ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸವಾಲುಗಳನ್ನು ಎದುರಿಸಿದವರು

ರಿಕಾರ್ಡೊ ಮತ್ತು ಆ್ಯಂಡ್ರೆಸ್‌

ರಿಕಾರ್ಡೊ ಮತ್ತು ಆ್ಯಂಡ್ರೆಸ್‌

ಬೈಬಲ್‌ ಶಿಕ್ಷಣವು ಜನರ ಜೀವನವನ್ನು ಬದಲಾಯಿಸಬಲ್ಲದು. ಇದನ್ನು ತಿಳಿದುಕೊಳ್ಳಲು ರಿಕಾರ್ಡೊ ಮತ್ತು ಆ್ಯಂಡ್ರೆಸ್‌ರ ಉದಾಹರಣೆಗಳನ್ನು ನೋಡೋಣ.

ರಿಕಾರ್ಡೋ: 15​ರ ಪ್ರಾಯದಲ್ಲಿ, ನಾನು ಒಂದು ಗೂಂಡಾಗಳ ಗುಂಪನ್ನು ಸೇರಿಕೊಂಡೆ. ನನ್ನ ಈ ಹೊಸ ಸ್ನೇಹತರಿಂದ ತುಂಬ ಬದಲಾದೆ. ಹತ್ತು ವರ್ಷ ಸೆರೆಮನೆಯಲ್ಲಿ ಇರಬೇಕೆಂಬುದು ನನ್ನ ಗುರಿಯಾಗಿತ್ತು! ಇದು ವಿಚಿತ್ರ ಅನಿಸಬಹುದು. ಆದರೆ ನಮ್ಮ ನೆರೆಹೊರೆಯವರು ಜೈಲಿಗೆ ಹೋಗಿ ಬಂದಿದ್ದವರನ್ನು ಮೆಚ್ಚುತ್ತಿದ್ದರು, ತುಂಬ ಗೌರವಿಸುತ್ತಿದ್ದರು. ಅವರಿಂದ ನಾನೂ ಮೆಚ್ಚಿಕೆ ಪಡೆಯಬೇಕು ಎಂದು ಆಸೆಪಟ್ಟೆ.

ಸಾಮಾನ್ಯವಾಗಿ ಇಂಥ ಗೂಂಡಾಗಳ ಜೀವನ ಹೇಗಿರುತ್ತೋ ನನ್ನ ಜೀವನವೂ ಹಾಗೇ ಇತ್ತು. ಅಂದರೆ ನನ್ನ ಜೀವನ ಅಮಲೌಷಧ, ಅನೈತಿಕತೆ ಮತ್ತು ಹಿಂಸೆಯಿಂದ ತುಂಬಿತ್ತು. ಒಂದಿನ ರಾತ್ರಿ ಇನ್ನೊಂದು ಗೂಂಡಾಗಳ ಗುಂಪು ನಮ್ಮ ಮೇಲೆ ಗುಂಡಿನ ದಾಳಿ ಮಾಡಿತು. ಆಗ ನಾನು ಖಂಡಿತ ಕೊಲ್ಲಲ್ಪಡುತ್ತೇನೆ ಅಂದುಕೊಂಡಿದ್ದೆ. ಆದರೆ ನನಗೆ ಏನೂ ಆಗಲಿಲ್ಲ. ಅದಾದ ಮೇಲೆ, ನಾನು ನನ್ನ ಜೀವನದ ಬಗ್ಗೆ, ನನ್ನ ಗುರಿಗಳ ಬಗ್ಗೆ ಗಂಭೀರವಾಗಿ ಯೋಚಿಸಲು ಪ್ರಾರಂಭಿಸಿದೆ. ನಾನು ಬದಲಾಗಬೇಕು ಅಂತ ನಿರ್ಧಾರ ಮಾಡಿದೆ. ಆದ್ರೆ ಹೇಗೆ? ಯಾರು ನನಗೆ ಸಹಾಯ ಮಾಡ್ತಾರೆ?

