ಮಾಹಿತಿ ಇರುವಲ್ಲಿ ಹೋಗಲು

ಅರ್ಮಾಡದಲ್ಲಿ ಸ್ವಾತಂತ್ರ್ಯ ಪ್ರಿಯರ ಸಮ್ಮಿಲನ

ಅರ್ಮಾಡದಲ್ಲಿ ಸ್ವಾತಂತ್ರ್ಯ ಪ್ರಿಯರ ಸಮ್ಮಿಲನ

2013ರ ಜೂನ್‌ 6ರಿಂದ 16ರ ತನಕ ಉತ್ತರ ಫ್ರಾನ್ಸ್‌ನ ರೂಆನ್‌ ಎಂಬ ಬಂದರಿನಲ್ಲಿ ಹಬ್ಬದ ವಾತಾವರಣವಿತ್ತು. ಅಲ್ಲಿ ನಡೆಯುವ ಅರ್ಮಾಡವೆಂಬ ಒಂದು ಸುಪ್ರಸಿದ್ಧ ಆಕರ್ಷಣೀಯ ನೌಕ ಪ್ರದರ್ಶನಕ್ಕೆ ಜಗತ್ತಿನ ಮೂಲೆ ಮೂಲೆಯಿಂದ ಜನ ಸಾಗರವೇ ಹರಿದು ಬಂದಿತ್ತು.

ಹೆಸರುವಾಸಿಯಾದ 45 ನೌಕೆಗಳು ರೂಆನ್‌ ಬಂದರಿನ ನದಿಯಂಚಿನಲ್ಲಿ ಸುಮಾರು 7 ಕಿಲೋ ಮೀಟರ್‌ನವರೆಗೆ ತಮ್ಮ ಲಂಗರುಗಳನ್ನು ನೀರಿನೊಳಕ್ಕೆ ಇಳಿಸಿ ಪ್ರದರ್ಶನಕ್ಕೆಂದು ಬೀಡು ಬಿಟ್ಟವು. ಈ ನೌಕೆಗಳು 120 ಕಿ.ಮೀ (75 ಮೈಲಿ) ದೂರದಿಂದ ಸಾಗಿ ಇಲ್ಲಿಗೆ ಬಂದಿದ್ದವು. ಈ ಬೃಹತ್ತಾದ ನೌಕೆಗಳು ಸಾಗರದ ಅಲೆಗಳನ್ನು ಹಿಂದಿಕ್ಕಿ ಸೇನ್‌ ನದಿಯ ಮೂಲಕ ಸಾಗಿ, ನರ್ಮಂಡಿಯೆಂಬ ಕಣ್ಣಿಗೆ ಮನಸ್ಸಿಗೆ ಮುದನೀಡುವಂಥ ಸ್ಥಳವನ್ನು ಹಾದು ಹೋಗಿದ್ದವು. ಅಲ್ಲಿಗೆ ಬಂದಿದ್ದ ಹೆಚ್ಚಿನ ನೌಕೆಗಳನ್ನು ಯಾವುದೇ ಅಡೆ ತಡೆಗಳಿಲ್ಲದೆ ನೋಡುವ ಅವಕಾಶ ಜನರಿಗಿತ್ತು. ಈ ಪ್ರದರ್ಶನ ಸುಮಾರು ಹತ್ತು ದಿನಗಳವರೆಗೆ ನಡೆಯಿತು.

ದೊಡ್ಡವರು ಚಿಕ್ಕವರೆನ್ನದೇ ಲಕ್ಷಾಂತರ ಜನರು ಅಲ್ಲಿಗೆ ಮುತ್ತಿಗೆ ಹಾಕಲು ಕಾರಣವಾದರೂ ಏನು? ಆ ಪ್ರದರ್ಶನವನ್ನು ಆಯೋಜಿಸಿದವರು ಮತ್ತು ಅದಕ್ಕಾಗಿ ಹಣ ಖರ್ಚು ಮಾಡಿದವರು ಅದಕ್ಕೆ ಕೊಡುವ ಕಾರಣ ಹೀಗಿದೆ: ಅರ್ಮಾಡದಲ್ಲಿ ನಡೆದ ಈ ಪ್ರದರ್ಶನ “ನೌಕೆಗಳನ್ನು ಹತ್ತಿರದಿಂದ ನೋಡಿ ಪ್ರೋತ್ಸಾಹ ಪಡೆಯುವ ಅವಕಾಶವನ್ನು ಜನರಿಗೆ ಮಾಡಿಕೊಟ್ಟಿತು.” ಅವರ ಮಾತು ಸತ್ಯ. ಇಂಥ ಬೃಹದಾಕಾರದ ನೌಕೆಗಳನ್ನು ನೋಡಿದಾಗ ಸಹಜವಾಗಿ ಜನರಿಗೆ ತಾವು ಹೀಗೆ ಯಾವುದೇ ಚಿಂತೆಯಿಲ್ಲದೆ ಸ್ವಾತಂತ್ರ್ಯವಾಗಿ ಸಾಗುತ್ತಾ ಇರಬೇಕು ಎಂಬ ಆಸೆ ಮೂಡುತ್ತದೆ.

