ಯೆಹೋವನ ಸಾಕ್ಷಿಗಳ ಮದುವೆ ಹೇಗಿರುತ್ತೆ?
ಯೆಹೋವನ ಸಾಕ್ಷಿಗಳ ಮದ್ವೆ ಸಿಂಪಲ್ಲಾಗಿ ಗೌರವದಿಂದ ಇರುತ್ತೆ. ಬೈಬಲಿಂದ ಒಂದು ಭಾಷಣ ಕೊಡ್ತಾರೆ. ಆದಾದ ಮೇಲೆ ರಿಸೆಪ್ಷನ್, ಊಟ, ಒಡನಾಟ ಇರುತ್ತೆ. a ಯೇಸು ಕೂಡ ಕಾನಾ ಅನ್ನೋ ಊರಲ್ಲಿ ಒಂದು ಮದ್ವೆಗೆ ಹೋದನು ಅಂತ ಬೈಬಲ್ ಹೇಳುತ್ತೆ.—ಯೋಹಾನ 2:1-11.
ಮದ್ವೆ ಹೇಗೆ ನಡೆಯುತ್ತೆ?
ಮದ್ವೆಲಿ 30 ನಿಮಿಷದ ಒಂದು ಭಾಷಣ ಇರುತ್ತೆ, ಅದನ್ನ ಯೆಹೋವನ ಸಾಕ್ಷಿಗಳಲ್ಲಿ ಒಬ್ಬರು ಕೊಡ್ತಾರೆ. ಭಾಷಣದಲ್ಲಿ ಕೊಡೋ ಬೈಬಲ್ ಸಲಹೆಗಳಿಂದ ಮದ್ವೆ ಆಗೋ ಹುಡುಗ ಹುಡುಗಿಗೆ ತುಂಬಾ ಪ್ರಯೋಜ್ನ ಸಿಗುತ್ತೆ. ಆ ಸಲಹೆಗಳನ್ನ ಪಾಲಿಸಿದ್ರೆ ಅವ್ರ ಮದ್ವೆ ಜೀವ್ನ ಯಾವಾಗಲೂ ಚೆನ್ನಾಗಿರುತ್ತೆ, ಅವ್ರು ಸಂತೋಷವಾಗಿ ಇರಬಹುದು.—ಎಫೆಸ 5:33.
ಕೆಲವು ದೇಶಗಳಲ್ಲಿ ಯೆಹೋವನ ಸಾಕ್ಷಿಗಳ ಮದ್ವೆಗೆ ಸಂಬಂಧಪಟ್ಟ ಕಾನೂನು ರೀತಿಯ ಎಲ್ಲಾ ವಿಷ್ಯಗಳನ್ನು ನೋಡಿಕೊಳ್ಳೋಕೆ ಸಾಕ್ಷಿಗಳಲ್ಲಿ ಒಬ್ಬರಿಗೆ ಸರ್ಕಾರ ಅಧಿಕಾರ ಕೊಟ್ಟಿರುತ್ತೆ. ಇಂಥ ಮದ್ವೆಗಳಲ್ಲಿ ಭಾಷಣ ಆದ ಮೇಲೆ ಮದ್ವೆ ಆದ ಹುಡುಗ ಹುಡುಗಿ ಒಬ್ಬರಿಗೊಬ್ಬರು ಮಾತು ಕೊಡ್ತಾರೆ. ಉಂಗುರಗಳನ್ನು ಬದಲಾಯಿಸ್ಕೊತಾರೆ. ಇದಾದ ಮೇಲೆ ಸರ್ಕಾರದಿಂದ ಅಧಿಕಾರ ಪಡೆದಿರೋ ಸಾಕ್ಷಿ, ಇವ್ರಿಬ್ಬರೂ ಗಂಡ ಹೆಂಡತಿ ಅಂತ ಎಲ್ರ ಮುಂದೆ ಹೇಳ್ತಾರೆ.