ನನ್ನ ಸಂಬಂಧಿಕರಲ್ಲಿ ಹೆಚ್ಚಿನವರ ಜೀವನದಲ್ಲಿ ಸಂತೋಷ ಇರಲಿಲ್ಲ. ಅವರ ಬದುಕು ಸಮಸ್ಯೆಗಳಿಂದ ತುಂಬಿತ್ತು. ಆದರೆ ನನ್ನ ಒಬ್ಬ ಮಾವನ ಕುಟುಂಬ ಹಾಗಿರಲಿಲ್ಲ. ಅವರು ಒಳ್ಳೆಯವರು ಅಂತ ನನಗೆ ಗೊತ್ತಿತ್ತು. ಅವರು ಬೈಬಲ್‌ ಪ್ರಕಾರ ಜೀವನ ಮಾಡುತ್ತಿದ್ದರು. ಒಂದು ಸಲ ನಾನು ಅವರಿಂದ ದೇವರ ಹೆಸರು ಯೆಹೋವ ಅಂತ ಕೂಡ ಕಲಿತಿದ್ದೆ. ಆದುದರಿಂದ ಗುಂಡಿನ ದಾಳಿಯಾದ ಸ್ವಲ್ಪ ಸಮಯದಲ್ಲೇ ನಾನು ಯೆಹೋವ ದೇವರಿಗೆ ಪ್ರಾರ್ಥಿಸಿದೆ. ದೇವರ ಹೆಸರೆತ್ತಿ ನನಗೆ ಸಹಾಯ ಮಾಡು ಅಂತ ಬೇಡಿಕೊಂಡೆ. ಆಶ್ಚರ್ಯವೇನೆಂದರೆ ಮಾರನೇ ದಿನನೇ ಒಬ್ಬ ಯೆಹೋವನ ಸಾಕ್ಷಿ ನಮ್ಮ ಮನೆ ಬಾಗಿಲು ತಟ್ಟಿದರು. ಆಮೇಲೆ ಅವರ ಹತ್ತಿರ ನಾನು ಬೈಬಲ್‌ ಕಲಿಯಲು ಆರಂಭಿಸಿದೆ.

ಸ್ವಲ್ಪದರಲ್ಲೇ ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಯಿತು. ನನ್ನ ಹಳೇ ಸ್ನೇಹಿತರು ಆಗಾಗ ಫೋನ್‌ ಮಾಡಿ ಅವರ ಜೊತೆ ಹೋಗಲು ಕರೆಯುತ್ತಿದ್ದರು. ಅವರಿಗೆ, ‘ಬರಲ್ಲ’ ಅಂತ ಹೇಳೋದು ಅಷ್ಟು ಸುಲಭವಾಗಿರಲಿಲ್ಲವಾದ್ರೂ ಹಾಗೇ ಮಾಡಿದೆ. ನಾನು ಬೈಬಲ್‌ ಅಧ್ಯಯನ ಮುಂದುವರಿಸಬೇಕು ಅಂತ ದೃಢ ತೀರ್ಮಾನ ಮಾಡಿಕೊಂಡಿದ್ದೆ. ಹಾಗೆ ಮಾಡಿದ್ದು ಒಳ್ಳೇದೇ ಆಯಿತು. ನನ್ನ ಜೀವನ ತುಂಬ ಬದಲಾಯಿತು ಮತ್ತು ನಿಜ ಸಂತೋಷವನ್ನು ಕಂಡುಕೊಂಡೆ.

ಯೆಹೋವನೇ, ನಾನು ಒಬ್ಬ ಗೂಂಡಾ ಆಗಿದ್ದಾಗ ಹತ್ತು ವರ್ಷ ಸೆರೆಮನೆಯಲ್ಲಿದ್ದು ತುಂಬ ಗೌರವ ಸಂಪಾದಿಸಬೇಕು ಅಂತ ಯೋಚಿಸುತ್ತಿದ್ದೆ. ಆದರೆ ಈಗ ನನಗೆ ಸಿಕ್ಕಿದ ಸಹಾಯ ಬೇರೆಯವರಿಗೂ ಸಿಗಬೇಕು, ಅದಕ್ಕಾಗಿ ಕಡಿಮೆ ಪಕ್ಷ ಹತ್ತು ವರ್ಷವಾದರೂ ಪೂರ್ಣ ಸಮಯದ ಸೇವೆ ಮಾಡಲಿಕ್ಕೆ ನನಗೆ ಅವಕಾಶ ಕೊಡಿ ಅಂತ ಪ್ರಾರ್ಥನೆ ಮಾಡಿದ್ದು ನನಗಿನ್ನೂ ಜ್ಞಾಪಕ ಇದೆ. ನನ್ನ ಪ್ರಾರ್ಥನೆಗೆ ಯೆಹೋವನು ಉತ್ತರಿಸಿದ್ದಾನೆ, ನಾನು ಕಳೆದ 17 ವರ್ಷಗಳಿಂದ ಪೂರ್ಣ ಸಮಯದ ಸೇವೆಯನ್ನು ಮಾಡುತ್ತಿದ್ದೇನೆ. ಆದರೆ ಜೈಲಿಗೆ ಮಾತ್ರ ಯಾವತ್ತೂ ಹೋಗಿಲ್ಲ.

