್ವದಿಸಲ್ಪಡುವನು” ಎಂಬ ಶೀರ್ಷಿಕೆಯುಳ್ಳ ಭಾಷಣವನ್ನು ಗಿಲ್ಯಡ್‌ ಶಾಲೆಯ ಶಿಕ್ಷಕರಾದ ಮೈಕಲ್‌ ಬರ್ನೆಟ್‌ ನೀಡಿದರು. ಈ ಭಾಷಣದಲ್ಲಿ “ತನ್ನ ಅಣ್ಣತಮ್ಮಂದಿರಲ್ಲಿ ಘನವಂತನಾಗಿದ್ದ” ಯೆಹೂದ ಕುಲದವನಾದ ಯಾಬೇಚನ ಉದಾರಹಣೆಯನ್ನು ತಿಳಿಸಿದರು. ಯಾಬೇಚನು ದೇವರಲ್ಲಿ “ನೀನು ನನ್ನನ್ನು ವಿಶೇಷವಾಗಿ ಆಶೀರ್ವದಿಸಿ ನನ್ನ ಪ್ರಾಂತವನ್ನು ವಿಸ್ತರಿಸಿ ನಿನ್ನ ಹಸ್ತದಿಂದ ನನ್ನನ್ನು ಹಿಡಿದು ಯಾವ ವೇದನೆಯೂ ಉಂಟಾಗದಂತೆ ನನ್ನನ್ನು ರಕ್ಷಿಸಬಾರದೇ” ಎಂದು ಪ್ರಾರ್ಥಿಸಿದನು.​—1 ಪೂರ್ವಕಾಲವೃತ್ತಾಂತ 4:9, 10.

ನಿರ್ದಿಷ್ಟ ವಿಷಯಗಳ ಕುರಿತು ಪ್ರಾರ್ಥಿಸಿದ ಯಾಬೇಚನ ಉದಾಹರಣೆ ವಿದ್ಯಾರ್ಥಿಗಳಿಗೆ ಒಂದು ಒಳ್ಳೇ ಮಾದರಿ. ಯಾವ ಉದ್ದೇಶಕ್ಕಾಗಿ ತಮಗೆ ಈ ತರಬೇತಿಯನ್ನು ನೀಡಲಾಯಿತೋ ಅದು ನೆರವೇರಲೆಂದು ಅವರು ಯೆಹೋವನಲ್ಲಿ ಬೇಡಬಹುದು. ಜೊತೆಗೆ ವೇದನೆಯಿಂದ ತಮ್ಮನ್ನು ಕಾಪಾಡೆಂದು ಪ್ರಾರ್ಥಿಸಬಹುದು. ಯಾವುದೇ ಅನಾಹುತಗಳು ಎದುರಾಗಬಾರದೆಂದು ಪ್ರಾರ್ಥಿಸುವುದು ಸರಿಯಲ್ಲದಿದ್ದರೂ ಅದರಿಂದಾಗಿ ಕುಂದಿಹೋಗದಂತೆ ಮತ್ತು ಸೈತಾನನ ದಾಳಿಗೆ ಬಿದ್ದುಹೋಗದಂತೆ ತಾಳಿಕೊಳ್ಳುವ ಶಕ್ತಿಯನ್ನು ತಮಗೆ ದಯಪಾಲಿಸು ಎಂದು ಕೇಳಿಕೊಳ್ಳಬಹುದು. ಯಾಬೇಚನ ಪ್ರಾರ್ಥನೆಯನ್ನು ಕೇಳಿದಂಥ ಯೆಹೋವ ದೇವರು ಖಂಡಿತ ಗಿಲ್ಯಡ್‌ ವಿದ್ಯಾರ್ಥಿಗಳ ಯಾಚನೆಯನ್ನು ಸಹ ಆಲಿಸುವನು.

