134ನೇ ಗಿಲ್ಯಡ್ ಶಾಲೆಯ ಪದವಿ ಪ್ರದಾನ ಸಮಾರಂಭ—“ಅವರ ನಂಬಿಕೆಯನ್ನು ಅನುಕರಿಸಿರಿ”
134ನೇ ಗಿಲ್ಯಡ್ ಶಾಲೆಯ ಪದವಿ ಪ್ರದಾನ ಸಮಾರಂಭ ಮಾರ್ಚ್ 9, 2013ರಂದು ನ್ಯೂಯಾರ್ಕಿನ ಪ್ಯಾಟರ್‌ಸನ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಎಜುಕೇಷನಲ್ ಸೆಂಟರ್‌ನಲ್ಲಿ ಜರುಗಿತು. ಈ ಶಾಲೆ ಅನುಭವೀ ಪ್ರಚಾರಕರಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಸುವಾರ್ತೆ ಸಾರಲು ತರಬೇತಿ ಕೊಡುತ್ತದೆ. ಗಿಲ್ಯಡ್ ವಿದ್ಯಾರ್ಥಿಗಳ ಜೊತೆ ಅವರ ಕುಟುಂಬದವರು, ಸ್ನೇಹಿತರು ಮತ್ತು ಅತಿಥಿಗಳು ಸೇರಿ, ಒಟ್ಟು 9,912 ಮಂದಿ ಈ ಸಮಾರಂಭಕ್ಕೆ ಹಾಜರಾದರು.
ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಸದಸ್ಯರಾದ ಸಹೋದರ ಮಾರ್ಕ್ ಸ್ಯಾಂಡರ್‌ಸನ್ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಗಿಲ್ಯಡ್ ಶಾಲೆ ಫೆಬ್ರವರಿ 1, 1943ರಂದು ಅಂದರೆ, ಸುಮಾರು 70 ವರ್ಷಗಳ ಹಿಂದೆ ಉದ್ಘಾಟನೆ ಆಯಿತು ಎಂದು ಸ್ಯಾಂಡರ್‌ಸನ್ ಎಲ್ಲರಿಗೂ ನೆನಪಿಸಿದರು. ಆಗ ಗಿಲ್ಯಡ್ ಶಾಲೆಯ ಅಧ್ಯಕ್ಷರಾಗಿದ್ದ ಸಹೋದರ ನೇತನ್ ನಾರ್ ಈ ಶಾಲೆಯ ಉದ್ದೇಶವನ್ನು ಹೀಗೆ ಹೇಳಿದ್ದರು, “ಹೆಚ್ಚು ರಾಜ್ಯ ಪ್ರಚಾರಕರಿದ್ದರೆ ಇನ್ನು ಸಾವಿರಾರು ಜನರಿಗೆ [ಸುವಾರ್ತೆ] ತಲುಪಿಸಬಹುದು. ದೇವರ ದಯೆಯಿಂದ ಪ್ರಚಾರಕರ ಸಂಖ್ಯೆ ಖಂಡಿತ ಬೆಳೆಯುತ್ತದೆ.” ಸಹೋದರ ನಾರ್‌ರ ನಂಬಿಕೆ ಹುಸಿ ಆಯಿತಾ?
ಈ ಉದಾಹರಣೆ ಪರಿಗಣಿಸಿ, ಗಿಲ್ಯಡ್ ಶಾಲೆ ಆರಂಭಗೊಂಡ ಸ್ವಲ್ಪದರಲ್ಲೇ ಸಹೋದರ ನಾರ್ ಎಲ್ಲೆಲ್ಲಿ ಗಿಲ್ಯಡ್ ಮಿಷನೆರಿಗಳನ್ನು ನೇಮಿಸಬಹುದೆಂದು ತಿಳಿಯಲು ಮೆಕ್ಸಿಕೋಗೆ ಭೇಟಿ ನೀಡಿದರು. ಆಗ ಆ ಪ್ರದೇಶದ ಸುಮಾರು 240 ಕಿಲೋಮೀಟರ್ ವ್ಯಾಪ್ತಿಯಲ್ಲಿದ್ದ ಎಲ್ಲ ಸಹೋದರರನ್ನು ಒಂದು ಕೂಟಕ್ಕೆ ಕರೆಯಲಾಯಿತು. 400 ಸಹೋದರರು ಆ ಕೂಟಕ್ಕೆ ಹಾಜರಾದರು. ಮೊದಲ ಗಿಲ್ಯಡ್ ಪದವೀಧರರು ಈ ಪ್ರದೇಶಕ್ಕೆ ಬಂದು ಈಗ ಸುಮಾರು 70 ವರ್ಷಗಳು ಗತಿಸಿವೆ. ಒಂದು ವೇಳೆ ಈಗ ಅದೇ ಸ್ಥಳದಲ್ಲಿ ಆ ರೀತಿಯ ಕೂಟಕ್ಕೆ ಆಮಂತ್ರಿಸುವುದಾದರೆ 2,00,000ಕ್ಕಿಂತಲೂ ಹೆಚ್ಚಿನ ಸಹೋದರರು ಬರುವುದಂತೂ ಖಂಡಿತ!