ನನ್ನ ಹಳೇ ಸ್ನೇಹಿತರಲ್ಲಿ ಅನೇಕರು ತುಂಬ ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಕೆಲವರು ಸತ್ತುಹೋಗಿದ್ದಾರೆ. ಹಳೇದನ್ನೆಲ್ಲಾ ನೆನಸಿಕೊಳ್ಳುವಾಗ ಸಾಕ್ಷಿಗಳಾಗಿದ್ದ ನನ್ನ ಸಂಬಂಧಿಕರಿಗೆ ನಾನು ತುಂಬ ಧನ್ಯವಾದ ಹೇಳುತ್ತೇನೆ. ಬೈಬಲ್‌ನಲ್ಲಿ ಹೇಳೋ ಪ್ರಕಾರ ಜೀವಿಸುತ್ತಾ ಬೇರೆಯವರಿಗಿಂತ ಭಿನ್ನರಾಗಿರಲು ಅವರು ಸಂಕೋಚಪಡಲಿಲ್ಲ. ಹಾಗಾಗಿ, ನನಗೆ ಅವರ ಮೇಲೆ ತುಂಬ ಗೌರವವಿದೆ. ಅವರನ್ನು ಗೌರವಿಸುವಷ್ಟು ಗೂಂಡಾಗಳ ಗುಂಪಿನಲ್ಲಿದ್ದ ಯಾರನ್ನೂ ಗೌರವಿಸಿದ್ದಿಲ್ಲ. ಆದರೆ ಎಲ್ಲರಿಗಿಂತ ಹೆಚ್ಚಾಗಿ ದೇವರಿಗೆ ನಾನು ಚಿರಋಣಿ, ಯಾಕೆಂದರೆ ನಿಜವಾಗಿಯೂ ಅತ್ಯುತ್ತಮ ಜೀವನ ಅಂದರೆ ಏನು ಅಂತ ಆತನು ಕಲಿಸಿಕೊಟ್ಟಿದ್ದಾನೆ.

ಆ್ಯಂಡ್ರೆಸ್‌ : ನಾನು ಹುಟ್ಟಿ ಬೆಳೆದದ್ದು ಬಡ ಪ್ರದೇಶದಲ್ಲಿ. ಅಲ್ಲಿ ಕೊಲೆ, ದರೋಡೆ, ಅಮಲೌಷಧ ಮತ್ತು ವೇಶ್ಯಾವಾಟಿಕೆ ಸಾಮಾನ್ಯವಾಗಿತ್ತು. ನನ್ನ ತಂದೆ ಕುಡುಕ ಮತ್ತು ಅಮಲೌಷಧದ ವ್ಯಸನಿ ಆಗಿದ್ದರು. ನಮ್ಮ ಮನೆಯಲ್ಲಿ ಬಯ್ಯುವುದು ಹೊಡೆದಾಡುವುದು ಅಂತ ಅಪ್ಪ ಅಮ್ಮ ಯಾವಾಗಲೂ ಜಗಳವಾಡುತ್ತಿದ್ದರು.

ಚಿಕ್ಕ ವಯಸ್ಸಿನಲ್ಲೇ ನಾನು ಕುಡಿಯುವ ಮತ್ತು ಅಮಲೌಷಧ ಸೇವಿಸುವ ಚಟಕ್ಕೆ ಬಲಿಯಾದೆ. ನಾನು ಯಾವಾಗಲೂ ಬೀದಿಯಲ್ಲಿರುತ್ತಿದ್ದೆ. ಕದಿಯೋದು, ಕದ್ದದ್ದನ್ನು ಮಾರೋದು ನನ್ನ ಕಸುಬಾಗಿತ್ತು. ದೊಡ್ಡವನಾಗುತ್ತಾ ಹೋದಂತೆ, ನನಗೆ ಆಪ್ತರಾಗಬೇಕು ಎಂಬ ಉದ್ದೇಶದಿಂದ ನನ್ನ ತಂದೆ ಅಮಲೌಷಧ ಮತ್ತು ಅಕ್ರಮ ಸರಕುಗಳ ಕಳ್ಳಸಾಗಣೆ ಮಾಡಿ ಮಾರಾಟ ಮಾಡುವುದನ್ನು ಕಲಿಸಿಕೊಟ್ಟರು. ಇದರಿಂದ ಬೇಗ ತುಂಬ ದುಡ್ಡು ಮಾಡಿದೆ. ಒಂದು ದಿನ ಪೊಲೀಸರು ನಮ್ಮ ಮನೆಗೆ ಬಂದರು. ನಾನು ಕೊಲೆ ಯತ್ನ ಮಾಡಿದ್ದಕ್ಕಾಗಿ ನನ್ನನ್ನು ದಸ್ತಗಿರಿ ಮಾಡಿದರು. ನನಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಲಾಯಿತು.