“ನಿಮ್ಮ ಹುರುಪನ್ನು ನಂದಿಸಬೇಡಿ.” ಗಿಲ್ಯಡ್‌ ಶಾಲೆಯ ಶಿಕ್ಷಕರಾಗಿದ್ದ, ಟೀಚಿಂಗ್‌ ಕಮಿಟಿಗೆ ಸಹಾಯಕರಾಗಿರುವ ಮಾರ್ಕ್‌ ನೂಮ್ಯಾರ್‌ 1 ಥೆಸಲೊನೀಕ 5:16-19​ರ ಆಧಾರದ ಮೇಲೆ ತಮ್ಮ ಭಾಷಣವನ್ನು ನೀಡಿದರು. ವಿದ್ಯಾರ್ಥಿಗಳ ಹುರುಪನ್ನು ಬೆಂಕಿಗೆ ಹೋಲಿಸುತ್ತಾ, ಬೆಂಕಿ ಉರಿಯಲು ಹೇಗೆ ಇಂಧನ, ಆಮ್ಲಜನಕ ಮತ್ತು ತಾಪ ಅವಶ್ಯವೋ ಹಾಗೇಯೆ ವಿದ್ಯಾರ್ಥಿಗಳ ಹುರುಪು ನಂದದಿರಲು ಮೂರು ಅಂಶಗಳು ಅವಶ್ಯವೆಂದು ಹೇಳಿದರು.

ಮೊದಲಾಗಿ, “ಯಾವಾಗಲೂ ಹರ್ಷಿಸುತ್ತಾ ಇರಿ.” (1 ಥೆಸಲೊನೀಕ 5:16) ಯೆಹೋವನ ಮೆಚ್ಚುಗೆಯನ್ನು ಪಡೆದ ಬಗ್ಗೆ ಧ್ಯಾನಿಸುವ ಮೂಲಕ ವಿದ್ಯಾರ್ಥಿಗಳು ಆನಂದವನ್ನು ಪಡೆಯಬಹುದು. ಈ ಆನಂದವೇ ಹುರುಪಿಗೆ ಇಂಧನ. ಎರಡನೇದಾಗಿ, “ಎಡೆಬಿಡದೆ ಪ್ರಾರ್ಥನೆಮಾಡಿರಿ.” (1 ಥೆಸಲೊನೀಕ 5:17) ಪ್ರಾರ್ಥನೆಯೆನ್ನುವುದು ಹುರುಪಿಗೆ ಆಮ್ಲಜನಕವಿದ್ದಂತೆ. ತರಾತುರಿಯಲ್ಲಿ ಪ್ರಾರ್ಥಿಸದೆ ನಮ್ಮ ಹೃದಯಾದಾಳದ ಭಾವನೆಗಳನ್ನು ಯೆಹೋವನಿಗೆ ಒಪ್ಪಿಸಬೇಕು. ಮೂರನೇದಾಗಿ, “ಎಲ್ಲ ವಿಷಯಗಳಲ್ಲಿ ಕೃತಜ್ಞತೆಯನ್ನು ಸಲ್ಲಿಸಿರಿ.” (1 ಥೆಸಲೊನೀಕ 5:18) ಕೃತಜ್ಞತೆಯು ತಾಪವಿದ್ದಂತೆ. ಯೆಹೋವನೊಂದಿಗಿನ, ಸಹೋದರರೊಂದಿಗಿನ ನಮ್ಮ ಸಂಬಂಧಕ್ಕೆ ಅದು ಬೆಚ್ಚಗಿನ ಭಾವ ನೀಡುತ್ತದೆ. “ನಿಂದನೆ ಹುರುಪನ್ನು ನಂದಿಸುತ್ತದೆ. ಹಾಗಾಗಿ ಅದರ ಬದಲಿಗೆ ಗಣ್ಯತಾಭಾವ ಸದಾ ನಿಮ್ಮಲ್ಲಿರಲಿ” ಎಂದು ಸಹೋದರ ನೂಮ್ಯಾರ್‌ ಹೇಳಿದರು.