“ಅದೇನು ನಿನ್ನ ಕೈಯಲ್ಲಿರುವುದು?” ಅಮೆರಿಕಾದ ಬ್ರಾಂಚ್ ಕಮಿಟಿಯ ಸದಸ್ಯರಾದ ಸಹೋದರ ಆ್ಯಂಥನಿ ಗ್ರಿಫನ್ ವಿಮೋಚನಕಾಂಡ 4:2ರ ಮೇರೆಗೆ ಈ ಅಂಶವನ್ನು ವಿವರಿಸಿದರು. ಆ ವೃತ್ತಾಂತದಲ್ಲಿ ದೇವರು ಮೋಶೆಯನ್ನು “ಅದೇನು ನಿನ್ನ ಕೈಯಲ್ಲಿರುವದು?” ಎಂದು ಕೇಳಿದನು, ಅದಕ್ಕೆ ಮೋಶೆ “ಕೋಲು” ಎಂದನು. ಆ ಕೋಲು ಯೆಹೋವನು ಮೋಶೆಗೆ ಕೊಟ್ಟ ಅಧಿಕಾರ ಮತ್ತು ಆಜ್ಞೆಯನ್ನು ಸೂಚಿಸಿತು. (ವಿಮೋಚನಕಾಂಡ 4:5) ದೇವರ ಮಹಿಮೆಗಾಗಿ ತನ್ನ ಅಧಿಕಾರವನ್ನು ಉಪಯೋಗಿಸಿದಾಗೆಲ್ಲಾ ಮೋಶೆ ಯಶಸ್ವಿಯಾಗಿದ್ದನು. ಆದರೆ “ಮೆರೀಬಾ” ಎಂಬಲ್ಲಿ ಆ ಅಧಿಕಾರವನ್ನು ತನ್ನ ಗೌರವಕ್ಕಾಗಿ ಮತ್ತು ತನ್ನ ಸಹೋದರರನ್ನು ದೂಷಿಸಲಿಕ್ಕಾಗಿ ಉಪಯೋಗಿಸಿದಾಗ ಯೆಹೋವನನ್ನು ಅಸಂತೋಷಪಡಿಸಿದನು.—ಅರಣ್ಯಕಾಂಡ 20:9-13.
ಮೋಶೆಯ ಕೋಲನ್ನು ಸಹೋದರ ಗ್ರಿಫನ್, ಗಿಲ್ಯಡ್ ವಿದ್ಯಾರ್ಥಿಗಳು ಪಡೆಯುವ ಆಧ್ಯಾತ್ಮಿಕ ತರಬೇತಿಗೆ ಹೋಲಿಸಿದರು. ಆದರೆ ಆ ತರಬೇತಿಯನ್ನು ಇತರರ ಮೇಲೆ ದಬ್ಬಾಳಿಕೆ ಮಾಡಲು ಉಪಯೋಗಿಸಬಾರದೆಂದು ಎಚ್ಚರಿಸಿದರು. ಅವರು ವಿದ್ಯಾರ್ಥಿಗಳಿಗೆ ಹೇಳಿದ್ದು, “ದೇವರಿಗೆ ಗೌರವ ಮತ್ತು ಮಹಿಮೆ ತರಲು ನೀವು ಪಡೆದಿರುವ ತರಬೇತಿಯನ್ನು ಉಪಯೋಗಿಸಿ. ಆಗ ನೀವು ಯಾರಿಗೆ ಸೇವೆ ಮಾಡುತ್ತೀರೋ ಅವರಿಗೆ ಬಲು ಬೆಲೆಯುಳ್ಳವರಾಗುತ್ತೀರಿ.”
“ಮನ್ನವನ್ನು ನೆನಪು ಮಾಡಿಕೊಳ್ಳಿರಿ.” ಆಡಳಿತ ಮಂಡಲಿಯ ಸದಸ್ಯರಾದ ಸಹೋದರ ಸ್ಟೀಫನ್ ಲೆಟ್, ಯೆಹೋವನು ಇಸ್ರಾಯೇಲ್ಯರಿಗೆ ಅದ್ಭುತವಾಗಿ ಒದಗಿಸಿದ ಮನ್ನದಿಂದ ನಾವು ಕಲಿಯಬಹುದಾದ ನಾಲ್ಕು ಪಾಠಗಳನ್ನು ತಿಳಿಸಿದರು.
ಕಷ್ಟಪಟ್ಟು ಕೆಲಸಮಾಡುತ್ತಾ ಇರಿ. (ಅರಣ್ಯಕಾಂಡ 11:8) ಇಸ್ರಾಯೇಲ್ಯರು ಮನ್ನವನ್ನು ಮುಂಜಾನೆಯೇ ಹೋಗಿ ಬೇಗ ಬೇಗ ಸಂಗ್ರಹಿಸಬೇಕಿತ್ತು, ನಂತರ ಅದರಿಂದ ಅಡಿಗೆ ಮಾಡಬೇಕಿತ್ತು. ಹೀಗೆ ಮನ್ನ ಪಡೆಯಲು ಇಸ್ರಾಯೇಲ್ಯರು ತುಂಬ ಕಷ್ಟಪಟ್ಟು ಕೆಲಸಮಾಡಬೇಕಿತ್ತು.—ವಿಮೋಚನಕಾಂಡ 16:21.