ಇನ್ನು ಕೆಲವು ದೇಶಗಳಲ್ಲಿ ಮದ್ವೆನಾ ಸರ್ಕಾರಿ ಕಛೇರಿಗಳಲ್ಲೇ ಮಾಡಬೇಕು ಅನ್ನೋ ನಿಯಮ ಇರುತ್ತೆ. ಇಂಥ ಪರಿಸ್ಥಿತಿ ಇದ್ರೆ ಮದ್ವೆ ಭಾಷಣ ಕೊಡೋಕೆ ಮುಂಚೆನೆ ಆ ಕಛೇರಿಗಳಿಗೆ ಹೋಗಿ ಮದ್ವೆ ಆಗ್ತಾರೆ. ಆ ಆಫೀಸಿನಲ್ಲಿ ಒಬ್ಬರಿಗೊಬ್ಬರು ಮಾತು ಕೊಟ್ಟಿಲ್ಲ ಅಂದ್ರೆ ಅದನ್ನ ಭಾಷಣದ ಆದ ಮೇಲೆ ಕೊಡಬಹುದು. ಒಂದುವೇಳೆ ಈಗಾಗಲೇ ಮಾತು ಕೊಟ್ಟು ಎಲ್ಲರ ಮುಂದೆ ಇನ್ನೊಂದು ಸಲ ಕೊಡಬೇಕು ಅಂತ ಅನಿಸಿದ್ರೆ ಆ ಮಾತನ್ನು ಅಥ್ವಾ ಪ್ರತಿಜ್ಞೆನಾ ಭೂತಕಾಲದಲ್ಲಿ ಹೇಳಬೇಕು. ಭಾಷಣ ಆದ ಮೇಲೆ ಹೊಸದಾಗಿ ಮದ್ವೆ ಆದವ್ರ ಮೇಲೆ ದೇವರ ಆಶೀರ್ವಾದಕ್ಕಾಗಿ ಪ್ರಾರ್ಥನೆ ಮಾಡ್ತಾರೆ.
ಯೆಹೋವನ ಸಾಕ್ಷಿಗಳ ಮದ್ವೆ ಎಲ್ಲಿ ನಡೆಯುತ್ತೆ?
ತುಂಬಾ ಸಾಕ್ಷಿಗಳು ತಮ್ಮ ಮದ್ವೆನಾ ರಾಜ್ಯಸಭಾಗೃಹಗಳಲ್ಲಿ ಮಾಡ್ಕೊತಾರೆ. b ರಿಸೆಪ್ಷನ್‌ನ ಬೇರೆ ಕಡೆ ಇಟ್ಕೊತಾರೆ.
ಮದ್ವೆಗೆ ಯಾರು ಬರಬಹುದು?
ರಾಜ್ಯಸಭಾಗೃಹದಲ್ಲಿ ನಡೆಯೋ ಮದ್ವೆಗೆ ಸಾಕ್ಷಿಗಳು ಸಾಕ್ಷಿಗಳಲ್ಲದೇ ಇರೋರು ಯಾರೂ ಬೇಕಾದ್ರೂ ಬರಬಹುದು. ಆದ್ರೆ ರಿಸೆಪ್ಷನ್‌ಗೆ ಯಾರನ್ನ ಕರೀಬೇಕು ಅನ್ನೋದು ಹುಡುಗ ಹುಡುಗಿಗೆ ಬಿಟ್ಟ ವಿಷ್ಯ.
ಮದ್ವೆಲಿ ಏನಾದ್ರೂ ಡ್ರೆಸ್ ಕೋಡ್ ಇರುತ್ತಾ?
ಆ ತರ ಡ್ರೆಸ್ ಕೋಡ್ ಇರಲ್ಲ. ಆದ್ರೆ ಯೆಹೋವನ ಸಾಕ್ಷಿಗಳು ಬಟ್ಟೆ ಬಗ್ಗೆ ಬೈಬಲ್ ಹೇಳಿರೋ ಮಾತಿನ ಪ್ರಕಾರ ನಡ್ಕೊತಾರೆ. ಅವ್ರು ಸಭ್ಯವಾದ ಬಟ್ಟೆ ಹಾಕ್ತಾರೆ, ಬೇರೆವ್ರ ಗಮನ ಸೆಳೆಯೋಂಥ ಬಟ್ಟೆಗಳನ್ನ ಹಾಕಲ್ಲ. ಮದ್ವೆಗೆ ಬರೋರು ಕೂಡ ಇದೇ ತರ ಬಟ್ಟೆ ಹಾಕಿದ್ರೆ ಅವ್ರಿಗೆ ಖುಷಿ ಆಗುತ್ತೆ. (1 ತಿಮೊತಿ 2:9) ಒಂದುವೇಳೆ ರಿಸೆಪ್ಷನ್‌ನಲ್ಲಿ ಡ್ರೆಸ್ ಕೋಡ್ ಇರಬೇಕು ಅಂತ ಹುಡುಗ ಹುಡುಗಿ ಇಷ್ಟಪಟ್ರೆ ಆಗಲೂ ಅವ್ರ ಬಟ್ಟೆ ಸಭ್ಯವಾಗಿ ಇರುತ್ತೆ.
ಮದ್ವೆಗೆ ಬರೋರು ಗಿಫ್ಟ್ ಕೊಡಬಹುದಾ?
