ರಷ್ಯಾ ಮತ್ತು ಯುಕ್ರೇನಿನ ಯೆಹೋವನ ಸಾಕ್ಷಿಗಳಿಗೆ ಆಡಳಿತ ಮಂಡಲಿಯಿಂದ ಸಿಕ್ಕಿದ ಉತ್ತೇಜನ
ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಸದಸ್ಯರಾದ ಸಹೋದರ ಸ್ಟೀಫನ್ ಲೆಟ್, 2014ರ ಮೇ 10 ಮತ್ತು 11ನೇ ತಾರೀಖಿನಂದು ಯುಕ್ರೇನ್ ದೇಶಕ್ಕೆ ಭೇಟಿ ನೀಡಿದರು. ಆ ಸಂದರ್ಭದಲ್ಲಿ ಅವರು ಸುಮಾರು 1,65,000 ಸಾಕ್ಷಿಗಳ ಮುಂದೆ ಒಂದು ಪತ್ರವನ್ನು ಓದಿದರು. ಇದನ್ನು ಕೇಳಿಸಿಕೊಂಡ ನಂತರ ಒಬ್ಬಾಕೆ, “ನಮ್ಮ ಮೇಲೆ ಪ್ರೀತಿಯ ಮಳೆಯನ್ನೇ ಸುರಿಸಲಾಯಿತೇನೋ ಎಂದೆನಿಸುತ್ತಿದೆ!” ಎಂದು ಉದ್ಗರಿಸಿದಳು.
ಬೈಬಲಾಧಾರಿತ ಭಾಷಣಗಳು ಮತ್ತು ಅವರು ಓದಿದ ಪತ್ರವನ್ನು ಐದು ಭಾಷೆಗಳಲ್ಲಿ ಭಾಷಾಂತರಿಸಲಾಯಿತು. ಅದನ್ನು ಯುಕ್ರೇನಿನಲ್ಲಿರುವ ಸುಮಾರು 700 ರಾಜ್ಯ ಸಭಾಗೃಹಗಳಲ್ಲಿ ತೋರಿಸಲಾಯಿತು.
ಅದೇ ದಿನಗಳಂದು, ಆಡಳಿತ ಮಂಡಲಿಯ ಇನ್ನೊಬ್ಬ ಸದಸ್ಯರಾದ ಸಹೋದರ ಮಾರ್ಕ್ ಸ್ಯಾಂಡರ್ಸನ್ ರಷ್ಯಾಕ್ಕೆ ಭೇಟಿ ನೀಡಿದರು. ಅಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪತ್ರವನ್ನು ಓದಿದರು. ಆ ಕಾರ್ಯಕ್ರಮವನ್ನು ಸುಮಾರು 14 ಭಾಷೆಗಳಲ್ಲಿ ಭಾಷಾಂತರ ಮಾಡಲಾಯಿತು. ಬೆಲಾರಸ್ ಮತ್ತು ರಷ್ಯಾದಲ್ಲಿರುವ 2,500ಕ್ಕಿಂತ ಹೆಚ್ಚಿನ ಸಭೆಗಳಲ್ಲಿ 1,80,413 ಸಾಕ್ಷಿಗಳು ಇದರ ನೇರಪ್ರಸಾರವನ್ನು ನೋಡಿದರು.
ಅವರಿಬ್ಬರೂ ಓದಿದ್ದು ಆಡಳಿತ ಮಂಡಳಿಯಿಂದ ಬಂದ ಪತ್ರವಾಗಿತ್ತು. ರಷ್ಯಾ ಮತ್ತು ಯುಕ್ರೇನಿನಲ್ಲಿರುವ ಸಹೋದರರಿಗೆ ಆ ಪತ್ರವನ್ನು ಬರೆಯಲಾಗಿತ್ತು. ಸಹೋದರ ಸ್ಯಾಂಡರ್ಸನ್ ಆ ಪತ್ರವನ್ನು ರಷ್ಯನ್ ಭಾಷೆಯಲ್ಲೇ ಓದಿದರು. ಇದರಿಂದ ಸಂತೋಷಗೊಂಡ ರಷ್ಯಾದ ಬ್ರಾಂಚ್ ಆಫೀಸ್ ಹೀಗೆ ಬರೆಯಿತು: “ಇಲ್ಲಿ ನಡೆಯುವ ಸಾರುವ ಕೆಲಸದ ಬಗ್ಗೆಯೂ ಆಡಳಿತ ಮಂಡಲಿಗೆ ತುಂಬ ಆಸಕ್ತಿ ಇದೆ ಎನ್ನುವ ವಿಷಯ ನಮ್ಮ ಸಹೋದರ ಸಹೋದರಿಯರ ಮನಮುಟ್ಟಿತು. ನಮ್ಮೆಲ್ಲರನ್ನು ಆಡಳಿತ ಮಂಡಲಿ ಪ್ರೀತಿಯಿಂದ ತಬ್ಬಿಕೊಂಡಂತೆ ಅನಿಸಿತು.”