ಯೆಹೋವನ ಒದಗಿಸುವಿಕೆಗಳ ಬಗ್ಗೆ ಎಂದಿಗೂ ಗುಣುಗುಟ್ಟಬೇಡಿ. (ಅರಣ್ಯಕಾಂಡ 11:5, 6) ಇಸ್ರಾಯೇಲ್ಯರು ಮನ್ನದ ಬಗ್ಗೆ ತೋರಿಸಿದ ಅಸಂತೃಪ್ತಿಯನ್ನು ಯೆಹೋವನು ತನ್ನ ವಿರುದ್ಧ ಗುಣುಗುಟ್ಟುತ್ತಿರುವಂತೆ ವೀಕ್ಷಿಸಿದನು. ಅಂದಿನ ಮನ್ನದಂತೆ ಇಂದಿನ ಆಧ್ಯಾತ್ಮಿಕ ಆಹಾರ ಕೆಲವೊಮ್ಮೆ ನಮಗೆ ರುಚಿಕರವಾಗಿಲ್ಲದೇ ಇರಬಹುದು, ಆದರೆ ಅದು ಯಾವಾಗಲೂ ನಮ್ಮನ್ನು ಆಧ್ಯಾತ್ಮಿಕವಾಗಿ ಪೋಷಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದ್ದರಿಂದ ಯೆಹೋವನ ಎಲ್ಲಾ ಒದಗಿಸುವಿಕೆಗಳಿಗಾಗಿ ನಾವು ನಿತ್ಯ ನಿರಂತರಕ್ಕೂ ಕೃತಜ್ಞರಾಗಿರಬೇಕು.
ನಿಮ್ಮ ಅಗತ್ಯತೆಯನ್ನು ಯೆಹೋವನು ಖಂಡಿತ ಒದಗಿಸುವನು ಎಂದು ಪೂರ್ಣ ಭರವಸೆಯಿಂದಿರಿ. ದೇವರು ಮನ್ನವನ್ನು ಪ್ರತಿ ದಿನ ಒದಗಿಸುತ್ತಿದ್ದನು, ಸಬ್ಬತ್ತಿನ ಹಿಂದಿನ ದಿನವಂತೂ ಎರಡರಷ್ಟು ಒದಗಿಸುತ್ತಿದ್ದನು. (ವಿಮೋಚನಕಾಂಡ 16:22-26) ಅಂದು ಯೆಹೋವನು ಅವರಿಗೆ ಒದಗಿಸಿದಂತೆ ಇಂದು ನಮಗೂ ಒದಗಿಸುತ್ತಾನೆ ಎಂದು ನಾವು ಪೂರ್ಣ ಭರವಸೆಯಿಂದಿರುತ್ತೇವೆ.—ಮತ್ತಾಯ 6:11.
ಅವಿಧೇಯತೆಯಿಂದ ನಮಗೇನೂ ಪ್ರಯೋಜನವಾಗುವುದಿಲ್ಲ. (ವಿಮೋಚನಕಾಂಡ 16:19, 20, 25-28) ಯೆಹೋವನ ಮಾತನ್ನು ಮೀರಿ ಸಬ್ಬತ್ತಿನ ದಿನ ಮನ್ನವನ್ನು ಒಟ್ಟುಗೂಡಿಸಲು ಹೋದವರಿಗೆ ಏನೂ ಸಿಗಲಿಲ್ಲ, ಜೊತೆಗೆ, ಅವರು ಯೆಹೋವನ ಅಂಗೀಕಾರವನ್ನೂ ಪಡೆಯಲಿಲ್ಲ. ವಾರದ ಮೊದಲ ಐದು ದಿನಗಳಲ್ಲಿ ಯಾರೆಲ್ಲಾ ದೇವರ ಮಾತನ್ನು ಕೇಳದೆ ತಮ್ಮ ಒಂದು ದಿನದ ಅಗತ್ಯಕ್ಕಿಂತ ಹೆಚ್ಚು ಮನ್ನ ಶೇಖರಿಸಿದರೋ ಅವರೆಲ್ಲರ ಮನ್ನ, ಹುಳಬಿದ್ದು ನಾರುತ್ತಿತ್ತು.
ಮನ್ನದಿಂದ ಕಲಿತ ಪಾಠಗಳನ್ನು ನೆನಪಿಟ್ಟುಕೊಳ್ಳುವಂತೆ ಸಹೋದರ ಲೆಟ್ ಉತ್ತೇಜಿಸಿದರು. ಹೀಗೆ ಮಾಡಿದರೆ, ಯೆಹೋವನು ‘ಪರಲೋಕದ ದ್ವಾರಗಳನ್ನು ತೆರೆದು ನಿಮ್ಮಲ್ಲಿ ಸ್ಥಳಹಿಡಿಯಲಾಗದಷ್ಟು ಸುವರವನ್ನು ಸುರಿಯುವನು’ ಎಂಬ ಆಶ್ವಾಸನೆಯನ್ನು ಕೊಟ್ಟರು.—ಮಲಾಕಿಯ 3:10.
