ಯೆಹೋವನ ಸಾಕ್ಷಿಗಳು ಕ್ರೈಸ್ತರಾ?
ಕ್ರೈಸ್ತರೆಂದರೆ ಯೇಸು ಹೇಳಿದಂತೆ ನಡೆಯುವವರು. ಹೌದು, ನಾವು ಕ್ರೈಸ್ತರು, ಈ ಮುಂದಿನ ಕಾರಣಗಳಿಂದಾಗಿ:
ನಾವು ಯೇಸು ಕ್ರಿಸ್ತನ ಬೋಧನೆಗಳನ್ನೂ ಮಾದರಿಯನ್ನೂ ನಿಕಟವಾಗಿ ಅನುಕರಿಸಲು ಪ್ರಯತ್ನಿಸುತ್ತೇವೆ.—1 ಪೇತ್ರ 2:21.
ರಕ್ಷಣೆಯು ಯೇಸುವಿನ ಮುಖಾಂತರ ಮಾತ್ರ ಎಂದು ನಂಬುತ್ತೇವೆ. “ಆ ಹೆಸರಿನಿಂದಲೇ ಹೊರತು ಆಕಾಶದ ಕೆಳಗೆ ಮನುಷ್ಯರಲ್ಲಿ ಕೊಡಲ್ಪಟ್ಟಿರುವ ಬೇರೆ ಯಾವ ಹೆಸರಿನಿಂದಲೂ ನಾವು ರಕ್ಷಣೆಯನ್ನು ಹೊಂದಸಾಧ್ಯವಿಲ್ಲ.”—ಅಪೊಸ್ತಲರ ಕಾರ್ಯಗಳು 4:12.
ಜನರು ಯೆಹೋವನ ಸಾಕ್ಷಿಗಳಾಗುವಾಗ ಅವರಿಗೆ ಯೇಸುವಿನ ಹೆಸರಿನಲ್ಲಿ ದೀಕ್ಷಾಸ್ನಾನ ನೀಡಲಾಗುತ್ತದೆ.—ಮತ್ತಾಯ 28:18, 19.
ನಮ್ಮ ಪ್ರಾರ್ಥನೆಗಳನ್ನು ಯೇಸುವಿನ ಮೂಲಕ ಸಲ್ಲಿಸುತ್ತೇವೆ.—ಯೋಹಾನ 15:16.
ದೇವರು ಯೇಸುವನ್ನು ಎಲ್ಲ ಜನರ ಮೇಲೆ ರಾಜನನ್ನಾಗಿ ನೇಮಿಸಿದ್ದಾನೆಂದು ನಾವು ನಂಬುತ್ತೇವೆ.—1 ತಿಮೊಥೆಯ 6:15.
ಆದರೂ, ಕ್ರೈಸ್ತರೆಂದು ಹೇಳಿಕೊಳ್ಳುವ ಇತರ ಧಾರ್ಮಿಕ ಗುಂಪುಗಳಿಗಿಂತ ನಾವು ಅನೇಕ ವಿಧಗಳಲ್ಲಿ ಭಿನ್ನರಾಗಿದ್ದೇವೆ. ಉದಾಹರಣೆಗೆ, ಯೇಸು ತ್ರಯೇಕದ ಭಾಗವಲ್ಲ ಬದಲಿಗೆ ದೇವರ ಮಗನಾಗಿದ್ದಾನೆಂದು ಬೈಬಲ್ ಬೋಧಿಸುತ್ತದೆ ಎಂದು ನಾವು ನಂಬುತ್ತೇವೆ. (ಮಾರ್ಕ 12:29; ಮತ್ತಾಯ 16:16.) ಆತ್ಮವು ಅಮರವೆಂದು ನಾವು ನಂಬುವುದಿಲ್ಲ. ದೇವರು ಜನರನ್ನು ನರಕದಲ್ಲಿ ಹಾಕಿ ನಿತ್ಯಯಾತನೆ ಕೊಡುತ್ತಾನೆ ಅನ್ನುವುದಕ್ಕೆ ಯಾವುದೇ ಶಾಸ್ತ್ರೀಯ ಆಧಾರವಿಲ್ಲ. ಅಥವಾ ಧಾರ್ಮಿಕ ಚಟುವಟಿಕೆಗಳಲ್ಲಿ ಮುಂದಾಳತ್ವ ವಹಿಸುವವರಿಗೆ ಇತರರಿಗಿಂತ ಉನ್ನತವಾದ ಬಿರುದುಗಳು ಅಥವಾ ಸ್ಥಾನಮಾನವಿರಬೇಕೆಂದು ಸಹ ಬೈಬಲಿನಲ್ಲಿ ಎಲ್ಲೂ ತಿಳಿಸಲಾಗಿಲ್ಲ.—ಪ್ರಸಂಗಿ 9:5; ಯೆಹೆಜ್ಕೇಲ 18:4; ಮತ್ತಾಯ 23:8-10.