ಸಂತೋಷದ ಜೀವನಮಾರ್ಗ
ಜೀವನಕ್ಕೆ ಉದ್ದೇಶ
ಮಾನವರು ತುಂಬ ವಿಧಗಳಲ್ಲಿ ಬೇರೆ ಜೀವಿಗಳಿಗಿಂತ ಭಿನ್ನರು—ಬರೆಯುತ್ತಾರೆ, ಬಣ್ಣ ಚಿತ್ರ ಬಿಡಿಸುತ್ತಾರೆ, ನಿರ್ಮಾಣ ಮಾಡುತ್ತಾರೆ ಮತ್ತು ಜೀವನದ ಪ್ರಾಮುಖ್ಯ ಪ್ರಶ್ನೆಗಳ ಬಗ್ಗೆ ಯೋಚಿಸುತ್ತಾರೆ. ಆ ಪ್ರಶ್ನೆಗಳು ಹೀಗಿವೆ: ಈ ವಿಶ್ವ ಯಾಕೆ ಇದೆ? ಮನುಷ್ಯರು ಹೇಗೆ ಅಸ್ತಿತ್ವಕ್ಕೆ ಬಂದರು? ಜೀವನದ ಉದ್ದೇಶವೇನು? ಭವಿಷ್ಯದಲ್ಲಿ ಏನಾಗಲಿದೆ?
ಇದಕ್ಕೆಲ್ಲ ಉತ್ತರ ಪಡೆಯಲು ಸಾಧ್ಯವಿಲ್ಲವೆಂದು ಅನೇಕರು ಅದರ ಬಗ್ಗೆ ಯೋಚಿಸಲಿಕ್ಕೇ ಹೋಗುವುದಿಲ್ಲ. ಇನ್ನು ಕೆಲವರು ಜೀವ ತನ್ನಿಂದ ತಾನೇ ಬಂದಿದೆ, ಹಾಗಾಗಿ ಇದೆಲ್ಲದ್ದರ ಬಗ್ಗೆ ಯೋಚಿಸಿ ಪ್ರಯೋಜನವಿಲ್ಲ ಎನ್ನುತ್ತಾರೆ. “ದೇವರುಗಳು ಇಲ್ಲ, ಉದ್ದೇಶಗಳು ಇಲ್ಲ. . . . ನೀತಿಸೂತ್ರಗಳಿಗೆ ಆಧಾರವೇ ಇಲ್ಲ, ಜೀವನಕ್ಕೆ ಅರ್ಥವೇ ಇಲ್ಲ” ಎನ್ನುತ್ತಾರೆ ಇತಿಹಾಸ ಮತ್ತು ಜೀವಶಾಸ್ತ್ರದ ಉಪನ್ಯಾಸಕರಾದ ವಿಲ್ಯಮ್ ಪ್ರೊವಿನ್.
ಆದರೆ, ಈ ದೃಷ್ಟಿಕೋನವನ್ನು ಒಪ್ಪಿಕೊಳ್ಳಲು ಆಗುವುದಿಲ್ಲ ಎಂದು ಕೆಲವರನ್ನುತ್ತಾರೆ. ವಿಶ್ವವು ನಿಖರವಾದ, ಚೆನ್ನಾಗಿ ಯೋಚಿಸಿ ರಚಿಸಲಾದ ವ್ಯವಸ್ಥಿತ ನಿಯಮಗಳ ನಿಯಂತ್ರಣದಲ್ಲಿದೆ ಎಂದವರು ಗಮನಿಸಿದ್ದಾರೆ. ನಿಸರ್ಗದಲ್ಲಿರುವ ಮನಸೆಳೆಯುವ ವಿನ್ಯಾಸಗಳನ್ನು ನೋಡಿ ಆಶ್ಚರ್ಯಪಡುತ್ತಾರೆ. ಮನುಷ್ಯನು ಅವುಗಳಲ್ಲಿ ಕೆಲವು ವಿನ್ಯಾಸಗಳನ್ನು ತನ್ನ ನಿರ್ಮಾಣಗಳಲ್ಲಿ ಅಳವಡಿಸಲು ಪ್ರಯತ್ನಿಸಿದ್ದಾನೆ. ಕ್ಲಿಷ್ಟಕರವಾದ ವಿನ್ಯಾಸಗಳು ಅವುಗಳ ಹಿಂದೆ ಒಬ್ಬ ಬುದ್ಧಿವಂತನ ಕೈ ಇರುವುದನ್ನು ಸ್ಪಷ್ಟಪಡಿಸುತ್ತವೆ ಎಂದು ಅವರಿಗೆ ಪ್ರತಿದಿನದ ಅನುಭವದಿಂದ ಗೊತ್ತಾಗುತ್ತಿದೆ.