“ಆಕಾಶದೊಂದಿಗೆ ಯೆಹೋವನನ್ನು ಸ್ತುತಿಸಿರಿ.” ಸೂರ್ಯ, ಚಂದ್ರ, ನಕ್ಷತ್ರಗಳು ಯೆಹೋವನಿಗೆ ಮಹಿಮೆ ಸಲ್ಲಿಸುತ್ತಿವೆ ಎಂದು ತೋರಿಸುವ ಬೈಬಲ್‌ ವಚನಗಳನ್ನು ಹೇಳಿ ಸ್ಯಾಮ್‌ ರಾಬರ್ಸನ್‌ ತಮ್ಮ ಭಾಷಣವನ್ನು ಆರಂಭಿಸಿದರು. (ಕೀರ್ತನೆ 19:1; 89:37; 148:3) ಅವುಗಳಂತೆ ವಿದ್ಯಾರ್ಥಿಗಳು ಸಹ ಯೆಹೋವನಿಗೆ ಮಹಿಮೆ ತರುವ ಸುಯೋಗವನ್ನು ಪಡೆದಿದ್ದಾರೆಂದು ಹೇಳಿದರು. ಜೊತೆಗೆ, ಅವರ ಭಾಷಣದಲ್ಲಿ, ವಿದ್ಯಾರ್ಥಿಗಳು ಇತ್ತೀಚೆಗೆ ತಮ್ಮ ಸೇವೆಯಲ್ಲಿ ಪಡೆದಂಥ ಅನುಭವಗಳ ಪುನರಭಿನಯಗಳಿದ್ದವು. ಉದಾಹರಣೆಗೆ, ಒಮ್ಮೆ ಕಾಲಿಲ್ಲದ ವ್ಯಕ್ತಿಯೊಬ್ಬನು ರಸ್ತೆ ದಾಟುವಂತೆ ಗಿಲ್ಯಡ್‌ ವಿದ್ಯಾರ್ಥಿಯೊಬ್ಬ ತನ್ನ ಕಾರನ್ನು ನಿಲ್ಲಿಸಿದ್ದನು. ಅದಕ್ಕಾಗಿ ಕೃತಜ್ಞತೆಯನ್ನು ಹೇಳಿದ ವ್ಯಕ್ತಿಗೆ ವಿದ್ಯಾರ್ಥಿಯೂ ಸಹ ಗಣ್ಯತೆ ವ್ಯಕ್ತಪಡಿಸಿದ್ದನು. ಹೀಗೆ ಆರಂಭವಾದ ಅವರ ಸಂಭಾಷಣೆ, ಕಾಲಿಲ್ಲದ ಆ ವ್ಯಕ್ತಿ ಬೈಬಲ್‌ ಅಧ್ಯಯನ ಒಪ್ಪಿಕೊಳ್ಳುವವರೆಗೆ ಮುಂದುವರಿಯಿತು. ನಂತರದ ವಾರಗಳಲ್ಲಿ ಬೈಬಲ್‌ ಅಧ್ಯಯನ ನಡೆಸುವಾಗ ಆ ವ್ಯಕ್ತಿಯನ್ನು ಭೇಟಿಮಾಡಲು ಬಂದವರಿಗೆ ಸಹ ಸಾಕ್ಷಿ ನೀಡುವ ಅವಕಾಶ ಸಿಕ್ಕಿತ್ತು. ಆ ಒಂದು ಸಂಭಾಷಣೆಯಿಂದಾಗಿ ಈಗ ಎಂಟು ಬೈಬಲ್‌ ಅಧ್ಯಯನಗಳು ಆರಂಭವಾಗಿವೆ.

“ದೈವಿಕ ಶಿಕ್ಷಣದಿಂದ ಇನ್ನಷ್ಟು ಬಲವುಳ್ಳವರಾಗಿ.” ಪಬ್ಲಿಷಿಂಗ್‌ ಕಮಿಟಿಯ ಸಹಾಯಕರಾದ ಡಾನಲ್ಡ್‌ ಗಾರ್ಡನ್‌, ಶಾಲೆಗೆ ಹಾಜರಾಗಿದ್ದ ಇಬ್ಬರು ದಂಪತಿಗಳನ್ನು ಸಂದರ್ಶಿಸಿದರು. ಅವರಲ್ಲಿ ಒಬ್ಬ ಸಹೋದರ 5 ತಿಂಗಳ ತರಬೇತಿಯಲ್ಲಿ ಎಫೆಸ 3:16-20​ಕ್ಕೆ ಹೆಚ್ಚು