ಫ್ರಾನ್ಸ್‌ನಲ್ಲಿ ಒಂದು ವಿಶೇಷ ಬೈಬಲ್ ಪ್ರದರ್ಶನ
ಉತ್ತರ ಫ್ರಾನ್ಸ್‌ನಲ್ಲಿ, 2014ರ ರೂಆನ್ ಅಂತರರಾಷ್ಟ್ರೀಯ ಉತ್ಸವಕ್ಕೆಂದು ಬಂದ ಸಾವಿರಾರು ಜನರ ಕಣ್ಣು ಅಲ್ಲಿದ್ದ ಒಂದು ಸ್ಟಾಲ್ ಮೇಲೆ ಹೋಯಿತು. ಆ ಸ್ಟಾಲ್ ಮೇಲೆ “ಬೈಬಲ್—ನೆನ್ನೆ, ಇಂದು ಮತ್ತು ನಾಳೆ” ಎಂದು ಬರೆಯಲಾಗಿತ್ತು.
ಆ ಸ್ಟಾಲ್‌ನ ಹೊರಗಡೆ, ಟಿ.ವಿ.ಯಲ್ಲಿ ಬೈಬಲಿನ ಪುರಾತನ ಹಸ್ತಪ್ರತಿಗಳ ವಿಡಿಯೋ ತುಣುಕನ್ನು ಹಾಕಲಾಗಿತ್ತು. ಇದು ಅನೇಕ ಜನರ ಗಮನ ಸೆಳೆಯಿತು. ಸ್ಟಾಲ್ ಒಳಗೆ ಹೋದಾಗ ಬೈಬಲ್ ಇಂದಿಗೂ ಹೇಗೆ ಪ್ರಯೋಜನಕರವಾಗಿದೆ, ಅದರಲ್ಲಿರುವ ಐತಿಹಾಸಿಕ ಮತ್ತು ವೈಜ್ಞಾನಿಕ ವಿಷಯಗಳು ಎಷ್ಟು ನೈಜವಾಗಿವೆ ಮತ್ತು ಬೈಬಲನ್ನು ಎಷ್ಟು ವ್ಯಾಪಕವಾಗಿ ವಿತರಿಸಲಾಗಿದೆ ಎಂದು ತಿಳಿಸಲಾಗುತ್ತಿತ್ತು.
ಯುಗಗಳಿಂದ ಬೈಬಲನ್ನು ನಾಶ ಮಾಡಲು ತುಂಬ ಪ್ರಯತ್ನಿಸಲಾಯಿತು. ಆದರೂ ಅದು ನಾಶವಾಗದೆ, ಅದರ ಮುದ್ರಿತ ಮತ್ತು ಎಲೆಕ್ಟ್ರಾನಿಕ್ ಪ್ರತಿಗಳು ಕೋಟಿಗಟ್ಟಲೆ ಜನರ ಕೈಗೆ ಸೇರುತ್ತಿವೆ. ಇದು ಹೇಗೆ ಸಾಧ್ಯವಾಯಿತು ಎಂದು ಅಲ್ಲಿ ತೋರಿಸಲಾಯಿತು. ಅಷ್ಟೇ ಅಲ್ಲದೇ, ಬಂದ ಜನರೆಲ್ಲರೂ ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾದ, 120ಕ್ಕೂ ಹೆಚ್ಚಿನ ಭಾಷೆಗಳಲ್ಲಿರುವ ನೂತನ ಲೋಕ ಭಾಷಾಂತರದ ಒಂದು ಪ್ರತಿಯನ್ನು ಉಚಿತವಾಗಿ ಪಡೆದುಕೊಂಡರು.
ಸಾರ್ವಜನಿಕರಿಗೆ ಬೈಬಲ್‌ಗಳನ್ನು ಕೊಡಲು ಯೆಹೋವನ ಸಾಕ್ಷಿಗಳು ಮಾಡಿದ ಈ ಪ್ರಯತ್ನವನ್ನು ಅಲ್ಲಿ ಬಂದವರು ಮನಸಾರೆ ಹೊಗಳಿದರು. ಯುವಜನರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿರುವ ಕಾರ್ಯಕರ್ತೆಯೊಬ್ಬಳು ಯುವಜನರ ಗುಂಪಿನೊಂದಿಗೆ ಬಂದಿದ್ದಳು. ಅವಳು ಈ ಪ್ರದರ್ಶನವನ್ನು ನೋಡಿ ಹೇಳಿದ್ದು, “ಬೈಬಲ್ ನಮಗಾಗಿ ಪಾರಂಪರಿಕವಾಗಿ ಬಂದಿರುವ ಒಂದು ಆಸ್ತಿಯಾಗಿದೆ. ಇದಕ್ಕೆ ಜೀವವಿದೆ. ಪ್ರತಿ ಸಲ ನಾನು ಬೈಬಲನ್ನು ಓದುವಾಗ ನನಗಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದ್ದೇನೆ.”
ತನ್ನ ಮೊಮ್ಮಗಳೊಂದಿಗೆ ಬಂದಿದ್ದ 60 ವರ್ಷ ಪ್ರಾಯದ ಅಜ್ಜಿಯೊಬ್ಬಳು ಬೈಬಲನ್ನು ಉಚಿತವಾಗಿ ಕೊಡುತ್ತಿರುವುದಕ್ಕೆ ತುಂಬ ಆಶ್ಚರ್ಯಪಟ್ಟಳು. ಆಕೆ ಸಾಕ್ಷಿಗಳಿಗೆ ಹೇಳಿದ್ದು: “ನಾವು ಇದನ್ನು ಮತ್ತೆ ಓದಲು ಪ್ರಾರಂಭಿಸಬೇಕು, ಏಕೆಂದರೆ ಇದು ನಮಗೆ ತುಂಬ ಅವಶ್ಯ!”