“ಹೊಸ ಲೋಕದಲ್ಲಿ ಜೀವಿಸಲು ಸಿದ್ಧರಾಗಿರ್ರಿ.” ನಾವೆಲ್ಲರೂ ಹೊಸ ಲೋಕದಲ್ಲಿ ಜೀವಿಸಲು ಹಾತೊರೆಯುತ್ತೇವೆ, ಹಂಬಲಿಸುತ್ತೇವೆ ಅನ್ನುವುದೇನೋ ನಿಜ. ಆದರೆ ಅಲ್ಲಿ ಜೀವಿಸಲು ಎಲ್ಲಾ ತಯಾರಿ ಮಾಡಿಕೊಂಡು ಸಿದ್ಧರಾಗಿದ್ದೇವಾ? ಅಂತ ನಮ್ಮನ್ನು ನಾವೇ ಕೇಳಿಕೊಳ್ಳುವುದು ತುಂಬ ಪ್ರಾಮುಖ್ಯ. ನಾವು ಸಿದ್ಧರಾಗಿರಲು ‘ಸ್ವಸ್ಥಚಿತ್ತರಾಗಿರಬೇಕು ಎಂದು ದೇವಪ್ರಭುತ್ವಾತ್ಮಕ ಶಾಲೆಗಳ ಉಸ್ತುವಾರಿ ವಹಿಸಿಕೊಂಡಿರುವ ಸಹೋದರ ವಿಲಿಯಮ್ ಸ್ಯಾಮುವೆಲ್‌ಸನ್ ಹೇಳಿದರು.’—1 ಪೇತ್ರ 4:7
ಅಪರಿಪೂರ್ಣತೆಯ ಮಧ್ಯದಲ್ಲೂ ನಾವು ನಡೆದುಕೊಳ್ಳುವ ರೀತಿಯಿಂದ ನಮ್ಮ ಸ್ವಸ್ಥಚಿತ್ತತೆ ತಿಳಿದು ಬರುತ್ತದೆ. ನಮ್ಮ ಎಲ್ಲ ತಪ್ಪುಗಳಿಗೆ ಸೈತಾನನನ್ನು ಅಥವಾ ಈ ಲೋಕವನ್ನು ಯಾವಾಗಲೂ ನಿಂದಿಸುತ್ತಿರಬಾರದು. ಹೊಸ ಲೋಕದಲ್ಲಿ ದೇವರು ಇಂಥ ಕೆಟ್ಟ ಪ್ರಭಾವ ಬೀರುವ ವಿಷಯಗಳನ್ನು ತೆಗೆದು ಹಾಕುವಾಗ ನಾವು ನಮ್ಮ ತಪ್ಪು ಯೋಚನೆಗಳನ್ನು ಅಥವಾ ಲೋಪ ದೋಷಗಳನ್ನು ಸರಿಪಡಿಸಿಕೊಳ್ಳುತ್ತೇವೆ ಎಂದು ಸಹ ಹೇಳಬಾರದು. ನಮ್ಮಲ್ಲಿನ ನಕಾರಾತ್ಮಕ ಗುಣಗಳನ್ನು ಅಂದರೆ ಸ್ವಾರ್ಥದಂತಹ ಗುಣಗಳನ್ನು ಬಿಟ್ಟುಬಿಟ್ಟು “ಹೊಸ ವ್ಯಕ್ತಿತ್ವವನ್ನು ಧರಿಸಿಕೊಳ್ಳಬೇಕು.”—ಎಫೆಸ 4:24.
“ನಿಮ್ಮ ಪೆನ್ ಕೆಳಗಿಡಿ.” ಗಿಲ್ಯಡ್ ಬೋಧಕರಾದ ಸಹೋದರ ಮಾರ್ಕ್ ನೂಮರ್‌ರವರು ಪೆನ್ ಬಗ್ಗೆ ದೃಷ್ಟಾಂತ ನೀಡಿದರು. ಅದರಲ್ಲಿ ಅವರು ಪೆನ್ ಅನ್ನು ‘ನಮ್ಮ ಜೀವನವನ್ನು ನಾವೇ ಬರೆಯಬೇಕು ಅಥವಾ ರೂಪಿಸಬೇಕು ಎಂಬ ನಮ್ಮ ಬಯಕೆಗೆ’ ಹೋಲಿಸಿದರು. ಆದರೆ ನಮ್ಮ ಜೀವನವನ್ನು ಯೆಹೋವನು ರೂಪಿಸುವಂತೆ ಬಿಡುವ ಮೂಲಕ ‘ನಮ್ಮ ಪೆನ್ ಕೆಳಗಿಡುತ್ತೇವೆ’ ಎಂದು ಹೇಳಿದರು.
