ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಡ್ಡಿ-ತಡೆ

ಸುರಕ್ಷತೆಗೆ ಎದುರಾಗಿರುವ ಸಮಸ್ಯೆಗಳು

ಸುರಕ್ಷತೆಗೆ ಎದುರಾಗಿರುವ ಸಮಸ್ಯೆಗಳು

“ಇಂದಿನ ಪೀಳಿಗೆಯು ಆರ್ಥಿಕ, ವೈಜ್ಞಾನಿಕ ಮತ್ತು ತಾಂತ್ರಿಕ ಸೌಕರ್ಯಗಳನ್ನು ಹಿಂದೆಂದಿಗಿಂತಲೂ ಹೆಚ್ಚಾಗಿ ಅನುಭವಿಸುತ್ತಿದೆ. ಆದರೂ ಇವರೇ ಲೋಕದ [ರಾಜಕೀಯ, ಆರ್ಥಿಕ ಮತ್ತು ಪರಿಸರ] ವ್ಯವಸ್ಥೆಗಳನ್ನು ಹಿಂದೆಂದಿಗಿಂತಲೂ ಶೀಘ್ರವಾಗಿ ವಿನಾಶಕ್ಕೆ ನಡೆಸುತ್ತಿದ್ದಾರೆ.”—ದ ಗ್ಲೋಬಲ್‌ ರಿಸ್ಕ್‌ ರಿಪೋರ್ಟ್‌ 2018, ವರ್ಲ್ಡ್‌ ಎಕನೋಮಿಕ್‌ ಫೋರಮ್‌.

ಅನೇಕರು ಮಾನವರ ಭವಿಷ್ಯ ಮತ್ತು ಭೂಮಿಯ ಬಗ್ಗೆ ಯಾಕೆ ಚಿಂತಿತರಾಗಿದ್ದಾರೆ? ಮಾನವಕುಲ ಎದುರಿಸುತ್ತಿರುವ ಕೆಲವು ಸಮಸ್ಯೆಗಳ ಬಗ್ಗೆ ಚರ್ಚಿಸೋಣ.

  • ಸೈಬರ್‌ ಅಪರಾಧ: “ಇಂಟರ್‌ನೆಟ್‌ಅನ್ನು ಬಳಸುವುದು ದಿನೇ ದಿನೇ ಅಪಾಯಕಾರಿಯಾಗುತ್ತಿದೆ. ಯಾಕೆಂದರೆ ಮಕ್ಕಳ ದೌರ್ಜನ್ಯ ಮಾಡುವವರಿಗೆ, ಅಪಹರಿಸುವವರಿಗೆ, ಟ್ರಾಲ್ಸ್‌ * ಮತ್ತು ಹ್ಯಾಕಿಂಗ್‌ ಮಾಡುವವರಿಗೆ ಇದು ಹೆಚ್ಚೆಚ್ಚು ಅನುಕೂಲವಾಗುತ್ತಿದೆ. . . . ಜನರ ಗುರುತಿನ ಮಾಹಿತಿಯನ್ನು ಕದಿಯುವುದು ಲೋಕವ್ಯಾಪಕವಾಗಿ ಹೆಚ್ಚಾಗುತ್ತಿರುವ ಸಮಸ್ಯೆಯಾಗಿದೆ. . . . ಕ್ರೂರತನ ಮತ್ತು ಹಿಂಸೆಯಂಥ ಕೆಟ್ಟ ವಿಷಯಗಳಿಗೆ ಇಂಟರ್‌ನೆಟ್‌ ಅನುಕೂಲ ಮಾಡಿಕೊಟ್ಟಿದೆ” ಎಂದು ಆಸ್ಟ್ರೇಲಿಯದ ಒಂದು ವಾರ್ತಾ ಪತ್ರಿಕೆಯು ವರದಿಸುತ್ತದೆ.

  • ಆರ್ಥಿಕ ಅಸಮಾನತೆ: ಇತ್ತೀಚಿನ ಅಂತಾರಾಷ್ಟ್ರೀಯ ವರದಿಗನುಸಾರ, ಕಡು ಬಡತನದಲ್ಲಿರುವ 360ಕೋಟಿ ಜನರ ಹತ್ತಿರವಿರುವಷ್ಟು ಆಸ್ತಿಯು ಲೋಕದ ಎಂಟು ಅತ್ಯಂತ ಶ್ರೀಮಂತರ ಹತ್ತಿರವಿದೆ. “ಅಸ್ತವ್ಯಸ್ತವಾಗಿರುವ ನಮ್ಮ ಆರ್ಥಿಕ ವ್ಯವಸ್ಥೆಯಿಂದಾಗಿ ಬರೀ ಶ್ರೀಮಂತರೇ ಶ್ರೀಮಂತರಾಗುತ್ತಿದ್ದಾರೆ, ಬಡವರು ತೀರಾ ಬಡವರಾಗುತ್ತಿದ್ದಾರೆ. ಇಂಥವರಲ್ಲಿ ಹೆಂಗಸರೇ ಹೆಚ್ಚು” ಎಂದು ಬಡವರಿಗೆ ಸಹಾಯ ಮಾಡುವ ಒಂದು ಸಂಸ್ಥೆಯು ವರದಿಸಿದೆ. ಈ ರೀತಿಯ ಅಸಮಾನತೆಯು ಸಾಮಾಜಿಕ ಗಲಭೆಗೆ ನಡೆಸಬಹುದು ಎಂದು ಕೆಲವರು ಭಯಪಡುತ್ತಾರೆ.

