ಯೆಹೋವನ ಸಾಕ್ಷಿಗಳು ಕಾಣಿಕೆಗಳನ್ನ ಯಾವುದಕ್ಕೆ ಉಪಯೋಗಿಸ್ತಾರೆ?
ನಾವು ಈ ಕಾಣಿಕೆಗಳನ್ನ ಸುವಾರ್ತೆ ಸಾರೋದಿಕ್ಕೆ ಮತ್ತು ನೈಸರ್ಗಿಕ ವಿಪತ್ತುಗಳಿಂದ ಭಾದಿತರಾದವರಿಗೆ ಸಹಾಯ ಮಾಡೋಕೆ ಉಪಯೋಗಿಸ್ತೀವಿ. ನಾವು ಈ ಕೆಲಸಗಳನ್ನ ಮಾಡೋಕೆ ಮುಖ್ಯ ಕಾರಣ ಜನರು ಯೇಸುವಿನ ಶಿಷ್ಯರಾಗಲು ಸಹಾಯ ಮಾಡೋದೇ ಆಗಿದೆ.—ಮತ್ತಾಯ 28:19, 20.
ನಾವು ನಮ್ಮ ಕಾಣಿಕೆಗಳನ್ನ ವೈಯಕ್ತಿಕವಾಗಿ ಯಾವುದೇ ಒಬ್ಬ ವ್ಯಕ್ತಿಗೋಸ್ಕರ ಬಳಸಲ್ಲ. ಹಿರಿಯರು ಸಂಬಳ ಇಲ್ದೆ ಸಭೆನ ನೋಡ್ಕೊತಾರೆ. ಯೆಹೋವನ ಸಾಕ್ಷಿಗಳು ಮನೆ ಮನೆ ಹೋಗಿ ಸುವಾರ್ತೆ ಸಾರೋಕೆ ಕೂಡ ಯಾವುದೇ ಹಣವನ್ನ ತಗೊಳಲ್ಲ. ಬ್ರಾಂಚ್ ಆಫೀಸ್, ಮುಖ್ಯ ಕಾರ್ಯಾಲಯ ಮತ್ತು ಆಡಳಿತ ಮಂಡಳಿಯಲ್ಲಿ ಕೆಲಸ ಮಾಡೋರು ಯಾವುದೇ ಸಂಬಳ ತಗೊಳ್ಳದೇ ಕೆಲ್ಸ ಮಾಡ್ತಾರೆ.
ನಮ್ಮ ಕೆಲಸಗಳು
ಮುದ್ರಣ ಕೆಲಸ: ನಾವು ಪ್ರತೀ ವರ್ಷ ಲಕ್ಷಾಂತರ ಬೈಬಲ್ ಮತ್ತು ಬೈಬಲ್ ಆಧಾರಿತ ಪ್ರಕಾಶನಗಳನ್ನ ಭಾಷಾಂತರಿಸಿ, ಮುದ್ರಿಸಿ, ರವಾನಿಸಿ, ವಿತರಿಸ್ತೇವೆ. ಇದಕ್ಕೆ ಒಂದು ರೂಪಾಯಿ ಕೂಡ ತಗೊಳಲ್ಲ. ಅದೇ ರೀತಿ ನಮ್ಮ ಡಿಜಿಟಲ್ ಸಾಹಿತ್ಯಗಳು ಕೂಡ ಯಾವುದೇ ಹಣ ಮತ್ತು ಜಾಹೀರಾತುಗಳಿಲ್ಲದೆ jw.org ವೆಬ್ಸೈಟ್ ಮತ್ತು JW ಲೈಬ್ರರಿ ಆ್ಯಪ್ನಲ್ಲಿ ಸಿಗುತ್ತೆ.
ಕಟ್ಟಡ ನಿರ್ಮಾಣ ಮತ್ತು ರಿಪೇರಿ ಕೆಲಸ: ನಾವು ದೇವರನ್ನ ಆರಾಧನೆ ಮಾಡೋಕೆ ರಾಜ್ಯ ಸಭಾಗೃಹಗಳನ್ನ ಕಟ್ತೀವಿ ಮತ್ತು ಅದನ್ನ ಸುಸ್ಥಿತಿಯ್ಲಲಿ ಇಡ್ತೀವಿ. ಇದರಿಂದ ನಾವು ಒಟ್ಟಿಗೆ ಸೇರಿ ದೇವರನ್ನ ಆರಾಧನೆ ಮಾಡಕ್ಕಾಗುತ್ತೆ. ಬ್ರಾಂಚ್ ಆಫೀಸ್ ಮತ್ತು ಭಾಷಾಂತರ ಕಛೇರಿಗಳನ್ನ ಕಟ್ಟಿ ಒಳ್ಳೇ ಸ್ಥಿತಿಯಲ್ಲಿ ಇಡ್ತೀವಿ. ಹೆಚ್ಚಿನ ಕೆಲಸಗಳನ್ನ ಸ್ವಯಂ ಸೇವಕರು ಮಾಡೋದ್ರಿಂದ ಖರ್ಚು ಕಮ್ಮಿಯಾಗಿದೆ.