ಈ ವಿಷಯದಲ್ಲಿ ರಾಜ ಸೌಲನ ಜೀವನ ನಮಗೆ ಎಚ್ಚರಿಕೆಯ ಮಾದರಿಯಾಗಿದೆ. ಅವನು ರಾಜನಾದಾಗ ದೀನನು, ನಮ್ರನು ಮತ್ತು ತಗ್ಗಿದ ಮನಸ್ಸಿನವನೂ ಆಗಿದ್ದನು. (1 ಸಮುವೇಲ 10:22, 27; 11:13) ಸ್ವಲ್ಪ ಸಮಯದಲ್ಲೇ ತನ್ನ ಜೀವನವನ್ನು ತಾನೇ ರೂಪಿಸಿಕೊಳ್ಳಲು ಆರಂಭಿಸಿದನು. ತನಗೆ ಸರಿತೋಚಿದ್ದನ್ನು ಮತ್ತು ತನಗೆ ಗೌರವ ತರುವಂಥದ್ದನ್ನು ಮಾಡಲು ಮುಂದಾದನು. ಆತನು ಅವಿಧೇಯನಾಗಿದ್ದರಿಂದ ಯೆಹೋವ ದೇವರು ಅವನನ್ನು ತಳ್ಳಿಬಿಟ್ಟನು.—1 ಸಮುವೇಲ 14:24; 15:10, 11.
“ಇಲ್ಲಿವರೆಗೆ ನಂಬಿಗಸ್ತರಾಗಿರುವುದಾದರೂ ದೇವರ ಸೇವೆಯನ್ನು ಆತನು ಹೇಳುವಂತೆಯೇ ಕೊನೇ ವರೆಗೆ ಮಾಡುತ್ತಾ ಮುಂದುವರಿಯಬೇಕು” ಎಂದು ಸಹೋದರ ನೂಮರ್ ವಿದ್ಯಾರ್ಥಿಗಳಿಗೆ ನೆನಪಿಸಿದರು. “ನೀವು ದೇವರ ಸೇವೆ ಮಾಡ್ತಿದ್ದೀರ ಅಂದ ಮಾತ್ರಕ್ಕೆ ದೇವರು ನಿಮ್ಮನ್ನು ಮೆಚ್ಚುತ್ತಿದ್ದಾನೆ ಎಂದರ್ಥವಲ್ಲ” ಎಂದೂ ಎಚ್ಚರಿಸಿದರು. ಉದಾಹರಣೆಗೆ, ಬಂಡೆಯಿಂದ ಅದ್ಭುತಕರವಾಗಿ ನೀರನ್ನು ಬರಮಾಡಿದಾಗ ಮೋಶೆ ಯೆಹೋವನು ಕೊಟ್ಟ ನಿರ್ದೇಶನವನ್ನು ಪಾಲಿಸಲಿಲ್ಲ. ಬಂಡೆಯಿಂದ ನೀರೇನೋ ಸಿಕ್ಕಿತು, ಆದರೆ ಇದರಿಂದ ತುಂಬ ಪ್ರಾಮುಖ್ಯವಾದ ಯೆಹೋವನ ಆಶೀರ್ವಾದವೇ ಅವನಿಗೆ ಸಿಗಲಿಲ್ಲ.—ಅರಣ್ಯಕಾಂಡ 20:7-12.
“ಆಕಾಶ ಮಧ್ಯದಲ್ಲಿ ಹಾರುತ್ತಿರುವ ದೂತನೊಂದಿಗೆ ಧ್ವನಿಗೂಡಿಸಿ.” ಗಿಲ್ಯಡ್ ಶಾಲೆಯ ಬೋಧಕರಾದ ಸಹೋದರ ಸ್ಯಾಮ್ ರಾಬರ್‌ಸನ್ ಪ್ರಕಟನೆ 14:6, 7ರ ವಚನವನ್ನು ಆಧರಿಸಿ ಮಾತಾಡಿದರು. ಇತ್ತೀಚೆಗೆ ರಾಜ್ಯದ ಸುವಾರ್ತೆ ಸಾರಿದ್ದನ್ನು ವಿದ್ಯಾರ್ಥಿಗಳು ಪುನರಭಿನಯಿಸಿ ತೋರಿಸುವಂತೆ ತಿಳಿಸಿದರು. ಅವುಗಳಲ್ಲೊಂದು ಶಸ್ತ್ರ ಚಿಕಿತ್ಸೆಯಾಗಿ ಆಸ್ಪತ್ರೆಯಲ್ಲಿದ್ದ ಒಬ್ಬ ಗಿಲ್ಯಡ್ ವಿದ್ಯಾರ್ಥಿ ಅಲ್ಲಿದ್ದ ನರ್ಸ್‌ಗೆ ಸಾಕ್ಷಿ ನೀಡುತ್ತಿದ್ದ ಪುನರಭಿನಯವಾಗಿತ್ತು. ಆ ನರ್ಸ್ ಪೆರು ದೇಶದವಳಾಗಿದ್ದಳು. ಆದ್ದರಿಂದ ಸಹೋದರನು jw.org ವೆಬ್‌ಸೈಟ್‌ನಲ್ಲಿದ್ದ ಪೆರು ದೇಶದ ಚಾಚಾಪೊಯಾಸ್ ಎಂಬ ಸ್ಥಳದಲ್ಲಿ ಸಾರುವ ಚಿತ್ರವನ್ನು ತೋರಿಸಿ ಸಂಭಾಷಣೆಯನ್ನು ಆರಂಭಿಸಿದನು. ಇದರಿಂದ ಆ ನರ್ಸ್ ಮತ್ತು ಆಕೆಯ ಗಂಡನೊಂದಿಗೆ ಬೈಬಲ್ ಅಧ್ಯಯನ ಆರಂಭಿಸಲು ಸಾಧ್ಯವಾಯಿತು.