ಒಂದು ದಿನ ಬೆಳಿಗ್ಗೆ, ಯೆಹೋವನ ಸಾಕ್ಷಿಗಳು ಏರ್ಪಡಿಸಿರುವ ಬೈಬಲ್‌ ಚರ್ಚೆಗೆ ಹಾಜರಾಗಲು ಜೈಲಿನಲ್ಲಿರುವ ಕೈದಿಗಳನ್ನು ಆಮಂತ್ರಿಸಲಾಯಿತು. ನಾನು ಹೋಗಬೇಕೆಂದು ನಿರ್ಧರಿಸಿದೆ. ಅಲ್ಲಿ ನಾನು ಕೇಳಿಸಿಕೊಂಡ ವಿಷಯಗಳು ಇಷ್ಟವಾದವು. ಆಮೇಲೆ ಬೈಬಲ್‌ ಅಧ್ಯಯನವನ್ನು ಆರಂಭಿಸಿದೆ. ಅವರು ಸ್ವಲ್ಪವೂ ಹಿಂಜರಿಯದೆ ನನಗೆ ದೇವರ ಉನ್ನತ ನೈತಿಕ ಮಟ್ಟಗಳನ್ನು ಬೈಬಲಿನಿಂದ ಸ್ಪಷ್ಟವಾಗಿ ಕಲಿಸಿದರು.

ಬದಲಾವಣೆಗಳನ್ನು ಮಾಡಿಕೊಳ್ಳಲು ನನಗೆ ಸಹಾಯದ ಅಗತ್ಯವಿದೆ ಅಂತ ಅರ್ಥ ಮಾಡಿಕೊಂಡೆ. ನಾನು ಮಾಡುತ್ತಿದ್ದದ್ದನ್ನು ಇಷ್ಟಪಡದ ಕೆಲವು ಕೈದಿಗಳು ನನ್ನನ್ನು ಬೆದರಿಸಿದಾಗಲಂತೂ ಇದು ನನಗೆ ಸ್ಪಷ್ಟವಾಗಿ ಅರ್ಥವಾಯಿತು. ಆದ್ದರಿಂದ ನಾನು ಬಲ ಮತ್ತು ವಿವೇಕಕ್ಕಾಗಿ ಯೆಹೋವನಿಗೆ ಪ್ರಾರ್ಥಿಸಿದೆ. ಯೆಹೋವನಿಂದ ಸಹಾಯ ಪಡೆದುಕೊಂಡೆ. ನನ್ನನ್ನು ಎದುರಿಸುತ್ತಿದ್ದ ಕೈದಿಗಳಿಗೆ ಬೈಬಲಿನಿಂದ ಉತ್ತರ ನೀಡುವಷ್ಟರ ಮಟ್ಟಿಗೆ ಕಲಿತುಕೊಂಡೆ.

ನನ್ನ ಬಿಡುಗಡೆಯ ಸಮಯ ಬಂದಾಗ ನನಗೆ ಹೊರಗೆ ಹೋಗಲು ಎಷ್ಟು ಭಯ ಇತ್ತೆಂದರೆ ನಾನು ಜೈಲಿನಲ್ಲೇ ಉಳಿಯಬೇಕು ಅಂತ ಯೋಚಿಸಿದೆ. ನಾನು ಜೈಲನ್ನು ಬಿಟ್ಟು ಬರುವಾಗ ಜೈಲಿನಲ್ಲಿದ್ದ ಅನೇಕರು ನನಗೆ ವಿದಾಯ ಹೇಳಿದರು. ಕೆಲವರು ನನ್ನನ್ನು ಪ್ರೀತಿಯಿಂದ ‘ದೇವಸೇವಕನೇ ಸಂತೋಷದಿಂದ ಮನೆಗೆ ಹೋಗು’ ಅಂತ ಹೇಳಿದರು.

ಬೈಬಲ್‌ ಶಿಕ್ಷಣ ನನಗೆ ಸಿಗದಿದ್ದರೆ ನಾನು ಏನಾಗುತ್ತಿದ್ದೆ ಎಂದು ನೆನಸಿಕೊಂಡರೆನೇ ಭಯ ಆಗುತ್ತದೆ. ದೇವರು ನನ್ನನ್ನು ಪ್ರೀತಿಸಿದ್ದಕ್ಕೆ, ಕಡೆಗಣಿಸದೆ ಇದ್ದದ್ದಕ್ಕೆ ನಾನು ಎಂದೆಂದಿಗೂ ಆತನಿಗೆ ಚಿರಋಣಿ. *

^ ಬೈಬಲಿಗಿರುವ ಶಕ್ತಿಯು ಜನರ ಜೀವನವನ್ನೇ ಬದಲಾಯಿಸಬಲ್ಲದು ಎಂದು ತಿಳಿಸುವ ಅನೇಕರ ಅನುಭವಗಳಿಗಾಗಿ jw.org ನೋಡಿ. ಅಲ್ಲಿ ಲೈಬ್ರರಿ  ಹೋಗಿ ಲೇಖನ ಸರಣಿಗಳ ಕೆಳಗೆ ಬದುಕು ಬದಲಾದ ವಿಧ ನೋಡಿ.