ಯೆಹೋವನ ಸಾಕ್ಷಿಗಳನ್ನು ಸ್ವಾಗತಿಸಿದ ಅಟ್ಲಾಂಟ ನಗರ
“ನಿಮ್ಮ ಸಂಘಟನೆಯ ಸದಸ್ಯರಿಗೆ ದೇವರ ರಾಜ್ಯದ ಸೇವೆ ಮಾಡಲು ಇರುವ ಆಸೆ ಮತ್ತು ಉತ್ಸಾಹವನ್ನು ನಾನು ತುಂಬ ಮೆಚ್ಚುತ್ತೇನೆ. ಜನರ ಸೇವೆ ಮಾಡಲು ನೀವು ಮಾಡುವ ಪ್ರಯತ್ನ ಮತ್ತು ನಿಮ್ಮ ಧರ್ಮದ ಜನರಿಗೇ ನೀವು ಮಾಡುವ ಸಹಾಯವನ್ನು ಮೆಚ್ಚಲೇಬೇಕು.”
ಇವು ಅಮೆರಿಕದ ಜಾರ್ಜಿಯ ರಾಜ್ಯದ ಅಟ್ಲಾಂಟದ ಮೇಯರ್ ಕಾಸಿಮ್ ರೀಡ್ ಅವರು ಬರೆದ ಪತ್ರದಲ್ಲಿದ್ದ ಮಾತುಗಳು. ಅಟ್ಲಾಂಟದಲ್ಲಿ ನಡೆಯಲ್ಲಿದ್ದ ಮೂರು ದೊಡ್ಡ ಅಧಿವೇಶನಗಳಿಗೆ ಯೆಹೋವನ ಸಾಕ್ಷಿಗಳನ್ನು ಸ್ವಾಗತಿಸುತ್ತಾ ಬರೆದ ಪತ್ರ ಇದು.
ಅಧಿವೇಶನಕ್ಕೆ ಹಾಜರಾಗಲಿದ್ದ ಪ್ರತಿನಿಧಿಗಳನ್ನು ಸ್ವಾಗತಿಸುತ್ತಾ ಅಟ್ಲಾಂಟ ನಗರ ಸಭೆ ಒಂದು ಪ್ರಕಟಣೆಯನ್ನು ಹೊರಡಿಸಿತು. ಅದು ಹೀಗೆ ಹೇಳಿತು: “ಇಡೀ ಭೂಮಿಯಲ್ಲಿ ಸುಮಾರು 80 ಲಕ್ಷದಷ್ಟು ಯೆಹೋವ ಸಾಕ್ಷಿಗಳಿದ್ದಾರೆ. ನಿಮ್ಮಲ್ಲಿ ಬೇರೆ ಬೇರೆ ಜನಾಂಗ, ಭಾಷೆ ಮತ್ತು ಹಿನ್ನೆಲೆಯ ಜನರಿರುವುದಾದರೂ ನಿಮ್ಮೆಲ್ಲರ ಗುರಿ ಒಂದೇ. ಎಲ್ಲದಕ್ಕಿಂತ ಹೆಚ್ಚಾಗಿ, ಯಾರನ್ನು ದೇವರೆಂದು ಬೈಬಲ್ ಹೇಳುತ್ತೋ ಮತ್ತು ಯಾರು ಎಲ್ಲವನ್ನು ಸೃಷ್ಟಿ ಮಾಡಿದನೋ ಆ ಯೆಹೋವ ದೇವರಿಗೆ ಗೌರವ ಕೊಡಲು ನೀವು ಬಯಸುತ್ತೀರಿ.”
ಅಟ್ಲಾಂಟದಲ್ಲಿ 2014ರ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಮೂರು ಅಧಿವೇಶನಗಳು ನಡೆದವು. ಎರಡು ಅಧಿವೇಶನ ಇಂಗ್ಲಿಷ್ನಲ್ಲಿ ಮತ್ತು ಒಂದು ಅಧಿವೇಶನ ಸ್ಪ್ಯಾನಿಷ್ ಭಾಷೆಯಲ್ಲಿ ನಡೆಯಿತು. 28 ದೇಶಗಳಿಂದ ಯೆಹೋವನ ಸಾಕ್ಷಿಗಳು ಈ ಅಧಿವೇಶನಗಳಿಗೆ ಬಂದಿದ್ದರು. ಇಂಗ್ಲಿಷ್ನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳನ್ನು ಆಗಲೇ ಜ್ಯಾಪನೀಸ್ ಮತ್ತು ರಷ್ಯನ್ ಭಾಷೆಗಳಿಗೆ ಭಾಷಾಂತರ ಮಾಡಲಾಯಿತು. ಈ ಭಾಷೆಗಳನ್ನು ಮಾತಾಡುವ ಜನರಿಗೆ ಕಾರ್ಯಕ್ರಮಗಳು ಅರ್ಥ ಆಗಲೆಂದು ಹೀಗೆ ಮಾಡಲಾಯಿತು. ಒಟ್ಟು 95,689 ಜನರು ಈ ಮೂರು ಅಧಿವೇಶನಗಳಿಗೆ ಹಾಜರಾದರು.
ಅಮೆರಿಕದ ಬೇರೆ ಬೇರೆ ಕಡೆ ಇಂಥ 16 ಅಂತಾರಾಷ್ಟ್ರೀಯ ಅಧಿವೇಶನಗಳು ನಡೆದವು. ಹೀಗೆ 2014ರಲ್ಲಿ ಯೆಹೋವನ ಸಾಕ್ಷಿಗಳು ಒಟ್ಟು 24 ಅಂತಾರಾಷ್ಟ್ರೀಯ ಅಧಿವೇಶನಗಳನ್ನು ಒಂಬತ್ತು ದೇಶಗಳಲ್ಲಿ ನಡೆಸಿದರು.