“ನೀನು ನನ್ನನ್ನು ಮರುಳುಗೊಳಿಸಿದಿ, ನಾನು ಮರುಳಾದೆನು.” (ಯೆರೆಮೀಯ 20:7) ಈ ಭಾಗದಲ್ಲಿ ಅಮೆರಿಕಾದ ಬ್ರಾಂಚ್ ಕಮಿಟಿಯ ಸದಸ್ಯರಾದ ಆ್ಯಲನ್ ಶುಸ್ಟರ್ ವಿದ್ಯಾರ್ಥಿಗಳಲ್ಲಿ ಇಬ್ಬರು ದಂಪತಿಗಳ ಸಂದರ್ಶನ ಮಾಡಿದರು. ಈ ವಿದ್ಯಾರ್ಥಿಗಳಿಗೆ ಯೆಹೋವನು ತಮ್ಮನ್ನು ಮರುಳು ಮಾಡಿದ್ದಾನೆಂದು ಅನಿಸಿತ್ತು. ಯೆಹೋವನು ಹೇಗೆ ಮರುಳು ಮಾಡುತ್ತಾನೆ? ಶಾಲೆಗೆ ಹಾಜರಾಗುವ ಆರಂಭದಲ್ಲಿ ಈ ತರಬೇತಿ ತುಂಬ ಕಷ್ಟ ಎಂಬ ಅಂಜಿಕೆ ಅವರಲ್ಲಿತ್ತು. ಆದರೆ ಈ ಶಾಲೆ ನಡೆಯುತ್ತಾ ಹೋದಂತೆ ಅವರಿಗೆ ಬೇಕಾದ ಸಹಾಯ ಸಿಕ್ಕಿತು. ಇದರಿಂದ ಅವರು ಯಶಸ್ವಿಗಳಾದರು. ಮರ್ಯಾನ್ ಅರಾನ್ಸನ್ ಎಂಬ ಸಹೋದರಿ, “ಏನು ಅಧ್ಯಯನ ಮಾಡಬೇಕು ಎಂದು ಇನ್ನು ಮುಂದೆ ಚಿಂತೆ ಮಾಡಬೇಕಾಗಿಲ್ಲ. ಬೈಬಲ್‌ನಲ್ಲಿರುವ ಪ್ರತಿಯೊಂದು ವಚನವೂ ಒಂದು ನಿಧಿಯಂತಿದೆ ಎಂದು ನನಗೆ ತಿಳಿದುಬಂತು” ಎಂದು ಹೇಳುತ್ತಾ ಈ ಶಾಲೆಯ ಕಡೆಗೆ ತಮಗಿರುವ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
“ಅವರ ನಂಬಿಕೆಯನ್ನು ಅನುಕರಿಸಿರಿ.” ಕಾರ್ಯಕ್ರಮದ ಈ ಮುಖ್ಯ ಭಾಷಣವನ್ನು ಆಡಳಿತ ಮಂಡಲಿಯ ಸದಸ್ಯರಾದ ಸಹೋದರ ಡೇವಿಡ್ ಸ್ಪ್ಲೇನ್ ನೀಡಿದರು. ಇದು ಇಬ್ರಿಯ 13:7ರ ಆಧರಿತವಾಗಿತ್ತು. ಅಲ್ಲಿ ಹೀಗೆ ಹೇಳಲಾಗುತ್ತದೆ: “ದೇವರ ವಾಕ್ಯದ ಕುರಿತು ನಿಮಗೆ ತಿಳಿಸಿ ನಿಮ್ಮ ಮಧ್ಯೆ ಮುಂದಾಳುತ್ವ ವಹಿಸುತ್ತಿರುವವರನ್ನು ಜ್ಞಾಪಕಮಾಡಿಕೊಳ್ಳಿರಿ ಮತ್ತು ಅವರ ನಡತೆಯ ಪರಿಣಾಮವನ್ನು ಅವಲೋಕಿಸುವಾಗ ಅವರ ನಂಬಿಕೆಯನ್ನು ಅನುಕರಿಸಿರಿ.” 70 ವರ್ಷಗಳ ಹಿಂದೆ ‘ಮುಂದಾಳುತ್ವ ವಹಿಸುತ್ತಿದ್ದವರು’ ತಮ್ಮ ನಂಬಿಕೆಯನ್ನು ಹೇಗೆ ತೋರಿಸಿದರು?