  • ಯುದ್ಧ ಮತ್ತು ಹಿಂಸೆ: ಯುನೈಟೆಡ್‌ ನೇಷನ್ಸ್‌ ರೆಫ್ಯೂಜಿ ಎಜೆನ್ಸಿಯ 2018​ರ ವರದಿಯ ಪ್ರಕಾರ, “ಹಿಂದೆ ವರದಿಸಲ್ಪಟ್ಟಿರುವುದಕ್ಕಿಂತ ಈಗ ಬಹುಪಟ್ಟು ಹೆಚ್ಚು ಜನರು ಬೇರೆ ದಾರಿ ಇಲ್ಲದೆ ತಮ್ಮ ಊರು, ಮನೆಬಿಟ್ಟು ಹೋಗುತ್ತಿದ್ದಾರೆ.” ಗಲಭೆ, ಹಿಂಸೆಯಿಂದ ಸುಮಾರು ಆರು ಕೋಟಿ ಎಂಬತ್ತು ಲಕ್ಷಕ್ಕಿಂತ ಹೆಚ್ಚು ಜನರು ತಮ್ಮ ಮನೆಗಳನ್ನು ಬಿಟ್ಟು ಹೋಗಬೇಕಾದ ಪರಿಸ್ಥಿತಿಯುಂಟಾಗಿದೆ. “ಎರಡು ಸೆಕೆಂಡಿಗೆ ಒಬ್ಬ ವ್ಯಕ್ತಿ ಈ ರೀತಿ ಸ್ಥಳಾಂತರಿಸುತ್ತಿದ್ದಾನೆ” ಎಂದು ಆ ವರದಿಗಳು ತಿಳಿಸುತ್ತವೆ.

  • ಪ್ರಕೃತಿಯ ವಿನಾಶ: 2018​ರ ಒಂದು ವರದಿಗನುಸಾರ, “ಅನೇಕ ಪ್ರಾಣಿವರ್ಗ ಮತ್ತು ಸಸ್ಯಜಾತಿಗಳು ಕಣ್ಮರೆಯಾಗುತ್ತಿವೆ . . . ವಾಯು ಮತ್ತು ಸಮುದ್ರ ಮಾಲಿನ್ಯದಿಂದ ಮಾನವ ಆರೋಗ್ಯಕ್ಕೆ ಹಾನಿ ಹೆಚ್ಚಾಗುತ್ತಿದೆ.” ಮಾತ್ರವಲ್ಲದೆ, ಅನೇಕ ದೇಶಗಳಲ್ಲಿ ಕೀಟಗಳ ಸಂಖ್ಯೆಯೂ ತುಂಬ ಕಡಿಮೆಯಾಗುತ್ತಿದೆ. ಪರಾಗಸ್ಪರ್ಶವಾಗಲು ಕೀಟಗಳಿಲ್ಲದೆ ಪರಿಸರ ಸಂಪೂರ್ಣ ನಾಶವಾಗುವ ಅಪಾಯವಿದೆ ಎಂದು ವಿಜ್ಞಾನಿಗಳು ಎಚ್ಚರಿಸುತ್ತಿದ್ದಾರೆ. ಹವಳ ದಿಬ್ಬಗಳ ಜೀವರಾಶಿಗಳೂ ನಾಶವಾಗುತ್ತಿವೆ. ವಿಜ್ಞಾನಿಗಳ ಅಂದಾಜಿಗನುಸಾರ, ಕಳೆದ 30 ವರ್ಷಗಳಲ್ಲಿ ಹವಳ ದಿಬ್ಬಗಳ ಜೀವರಾಶಿಗಳಲ್ಲಿ ಅರ್ಧಭಾಗವು ಸತ್ತುಹೋಗಿದೆ.

ಈ ಲೋಕವನ್ನು ಸುಭದ್ರ ಮತ್ತು ಸುರಕ್ಷಿತ ಸ್ಥಳವಾಗಿ ಪರಿವರ್ತಿಸಲು ನಮ್ಮಿಂದ ಸಾಧ್ಯವೋ? ಈ ರೀತಿ ಪರಿವರ್ತಿಸಲು ಶಿಕ್ಷಣ ಸಹಾಯ ಮಾಡುತ್ತದೆ ಎಂದು ಕೆಲವರು ಹೇಳುತ್ತಾರೆ. ಹಾಗಾದರೆ ಯಾವ ರೀತಿಯ ಶಿಕ್ಷಣ? ಮುಂದಿನ ಲೇಖನಗಳು ಈ ಪ್ರಶ್ನೆಗಳ ಬಗ್ಗೆ ಚರ್ಚಿಸುತ್ತವೆ.

[ಪಾದಟಿಪ್ಪಣಿ]

^ ಅಂತರ್ಜಾಲ ಮಾಧ್ಯಮದಲ್ಲಿ ಇತರರಿಗೆ ಕೋಪ ಬರಿಸುವ, ಜಗಳಕ್ಕಿಳಿಯುವಂತೆ ಪ್ರೇರೇಪಿಸುವ ಉದ್ದೇಶದಿಂದಲೇ ಅವರ ಬಗ್ಗೆ ಟೀಕಿಸಿ, ಕೆಟ್ಟ ಸಂದೇಶಗಳನ್ನು ಹಾಕುವ ಜನರನ್ನು ಟ್ರಾಲ್ಸ್‌ ಎನ್ನುತ್ತಾರೆ.