ಸಾವಿರಾರು ಮಂದಿ ಪ್ರವಾಸಿಗರಿಗೆ ಮತ್ತೊಂದು ಸ್ವಾತಂತ್ರ್ಯದ ಕುರಿತು ಕೇಳುವ ಅವಕಾಶ ಕೂಡ ಸಿಕ್ಕಿತು. ಅದು ಬೈಬಲ್‌ ಸತ್ಯ ನೀಡುವ ಬಿಡುಗಡೆಯ ಕುರಿತಾಗಿತ್ತು. (ಯೋಹಾನ 8:31, 32) ರೂಆನ್‌ ಹಳೇ ಇತಿಹಾಸವನ್ನು ಹೊತ್ತು ನಿಂತ ಒಂದು ರಮಣೀಯ ಪ್ರದೇಶ. ಅದನ್ನು, ಜನ ಜಂಗುಳಿಯಿಂದ ತುಂಬಿದ ಅದರ ಕಿರಿದಾದ ರಸ್ತೆಗಳನ್ನು ಅಡ್ಡಾಡಿದ್ದಂಥ ಪ್ರವಾಸಿಗರು ಯೆಹೋವನ ಸಾಕ್ಷಿಗಳು ಪ್ರದರ್ಶಿಸುತ್ತಿದ್ದ ಸಾಹಿತ್ಯಗಳನ್ನು ಗಮನಿಸದೇ ಇರಲಿಲ್ಲ. ಸಾಕ್ಷಿಗಳು ಇಟ್ಟಿದ್ದ ಬೈಬಲ್‌ ಸಾಹಿತ್ಯಗಳನ್ನು ನೋಡಲು ಪ್ರವಾಸಿಗರು ಮತ್ತು ನಾವಿಕರು ಹೋದಾಗ, ಅವರಿಗಿಷ್ಟವಾದದ್ದನ್ನು ಉಚಿತವಾಗಿ ತೆಗೆದುಕೊಳ್ಳಬಹುದೆಂದು ಸಾಕ್ಷಿಗಳು ತಿಳಿಸಿದರು. ಹೆಚ್ಚಿನವರು ಕಾವಲಿನಬುರುಜು ಪತ್ರಿಕೆಯಲ್ಲಿ ಪೂರ್ವಗ್ರಹದ ಕುರಿತು ಬಂದಂಥ ಒಂದು ಲೇಖನವನ್ನು ಇಷ್ಟಪಟ್ಟರು. ಆಸಕ್ತರನ್ನು ಇಂಗ್ಲಿಷ್‌, ಫ್ರೆಂಚ್‌ ಮತ್ತು ಸ್ಪ್ಯಾನಿಷ್‌ ಭಾಷೆಗಳ ಬೈಬಲಾಧಾರಿತ ಭಾಷಣಕ್ಕೆ ಆಹ್ವಾನಿಸಲಾಯಿತು.

ಸಾಕ್ಷಿಗಳ ಕೆಲಸವನ್ನು ಸ್ಥಳೀಯರು ಬಹಳಷ್ಟು ಮೆಚ್ಚಿಕೊಂಡರು. ಈ ಸಾರ್ವಜನಿಕ ಸಾಕ್ಷಿಕಾರ್ಯವನ್ನು ನೋಡಿದ ವ್ಯಕ್ತಿಯೊಬ್ಬ ಮೊದಲು ಸ್ವಲ್ಪ ಆಶ್ಚರ್ಯಚಕಿತನಾದರೂ, ನಂತರ ಸಾಕ್ಷಿಗಳಿಗೆ: “ನನ್ನ ನಂಬಿಕೆಗಳು ಬೇರೆಯೇ ಆಗಿದ್ದರು, ಹೀಗೆ ಇಷ್ಟು ಜನರ ಮುಂದೆ ನಿಂತು ತಮ್ಮ ನಿಲುವನ್ನು ಧೈರ್ಯವಾಗಿ ವ್ಯಕ್ತಪಡಿಸುವವರನ್ನ ನಾನು ನಿಜಕ್ಕೂ ಮೆಚ್ಚುತ್ತೇನೆ” ಎಂದನು. ವೃದ್ಧರಿಬ್ಬರೂ ಸಾಕ್ಷಿಕಾರ್ಯದಲ್ಲಿ ಪಾಲ್ಗೊಂಡಿದ್ದ ಯುವ ಕ್ರೈಸ್ತರಿಗೆ “ನೀವು ಮಾಡುತ್ತಿರುವ ಕೆಲಸಕ್ಕೆ ನೀವು ನಿಜಕ್ಕೂ ಹೆಮ್ಮೆ ಪಡಬೇಕು” ಎಂದರು.