ಸೆಪ್ಟೆಂಬರ್ 24, 1942ರಂದು ಸಹೋದರ ನೇತನ್ ನಾರ್ ಯೆಹೋವನ ಸಾಕ್ಷಿಗಳು ಉಪಯೋಗಿಸುತ್ತಿದ್ದ ಎರಡು ಸಂಸ್ಥೆಗಳ ನಿರ್ದೇಶಕರ ಮೈತ್ರಿ ಕೂಟವನ್ನು ಏರ್ಪಡಿಸಿದ್ದರು. ಈ ಕೂಟದಲ್ಲಿ, ಹೊಸ ಕ್ಷೇತ್ರಗಳಲ್ಲಿ ಸಾರುವ ಕೆಲಸವನ್ನು ವಿಸ್ತರಿಸಲು ಮಿಷನರಿಗಳಿಗೆ ತರಬೇತಿ ಕೊಡುವ ಗಿಲ್ಯಡ್ ಎಂಬ ಹೊಸ ಶಾಲೆಯನ್ನು ಪ್ರಾರಂಭಿಸುವ ಪ್ರಸ್ತಾಪ ಮಾಡಲಾಯಿತು. ಆದರೆ ಆಗಿನ ಪರಿಸ್ಥಿತಿ ಈ ಶಾಲೆಯನ್ನು ಆರಂಭಿಸಲು ಅನುಕೂಲವಾಗಿರಲಿಲ್ಲ. ಆಗ 2ನೇ ಪ್ರಪಂಚ ಯುದ್ಧ ತೀವ್ರವಾಗಿ ನಡೆಯುತ್ತಿತ್ತು. ಇದರಿಂದಾಗಿ ಅನೇಕ ದೇಶಗಳಿಗೆ ಮಿಷನರಿಗಳನ್ನು ಕಳುಹಿಸಲು ಸಾಧ್ಯವಿರಲಿಲ್ಲ. ಜೊತೆಗೆ, 1930ರಲ್ಲೇ ಇಡೀ ಪ್ರಪಂಚದ ಆರ್ಥಿಕ ಪರಿಸ್ಥಿತಿ ಕುಸಿದಿತ್ತು. ನಮ್ಮ ಸಂಸ್ಥೆಯ ಹತ್ತಿರ ಕೇವಲ 5 ವರ್ಷಗಳ ವರೆಗೆ ಈ ಶಾಲೆಯನ್ನು ನಡೆಸಲು ಸಾಕಾಗುವಷ್ಟು ಹಣ ಮಾತ್ರ ಇತ್ತು. ಹಾಗಿದ್ದರೂ ಆ ಕೂಟದಲ್ಲಿದ್ದ ಎಲ್ಲರೂ ಒಮ್ಮತದಿಂದ ಈ ಶಾಲೆಯನ್ನು ಆರಂಭಿಸಲು ಒಪ್ಪಿಗೆ ಕೊಟ್ಟರು.
ಗಿಲ್ಯಡ್ ಶಾಲೆಯ ಮೊದಲನೇ ತರಗತಿಯ ಪದವೀಧರರು ಉತ್ತಮ ನಂಬಿಕೆಯನ್ನು ತೋರಿಸಿದ್ದರು. ಅವರು ಇರುವವುಗಳಲ್ಲೇ ತೃಪ್ತರಾಗಿದ್ದರು, ಅವರಿಗೆ ಹಣದ ವ್ಯಾಮೋಹವಿರಲಿಲ್ಲ. (ಇಬ್ರಿಯ 13:5, 6) ಅನೇಕ ಮಿಷನರಿಗಳು ತಮ್ಮ ಕುಟುಂಬದವರನ್ನು ಯಾವತ್ತೂ ನೋಡುವುದೇ ಇಲ್ಲವೇನೋ ಅಂತ ಅಂದುಕೊಂಡಿದ್ದರು. ಯಾಕೆಂದರೆ ಅವರ ಕುಟುಂಬದವರು ತುಂಬ ಬಡವರಾಗಿದ್ದರು. ಅವರು ಮನೆಗೆ ಬಂದು ಹೋಗುವ ಖರ್ಚನ್ನು ನೋಡಿಕೊಳ್ಳಲೂ ಸಾಧ್ಯವಿರಲಿಲ್ಲ. ಅನೇಕ ಮಿಷನರಿಗಳು 10ರಿಂದ 15 ವರ್ಷಗಳ ವರೆಗೆ ತಮ್ಮ ಕುಟುಂಬದವರನ್ನು ನೋಡಲೇ ಇರಲಿಲ್ಲ. ಆದರೂ ತಮ್ಮನ್ನು, ತಮ್ಮ ಕುಟುಂಬದವರನ್ನು ಯೇಸು ಹಿಂದೆ ನೋಡಿಕೊಂಡಂತೆ ಇನ್ನು ಮುಂದೆಯೂ ನೋಡಿಕೊಳ್ಳುತ್ತಾನೆ ಎಂಬ ದೃಢ ನಂಬಿಕೆ ಅವರಿಗಿತ್ತು.—ಇಬ್ರಿಯ 13:8.