ಇಂಥ ತರ್ಕಗಳಿಂದಾಗಿ ಕೆಲವು ವಿಕಾಸವಾದಿಗಳು ತಮ್ಮ ನಂಬಿಕೆಯನ್ನು ಮತ್ತೆ ಪರೀಕ್ಷಿಸಿದ್ದಾರೆ. ಇಬ್ಬರ ಉದಾಹರಣೆಗಳನ್ನು ಗಮನಿಸಿ:
ನರ ಶಸ್ತ್ರಚಿಕಿತ್ಸಾ ತಜ್ಞ ಡಾ. ಆಲಿಕ್ಸೈ ಮಾರ್ನವ್. “ನಾನು ಓದಿದ ಶಾಲೆಗಳಲ್ಲಿ ನಾಸ್ತಿಕತೆ ಮತ್ತು ವಿಕಾಸವಾದವನ್ನು ಕಲಿಸಲಾಯಿತು. ಯಾರಾದರೂ ದೇವರನ್ನು ನಂಬಿದರೆ ಅವರಿಗೆ ಸರಿಯಾದ ಜ್ಞಾನ ಇಲ್ಲ ಎಂದು ಭಾವಿಸಲಾಗುತ್ತಿತ್ತು” ಎನ್ನುತ್ತಾರೆ ಆಲಿಕ್ಸೈ. ಆದರೆ, 1990 ರಲ್ಲಿ ವಿಕಾಸವಾದದ ಬಗ್ಗೆ ಅವರ ಅಭಿಪ್ರಾಯ ಬದಲಾಗತೊಡಗಿತು.
ಅವರು ವಿವರಿಸಿದ್ದು: “ನಾನು ಯಾವಾಗಲೂ ಯಾವುದೇ ವಿಷಯದ ಹಿಂದಿರುವ ತರ್ಕಬದ್ಧ ಕಾರಣವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದೇನೆ. ಮಾನವ ಮೆದುಳಿನ ಬಗ್ಗೆಯೂ ಇದನ್ನೇ ಮಾಡಿದೆ. ಈ ಅಂಗವನ್ನು ತಕ್ಕದಾಗಿಯೇ ಮನುಷ್ಯನಿಗೆ ಗೊತ್ತಿರುವ ವಿಶ್ವದಲ್ಲೇ ಅತಿ ಕ್ಲಿಷ್ಟಕರ ರಚನೆ ಎಂದು ಕರೆಯಲಾಗಿದೆ. ಇಂಥ ಮೆದುಳನ್ನು ರಚಿಸಿದ್ದು ಜ್ಞಾನ, ಕೌಶಲಗಳನ್ನು ಪಡೆದು ಒಂದು ದಿನ ಸಾಯಲಿಕ್ಕಾ? ಇದು ಅರ್ಥವಿಲ್ಲದ್ದು, ತರ್ಕಬದ್ಧವಾಗಿಲ್ಲ ಅಂತ ಅನಿಸಿತು. ಹಾಗಾಗಿ, ‘ನಾವು ಯಾಕೆ ಇಲ್ಲಿದ್ದೇವೆ? ಜೀವನದ ಉದ್ದೇಶ ಏನು?’ ಎಂದು ಯೋಚಿಸಲು ಆರಂಭಿಸಿದೆ. ಹೀಗೆ ಗಂಭೀರವಾಗಿ ಯೋಚಿಸಿದಾಗ ಒಬ್ಬ ಸೃಷ್ಟಿಕರ್ತ ಇರಲೇಬೇಕೆಂಬ ತೀರ್ಮಾನಕ್ಕೆ ಬಂದೆ.”