ರಾಜಕೀಯ ಒತ್ತಡ ಇರುವಂಥ ಪ್ರದೇಶದಲ್ಲಿದ್ದ ಸಹೋದರ-ಸಹೋದರಿಯರಿಗೆ ಸಾಂತ್ವನ ನೀಡಲು ಮತ್ತು ಬಲಪಡಿಸಲು ಈ ಪತ್ರವನ್ನು ಬರೆಯಲಾಗಿತ್ತು. ‘ರಾಜಕೀಯ ವಿಷಯದಲ್ಲಿ ತಟಸ್ಥರಾಗಿ ಉಳಿಯುವ ಮೂಲಕ “ಲೋಕದ ಭಾಗವಾಗಿಲ್ಲ” ಅಂತ ನೀವು ತೋರಿಸಿಕೊಟ್ಟಿದ್ದೀರ. ಅದನ್ನೇ ಮುಂದುವರಿಸಿ’ ಎಂದು ಆ ಪತ್ರ ಸಹೋದರರನ್ನು ಪ್ರೋತ್ಸಾಹಿಸಿತು.—ಯೋಹಾನ 17:16.
ಹಾಗೆ ಮುಂದುವರಿಯಬೇಕೆಂದರೆ ಪ್ರಾರ್ಥನೆ, ಬೈಬಲ್ ಅಧ್ಯಯನ ಮತ್ತು ಬೈಬಲಿನಲ್ಲಿ ಓದಿದ್ದನ್ನು ಧ್ಯಾನಿಸುವ ಮೂಲಕ ಯೆಹೋವನೊಂದಿಗೆ ನಿಮಗಿರುವ ಆಪ್ತ ಸಂಬಂಧವನ್ನು ಬಲಪಡಿಸಿಕೊಳ್ಳಬೇಕು. ಯೆಶಾಯ 54:17 ರಲ್ಲಿ “ನಿನ್ನನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು” ಎಂದು ಯೆಹೋವ ದೇವರು ಕೊಟ್ಟಿರುವ ಮಾತು ಖಂಡಿತ ನೆರವೇರುತ್ತದೆ. ಹಾಗಾಗಿ ಏನೇ ಕಷ್ಟ ಪರೀಕ್ಷೆಗಳು ಬಂದರೂ ಹೆದರದಿರಿ ಎಂದು ಆಡಳಿತ ಮಂಡಲಿಯು ಅಲ್ಲಿದ್ದ ಸಭಿಕರಲ್ಲಿ ಧೈರ್ಯ ತುಂಬಿಸಿತು.
ಪತ್ರದ ಕೊನೆಯಲ್ಲಿ, ಆಡಳಿತ ಮಂಡಲಿ ಹೀಗೆ ತಿಳಿಸಿತು: “ನಾವು ನಿಮ್ಮನ್ನು ತುಂಬ ಪ್ರೀತಿಸುತ್ತೇವೆ. ನಮ್ಮ ಮನಸ್ಸಿನಲ್ಲಿ ಮತ್ತು ಯೆಹೋವನಿಗೆ ನಾವು ಮಾಡುವ ಪ್ರಾರ್ಥನೆಯಲ್ಲಿ ನೀವು ಯಾವಾಗಲೂ ಇರುತ್ತೀರಿ ಎಂಬ ಭರವಸೆ ನಿಮಗಿರಲಿ.”
ಸಹೋದರರಿಬ್ಬರ ಭೇಟಿಯ ಕುರಿತು ಯುಕ್ರೇನಿನ ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸ್ ಹೀಗೆ ಬರೆಯಿತು: “ಆಡಳಿತ ಮಂಡಲಿ ತೋರಿಸುವ ಪ್ರೀತಿ ಮತ್ತು ಕಾಳಜಿಯನ್ನು ನೋಡಿ ಸಹೋದರರ ಹೃದಯ ತುಂಬಿ ಬಂದಿದೆ. ಸಹೋದರ ಲೆಟ್ ಮತ್ತು ಸ್ಯಾಂಡರ್ಸನ್ ಯುಕ್ರೇನಿಗೆ ಮತ್ತು ರಷ್ಯಾಗೆ ಒಂದೇ ಸಮಯದಲ್ಲಿ ಭೇಟಿ ನೀಡಿದ್ದು, ದೇವಜನರಲ್ಲಿನ ಐಕ್ಯತೆಯನ್ನು ತೋರಿಸುತ್ತದೆ. ಅಷ್ಟೇ ಅಲ್ಲದೆ, ಇದು ಯೆಹೋವ ಮತ್ತು ಯೇಸು ಇಬ್ಬರೂ ಸಹೋದರರ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಉತ್ತೇಜನದ ಅವಶ್ಯಕತೆ ಇದ್ದ ಸಮಯದಲ್ಲೇ ನೀವು ನಮ್ಮನ್ನು ಭೇಟಿ ಮಾಡಿದಿರಿ. ಏನೇ ಕಷ್ಟ ಪರೀಕ್ಷೆಗಳು ಬಂದರೂ ಯೆಹೋವನ ಸೇವೆಯನ್ನು ನಿಲ್ಲಿಸಬಾರದು ಎಂಬ ಉತ್ತೇಜನ ನಮಗೆ ನಿಮ್ಮಿಂದ ಸಿಕ್ಕಿತು.”