ಈ ಗಿಲ್ಯಡ್ ಶಾಲೆಯನ್ನು ಹಾಜರಾಗುವ ಮುಂಚೆಯೇ ವಿದೇಶದಲ್ಲಿ ಸಾರುವ ನೇಮಕದಲ್ಲಿದ್ದು, ಅನೇಕ ಸವಾಲುಗಳನ್ನು ಎದುರಿಸಿದ ಕೆಲವರ ಕುರಿತು ಸಹೋದರ ಸ್ಪ್ಲೇನ್ ತಿಳಿಸಿದರು. ನಂತರ ಅವರು, “70 ವರ್ಷಗಳಿಂದ ಸಹೋದರ ಸಹೋದರಿಯರು ಗಿಲ್ಯಡ್ ಶಾಲೆಗೆ ಹಾಜರಾಗುತ್ತಿದ್ದಾರೆ. ಅವರಿಂದ ಪರಂಪರೆಯಾಗಿ ಬಂದ ಈ ಮಾಹಿಮಾನ್ವಿತ ಸುಯೋಗವನ್ನು ನೀವು ಮುಂದುವರಿಸುತ್ತಿದ್ದೀರಿ. . . . ನೀವು ಯಾವುದೇ ಸ್ಥಳಕ್ಕೆ ಹೋದರೂ ಸಂತೋಷದಿಂದ ಯೆಹೋವನ ಸೇವೆ ಮಾಡಿ” ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ತಮ್ಮ ಭಾಷಣದ ಕೊನೆಯಲ್ಲಿ ಸಹೋದರರು ಅಮೆರಿಕಾದ ಬ್ರಾಂಚ್ ಕಾರ್ಯಾಲಯದಲ್ಲಿ ಕೆಲಸ ಮಾಡುತ್ತಿರುವ 77 ಗಿಲ್ಯಡ್ ಪದವೀಧರರ ಫೋಟೋಗಳನ್ನು ತೋರಿಸಿದರು. ಅವರಲ್ಲಿ ಇಬ್ಬರು 1943ರಲ್ಲಿ ನಡೆದ ಪ್ರಥಮ ಗಿಲ್ಯಡ್ ತರಗತಿಯ ವಿದ್ಯಾರ್ಥಿಗಳಾಗಿದ್ದರು. ಕಳೆದ 70 ವರ್ಷಗಳಿಂದ ಯೆಹೋವನ ಸಾಕ್ಷಿಗಳು ಆರಾಧನೆಯಲ್ಲಿ ಉಪಯೋಗಿಸುತ್ತಿದ್ದ ಸಂಗೀತ ಹಿನ್ನೆಲೆಯಲ್ಲಿ ಕೇಳಿ ಬರುತ್ತಿತ್ತು.
ವಿದ್ಯಾರ್ಥಿಗಳ ಪದವಿಪ್ರದಾನವಾದ ನಂತರ ವಿದ್ಯಾರ್ಥಿಗಳಲ್ಲೊಬ್ಬರು ತರಗತಿಯಲ್ಲಿರುವವರೆಲ್ಲರೂ ಸೇರಿ ಬರೆದ ಕೃತಜ್ಞತಾ ಪತ್ರವನ್ನು ಓದಿದರು. ಕೊನೆಯಲ್ಲಿ ಸಹೋದರ ಸ್ಯಾಂಡರ್‌ಸನ್ ಮೊದಲನೇ ತರಗತಿಯಲ್ಲಿ ಸಹೋದರ ನಾರ್ ಹೇಳಿದ ಈ ಮಾತುಗಳನ್ನು ನೆನಪಿಸಿಕೊಂಡರು: “ನಿಮ್ಮನ್ನು ಎಲ್ಲಿ ಕಳುಹಿಸಿದರೂ ನೀವೊಬ್ಬ. . . ರಾಜ್ಯ ಪ್ರಚಾರಕರು ಎನ್ನುವುದನ್ನು ಮರೆಯಬೇಡಿ. ಅರ್ಮಗೆದೋನ್ ಬರುವ ಮುಂಚೆ ಪ್ರಚಾರಕರಾಗಿದ್ದು ಸ್ತುತಿಸುವುದು ಭೂಮಿಯಲ್ಲಿರುವ ಯಾವ ಜೀವಿಗೂ ಇಲ್ಲದ ಅತಿ ದೊಡ್ಡ ಸದವಕಾಶವಾಗಿದೆ. . . ಸಾರುವ ಅವಕಾಶ ಇರುವವ ವರೆಗೂ ಸಾರುತ್ತಾ ಇರಿ.” ಈ ಮಾತುಗಳು ಇಂದು ಸಹ ಅಷ್ಟೇ ಮಹತ್ವದ್ದಾಗಿವೆ ಎಂದು ಹೇಳುತ್ತಾ ಕಾರ್ಯಕ್ರಮವನ್ನು ಮುಗಿಸಿದರು.