ಜೀವನದ ಉದ್ದೇಶದ ಬಗ್ಗೆ ಹುಡುಕುತ್ತಾ ಹುಡುಕುತ್ತಾ ಆಲಿಕ್ಸೈ ಬೈಬಲ್ ಏನನ್ನುತ್ತದೆಂದು ಪರೀಕ್ಷಿಸಿದರು. ವೈದ್ಯೆಯಾಗಿರುವ ಅವರ ಹೆಂಡತಿ ಸಹ ನಾಸ್ತಿಕಳಾಗಿದ್ದಳು. ತನ್ನ ಗಂಡನ ಹೊಸ ನಂಬಿಕೆ ತಪ್ಪೆಂದು ರುಜುಪಡಿಸಲಿಕ್ಕಾಗಿ ಬೈಬಲ್ ಅಧ್ಯಯನ ಆರಂಭಿಸಿದ ಅವಳು ಅದನ್ನು ಹಾಗೇ ಮುಂದುವರಿಸಿದಳು. ಈಗ ಅವರಿಬ್ಬರೂ ದೇವರಿದ್ದಾನೆಂದು ದೃಢವಾಗಿ ನಂಬುತ್ತಾರೆ. ಮಾನವರಿಗಾಗಿ ದೇವರಿಗಿರುವ ಉದ್ದೇಶದ ಬಗ್ಗೆ ಬೈಬಲಿನಲ್ಲಿರುವ ವಿವರಣೆಯನ್ನು ಅರ್ಥಮಾಡಿಕೊಂಡಿದ್ದಾರೆ.
ಪ್ಲಾಸ್ಮಾ ವಿಜ್ಞಾನಿ ಡಾ. ಹ್ವಾಬೈ ಯಿನ್. ಈಕೆ ಭೌತಶಾಸ್ತ್ರದ ಅಧ್ಯಯನ ಮಾಡಿ ಅನೇಕ ವರ್ಷ ಪ್ಲಾಸ್ಮಾ ಬಗ್ಗೆ ಸಂಶೋಧನೆ ಮಾಡಿದರು. ದ್ರವ್ಯದ ನಾಲ್ಕನೇ ಸ್ಥಿತಿ ಎಂದು ಪರಿಗಣಿಸಲಾಗುವ ಪ್ಲಾಸ್ಮಾವು (ಸೂರ್ಯನಲ್ಲಿರುವಂಥದ್ದು) ಹೆಚ್ಚಿನಾಂಶ ಎಲೆಕ್ಟ್ರಾನ್ ಮತ್ತು ಧನಾತ್ಮಕ ಆಯಾನ್ಗಳಿಂದ ರಚಿತವಾಗಿದೆ.