ಒತ್ತುನೀಡಲಾಯಿತೆಂದು ನೆನಪಿಸಿಕೊಂಡನು. ಇದರಿಂದ ಯೆಹೋವನ ಸೇವೆಯಲ್ಲಿ ಪ್ರತಿಯೊಬ್ಬರಿಗೆ ಮಾಡಲು ಇನ್ನು ಸಾಕಷ್ಟು ಕೆಲಸವಿದೆ ಎಂಬುದನ್ನು ಗ್ರಹಿಸಿ ದೀನತೆಯಿಂದ, ಸ್ನೇಹಪರರಾಗಿ ತಮ್ಮ ಸೇವೆಯನ್ನು ಮುಂದುವರಿಸುವ ಮೂಲಕ ‘ಬಲಗೊಳ್ಳುವಂತೆ’ ಸಹಾಯ ಸಿಕ್ಕಿತು. ಆ ಸಂದರ್ಶನದಲ್ಲಿ ಸಹೋದರಿಯೊಬ್ಬಳು, ಶಾಲೆಯ ಶಿಕ್ಷಕರು ಹೇಳಿದ ಉದಾಹರಣೆಯನ್ನು ನೆನಪಿಸಿಕೊಂಡಳು. ಚಿಕ್ಕ ಗಾಜಿನ ಪಾತ್ರೆಯಲ್ಲಿ ಬೆಳವಣಿಗೆಗೆ ಜಾಗವಿಲ್ಲದೆ ಒದ್ದಾಡುವ ದೊಡ್ಡ ಮೀನಾಗಿರುವ ಬದಲು ದೊಡ್ಡ ಸಾಗರದಲ್ಲೊಂದು ಸಣ್ಣ ಮೀನಾಗಿರುವುದು ಲೇಸೆನ್ನುವುದೇ ಆ ಉದಾಹರಣೆಯಾಗಿತ್ತು. ಸಹೋದರಿ ಮುಂದುವರಿಸಿ ಹೇಳಿದ್ದು: “ಇದರಿಂದ ನಾನು ಕಲಿತಿದ್ದೇನೆಂದರೆ ಯೆಹೋವನ ಸಂಸ್ಥೆಯಲ್ಲಿ ನಾನು ದೀನಳಾಗಿದ್ದರೆ ಮಾತ್ರ ಅಧ್ಯಾತ್ಮಿಕ ಪ್ರಗತಿ ಸಾಧ್ಯ.”

“ನಿಮ್ಮ ಹಿತಕ್ಕಾಗಿ ಯೆಹೋವನು ನಿಮ್ಮನ್ನು ನೆನಪುಮಾಡಿಕೊಳ್ಳಲಿ.” ಪದವಿ ಪ್ರಧಾನ ಕಾರ್ಯಕ್ರಮದ ಮುಖ್ಯ ಭಾಷಣವನ್ನು ಆಡಳಿತ ಮಂಡಲಿಯ ಸದಸ್ಯರಾದ ಮಾರ್ಕ್‌ ಸ್ಯಾ೦ಡರ್‌ಸನ್‌ ನೀಡಿದರು. “ನನ್ನ ದೇವರೇ, ನನ್ನ ಹಿತಕ್ಕಾಗಿ ಇದನ್ನು ನೆನಪುಮಾಡಿಕೋ” (ನೆಹೆಮೀಯ 5:19; 13:31) ಎಂಬ ವಿಷಯದ ಆಧಾರದ ಮೇಲೆ ಅವರ ಭಾಷಣವಿತ್ತು. ಇದು ನೆಹೆಮೀಯನ ಪ್ರಾರ್ಥನೆಯಾಗಿತ್ತು. ಯೆಹೋವ ದೇವರು ತನ್ನನ್ನು, ತನ್ನ ಸೇವೆಯನ್ನು ಮರೆತುಹೋಗುತ್ತಾನೆಂಬ ಭಯದಿಂದ ನೆಹೆಮೀಯನು ಹೀಗೆ ಪ್ರಾರ್ಥಿಸಲಿಲ್ಲ. ಬದಲಾಗಿ, ತನ್ನ ಹಿತಕ್ಕಾಗಿ ತನ್ನನ್ನು ಪ್ರೀತಿಯಿಂದ ದೇವರು ನೆನಪಿಸಿಕೊಳ್ಳಲಿ ಮತ್ತು ಆಶೀರ್ವದಿಸಲಿ ಎನ್ನುವುದು ಅವನ ವಿನಂತಿಯಾಗಿತ್ತು.