ಮೇಲ್ವಿಚಾರಣೆ ಕೆಲಸ: ಮುಖ್ಯ ಕಾರ್ಯಾಲಯ, ಬ್ರಾಂಚ್ ಆಫೀಸ್, ಭಾಷಾಂತರ ಕಛೇರಿಗಳಲ್ಲಿ ತುಂಬ ಜನ ಕೆಲಸ ಮಾಡ್ತಾರೆ. ಕೆಲವರು ಬೇರೆ ಬೇರೆ ಜಾಗಕ್ಕೆ ಹೋಗಿ ಸುವಾರ್ತೆ ಸಾರ್ತಾರೆ. ಇವರ ಕೆಲಸಗಳಿಗಾಗಿ ಕಾಣಿಕೆಗಳನ್ನ ಉಪಯೋಗಿಸಲಾಗುತ್ತೆ.
ಸಾರುವ ಕೆಲಸ: ಸುವಾರ್ತೆ ಸಾರೋಕೆ, ‘ದೇವರ ವಾಕ್ಯನ’ ಬೇರೆಯವರಿಗೆ ಕಲಿಸೋಕೆ ಸಾಕ್ಷಿಗಳು ಯಾವುದೇ ಹಣವನ್ನ ತಗೊಳಲ್ಲ. (2 ಕೊರಿಂಥ 2:17) ಮೊದಲನೇ ಶತಮಾನದ ಕ್ರೈಸ್ತರ ತರ ನಾವು ಸಾರೋ ಕೆಲ್ಸಕ್ಕೆ ಪ್ರಾಮುಖ್ಯತೆ ಕೊಡ್ತೀವಿ. ಅದಕ್ಕಾಗಿ ಕೆಲವ್ರನ್ನ ಆರಿಸಿ ಸಾರೋಕೆ ಬೇಕಾದ ತರಬೇತಿ ಕೊಡಲಾಗುತ್ತೆ. ಇವ್ರು ಜಾಸ್ತಿ ಸಮಯ ದೇವರ ವಾಕ್ಯನ ಬೇರೆಯವ್ರಿಗೆ ಕಲಿಸೋದ್ರಿಂದ ಅವ್ರು ಉಳ್ಕೊಳ್ಳೋಕೆ ಬೇಕಾದ ಮನೆ ಮತ್ತು ಖರ್ಚು ವೆಚ್ಚಗಳಿಗೋಸ್ಕರ ಕಾಣಿಕೆಗಳನ್ನ ಬಳಸಲಾಗುತ್ತೆ.—ಫಿಲಿಪ್ಪಿ 4:16, 17; 1 ತಿಮೊತಿ 5:17, 18.
ಕಲಿಸೋ ಕೆಲಸ: ಅಧಿವೇಶನ ಮತ್ತು ಸಮ್ಮೇಳನಗಳನ್ನ ಏರ್ಪಡಿಸೋಕೆ, ಆಡಿಯೋ ಮತ್ತು ವೀಡಿಯೋ ಕಾರ್ಯಕ್ರಮಗಳನ್ನ ತಯಾರಿಸೋಕೆ ಕಾಣಿಕೆಗಳನ್ನ ಉಪಯೋಗಿಸಲಾಗುತ್ತೆ. ಜೊತೆಗೆ, ಹಿರಿಯರು ಮತ್ತು ಪೂರ್ತಿ ಸಮಯ ದೇವರ ಸೇವೆ ಮಾಡುವವರಿಗೆ ತರಬೇತಿ ಕೊಡೋದಿಕ್ಕೆ ಶಾಲೆಗಳನ್ನ ಏರ್ಪಡಿಸಲಾಗುತ್ತೆ. ಇದರಿಂದ ಅವರು ತಮ್ಮ ತಮ್ಮ ಕೆಲಸವನ್ನ ಚೆನ್ನಾಗಿ ಮಾಡಕ್ಕಾಗುತ್ತೆ.
ವಿಪತ್ತು ಪರಿಹಾರ ಕೆಲಸ: ನೈಸರ್ಗಿಕ ವಿಪತ್ತು ಮತ್ತು ಮನುಷ್ಯರಿಂದ ಆಗುವ ತೊಂದರೆಗಳಿಂದ ಭಾದಿತರಾದವರಿಗೆ ಊಟ, ನೀರು ಮತ್ತು ಅವರಿಗೆ ಮನೆಯನ್ನ ಕಟ್ಟಿಕೊಳ್ಳಲು ಕೂಡ ಸಹಾಯ ಮಾಡ್ತೀವಿ. ಇಂಥ ಒಳ್ಳೇ ಕೆಲಸಗಳ್ನ “ನಂಬಿಕೆಯಲ್ಲಿ ನಮ್ಮ ಸಂಬಂಧಿಕರಂತಿರುವವರಿಗೆ” ಮಾತ್ರ ಅಲ್ಲ ಬೇರೆಯವರಿಗೂ ಮಾಡ್ತೀವಿ.—ಗಲಾತ್ಯ 6:10.