ಯೆಹೋವನ ಸಾಕ್ಷಿಗಳು ತಮಗೆ ಬೇಕಾದ ಹಾಗೆ ಬೈಬಲನ್ನು ಬದಲಾಯಿಸಿಕೊಂಡಿದ್ದಾರಾ?
ಇಲ್ಲ, ನಾವು ಹಾಗೆ ಮಾಡಿಲ್ಲ. ನಿಜ ಏನಂದರೆ ನಾವೇನು ನಂಬುತ್ತಿದ್ದೇವೋ ಅವು ಬೈಬಲಿಗೆ ಹೊಂದಿಕೆಯಲ್ಲಿ ಇಲ್ಲ ಅಂತ ಗಮನಕ್ಕೆ ಬಂದಾಗ ನಮ್ಮ ನಂಬಿಕೆಯನ್ನೇ ಬದಲಿಸಿಕೊಂಡಿದ್ದೇವೆ.
1950ರಲ್ಲಿ ನೂತನ ಲೋಕ ಭಾಷಾಂತರದ ಕೆಲಸ ಆರಂಭಿಸಿದಾಗ ನಾವು ಬೈಬಲಿನ ಸಮಗ್ರ ಅಧ್ಯಯನ ಮಾಡಿದೆವು. ಆಗ ಲಭ್ಯವಿದ್ದ ಎಲ್ಲ ಬೈಬಲುಗಳನ್ನು ಕೆದಕಿ ನೋಡಿದೆವು. ಬೈಬಲಿಗೆ ಅನುಸಾರವಾಗಿ ನಮ್ಮ ನಂಬಿಕೆಗಳನ್ನು ಸರಿಪಡಿಸಿಕೊಂಡೆವು. ಯೆಹೋವನ ಸಾಕ್ಷಿಗಳ ಕೆಲವು ನಂಬಿಕೆಗಳನ್ನು ಇಲ್ಲಿ ಕೊಡಲಾಗಿದೆ. ನೀವೇ ಯೋಚಿಸಿ ಹೇಳಿ ಆ ನಂಬಿಕೆಗಳಿಗೆ ಬೈಬಲಿನ ನಿಜ ಆಧಾರ ಇದೆಯಾ ಇಲ್ಲವಾ ಅಂತ.
1. ನಾವೇನು ನಂಬುತ್ತೇವೆ ಅಂದರೆ: ದೇವರು ತ್ರಿಯೇಕವಲ್ಲ. 1882ರ ಜುಲೈ ತಿಂಗಳ ಝಯನ್ಸ್ ವಾಚ್ ಟವರ್ ಎಂಬ ನಮ್ಮ ಪತ್ರಿಕೆ ಏನು ಹೇಳಿತಂದರೆ: “ನಾವೇನು ನಂಬುತ್ತೇವೋ ಅದು ನಮ್ಮ ಓದುಗರಿಗೂ ಚೆನ್ನಾಗಿ ತಿಳಿದಿದೆ. ನಾವು ಯೆಹೋವನನ್ನೂ, ಯೇಸುವನ್ನೂ ಪವಿತ್ರಾತ್ಮವನ್ನೂ ನಂಬುತ್ತೇವೆವಾದರೂ ಬೈಬಲಿನಲ್ಲಿಲ್ಲದ ತ್ರಿಯೇಕವನ್ನು ಅಂದರೆ ತಂದೆ ಮಗ ಪವಿತ್ರಾತ್ಮ ಆ ಮೂವರೂ ದೇವರುಗಳು ಎಂದು ನಾವು ನಂಬುವುದಿಲ್ಲ.”
● ಬೈಬಲ್ ಏನು ಹೇಳುತ್ತದೆ: “ಯೆಹೋವನು ನಮ್ಮ ದೇವರು, ಆತನೊಬ್ಬನೇ ಯೆಹೋವ.” (ಧರ್ಮೋಪದೇಶಕಾಂಡ 6:4, ದ ಹೋಲಿ ಬೈಬಲ್, ರಾಬರ್ಟ್ ಯಂಗ್) “ತಂದೆಯಾದ ಒಬ್ಬನೇ ದೇವರಿದ್ದಾನೆ, ಎಲ್ಲವೂ ಆತನಿಗೆ ಸೇರಿವೆ. ನಾವೂ ಆತನಿಗಾಗಿ ಇದ್ದೇವೆ. ಹಾಗೂ ನಮಗೆ ಒಬ್ಬನೇ ಕರ್ತನಿದ್ದಾನೆ, ಅವನು ಯೇಸು ಕ್ರಿಸ್ತ ಮತ್ತು ಅವನ ಮೂಲಕ ಎಲ್ಲ ಸಂಗತಿಗಳು ಅಸ್ತಿತ್ವದಲ್ಲಿವೆ.” (1 ಕೊರಿಂಥ 8:6, ಅಮೆರಿಕನ್ ಬೈಬಲ್ ಯೂನಿಯನ್ ವರ್ಷನ್) ಸ್ವತಃ ಯೇಸುವೇ ಹೀಗೆ ಹೇಳಿದ್ದಾನೆ: “ನನ್ನ ತಂದೆ ನನಗಿಂತ ದೊಡ್ಡವನು.”—ಯೋಹಾನ 14:28, ಡುಯೇ ರೈಮ್ಸ್ ವರ್ಷನ್.