ಹ್ವಾಬೈ ಹೀಗನ್ನುತ್ತಾರೆ: “ವಿಜ್ಞಾನಿಗಳಾಗಿರುವ ನಾವು ಪ್ರಕೃತಿಯನ್ನು ಅಧ್ಯಯನ ಮಾಡುವಾಗ ಯಾವಾಗಲೂ ಉಚ್ಚ ಮಟ್ಟದ ಕ್ರಮಬದ್ಧತೆಯನ್ನು ಗಮನಿಸಿದ್ದೇವೆ. ಈ ಕ್ರಮಬದ್ಧತೆ ಸಾಧ್ಯವಾಗುವುದು ನಿಖರವಾದ ನಿಯಮಗಳಿಂದಾಗಿಯೇ. ಆಗ ನಾನು ‘ಈ ನಿಯಮಗಳು ಹೇಗೆ ಬಂದವು? ಅಡಿಗೆ ಮಾಡಲು ಬಳಸುವ ಬೆಂಕಿಯನ್ನು ನಿಯಂತ್ರಿಸಲು ಯಾರೋ ಒಬ್ಬರು ಇರಬೇಕಾದರೆ ಸೂರ್ಯನನ್ನು ನಿಯಂತ್ರಿಸುವ ನಿಯಮಗಳನ್ನು ಮಾಡಿದವರು ಯಾರು?’ ಎಂದು ಯೋಚಿಸಿದೆ. ‘ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದನು’ ಎಂದು ಬೈಬಲಿನಲ್ಲಿರುವ ಆರಂಭದ ಮಾತುಗಳೇ ತುಂಬ ತರ್ಕಬದ್ಧ ಉತ್ತರವೆಂದು ಸಮಯಾನಂತರ ತಿಳಿದುಕೊಂಡೆ.”—ಆದಿಕಾಂಡ 1:1.
ವಿಜ್ಞಾನವು “ಹೇಗೆ” ಎಂಬ ಅನೇಕ ಪ್ರಶ್ನೆಗಳಿಗೆ ಉತ್ತರಗಳನ್ನು ಕೊಟ್ಟಿದೆ ನಿಜ. ಉದಾಹರಣೆಗೆ, ಮೆದುಳಿನ ಕೋಶಗಳು ಹೇಗೆ ಕೆಲಸ ಮಾಡುತ್ತವೆ? ಸೂರ್ಯ ಹೇಗೆ ಶಾಖ ಮತ್ತು ಬೆಳಕನ್ನು ಉತ್ಪತ್ತಿ ಮಾಡುತ್ತದೆ? ಎಂಬ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದೆ. ಆದರೆ ಆಲಿಕ್ಸೈ ಮತ್ತು ಹ್ವಾಬೈ ಕಂಡುಕೊಂಡಂತೆ “ಯಾಕೆ” ಎಂಬ ಬಹು ಮುಖ್ಯ ಪ್ರಶ್ನೆಗಳಿಗೆ ಬೈಬಲ್ ಉತ್ತರ ನೀಡುತ್ತದೆ. ಉದಾಹರಣೆಗೆ, ವಿಶ್ವ ಯಾಕೆ ಅಸ್ತಿತ್ವದಲ್ಲಿದೆ? ಅದು ಯಾಕೆ ನಿಯಮಗಳಿಂದ ನಿಯಂತ್ರಿಸಲ್ಪಟ್ಟಿದೆ? ನಾವು ಯಾಕೆ ಅಸ್ತಿತ್ವದಲ್ಲಿದ್ದೇವೆ?
ಭೂಮಿಯ ಬಗ್ಗೆ ಬೈಬಲ್ ಹೀಗನ್ನುತ್ತದೆ: “ದೇವರು . . . ಅದನ್ನು ಶೂನ್ಯಸ್ಥಾನವಾಗಿರಲೆಂದು ಸೃಷ್ಟಿಸದೆ ಜನನಿವಾಸಕ್ಕಾಗಿಯೇ ರೂಪಿಸಿದನು.” (ಯೆಶಾಯ 45:18) ಇದು ಭೂಮಿಗಾಗಿ ದೇವರಿಗೊಂದು ಉದ್ದೇಶವಿದೆ ಎಂದು ತೋರಿಸುತ್ತದೆ. ಈ ಉದ್ದೇಶಕ್ಕೂ ಭವಿಷ್ಯಕ್ಕಾಗಿರುವ ನಮ್ಮ ನಿರೀಕ್ಷೆಗೂ ಹತ್ತಿರದ ನಂಟಿದೆಯೆಂದು ಮುಂದಿನ ಲೇಖನ ತೋರಿಸಲಿದೆ.