ದಾರಾಳವಾಗಿ ಕೊಡೋರನ್ನ ಬೈಬಲ್ ಮೆಚ್ಚುತ್ತೆ. (ಕೀರ್ತನೆ 37:21) ಯೆಹೋವನ ಸಾಕ್ಷಿಗಳು ಗಿಫ್ಟ್ ಕೊಡೋಕೆ ಮತ್ತೆ ತಗೋಳೋಕೆ ಸಂತೋಷ ಪಡ್ತಾರೆ. (ಲೂಕ 6:38) ಆದ್ರೆ ಸಾಕ್ಷಿಗಳು ಗಿಫ್ಟ್ ಕೊಡಬೇಕು ಅಂತ ಒತ್ತಾಯ ಮಾಡಲ್ಲ, ಯಾರು ಗಿಫ್ಟ್ ಕೊಟ್ರು ಅಂತ ಅವ್ರ ಹೆಸರುಗಳನ್ನ ಡಂಗೂರ ಸಾರಲ್ಲ. (ಮತ್ತಾಯ 6:3, 4; 2 ಕೊರಿಂಥ 9:7; 1 ಪೇತ್ರ 3:8) ಆ ತರ ಮಾಡಿದ್ರೆ ಯಾರು ಗಿಫ್ಟ್ ತಂದಿರೋದಿಲ್ವೋ ಅವ್ರಿಗೆ ನೋವಾಗುತ್ತೆ ಮತ್ತು ಬೈಬಲ್ ಕೂಡ ಅದನ್ನ ಇಷ್ಟಪಡಲ್ಲ.
ಸ್ವಸ್ತಿಪಾನ (ಟೋಸ್ಟಿಂಗ್) ಇರುತ್ತಾ?
ಇರಲ್ಲ. ಯೆಹೋವನ ಸಾಕ್ಷಿಗಳು ಸ್ವಸ್ತಿಪಾನ (ಟೋಸ್ಟಿಂಗ್) ಮಾಡಲ್ಲ. ಯಾಕಂದ್ರೆ ಈ ಪದ್ಧತಿ ಸುಳ್ಳು ಧರ್ಮದಿಂದ ಬಂದಿದೆ. c ಮದ್ವೆ ಆಗೋ ಗಂಡು ಹೆಣ್ಣಿನ ಜೀವನ ಚೆನ್ನಾಗಿ ಸಂತೋಷವಾಗಿ ಇರಬೇಕು ಅಂತ ಅವ್ರು ಶುಭ ಹಾರೈಸ್ತಾರೆ. ಆದ್ರೆ ಇದನ್ನ ಸ್ವಸ್ತಿಪಾನದ ಮೂಲಕ ಮಾಡಲ್ಲ.
ಗಂಡು ಹೆಣ್ಣಿನ ಮೇಲೆ ಅಕ್ಕಿ ಕಾಳು ಹಾಕ್ತಾರಾ?
ಹಾಕಲ್ಲ. ಕೆಲವು ಜಾಗಗಳಲ್ಲಿ ಅಕ್ಕಿ ಕಾಳು ಅಥ್ವಾ ಹೂಗಳನ್ನ ಮದ್ವೆ ಆಗೋ ಗಂಡು ಹೆಣ್ಣಿನ ಮೇಲೆ ಹಾಕ್ತಾರೆ. ಹುಡುಗ ಹುಡುಗಿಗೆ ಒಳ್ಳೇದಾಗಲಿ, ಸಂತೋಷವಾಗಿ ಇರಲಿ, ತುಂಬಾ ಕಾಲ ಬದುಕಲಿ ಅಂತ ಆಶೀರ್ವಾದ ಮಾಡೋಕೆ ಇದನ್ನ ಹಾಕ್ತಾರೆ. ಇದೊಂದು ಮೂಢನಂಬಿಕೆ ಆಗಿರೋದ್ರಿಂದ ಸಾಕ್ಷಿಗಳು ಹೀಗೆ ಮಾಡಲ್ಲ. ಈ ತರ ಮಾಡಿ ಗುಡ್‌ಲಕ್ ಹೇಳೋದನ್ನ ಬೈಬಲ್ ಒಪ್ಪಲ್ಲ.—ಯೆಶಾಯ 65:11.
ಊಟ ಉಪಚಾರ, ಮದ್ಯ ಇರುತ್ತಾ?