ಇದೇ ರೀತಿಯಲ್ಲಿ, ವಿದ್ಯಾರ್ಥಿಗಳು ಗಿಲ್ಯಡ್‌ ಶಾಲೆಯಲ್ಲಿ ತಾವು ಕಲಿತ ಮೂಲ ಪಾಠಗಳನ್ನು ಜೀವನದಲ್ಲಿ ಅನ್ವಯಿಸಿಕೊಂಡರೆ ಯೆಹೋವನು ಪ್ರೀತಿಯಿಂದ ತಮ್ಮನ್ನು ನೆನಪಿಸಿಕೊಳ್ಳುವನು ಎಂಬ ಭರವಸೆಯಿಂದಿರಬಹುದು. ಉದಾಹರಣೆಗೆ, ಯೆಹೋವನ ಸೇವೆ ಮಾಡುವಂತೆ ಅವರನ್ನು ಉತ್ತೇಜಿಸುವ ಪ್ರಪ್ರಥಮ ಕಾರಣವು ಆತನ ಕಡೆಗಿರುವ ತಮ್ಮ ಪೂರ್ಣ ಹೃದಯದ ಪ್ರೀತಿಯಾಗಿರಬೇಕು. (ಮಾರ್ಕ 12:30) ಅಬ್ರಹಾಮನು ಯೆಹೋವನನ್ನು ಪೂರ್ಣ ಹೃದಯದಿಂದ ಪ್ರೀತಿಸುತ್ತಿದ್ದನು. ಆದ್ದರಿಂದ ಯೆಹೋವನು ಅವನನ್ನು ಪ್ರೀತಿಯಿಂದ ನೆನಪಿಸಿಕೊಂಡನು. ಅಬ್ರಹಾಮನು ತೀರಿಕೊಂಡ ಸಾವಿರಾರು ವರ್ಷಗಳಾದ ಮೇಲೂ “ನನ್ನ ಸ್ನೇಹಿತ” ಎಂದು ಯೆಹೋವನು ಅವನನ್ನು ಪ್ರೀತಿಯಿಂದ ಕರೆದನು.​—ಯೆಶಾಯ 41:8.

ಮುಂದುವರಿಸುತ್ತಾ ಸಹೋದರ ಸ್ಯಾಂಡರ್‌ಸನ್‌ ವಿದ್ಯಾರ್ಥಿಗಳಿಗೆ ತಮ್ಮ ನೆರೆಯವರನ್ನು, ಅದರಲ್ಲೂ ಮುಖ್ಯವಾಗಿ ತಮ್ಮ ಕ್ರೈಸ್ತ ಸಹೋದರ ಸಹೋದರಿಯರನ್ನು ಪ್ರೀತಿಸಬೇಕೆಂದು ಒತ್ತಿಹೇಳಿದರು. (ಮಾರ್ಕ 12:31) “ಕಳ್ಳರ ಕೈಗೆ ಸಿಕ್ಕಿಬಿದ್ದ ಮನುಷ್ಯನಿಗೆ ನೆರೆಯವನಾದ” ಸಮಾರ್ಯದವನಂತೆ ವಿದ್ಯಾರ್ಥಿಗಳು ಕೂಡ ಸಹಾಯದ ಅಗತ್ಯವಿರುವವರಿಗೆ ನೆರವಾಗಲು ಒಂದು ಹೆಜ್ಜೆ ಮುಂದಿರಬೇಕು. (ಲೂಕ 10:36) ಜಿಲ್ಲಾ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಿದ ಗಿಲ್ಯಡ್‌ ಪದವಿದರರಾದ ಸಹೋದರ ನಿಕೋಲಸ್‌ ಕೊವಲಕ್‌ರವರ ಉದಾಹರಣೆಯನ್ನು ತಿಳಿಸುತ್ತಾ ಈ ವಿಷಯವನ್ನು ಮುಂದುವರಿಸಿದರು. ಸಹೋದರ ಕೊವಲಕ್‌ ಒಬ್ಬ ಪ್ರೇಮಮಯಿ, ಸ್ನೇಹಮಯಿ ವ್ಯಕ್ತಿಯಾಗಿದ್ದರು. ಒಮ್ಮೆ ಅವರು ಸಂಚರಣ ಮೇಲ್ವಿಚಾರಕರೊಬ್ಬರನ್ನು ಹಾಗೂ ಅವರ ಪತ್ನಿಯನ್ನು ಪ್ರೋತ್ಸಾಹಿಸುತ್ತಾ “ದಿನದ, ವಾರದ, ತಿಂಗಳ, ವರ್ಷದ ಮೊದಲಲ್ಲೇ” ತಮ್ಮ ಸೇವೆಗಾಗಿ ಮುಡಿಪಾಗಿಡಬೇಕಾದ ಸಮಯವನ್ನು ಮಾಡಿ ಮುಗಿಸಿದರೆ ಉತ್ತಮವೆಂದರು. ಹೀಗೆ ಹೇಳಿ ಕೆಲವು ದಿನಗಳವರೆಗೆ ಸಹೋದರಿಯನ್ನು ಶುಶ್ರೂಷೆಯಲ್ಲಿ ಗಮನಿಸಿದ ಸಹೋದರ ಕೊವಲಾಕ್‌ ಅವರನ್ನು ಕರೆದು “ನಾನು ಹೇಳಿದ್ದನ್ನು ಮರೆತುಬಿಡಿ. ನೀವೀಗಾಗಲೆ ಅಗತ್ಯಕ್ಕಿಂತ ಹೆಚ್ಚು ಮಾಡುತ್ತಿದ್ದೀರಾ. ಯೆಹೋವನ ಸೇವೆಯಲ್ಲಿ ನೀವಿನ್ನೂ ತುಂಬ ಕಾಲ ಉಳಿಯಬೇಕು. ಹಾಗಾಗಿ ಸ್ವಲ್ಪ ನಿಧಾನ” ಎಂದು ಹೇಳಿದರು. ಅವರು ಆಡಿದ ಆ ಅನುಕಂಪದ ಮಾತುಗಳು ಸಹೋದರಿಗೆ ತಮ್ಮ ಪೂರ್ಣ ಸಮಯದ ಸೇವೆಯನ್ನು ಎಷ್ಟೋ ದಶಕಗಳವರೆಗೆ ಮುಂದುವರಿಸಲು ನೆರವಾದವು.

ತಾವು ಕಲಿತ ವಿಷಯಗಳನ್ನು ಇತರರಿಗೆ ಕಲಿಸುವ ಮತ್ತು ತರಬೇತಿ ನೀಡುವ ಮೂಲಕ ಶಾಲೆಯ ಉದ್ದೇಶವನ್ನು ನೆರವೇರಿಸುವಂತೆ ವಿದ್ಯಾರ್ಥಿಗಳಲ್ಲಿ ಕೇಳಿಕೊಳ್ಳುತ್ತಾ ಸಹೋದರ ಸ್ಯಾಂಡರ್‌ಸನ್‌ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು. (2 ತಿಮೊಥೆಯ 2:2) ಹೀಗೆ, ಯೆಹೋವನು ತಮ್ಮನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾನೆಂಬ ಭರವಸೆಯಿಂದ ತಮ್ಮ ತಮ್ಮ ನೇಮಕವನ್ನು ಪೂರೈಸುವಾಗ ವಿದ್ಯಾರ್ಥಿಗಳು ಸಹೋದರ ಬಳಗವನ್ನು ಬಲಪಡಿಸಲು ಶಕ್ತರಾಗಬಲ್ಲರು.​—ಕೀರ್ತನೆ 20:1-5.

ಮುಕ್ತಾಯ. ವಿದ್ಯಾರ್ಥಿಗಳು ಶಾಲೆಯ ಕಡೆಗಿನ ತಮ್ಮ ಕೃತಜ್ಞತೆಯನ್ನು ಒಂದು ಪತ್ರದಲ್ಲಿ ವ್ಯಕ್ತಪಡಿಸಿದ್ದರು. ಅದನ್ನು ಅವರೆಲ್ಲರ ಪರವಾಗಿ ಪದವಿ ವಿತರಣೆಯ ನಂತರ ಒಬ್ಬ ವಿದ್ಯಾರ್ಥಿ ಓದಿ ತಿಳಿಸಿದರು. 15 ವಿದ್ಯಾರ್ಥಿಗಳ ತಂಡವೊಂದು ಯೆಹೋವನಿಗೆ ಹಾಡಿರಿ ಪುಸ್ತಕದಿಂದ “ಕುರಿಪಾಲರು—ಮನುಷ್ಯರಲ್ಲಿ ದಾನಗಳು” ಎಂಬ 123ನೇ ಗೀತೆಯನ್ನು ಇಂಗ್ಲಿಷ್‌ನಲ್ಲಿ ಹಾಡಿ ಕಾರ್ಯಕ್ರಮಕ್ಕೆ ಸೊಗಸಾದ ಮುಕ್ತಾಯವನ್ನು ನೀಡಿದರು.