2. ನಾವೇನು ನಂಬುತ್ತೇವೆ ಅಂದರೆ: ಸದಾ ಯಾತನೆ ನೀಡುವ ನರಕ ಇಲ್ಲ. ಕಿಂಗ್ ಜೇಮ್ಸ್ ಭಾಷಾಂತರದ ರೋಮನ್ನರಿಗೆ 6:23ನ್ನು ಉಲ್ಲೇಖಿಸುತ್ತಾ ಜೂನ್ 1882ರ ಝಯನ್ಸ್ ವಾಚ್ ಟವರ್ ಹೀಗೆ ಹೇಳಿತ್ತು: “ಪಾಪ ಕೊಡುವ ಸಂಬಳ ಮರಣ.” “ಈ ವಾಕ್ಯ ಎಷ್ಟು ಸರಳ ಮತ್ತು ಸ್ಪಷ್ಟವಾಗಿದೆ ಅಲ್ಲವೇ. ಆದರೆ ವಿಚಿತ್ರ ಏನೆಂದರೆ ಬೈಬಲನ್ನು ದೇವರ ವಾಕ್ಯವೆಂದು ನಂಬುತ್ತೇವೆ ಅಂತ ಹೇಳಿಕೊಳ್ಳುವ ಅನೇಕರು ಈ ವಾಕ್ಯಕ್ಕೆ ವಿರುದ್ಧವಾದ ವಿಷಯವನ್ನು ಹಿಡಿದುಕೊಂಡಿದ್ದಾರೆ. ಅವರು ಪಾಪ ಕೊಡುವ ಸಂಬಳ ನರಕದಲ್ಲಿ ಸದಾ ನರಳಾಟ ಎಂದು ನಂಬುತ್ತಾರೆ, ಅಲ್ಲದೆ ಬೈಬಲ್ ಇದನ್ನೇ ಹೇಳುತ್ತದೆ ಎಂದು ಸಮರ್ಥಿಸುತ್ತಾರೆ.”
● ಬೈಬಲ್ ಏನು ಹೇಳುತ್ತದೆ: “ಪಾಪ ಮಾಡುವ ಪ್ರಾಣ ಸಾಯುವುದು.” (ಯೆಹೆಜ್ಕೇಲ 18:4, 20, ಕಿಂಗ್ ಜೇಮ್ಸ್ ವರ್ಷನ್) ದೇವರನ್ನು ವಿರೋಧಿಸುವವರಿಗೆ ಸಿಗುವ ಶಿಕ್ಷೆ ನರಕದಲ್ಲಿ ನಿತ್ಯ ಯಾತನೆ ಅಲ್ಲ “ನಿತ್ಯ ನಾಶನ.”—2 ಥೆಸಲೊನೀಕ 1:9, ಕಿಂಗ್ ಜೇಮ್ಸ್ ವರ್ಷನ್.
3. ನಾವೇನು ನಂಬುತ್ತೇವೆ ಅಂದರೆ: ದೇವರ ರಾಜ್ಯ ನಿಜ ಸರ್ಕಾರವಾಗಿದೆ, ಅದು ಕೇವಲ ಹೃದಯದ ಒಂದು ಸ್ಥಿತಿಯಲ್ಲ. ದೇವರ ರಾಜ್ಯದ ಕುರಿತು ಡಿಸೆಂಬರ್ 1881ರ ಝಯನ್ಸ್ ವಾಚ್ ಟವರ್ ಹೀಗೆ ಹೇಳಿತ್ತು: “ಈ ರಾಜ್ಯ [ಅಥವಾ ಸರ್ಕಾರ] ಸ್ಥಾಪನೆಯಾಗಬೇಕಾದರೆ ಭೂಮಿಯ ಮೇಲೆ ಇರುವ ಬೇರೆಲ್ಲ ಸರ್ಕಾರಗಳು ನಿರ್ಮೂಲನೆ ಆಗಲೇಬೇಕು.”
● ಬೈಬಲ್ ಏನು ಹೇಳುತ್ತದೆ: “ಆ ರಾಜರ ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು, ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.”—ದಾನಿಯೇಲ 2:44, ಸತ್ಯವೇದವು.
ಯೆಹೋವನ ಸಾಕ್ಷಿಗಳು ತಮ್ಮ ನಂಬಿಕೆಗೆ ಆಧಾರ ಕೊಡಲು ಯಾವಾಗಲೂ ನೂತನ ಲೋಕ ಭಾಷಾಂತರವನ್ನೇ ಬಳಸುತ್ತಾರಾ?
ಇಲ್ಲ, ನಾವು ಸುವಾರ್ತೆ ಸಾರುವಾಗ ಅನೇಕ ಬೈಬಲ್ ಭಾಷಾಂತರಗಳನ್ನು ಬಳಸುತ್ತೇವೆ. ನಮ್ಮೊಟ್ಟಿಗೆ ಉಚಿತ ಬೈಬಲ್ ಅಧ್ಯಯನಕ್ಕೆ ಒಪ್ಪಿಕೊಳ್ಳುವವರಿಗೆ ನೂತನ ಲೋಕ ಭಾಷಾಂತರವನ್ನು ಕ್ರಯವಿಲ್ಲದೆ ಕೊಡುತ್ತೇವೆ. ಆದರೂ ಜನರು ತಮ್ಮ ಬಳಿ ಇರುವ ಭಾಷಾಂತರವನ್ನೇ ಬಳಸಲು ಇಷ್ಟಪಡುವುದಾದರೆ ಹಾಗೇ ಮಾಡಬಹುದು. ಯಾವುದೇ ಒತ್ತಾಯವಿಲ್ಲ.