ರಾಜ್ಯಸಭಾಗೃಹದಲ್ಲಿ ಮದ್ವೆ ನಡಿಯೋವಾಗ ಊಟದ ಏರ್ಪಾಡು ಇರಲ್ಲ. ಆದ್ರೆ ರಿಸೆಪ್ಷನ್‌ನಲ್ಲಿ ಊಟ ಉಪಚಾರ ಇರುತ್ತೆ. (ಪ್ರಸಂಗಿ 9:7) ಒಂದುವೇಳೆ ಮದ್ಯದ ವ್ಯವಸ್ಥೆ ಇದ್ರೆ ಹಿತ ಮಿತವಾಗಿ, ದೊಡ್ಡವರು ಮಾತ್ರ ತಗೊಳ್ಳೋ ತರ ನೋಡ್ಕೊತಾರೆ.—ಲೂಕ 21:34; ರೋಮನ್ನರಿಗೆ 13:1, 13.
ಮ್ಯೂಸಿಕ್ ಡ್ಯಾನ್ಸು ಇರುತ್ತಾ?
ಹುಡುಗ ಹುಡುಗಿ ಇಷ್ಟಪಟ್ರೆ ರಿಸೆಪ್ಷನ್‌ನಲ್ಲಿ ಮ್ಯೂಸಿಕ್ ಡ್ಯಾನ್ಸು ಇರುತ್ತೆ. (ಪ್ರಸಂಗಿ 3:4) ಅವ್ರಿಗೆ ಇಷ್ಟ ಆಗೋ ಮ್ಯೂಸಿಕನ್ನ ಹಾಕೋಬಹುದು. ಆದ್ರೆ ಅದು ಸಭ್ಯವಾಗಿದ್ದು ಅವ್ರ ಸಂಸ್ಕೃತಿಗೆ ತಕ್ಕ ಹಾಗೆ ಇರಬೇಕು. ಯಾರನ್ನೂ ಎಡವಿಸೋ ತರ ಇರಬಾರದು. ರಾಜ್ಯಸಭಾಗೃಹದಲ್ಲಿ ಮದ್ವೆ ನಡೆಯೋವಾಗ ಹಾಕೋ ಮ್ಯೂಸಿಕ್ ಬೈಬಲ್ ಆಧಾರಿತ ಗೀತೆಗಳಾಗಿರುತ್ತೆ.
ಯೆಹೋವನ ಸಾಕ್ಷಿಗಳು ವೆಡ್ಡಿಂಗ್ ಆ್ಯನಿವರ್ಸರಿ ಮಾಡ್ಕೊತಾರಾ?
ಬೈಬಲ್ ಆ್ಯನಿವರ್ಸರಿ ಮಾಡಿ ಅಂತಾನೂ ಹೇಳಲ್ಲ, ಮಾಡಬೇಡಿ ಅಂತನೂ ಹೇಳಲ್ಲ. ಅದನ್ನ ಗಂಡ ಹೆಂಡತಿನೇ ನಿರ್ಧಾರ ಮಾಡಬೇಕು. ಮಾಡೋಕೆ ಇಷ್ಟಪಟ್ರೆ ಕುಟುಂಬ ಮತ್ತು ಸ್ನೇಹಿತರ ಜೊತೆ ಮಾಡ್ಕೋಬಹುದು. ಇಲ್ಲಾಂದ್ರೆ ಇಬ್ಬರೇ ಮಾಡ್ಕೊಬಹುದು.
a ಮದ್ವೆ ಪದ್ದತಿ, ಆಚಾರ ವಿಚಾರ, ಕಾನೂನಿಗೆ ಸಂಬಂಧಪಟ್ಟ ವಿಷ್ಯಗಳು ಸ್ಥಳಕ್ಕೆ ತಕ್ಕಂತೆ ಬೇರೆ ಬೇರೆ ಆಗಿರುತ್ತೆ.
b ರಾಜ್ಯ ಸಭಾಗೃಹಕ್ಕಾಗಲಿ, ಮದ್ವೆಲಿ ಭಾಷಣ ಕೊಡೋದಕ್ಕಾಗಲಿ ಯಾರೂ ದುಡ್ಡು ತಗೊಳ್ಳಲ್ಲ.
c ಸ್ವಸ್ತಿಪಾನ (ಟೋಸ್ಟಿಂಗ್) ಸುಳ್ಳು ಧರ್ಮಕ್ಕೆ ಸಂಬಂಧಪಟ್ಟಿದ್ದು. ಇದ್ರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ, ಪುಟ 175-176 ಪ್ಯಾರ 19, 20 ಮತ್ತು ಫೆಬ್ರವರಿ 15, 2007 ರ ಕಾವಲಿನಬುರುಜುವಿನ “ವಾಚಕರಿಂದ ಪ್ರಶ್ನೆಗಳು” (ಇಂಗ್ಲಿಷ್) ನೋಡಿ.